Food and heart health: ಹೃದಯದ ಆರೋಗ್ಯದ ಕಾಳಜಿಗೆ ಈ ಆಹಾರ ಪದಾರ್ಥಗಳ ಸೇವನೆ ಉತ್ತಮ
ಕನ್ನಡ ಸುದ್ದಿ  /  ಜೀವನಶೈಲಿ  /  Food And Heart Health: ಹೃದಯದ ಆರೋಗ್ಯದ ಕಾಳಜಿಗೆ ಈ ಆಹಾರ ಪದಾರ್ಥಗಳ ಸೇವನೆ ಉತ್ತಮ

Food and heart health: ಹೃದಯದ ಆರೋಗ್ಯದ ಕಾಳಜಿಗೆ ಈ ಆಹಾರ ಪದಾರ್ಥಗಳ ಸೇವನೆ ಉತ್ತಮ

Food and heart health: ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಡಿಮೆ ಮಾಡುವ ಆಹಾರ ಪದಾರ್ಥಗಳ ಸೇವನೆಯ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಮೆರಿಕನ್‌ ಹಾರ್ಟ್‌ ಅಸೋಸಿಯೇಷನ್‌ ಪ್ರಕಾರ ಈ ಕೆಲವು ಆಹಾರಗಳ ಸೇವನೆಯು ಹೃದಯದ ಆರೋಗ್ಯಕ್ಕೆ ಬಹಳ ಅಗತ್ಯ.

ತರಕಾರಿ
ತರಕಾರಿ (Unsplash)

ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಮೂಡುತ್ತಿರುವ ಹೊತ್ತಿನಲ್ಲೇ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭಿಸಿವೆ. ಅದರಲ್ಲೂ ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿರುವುದು ಸುಳ್ಳಲ್ಲ. ಹೃದಯಾಘಾತ, ಹೃದಯ ಸ್ತಂಭನ, ಹೃದಯದ ರಕ್ತನಾಳಗಳಲ್ಲಿ ಬ್ಲಾಕ್‌ ಉಂಟಾಗುವುದು ಹೀಗೆ ಹಲವು.

ನಟಿ, ಮಾಜಿ ವಿಶ್ವ ಸುಂದರಿ ಸುಶ್ಮೀತಾ ಸೇನ್‌ ʼಇತ್ತೀಚೆಗೆ ತಮಗೆ ಹೃದಯಾಘಾತವಾಗಿದ್ದು, ಆಂಜಿಯೊಪ್ಲಾಸ್ಟಿ ಮಾಡಲಾಗಿದ್ದು, ಸ್ಟಂಟ್‌ ಅಳವಡಿಸಲಾಗಿದೆʼ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಿನ್ನೆಯಷ್ಟೇ ಉತ್ತರದ ರಾಜ್ಯವೊಂದರಲ್ಲಿ ವಧು ಒಬ್ಬಳು ಹೃದಯಸಂಭ್ತನದಿಂದ ಹಸೆಮಣೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಹೃದಯದ ಅನಾರೋಗ್ಯಕ್ಕೆ ಹಲವು ರೀತಿಯ ಕಾರಣಗಳಿವೆ. ಜೀವನಶೈಲಿ ಹಾಗೂ ಆಹಾರಕ್ರಮವು ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು. ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಡಿಮೆ ಮಾಡುವ ಆಹಾರ ಪದಾರ್ಥಗಳ ಸೇವನೆಯ ಮೂಲಕವು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಮೆರಿಕನ್‌ ಹಾರ್ಟ್‌ ಅಸೋಸಿಯೇಷನ್‌ ಪ್ರಕಾರ ಈ ಕೆಲವು ಆಹಾರಗಳ ಸೇವನೆಯು ಹೃದಯದ ಆರೋಗ್ಯಕ್ಕೆ ಅಗತ್ಯ.

ಇವುಗಳ ಸೇವನೆ ಅವಶ್ಯ

ಹಣ್ಣು, ತರಕಾರಿಗಳು, ಧಾನ್ಯಗಳು, ಆರೋಗ್ಯಕರ ಪ್ರೊಟೀನ್‌ ಹಾಗೂ ಕೊಬ್ಬಿನಂಶ ಇರುವ ಆಹಾರಪದಾರ್ಥಗಳು ದೇಹಕ್ಕೆ ಫೈಬರ್‌, ವಿಟಮಿನ್‌ ಹಾಗೂ ಖನಿಜಾಂಶಗಳನ್ನು ಒದಗಿಸುವ ಜೊತೆಗೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ.

ಇವುಗಳ ಸೇವನೆಯನ್ನು ನಿಯಂತ್ರಿಸಿ

ಸ್ಯಾಚುರೇಟೆಡ್‌ ಫ್ಯಾಟ್‌, ಸಂಸ್ಕರಿಸಿದ ಮಾಂಸಗಳು, ಅತಿಯಾಗಿ ಉಪ್ಪಿನ ಸೇವನೆ, ಅತಿಯಾಗಿ ಸಕ್ಕರೆ, ಸೇವನೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ರೆಡ್‌ ಮೀಟ್‌, ಅತಿಯಾದ ಆಲ್ಕೋಹಾಲ್‌ ಸೇವನೆ

ಈ ಮೇಲಿನ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಹೃದಯದ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಆಹಾರ ಪದಾರ್ಥಗಳು ಯಾವುದು ಅವುಗಳ ಉಪಯೋಗಗಳ ಬಗ್ಗೆ ತಿಳಿಯೋಣ

ಆಹಾರ ಪದಾರ್ಥ
ಆಹಾರ ಪದಾರ್ಥ (Unsplash)

ತರಕಾರಿ ಹಾಗೂ ಹಣ್ಣಗಳು

ಹಣ್ಣು ಹಾಗೂ ತರಕಾರಿಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಬಾಳೆಹಣ್ಣು, ಸಿಹಿ ಗೆಣಸಿನಲ್ಲಿ ಪೊಟ್ಯಾಶಿಯಂ ಅಂಶ ಅಧಿಕವಾಗಿರುತ್ತದೆ, ಇದರ ನಿರಂತರ ಸೇವನೆ ಹೃದಯ ಆರೋಗ್ಯಕ್ಕೆ ಬಹಳ ಉತ್ತಮ. ಬ್ರೊಕೋಲಿ, ಹೂಕೋಸು, ನವಿಲುಕೋಸು ಮುಂತಾದವುಗಳ ಸೇವನೆಯಿಂದ ಅಪಧಮನಿಯಲ್ಲಿ ಬ್ಲಾಕ್‌ ಉಂಟಾಗುವುದನ್ನು ತಡೆಯಬಹುದು. ಸೊಪ್ಪುಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಇದು ಕೊಲೆಸ್ಟ್ರಾಲ್‌ ಸಂಗ್ರಹವಾಗುವುದನ್ನು ತಪ್ಪಿಸಿ, ರಕ್ತದೊತ್ತಡವನ್ನು ನಿವಾರಿಸುತ್ತದೆ.

ಧಾನ್ಯಗಳು

ಎಲ್ಲಾ ರೀತಿ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಕೆಟ್ಟದ್ದಲ್ಲ. ಬಿಳಿ ಬ್ರೆಡ್‌ನಲ್ಲಿರುವ ಸಂಸ್ಕರಿಸಿದ ಕಾರ್ಬೋಹೈಡ್ರೆಟ್‌ಗಳು ಹೃದಯ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಆದರೆ ಧಾನ್ಯದ ಉತ್ಪನ್ನಗಳಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಬೇಕಾದ ನಾರಿನಂಶವನ್ನು ಪೂರೈಸುತ್ತವೆ, ಇವು ಹೃದಯದ ಆರೋಗ್ಯಕ್ಕೆ ಉತ್ತಮ. ಜೊತೆಗೆ, ಅವುಗಳು ಸಾಮಾನ್ಯವಾಗಿ ಕಬ್ಬಿಣ, ಸೆಲೆನಿಯಮ್, ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಫೋಲೇಟ್ ಮತ್ತು ಮೆಗ್ನೀಸಿಯಮ್‌ನಂತಹ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ. ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಬೀನ್ಸ್, ಆಲೂಗಡ್ಡೆ, ಬಟಾಣಿ ಮತ್ತು ಜೋಳದಲ್ಲಿಯೂ ಕಂಡುಬರುತ್ತವೆ. ಹಾಗಾಗಿ ಇವುಗಳ ಸೇವನೆ ಉತ್ತಮ.

ಮಾಂಸ ಹಾಗೂ ಸಸ್ಯಜನ್ಯ ಆಹಾರ

ಕೆಂಪು ಹಾಗೂ ಸಂಸ್ಕರಿಸಿದ ಮಾಂಸಗಳನ್ನು ಹೊರತು ಪಡಿಸಿದರೆ ಉಳಿದ ಮಾಂಸಗಳು ಹೃದಯದ ಆರೋಗ್ಯಕ್ಕೆ ಹಾನಿಯಲ್ಲ. ಸಸ್ಯಜನ್ಯ ಪ್ರೊಟೀನ್‌ ಹಾಗೂ ಮೀನು ಮಾಂಸ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ. ಇವುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಕಾಳುಗಳು, ಬೀನ್ಸ್‌, ಒಣಹಣ್ಣುಗಳು, ಪನೀರ್‌, ಒಮೆಗಾ 3 ಫ್ಯಾಟಿ ಆಸಿಡ್‌ ಸಮೃದ್ಧವಾಗಿರುವ ಮೀನಿನ ಮಾಂಸ, ಮೊಟ್ಟೆಯ ಬಿಳಿಭಾಗ, ಕಡಿಮೆ ಕೊಬ್ಬಿನಂಶ ಇರುವ ಡೈರಿ ಉತ್ಪನ್ನಗಳು, ಕೋಳಿ ಮಾಂಸ ಇವುಗಳ ಸೇವನೆ ಒಳ್ಳೆಯದು.

ಆರೋಗ್ಯಕರ ಕೊಬ್ಬಿನಂಶ

ದೇಹದಲ್ಲಿ ಕೊಬ್ಬಿನಂಶ ಸಂಗ್ರಹವಾಗುವುದರಿಂದಲೂ ಹೃದಯದ ಸಮಸ್ಯೆಗಳು ಕಾಣಿಸಬಹುದು. ಆದರೆ ಎಲ್ಲಾ ರೀತಿಯ ಕೊಬ್ಬು ದೇಹದ ಆರೋಗ್ಯಕ್ಕೆ ಕೆಟ್ಟದಲ್ಲ. ಟ್ರಾನ್ಸ್‌ ಹಾಗೂ ಸ್ಯಾಚುರೇಟೆಡ್‌ ಕೊಬ್ಬಿನಂಶ ಇರುವ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಹಲವು ಅಧ್ಯಯನಗಳ ಪ್ರಕಾರ ಇವು ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಆಲಿವ್‌ ಎಣ್ಣೆ, ಎಳ್ಳೆಣ್ಣೆ, ತಾಳೆಎಣ್ಣೆ, ಸೋಯಾಬಿನ್‌ ಎಣ್ಣೆ, ಕ್ಯಾನೊಲ್‌ ಎಣ್ಣೆ, ಜೋಳದ ಹಿಟ್ಟಿನ ಎಣ್ಣೆ, ಕುಸುಬೆ ಎಣ್ಣೆ ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಅಂತಹ ತೊಂದರೆಗಳು ಉಂಟಾಗುವುದಿಲ್ಲ.

ಈ ಆಹಾರ ಸೇವನೆಗಳ ಜೊತೆಗೆ ನಿರಂತ ವ್ಯಾಯಾಮ, ಸಮರ್ಪಕ ನಿದ್ದೆ, ಒತ್ತಡ ನಿರ್ವಹಣೆಯ ತಂತ್ರಗಳು ಇವುಗಳ ಮೂಲಕವೂ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Whats_app_banner