Shoe Problem: ಶೂ ಹಾಕಿದಾಗ ಪಾದದಲ್ಲಿ ಗುಳ್ಳೆಯಾಗಿ ತೊಂದರೆ ಅನುಭವಿಸುತ್ತಿದ್ದೀರಾ? ವೈದ್ಯರು ನೀಡುವ ಕಾರಣ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Shoe Problem: ಶೂ ಹಾಕಿದಾಗ ಪಾದದಲ್ಲಿ ಗುಳ್ಳೆಯಾಗಿ ತೊಂದರೆ ಅನುಭವಿಸುತ್ತಿದ್ದೀರಾ? ವೈದ್ಯರು ನೀಡುವ ಕಾರಣ ಹೀಗಿದೆ

Shoe Problem: ಶೂ ಹಾಕಿದಾಗ ಪಾದದಲ್ಲಿ ಗುಳ್ಳೆಯಾಗಿ ತೊಂದರೆ ಅನುಭವಿಸುತ್ತಿದ್ದೀರಾ? ವೈದ್ಯರು ನೀಡುವ ಕಾರಣ ಹೀಗಿದೆ

ಕೆಲವರಿಗೆ ಶೂ ಅಥವಾ ಚಪ್ಪಲಿ ಧರಿಸಿದಾಗ ಕಾಲಿನಲ್ಲಿ ಗುಳ್ಳೆ ಏಳುವುದು ಅಥವಾ ಕುರು ಕಾಣಿಸಿಕೊಳ್ಳುವುದು ಇಲ್ಲವೇ ಪಾದದಲ್ಲಿ ಊತ ಕಾಣಿಸಿಕೊಂಡು ನೋವಾಗುವುದನ್ನು ಕಾಣುತ್ತೇವೆ. ಅದರಿಂದ ಸರಿಯಾಗಿ ನಡೆಯಲು ಆಗದೇ, ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅದಕ್ಕೆ ಕಾರಣವೇನು?

ಶೂ ಹಾಕಿದಾಗ ನಿಮ್ಮ ಪಾದದಲ್ಲಿ ಗುಳ್ಳೆ ಉಂಟಾಗಿ ತೊಂದರೆಯಾಗುತ್ತಿದೆಯೇ?
ಶೂ ಹಾಕಿದಾಗ ನಿಮ್ಮ ಪಾದದಲ್ಲಿ ಗುಳ್ಳೆ ಉಂಟಾಗಿ ತೊಂದರೆಯಾಗುತ್ತಿದೆಯೇ? (Pixabay)

ಹೊಸ ಶೂ ಅಥವಾ ಚಪ್ಪಲಿ ಧರಿಸಿದಾಗ, ಸ್ವಲ್ಪ ಸಮಯ ಹೊಂದಾಣಿಕೆ ಆಗುವವರೆಗೆ ಅದು ನೋವು ಕೊಡುತ್ತದೆ. ನಂತರ ನಮ್ಮ ಪಾದಕ್ಕೆ ಹೊಂದಿಕೊಳ್ಳುತ್ತದೆ. ಆದರೆ, ಬಹು ಸಮಯದವರೆಗೂ ಯಾವುದೇ ರೀತಿಯ ಶೂ ಮತ್ತು ಚಪ್ಪಲಿ ಧರಿಸಿದರೂ, ಅದರಿಂದ ನೋವು ಉಂಟಾಗುತ್ತದೆ ಎಂದಾದರೆ, ಅಲ್ಲಿ ಸಮಸ್ಯೆ ಇದೆ ಎಂದರ್ಥ. ಕಾಲಿನಲ್ಲಿ ಗುಳ್ಳೆ ಏಳುವುದು ಅಥವಾ ಕುರು ಕಾಣಿಸಿಕೊಳ್ಳುವುದು ಇಲ್ಲವೇ ಪಾದದಲ್ಲಿ ಊತ ಕಾಣಿಸಿಕೊಂಡು ನೋವು ಉಂಟಾಗುತ್ತಿದ್ದರೆ, ಅದರಿಂದ ನಡೆಯಲು ಮತ್ತು ಓಡಲು ಸಮಸ್ಯೆಯಾಗುತ್ತದೆ. ಸೂಕ್ತ ರೀತಿಯ ಚಪ್ಪಲಿ ಮತ್ತು ಶೂ ಧರಿಸಿದರೂ, ಆ ತೊಂದರೆ ಕಡಿಮೆಯಾಗಿರುವುದಿಲ್ಲ. ಅದಕ್ಕೆ ವೈದ್ಯರು ನೀಡುವ ಕಾರಣ ಹೀಗಿದೆ ನೋಡಿ..

ನವದೆಹಲಿಯ ಅಪೋಲೊ ಆಸ್ಪತ್ರೆಯ ತಜ್ಞ ವೈದ್ಯ ಅಭಿಷೇಕ್ ವೈಶ್ ಅವರ ಪ್ರಕಾರ, ಕೆಲವರಿಗೆ ಕಾಲಿನಲ್ಲಿ ಗುಳ್ಳೆ ಏಳುವುದು ಅಥವಾ ಕುರು ಕಾಣಿಸಿಕೊಳ್ಳುವುದು ವಂಶಪಾರಂಪರ್ಯವಾಗಿದ್ದರೆ, ಇನ್ನು ಕೆಲವರಿಗೆ ಸೂಕ್ತ ಶೂ ಅಥವಾ ಚಪ್ಪಲಿ ಧರಿಸದೇ ಇರುವುದರಿಂದ ಬರುವ ಸಮಸ್ಯೆಯಾಗಿದೆ. ಅಲ್ಲದೆ, ಪಾದದ ಮೇಲೆ ಸತತ ಹೆಚ್ಚುವರಿ ಒತ್ತಡ ಬಿದ್ದರೂ, ಅದರಿಂದ ಗುಳ್ಳೆ ಕಾಣಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ಹೀಗೆ ಕಾಲಿನ ಮೇಲಿನ ಗುಳ್ಳೆ ಅಥವಾ ಕುರುವಿಗೆ ಬಾಹ್ಯ ಅಂಶಗಳು ಹೇಗೆ ಕಾರಣವೋ, ಅದೇ ರೀತಿ ಜೀನ್‌ಗಳು ಕೂಡ ಕಾರಣವಾಗುತ್ತವೆ ಎನ್ನುವುದನ್ನು ನಾವು ಗಮನಿಸಬೇಕು.

ಗುಳ್ಳೆ ಅಥವಾ ಕುರು ಉಂಟಾಗಲು ಪ್ರಮುಖ ಕಾರಣ

ಅನುವಂಶಿಕತೆ: ನಿಮ್ಮ ಹಿರಿಯರಿಗೆ ಅಥವಾ ಪಾಲಕರಿಗೆ ಕಾಲಿನಲ್ಲಿ ಕುರು ಉಂಟಾಗುವುದು, ಗುಳ್ಳೆ ಏಳುವ ಸಮಸ್ಯೆ ಇದ್ದರೆ, ಅದರಿಂದಲೂ ನಿಮಗೆ ಬಂದಿರಬಹುದು.

ಪಾದರಕ್ಷೆಗಳ ವಿನ್ಯಾಸ: ಕೆಲವೊಮ್ಮೆ ನಾವು ಧರಿಸುವ ಶೂ ಅಥವಾ ಚಪ್ಪಲಿಯ ವಿನ್ಯಾಸವೂ ಕಾರಣವಾಗುತ್ತದೆ. ಬಿಗಿಯಾದ, ಕಿರಿದಾದ ಶೂಗಳನ್ನು ಧರಿಸುವ ಮೊದಲು ಅವು ನಮಗೆ ಸೂಕ್ತವೇ, ಹೊಂದಾಣಿಕೆಯಾಗುವುದೇ ಎಂದು ಅರಿತುಕೊಳ್ಳಬೇಕು.

ಪಾದದ ವಿರೂಪ: ಕೆಲವರ ಪಾದ ಸೂಕ್ತ ರೀತಿಯಲ್ಲಿ ಬೆಳವಣಿಗೆಯಾಗಿರುವುದಿಲ್ಲ, ಚಪ್ಪಟೆ ಪಾದ ಅಥವಾ ವಿರೂಪಗೊಂಡಿರುವುದು, ಸರಿಯಾದ ರೂಪದಲ್ಲಿ ಇಲ್ಲದಿರುವುದು ಕೂಡ ಅದಕ್ಕೆ ಕಾರಣವಾಗಬಹುದು.

ಸಂಧಿವಾತ: ಸಂಧಿವಾತದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅದರಿಂದ ಕೀಲುಗಳು ದುರ್ಬಲಗೊಂಡು, ಗುಳ್ಳೆ ಅಥವಾ ಕುರು ಉಂಟಾಗುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ: ನಿಮ್ಮ ಮಕ್ಕಳ ಭವಿಷ್ಯ ಸುಂದರವಾಗಿ ರೂಪಿಸಲು ಪಾಲಕರಿಗೆ ಇಲ್ಲಿದೆ ಕೆಲವು ಬೆಸ್ಟ್ ಟಿಪ್ಸ್

ಯಾವ ರೀತಿಯ ಚಿಕಿತ್ಸೆ ಲಭ್ಯ

ಕಾಲಿನಲ್ಲಿ ಉಂಟಾಗುವ ಊರಿಯೂತ, ಗುಳ್ಳೆ ಅಥವಾ ಕುರುವಿಗೆ ಮುಖ್ಯವಾಗಿ ವೈದ್ಯರು ಎರಡು ವಿಧದ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತಾರೆ. ಅದು ಕಾಲಿನಲ್ಲಿ ಉಂಟಾಗಿರುವ ಗಾಯದ ಮೇಲೆ ಅವಲಂಬಿತವಾಗಿರುತ್ತದೆ.

ಶಸ್ತ್ರಚಿಕಿತ್ಸೆ ಹೊರತಾದ ಚಿಕಿತ್ಸೆಗಳ ಪೈಕಿ, ಸೂಕ್ತ ಪಾದರಕ್ಷೆಗಳ ಬಳಕೆ, ಆರ್ಥೋಟಿಕ್ ಸಾಧನ ಬಳಸಿ, ಪಾದದ ರಚನೆಗೆ ಹೊಂದಿಕೆಯಾಗುವ ಇನ್ಸೊಲ್ ಅಥವಾ ಟೋ ಸ್ಪೇಸರ್‌ಗಳ ಬಳಕೆ, ಐಸ್ ಪ್ಯಾಕ್, ಊರಿಯೂತದ ಔಷಧಗಳನ್ನು ನೀಡುವುದು, ಸ್ಟ್ರೆಚಿಂಗ್ ಮತ್ತು ಸ್ಟ್ರೆಂಡಿಂಗ್ ವ್ಯಾಯಾಮದ ಮೂಲಕ ಪಾದಗಳ ಮೇಲಿನ ಒತ್ತಡ ನಿವಾರಿಸುವುದು ಇದರಲ್ಲಿ ಸೇರಿದೆ.

ಇದನ್ನೂ ಓದಿ: ಮೊಟ್ಟೆ ಬೇಯಿಸಿದ ನೀರನ್ನು ಚೆಲ್ಲಬೇಡಿ, ಅದರಿಂದ ಎಷ್ಟೊಂದು ಪ್ರಯೋಜನವಿದೆ ನೋಡಿ

ಈ ಕ್ರಮಗಳಿಂದ ಪ್ರಯೋಜನವಾಗದಿದ್ದರೆ, ಆದ ವೈದ್ಯರು ಶಸ್ತ್ರಚಿಕಿತ್ಸೆಯ ಮೊರೆಹೋಗುತ್ತಾರೆ. ಪಾದದ ಮೂಳೆಯ ರಚನೆ ಸರಿಯಾಗಿಲ್ಲವಾದರೆ, ಉಬ್ಬು ಉಂಟಾಗಿದ್ದರೆ, ಅದನ್ನು ಶಸ್ತ್ರಚಿಕಿತ್ಸೆ ನಡೆಸಿ ಸರಿಪಡಿಸುತ್ತಾರೆ. ಮೂಳೆಗಳ ಮರುಜೋಡಣೆ, ಕೀಲುಗಳನ್ನು ಸರಿಪಡಿಸುವುದು ಕೂಡ ಇದರಲ್ಲಿ ಸೇರಿರುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner