Wildlife Week: ಕಾಡು ನಾಡಿನ ಸಂಘರ್ಷಗಳ ಜಪದ ನಡುವೆ ವನ್ಯಜೀವಿ ಸಪ್ತಾಹ ಮತ್ತು ಹವಾಮಾನ ವೈಪರಿತ್ಯ
Wild Life Week ಏಳು ದಶಕದಿಂದ ವನ್ಯಜೀವಿ ಸಪ್ತಾಹ ಆಚರಿಸಿಕೊಂಡು ಬರುತ್ತಿರುವ ಆಶಯ ಈಡೇರಿದೆಯೇ ಎನ್ನುವ ಪ್ರಶ್ನೆ ಎದುರಾಗದೇ ಇರದು. ಹವಾಮಾನ ವೈಪರಿತ್ಯಗಳಿಂದ ಮಳೆಗಾಲವೇ ಬದಲಾಗಿ, ಪರಿಸರದಲ್ಲಿ ಆಗಿರುವ ಬದಲಾವಣೆಗಳ ಫಲವನ್ನು ನಾವೀಗ ನೋಡುತ್ತಲೇ ಇದ್ದೇವೆ. ಇದು ಖಂಡಿತವಾಗಿಯೂ ಅರಣ್ಯ ಹಾಗೂ ವನ್ಯಜೀವಿಗಳ ಮೇಲೆ ಆಗಿರುವ ಪರಿಣಾಮದ ಫಲಿತಾಂಶವೂ ಹೌದು.

ಭಾರತದಲ್ಲೂ ವನ್ಯಜೀವಿಗಳ ಸಪ್ತಾಹಕ್ಕೂ ಸುದೀರ್ಘ ಏಳು ದಶಕದ ಇತಿಹಾಸವಿದೆ. ದೇಶದಲ್ಲಿ ವನ್ಯಜೀವಿಗಳ ಅಸ್ತಿತ್ವ ಹಾಗೂ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ 1952ರಿಂದಲೇ ವನ್ಯಜೀವಿ ಸಪ್ತಾಹ ಆರಂಭಿಸುವ ಪ್ರಸ್ತಾವ ಇಡಲಾಯಿತು. ಇದಕ್ಕೆ ಅನುಮತಿ ದೊರೆತದ್ದು ಎರಡು ವರ್ಷದ ನಂತರ. ಅಂದರೆ 1954ರ ಅಕ್ಟೋಬರ್ ಮೊದಲ ವಾರದಲ್ಲಿ ಸಪ್ತಾಹ ಆರಂಭಿಸಲಾಯಿತು.
ಟ್ರೆಂಡಿಂಗ್ ಸುದ್ದಿ
ಭಾರತದಲ್ಲಿ ವನ್ಯಜೀವಿಗಳ ಪ್ರಮಾಣ ಯಥೇಚ್ಛವಾಗಿದೆ. ಅದರಲ್ಲೂ ಹುಲಿ, ಆನೆಗಳು ಮಾತ್ರವಲ್ಲದೇ ಹಲವು ವನ್ಯಜೀವಿಗಳ ತಾಣವೂ ಹೌದು. ಕರ್ನಾಟಕವೂ ಕೂಡ ವನ್ಯಜೀವಿಗಳ ಗಂಧದ ಬೀಡೂ ಹೌದು. ಆನೆ, ಹುಲಿ, ಚಿರತೆ, ಕಾಡೆಮ್ಮೆ ಸೇರಿ ಹಲವು ವನ್ಯಜೀವಿಗಳ ಪ್ರಮಾಣ ಇಲ್ಲಿ ಚೆನ್ನಾಗಿಯೇ ಇದೆ. ಅರಣ್ಯ ಇಲಾಖೆಯೂ ಗಟ್ಟಿ ನೆಲೆಯನ್ನೇ ಹೊಂದಿದೆ.
ಹಾಗೆಂದು ಏಳು ದಶಕದಿಂದ ವನ್ಯಜೀವಿ ಸಪ್ತಾಹ ಆಚರಿಸಿಕೊಂಡು ಬರುತ್ತಿರುವ ಆಶಯ ಈಡೇರಿದೆಯೇ ಎನ್ನುವ ಪ್ರಶ್ನೆ ಎದುರಾಗದೇ ಇರದು. ಹವಾಮಾನ ವೈಪರಿತ್ಯಗಳಿಂದ ಮಳೆಗಾಲವೇ ಬದಲಾಗಿ, ಪರಿಸರದಲ್ಲಿ ಆಗಿರುವ ಬದಲಾವಣೆಗಳ ಫಲವನ್ನು ನಾವೀಗ ನೋಡುತ್ತಲೇ ಇದ್ದೇವೆ. ಇದು ಖಂಡಿತವಾಗಿಯೂ ಅರಣ್ಯ ಹಾಗೂ ವನ್ಯಜೀವಿಗಳ ಮೇಲೆ ಆಗಿರುವ ಪರಿಣಾಮದ ಫಲಿತಾಂಶವೂ ಹೌದು.
ಬಿಕೆ ಸಿಂಗ್ ಬಿಡಿಸಿಟ್ಟ ಚಿತ್ರಣ
ಕರ್ನಾಟಕದಲ್ಲಿ ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಉನ್ನತ ಹುದ್ದೆಯಲ್ಲೂ ಕೆಲಸ ಮಾಡಿ ನಿವೃತ್ತಿ ನಂತರವೂ ಅರಣ್ಯಕ್ಕೆ ಸಂಬಂಧಿಸಿ ಹತ್ತಕ್ಕೂ ಹೆಚ್ಚು ರಾಜ್ಯಗಳ ಉನ್ನತ ಮಟ್ಟದ ಸಮಿತಿಯಲ್ಲಿರುವ ಬ್ರಿಜ್ ಕಿಶೋರ್ ಸಿಂಗ್ ಅವರು ಅರಣ್ಯದ ಸ್ಥಿತಿಯನ್ನು ಬಿಡಿಸಿಡುತ್ತಾ ಹೋಗುತ್ತಾರೆ.
ಮೂರು ದಶಕದ ಹಿಂದೆ ಅಂದರೆ 1993 ರಲ್ಲಿ ಕೇಂದ್ರ ಸೇವೆಗೆ ಹೋದ ನನಗೆ ಒಡಿಶಾ, ಬಿಹಾರ, ಸಿಕ್ಕಿಂ, ಅಂಡಮಾನ್ ನಿಕೋಬಾರ್ ಪ್ರದೇಶಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಒಡಿಶಾದಂತಹ ಪುಟ್ಟ ರಾಜ್ಯದಲ್ಲೂ ವನ್ಯಜೀವಿ ಸಂಘರ್ಷ ಇರಲೇ ಇಲ್ಲ. ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಆನೆಗಳೇ ಇರಲಿಲ್ಲ. ಈಗಂತೂ ಅನೆಗಳು ಎಲ್ಲ ಕಡೆ ಕಾಣಿಸುತ್ತಿವೆ. ವನ್ಯಜೀವಿಗಳೂ ಜಾಸ್ತಿಯಾಗಿವೆ. ಈಗ ಎಲ್ಲಿ ನೋಡಿದರೂ ಸಂಘರ್ಷದ್ದೇ ಮಾತು. ಅದು ನಿಜವೂ ಕೂಡ. ಕರ್ನಾಟಕವೂ ಇದರಿಂದ ಹೊರತಾಗಿಲ್ಲ. ಕರ್ನಾಟಕದಲ್ಲಿ ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಕೆಲವು ವಿಚಾರದಲ್ಲಿ ಅಷ್ಟೇ ಅರಣ್ಯ ಪರಿಸರ ಹಾಳಾದ ಸನ್ನಿವೇಶವನ್ನು ನೋಡುತ್ತಿದ್ದೇವೆ. ಅರಣ್ಯ ಒತ್ತುವರಿ ಮಿತಿ ಮೀರಿದೆ. ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಹೋಗುತ್ತಿದೆ. ರಾಜಕೀಯ ನೇತಾರರು, ಅಧಿಕಾರಸ್ಥರದ್ದು ತುಟಿ ಮೇಲಿನ ಮಾತುಗಳಷ್ಟೇ. ಅರಣ್ಯ, ಪರಿಸರ, ಹವಾಮಾನ ಬದಲಾವಣೆ ಯಾವುದೂ ಅವರಿಗೆ ಮತ ತಂದುಕೊಡುವುದಿಲ್ಲ. ಅರಣ್ಯ ಹಕ್ಕು ಕಾಯಿದೆಯನ್ನೇ ಕೆಲವು ರಾಜ್ಯಗಳು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ಅರಣ್ಯ ನಾಶಕ್ಕೆ ಮುಂದಾಗಿವೆ. ಅಧಿಕಾರಿಗಳದ್ದೋ ಮಾಡಿದರಾಯಿತು ಎಂಬ ಮನೋಭಾವ. ವನ್ಯಜೀವಿ ಸಪ್ತಾಹಗಳು ನಡೆಯುತ್ತಲೇ ಇರುತ್ತವೆ.
ನಾಲ್ಕೂವರೆ ದಶಕದ ಅನುಭವದಲ್ಲಿ ಬಿಕೆ ಸಿಂಗ್ ಹಲವು ಸರ್ಕಾರಗಳನ್ನು ನೋಡಿದ್ದಾರೆ. ಸಚಿವರೊಂದಿಗೆ ಕೆಲಸ ಮಾಡಿದ್ದಾರೆ. ಸೇವೆಯಲ್ಲಿದ್ಧಾಗಲೇ ವನ್ಯಜೀವಿ ಸಪ್ತಾಹದ ಭಾಗವೂ ಆಗಿದ್ಧಾರೆ. ಅರಣ್ಯದ ಪ್ರಮಾಣ ಕುಸಿಯುತ್ತಿದೆ. ವನ್ಯಜೀವಿಗಳ ನೆಲೆ ಹಾಳಾಗಿ ಹೋಗಿವೆ. ಸಮುದಾಯದ ಆಶೋತ್ತರಗಳ ಬದಲಾಗಿ ಸಂಘರ್ಷ ಹೆಚ್ಚಾಗಿ ಹೋಗಿದೆ. ಇದಕ್ಕೆ ಯಾರನ್ನು ದೂಷಿಸುವುದು ಎಂದು ಪ್ರಶ್ನಿಸುತ್ತಾರೆ . ಅವರ ಈ ಪ್ರಶ್ನೆ ಅವರೊಬ್ಬರದ್ದು ಅಲ್ಲವೇ ಅಲ್ಲ. ಇಡೀ ಸಮುದಾಯದ, ಸರ್ಕಾರ ನಡೆಸುವವರ, ಅಧಿಕಾರದ ಸ್ಥಾನದಲ್ಲಿರುವವರ ಪ್ರಶ್ನೆಯೂ ಆಗಬೇಕು.
ನೈಜ ಘಟನಾವಳಿಗಳ ಸುತ್ತ
ಈ ಪ್ರಶ್ನೆಗಳ ಹಿಂದೆ ಇರುವ ಈ ಘಟನಾವಳಿಗಳನ್ನೇ ಒಮ್ಮೆ ಮನಸಿನೊಳಗೆ ತಂದು ಕೊಂಡು ನೋಡಿ. ಅರಣ್ಯ ಚಿತ್ರಣ ಹೇಗೆ ಬದಲಾಗಿದೆ ಎನ್ನುವುದು ಅರಿವಿಗೆ ಬಂದೇಬರುತ್ತದೆ.
ನಾಗರಹೊಳೆ, ಬಂಡೀಪುರದಲ್ಲಿ ಹುಲಿಗಳ ಸಂತತಿ ಹೆಚ್ಚಳ. ಸೀಮಿತ ಪ್ರದೇಶದಲ್ಲಿಯೇ ಹುಲಿಗಳ ಪ್ರಮಾಣ ಅಧಿಕ. ಆವಾಸಸ್ಥಾನ ಪ್ರಮಾಣದಲ್ಲಿ ಕಡಿತ. ಹುಲಿ ಸಂರಕ್ಷಣೆಯಲ್ಲಿ ನಾವೇ ಮುಂದೆ. ಈ ಬಾರಿ ಕರ್ನಾಟಕದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಆರೂವರೆ ಸಾವಿರಕ್ಕೆ ಸಮೀಪಿಸುತ್ತಿವೆ.
ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಕರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹೀಗೆ ಖುಷಿ ವಿಚಾರಗಳನ್ನೂ ಈ ಬಾರಿಯ ಹುಲಿ ಹಾಗೂ ಆನೆ ದಿನಾಚರಣೆ ಹಿಂದಿನ ದಿನ ಹಂಚಿಕೊಂಡರು. ಇದು ನಿಜಕ್ಕೂ ಅಭಿಮಾನ ಪಡಬೇಕಾದ ಸಂಗತಿಯೂ ಹೌದು. ಇತ್ತೀಚಿನ ವರ್ಷದಲ್ಲಿ ಕರ್ನಾಟಕದಲ್ಲಿ ವನ್ಯಜೀವಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹುಲಿ, ಆನೆ, ಚಿರತೆ ಎಲ್ಲದರಿಂದಲೂ ಕರ್ನಾಟಕದ ಅರಣ್ಯಗಳು ಸಮೃದ್ದವಾಗಿದೆ. ಇದು ಪ್ರಗತಿದಾಯಕ ಮುಖ.
ದನ ಮೇಯಿಸಲು ಹೋದ ರೈತ ಹುಲಿ ದಾಳಿಯಿಂದ ಮೃತಪಟ್ಟಿದ್ದಾನೆ. ಶಾಲೆ ಮುಗಿಸಿ ಅಪ್ಪ- ಅಮ್ಮಇದ್ದ ಜಮೀನಿಗೆ ಹೊರಟ ಬಾಲಕನ ಮೇಲೆ ಹುಲಿ ದಾಳಿ. ಮನೆಯಿಂದ ಹೊರ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿಯಿಂದ ಸಾವು. ತವರು ಮನೆಗೆ ಬಂದ ಮಹಿಳೆಗೆ ಕಾಡಾನೆ ತಿವಿದು ದುರ್ಮರಣ. ಜಗುಲಿ ಮೇಲೆ ಕುಳಿತಿದ್ದ ವಿದ್ಯಾರ್ಥಿನಿ ಮೇಲೆ ಎಗರಿದ ಚಿರತೆ. ಕರಡಿ ದಾಳಿಯಿಂದ ವ್ಯಕ್ತಿ ಸಾವು.. ಇಂತಹ ಸುದ್ದಿಗಳನ್ನೂ ನಿತ್ಯ ಓದುವ ಸನ್ನಿವೇಶ. ಇದು ಕಡಿಮೆಯಾಗುತ್ತಲೇ ಇಲ್ಲ.ಇದು ನಿಜಕ್ಕೂ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದ ಹಲವು ಭಾಗಗಳಲ್ಲಿನ ಸನ್ನಿವೇಶವೂ ಹೌದು.
ಆಹಾರ ಅರಸಿ ಬಂದು ಮೃತಪಟ್ಟ ಕಾಡಾನೆ. ಕಾಫಿ ಎಸ್ಟೇಟ್‌ನಲ್ಲೇ ಕಾಡಾನೆಗೆ ಗುಂಡೇಟು, ಉರುಳಿಗೆ ಸಿಲುಕಿ ಚಿರತೆ ಮರಿ ಸಾವು. ಕಾಡು ಮಾರ್ಗ ತಪ್ಪಿ ಪೊಲೀಸ್ ಠಾಣೆಗೆ ಬಂದಿತು ಜಿಂಕೆ.. ಇಂತಹ ಮತ್ತೊಂದು ಮುಖದ ವಿಷಯಗಳನ್ನೂ ನೋಡುತ್ತಿದ್ದೇವೆ.
ಅಂದರೆ ಕಾಡು-ನಾಡಿನ ನಡುವಿನ ಮಧ್ಯೆ ಬದುಕು ಕಂಡುಕೊಂಡ ವನ್ಯಜೀವಿ- ಮಾನವ ಸಂಘರ್ಷ ಭಿನ್ನ ಸ್ವರೂಪವನ್ನೇ ಪಡೆಯುತ್ತಿದೆ. ಇಂತಹ ವೇಳೆಯಲ್ಲಿ ವನ್ಯಜೀವಿ ಸಪ್ತಾಹ ಬಂದಿದೆ. ಅರಣ್ಯ ಇಲಾಖೆ ಹಾಗೂ ಸಮುದಾಯದ ನಡುವೆ ಬಂಧವನ್ನು ಗಟ್ಟಿಗೊಳಿಸುವ, ಅರಣ್ಯದೊಂದಿಗೆ ನಂಟು ಇರುವವರನ್ನು ಮತ್ತಷ್ಟು ಬೆಸೆಯುವ ಪ್ರಯತ್ನವೂ ಸಪ್ತಾಹದ ಆಶಯ.
ಉಲ್ಲಾಸ ಕಾರಂತರು ಹೇಳುವಂತೆ
ವನ್ಯಜೀವಿ, ಅರಣ್ಯದ ವಿಚಾರದಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ತಜ್ಞ, ಹೆಮ್ಮೆಯ ಕನ್ನಡಿಗರಾಗಿರುವ ಡಾ. ಉಲ್ಲಾಸ ಕಾರಂತ ಅವರು ವನ್ಯಜೀವಿ ಸಪ್ತಾಹದ ಆಚರಣೆಯನ್ನು ಹೀಗೆ ವ್ಯಾಖ್ಯಾನಿಸುತ್ತಾರೆ.
ಸಾವಿರಾರು ವರ್ಷದಿಂದ ಮಾನವರು ಸಾಕಿ ಪಳಗಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ತಳಿಗಳಾಗಿ ಮಾರ್ಪಡಿಸಿರುವ ನಾಯಿ, ಬೆಕ್ಕು, ದನಕರು ಹಂದಿ, ಕುದುರೆ, ಕತ್ತೆಗಳಂತಹ ಮೃಗಗಳೂ ಕೋಳಿ, ಬಾತು, ಪಾರಿವಾಳದಂತಹ ಪಕ್ಷಿಗಳೂ ಯಾವು ವನ್ಯಜೀವಿಗಳಲ್ಲ. ಇಂತ ಪ್ರಾಣಿಗಳ ಲಾಲನೆ ಪಾಲನೆಗಾಗಿ ಅಸಂಖ್ಯಾತರು ತನು ಮನ ಧನ ವ್ಯಯ ಮಾಡುತ್ತಿರುವುದು ವನ್ಯಜೀವಿ ಸಂರಕ್ಷಣೆ ಖಂಡಿತಾ ಅಲ್ಲವೇ ಅಲ್ಲ. ಅದೇನಿದ್ದರೂ ಪ್ರಾಣಿ ಪ್ರೇಮ ಎನ್ನಬಹುದಷ್ಟೇ.
ವನ್ಯಜೀವಿ ಸಂರಕ್ಷಣೆಯ ವೈಜ್ಞಾನಿಕ ಗುರಿ ವನ್ಯ ಪ್ರಾಣಿಗಳ ಸಂಖ್ಯೆ ಸಾಂಧ್ರತೆ ಪರಿಣಿತಿಗಳು ನೈಸರ್ಗಿಕ ನಿಯಮಗಳ ಮಿತಿಯೊಳಗೆ ಇರುವಂತೆ ರಕ್ಷಿಸುವುದು, ಪ್ರಾಣಿಗಳ ಸಂಖ್ಯೆ ಏರಿಳಿತ ಒಂದು ನೈಸರ್ಗಿಕ ಪ್ರಕ್ರಿಯೆ ಕಾಡು ಪ್ರಾಣಿಗಳಿಗೆ ಆಹಾರ ಪೂರೈಕೆ, ನೀರು ಸರಬರಾಜು ಇತ್ಯಾದಿ ಸರ್ಕಾರಿ ಕಾರ್ಯಕ್ರಮಗಳೆ ನೈಜ ವನ್ಯ ಸಂರಕ್ಷಣೆಗೆ ತದ್ವಿರುದ್ದವಾದ ದುಂದುವೆಚ್ಚಕ್ಕೆ ಕಾರಣವಾಗಿದೆ. ಇಂತಹ ಅನಗತ್ಯ ಕಾರ್ಯಗಳಿಂದ ಹುಲಿ, ಜಿಂಕೆ. ಆನೆ ಯಾವುದೇ ಪ್ರಾಣಿಯ ಸಂಖ್ಯೆಯೂ ಮಿತಿ ಮೀರಿದರೆ ಒಟ್ಟಾರೆ ಪ್ರಕೃತಿಗೆ ಹಾನಿಯುಂಟಾಗುವುದು ಖಚಿತ. ವನ್ಯಜೀವಿಗಳ ಸಂರಕ್ಷಣೆಗೆ ಸಮರ್ಪಕವಾಗಿ ಮುನ್ನಡೆಯಬೇಕಾದರೆ ಈಗ ಸಾಮೂಹಿಕ ಜನ ಬೆಂಬಲ ಬೇಕು. ಕಟ್ಟು ನಿಟ್ಟಿನ ರಕ್ಷಣೆ ಬೇಕು. ಈ ಪ್ರಯತ್ನದಲ್ಲಿ ವಿಜ್ಞಾನದ ಅರಿವು, ಕಾಯಕಗಳ ಬಲವಿಲ್ಲದ ಪ್ರಾಣಿ ಪ್ರೇಮ ಹಾಗೂ ಮಮಕಾರಕ್ಕೂ ಮಿತಿ ಬೇಕಾಗಿದೆ.
ಜನ ಸಂಪರ್ಕವೇ ಮದ್ದು
ಅರಣ್ಯ ಇಲಾಖೆ ಅಲ್ಪ ಹಾಗೂ ದೀರ್ಘಾವಧಿ ಕಾರ್ಯಕ್ರಮ ಇಟ್ಟುಕೊಳ್ಳಲೇ ಬೇಕು. ಗ್ರಾಮ ಮಟ್ಟ, ಹೋಬಳಿ ಮಟ್ಟದಲ್ಲೂ ಅರಣ್ಯ ಇಲಾಖೆ ಜನ ಸಂಪರ್ಕ ಸೇತು ಕಾರ್ಯಕ್ರಮಗಳನ್ನು ರೂಪಿಸಲೇಬೇಕು. ಇದಕ್ಕೊಂದು ರೋಡ್ ಮ್ಯಾಪ್ ಕೂಡ ಬೇಕೇಬೇಕು. ಕಾಲಮಿತಿಯೊಳಗಿನ ಕಾರ್ಯಕ್ರಮಗಳನ್ನು ರೂಪಿಸಬೇಕು. ಜನ ಸಮುದಾಯವನ್ನು ಪರಿಣಾಮಕಾರಿಯಾಗಿ ಒಳಗೊಳ್ಳದೇ ಹೋದರೆ ಸಂಘರ್ಷ ನಿರಂತರ ಹಾಗೂ ಸಪ್ತಾಹ ನೆಪಮಾತ್ರಕ್ಕೆ ಎನ್ನುವಂತೆ ಆಗಿ ಬಿಡುತ್ತದೆ.
ಮಕ್ಕಳ ಕನವರಿಕೆ
ತುಮಕೂರಿನಲ್ಲಿ ವಾರದ ಹಿಂದೆಯಷ್ಟೆ ವನ್ಯಜೀವಿ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳು ತಾವು ಕಂಡ ಹುಲಿ, ಆನೆ, ಚಿರತೆ, ಕರಡಿಗಳನ್ನು ಬಿಡಿಸಿದ್ದರು. ಮಕ್ಕಳು ನೇರವಾಗಿ ಅವುಗಳನ್ನು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ.ಮೃಗಾಲಯದಲ್ಲಾದರೂ ನೋಡಿರಬಹುದು. ಮಕ್ಕಳ ಕಣ್ಣಲ್ಲಿ ಮಾತ್ರ ವನ್ಯಲೋಕವೇ ಅನಾವರಣಗೊಂಡಿತ್ತು. ಅವರ ಕಲ್ಪನೆಯಲ್ಲಿ ವನ್ಯಜೀವಿಗಳೆಂದರೆ ಆತಂಕಗಳಿಲ್ಲದೇ ಬದುಕುವ ಸ್ವತಂತ್ರ ಜೀವಿಗಳು. ಇದು ಮಕ್ಕಳ ಮನಸಿನ ಸಹಜ ಭಾವನೆಯೂ ಹೌದು. ಮಕ್ಕಳ ಭಾವನೆಯಂತೆ ಅರಣ್ಯ, ವನ್ಯಜೀವಿ ವಿಚಾರದಲ್ಲಿ ತಮ್ಮ ಭಾವನೆಯೂ ಆಗಲಿ.
ಈಶ್ವರ ಖಂಡ್ರೆ ಆಶಯ
ಈ ಬಾರಿಯ ವನ್ಯಜೀವಿ ಸಪ್ತಾಹಕ್ಕೆ ಚಾಲನೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ , ಹವಾಮಾನ ವೈಪರಿತ್ಯ ಹಾಗೂ ಜಾಗತಿಕ ತಾಪಮಾನ ಏರಿಕೆಯಿಂದ ಸಮಸ್ಯೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಸಮಸ್ಯೆ ನಿವಾಹರಣೆಗೆ ಹಸಿರು ಹೊದಿಕೆ ಪ್ರಮಾಣ ಹೆಚ್ಚಿಸುವುದೇ ಪರಿಹಾರವಾಗಬಹುದು. ಅರಣ್ಯ ಕ್ಷೀಣಿಸಿದರೆ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುವುದು ಸಹಜ. ಇತ್ತೀಚಿನ ದಿನಗಳಲ್ಲಿ ಆನೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಆನೆ ದಾಳಿಗಳ ತಡೆಗೆ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಾಣವೂ ಪ್ರಗತಿಯಲ್ಲಿದೆ. ಸಂಘರ್ಷ ತಗ್ಗಿಸಲು ಸರ್ಕಾರವೂ ಪ್ರಯತ್ನಿಸುತ್ತಿದೆ. ವನ್ಯಜೀವ ಸಂರಕ್ಷಣೆ- ನಮ್ಮೆಲ್ಲರ ಹೊಣೆಯಾಗಲಿ ಎನ್ನುವ ಸದಾಶಯದ ಮಾತುಗಳನ್ನೇ ಆಡಿದ್ದಾರೆ.
ಮೈಸೂರಲ್ಲಿ ಸಪ್ತಾಹ ಸಮಾರೋಪ
ಅಂದ ಹಾಗೆ ವನ್ಯಜೀವಿ ಸಪ್ತಾಹದ ಸಮಾರೋಪ ಮೈಸೂರಿನಲ್ಲಿಯೇ ಆಯೋಜಿಸುವಂತೆ ಖುದ್ದು ಸಿದ್ದರಾಮಯ್ಯ ಅವರೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮುಂದಿನ ವಾರ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ವನ್ಯಜೀವಿ- ಮಾನವ ಸಂಘರ್ಷದ ವಿಚಾರದಲ್ಲಿ ಇನ್ನಷ್ಟು ಜನಮುಖಿ, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಚಿಸುವಂತೆ ದಿಕ್ಸೂಚಿಯನ್ನು ಸಿದ್ದರಾಮಯ್ಯ ಅವರೇ ಹಾಕಿಕೊಡಲಿ. ಏಕೆಂದರೆ ಈ ಬಾರಿಯ ವನ್ಯಜೀವಿ ಸಪ್ತಾಹದ ಘೋಷ ವಾಕ್ಯವೂ ವನ್ಯಜೀವಿ ಸಂರಕ್ಷಣೆಗೆ ಸಹಭಾಗಿತ್ವ.
-ಕುಂದೂರು ಉಮೇಶಭಟ್ಟ
(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)