ಭಾರತದಲ್ಲಿ ಬಿಡುಗಡೆ ಆಯಿತು 1 ಲಕ್ಷ ರೂಪಾಯಿಯ ಹೊಸ ಸ್ಮಾರ್ಟ್‌ಫೋನ್: ಅಂಥದ್ದೇನಿದೆ ಇದರಲ್ಲಿ -Motorola Razr 50 Ultra
ಮೊಟೊರೊಲ ಕಂಪನಿ ಭಾರತದಲ್ಲಿ ದುಬಾರಿ ಬೆಲೆಯ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಮೊಟೊರೊಲ ರೇಜರ್ 50 ಆಲ್ಟ್ರಾ. ಕ್ವಾಲ್ಕಂನ ಸ್ನಾಪ್ಡ್ರಾಗನ್ 8s Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನಿನ ಬೆಲೆ ಬರೋಬ್ಬರಿ 1 ಲಕ್ಷ ರೂ. ಆಗಿದೆ.
ಭಾರತಕ್ಕೆ ದುಬಾರಿ ಬೆಲೆಯ ಹೊಸ ಸ್ಮಾರ್ಟ್‌ಫೋನ್ ಒಂದು ಲಗ್ಗೆಯಿಟ್ಟಿದೆ. ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಲೆನೊವಾ ಮಾಲೀಕತ್ವದ ಪ್ರಸಿದ್ಧ ಮೊಟೊರೊಲ ಕಂಪನಿ ಇದೀಗ ಹೊಸದಾಗಿ ಮೊಟೊರೊಲ ರೇಜರ್ 50 ಆಲ್ಟ್ರಾ (Motorola Razr 50 Ultra) ಫೋನನ್ನು ದೇಶದಲ್ಲಿ ಅನಾವರಣ ಮಾಡಿದೆ. ಇದು ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಹ್ಯಾಂಡ್‌ಸೆಟ್ ಆಗಿದ್ದು ಕ್ವಾಲ್ಕಂನ ಸ್ನಾಪ್ಡ್ರಾಗನ್ 8s Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಮೊಟೊರೊಲ ರೇಜರ್ 50 ಆಲ್ಟ್ರಾ ಬೆಲೆ, ಲಭ್ಯತೆ
ಮೊಟೊರೊಲ ರೇಜರ್ 50 ಆಲ್ಟ್ರಾ ಭಾರತದಲ್ಲಿ ಸದ್ಯಕ್ಕೆ ಒಂದು ಆಯ್ಕೆ ಮಾತ್ರ ರಿಲೀಸ್ ಆಗಿದೆ. ಇದರ 12GB RAM + 512GB ಸ್ಟೋರೇಜ್ ರೂಪಾಂತರಕ್ಕೆ 99,999 ರೂ. ನಿಗದಿ ಮಾಡಲಾಗಿದೆ. ಇದನ್ನು ಮಿಡ್ನೈಟ್ ಬ್ಲೂ, ಸ್ಪ್ರಿಂಗ್ ಗ್ರೀನ್ ಮತ್ತು ಪೀಚ್ ಫಜ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಜುಲೈ 20 ಮತ್ತು ಜುಲೈ 21 ರಂದು ನಡೆಯಲಿರುವ ಅಮೆಜಾನ್ ಪ್ರೈಮ್ ಡೇ 2024 ಸೇಲ್ನಲ್ಲಿ ಇದು ಮಾರಾಟವಾಗಲಿದೆ.
ಕಂಪನಿಯು ಮೊದಲ ಸೇಲ್ ಪ್ರಯುಕ್ತ ಗ್ರಾಹಕರಿಗೆ 5,000 ರೂ. ಡಿಸ್ಕೌಂಟ್ ನೀಡುತ್ತಿದ್ದು, ರೂ. 94,999 ಕ್ಕೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಮಾಡಿದ ಪಾವತಿಗಳ ಮೇಲೆ 5,000 ರೂ. ತ್ವರಿತ ಬ್ಯಾಂಕ್ ರಿಯಾಯಿತಿಗಳಿವೆ.
ಮೊಟೊರೊಲ ರೇಜರ್ 50 ಆಲ್ಟ್ರಾ ಫೀಚರ್ಸ್
ಮೊಟೊರೊಲ ರೇಜರ್ 50 ಆಲ್ಟ್ರಾ ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.9-ಇಂಚಿನ ಪೂರ್ಣ-HD+ (1,080x2,640 ಪಿಕ್ಸೆಲ್‌ಗಳು) LTPO ಪೋಲ್ಡ್ ಒಳಗಿನ ಡಿಸ್ಪ್ಲೇ ಜೊತೆಗೆ 165Hz ವರೆಗೆ ರಿಫ್ರೆಶ್ ದರ ಇದೆ. ಇದರಲ್ಲಿ ಕವರ್ ಡಿಸ್‌ಪ್ಲೇಯು 4-ಇಂಚಿನ (1,080x1,272 ಪಿಕ್ಸೆಲ್‌ಗಳು) LTPO ಪೋಲ್ಡ್ ಪ್ಯಾನೆಲ್ನಿಂದ ಕೂಡಿದೆ. HDR10+ ಬೆಂಬಲವನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಮತ್ತು ಹಿಂಭಾಗದಲ್ಲಿ ವೆಗಾನ್ ಲೆದರ್ ಲೇಪನವನ್ನು ಹೊಂದಿದೆ. ಈ ಫೋನಿನ ಫ್ರೇಮ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಕ್ವಾಲ್‌ಕಾಮ್‌ನ ಸ್ನಾಪ್ಡ್ರಾಗನ್ 8s Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಫೋನಿನಲ್ಲಿ ಡ್ಯುಯಲ್ ಔಟರ್ ಕ್ಯಾಮೆರಾ ಸೆಟಪ್ ಇದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ ಮತ್ತು 2x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಫೋಲ್ಡಬಲ್ ಫೋನ್ನ ಒಳಗಿನ ಡಿಸ್ಪ್ಲೇಯಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಕ್ಯಾಮೆರಾ ಸೆಟಪ್ ವಿಭಿನ್ನ ಶೂಟಿಂಗ್ ಮೋಡ್‌ಗಳನ್ನು ಬೆಂಬಲಿಸುತ್ತದೆ ಮತ್ತು ಆಕ್ಷನ್ ಎಂಜಿನ್, ಅಟೋ ಸ್ಮೈಲ್ ಕ್ಯಾಪ್ಚರ್ ಮತ್ತು ಗೆಸ್ಚರ್ ಕ್ಯಾಪ್ಚರ್‌ನಂತಹ ವಿಭಿನ್ನ AI-ಚಾಲಿತ ಸಾಧನಗಳನ್ನು ನೀಡಲಾಗಿದೆ.
ಮೊಟೊರೊಲ ರೇಜರ್ 50 ಆಲ್ಟ್ರಾನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 6E, ಬ್ಲೂಟೂತ್, ಜಿಪಿಎಸ್, A-ಜಿಪಿಎಸ್, ಎನ್ಎಫ್ಸಿ, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಮೂರು ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ. ಸಾಫ್ಟ್‌ವೇರ್ ಆಧಾರಿತ ಫೇಸ್ ಅನ್‌ಲಾಕ್ ವೈಶಿಷ್ಟ್ಯದ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಇದೆ. 4,000mAh ಬ್ಯಾಟರಿಯೊಂದಿಗೆ 45W ವೇಗದ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. (ಬರಹ: ವಿನಯ್ ಭಟ್)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)