Ganesh Chaturthi 2022 Date:ಗೌರಿ-ಗಣೇಶನನ್ನು ಪೂಜಿಸಲು ಶುಭ ಸಮಯ ಯಾವುದು...ಎಲ್ಲರೂ ಗಣೇಶನನ್ನು ಪ್ರತಿಷ್ಠಾಪಿಸಬಹುದಾ...?
ಕನ್ನಡ ಸುದ್ದಿ  /  ಜೀವನಶೈಲಿ  /  Ganesh Chaturthi 2022 Date:ಗೌರಿ-ಗಣೇಶನನ್ನು ಪೂಜಿಸಲು ಶುಭ ಸಮಯ ಯಾವುದು...ಎಲ್ಲರೂ ಗಣೇಶನನ್ನು ಪ್ರತಿಷ್ಠಾಪಿಸಬಹುದಾ...?

Ganesh Chaturthi 2022 Date:ಗೌರಿ-ಗಣೇಶನನ್ನು ಪೂಜಿಸಲು ಶುಭ ಸಮಯ ಯಾವುದು...ಎಲ್ಲರೂ ಗಣೇಶನನ್ನು ಪ್ರತಿಷ್ಠಾಪಿಸಬಹುದಾ...?

ಗಣೇಶ ಹುಟ್ಟಿದ ದಿನವನ್ನು ಪ್ರತಿ ವರ್ಷ ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಯಾವ ದಿನ ಗೌರಿ ಹಾಗೂ ಗಣೇಶ ಹಬ್ಬವನ್ನು ಆಚರಿಸಬೇಕು....? ವ್ರತಾಚರಣೆಗೆ ಸೂಕ್ತವಾದ ಸಮಯ ಯಾವುದು...? ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

<p>ಗೌರಿ-ಗಣೇಶ ಪೂಜೆಗೆ ಶುಭ ಮುಹೂರ್ತ</p>
ಗೌರಿ-ಗಣೇಶ ಪೂಜೆಗೆ ಶುಭ ಮುಹೂರ್ತ (PC: unsplash, @radhamedepalli)

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ದೇವರ ಪೂಜೆಗೂ ಅದ್ದರದ್ದೇ ಆದ ವಿಶೇಷ ಮಹತ್ವ ಇದೆ. ವರ್ಷದ ಆರಂಭದಿಂದ ಕೊನೆಯವರೆಗೂ ಅನೇಕ ಹಬ್ಬಗಳನ್ನು ನಾವು ಆಚರಿಸುತ್ತೇವೆ. ಹಾಗೇ ಭಾದ್ರಪದ ಮಾಸದಲ್ಲಿ ಆಚರಿಸಲಾಗುವ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬ ಪ್ರಮುಖವಾದುದು. ಭಾದ್ರಪದವು ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಆರನೇ ಮಾಸವಾಗಿದೆ.

ದೇವಾನು ದೇವತೆಗಳಲ್ಲಿ ಪ್ರಥಮ ಪೂಜೆಗೆ ಅಧಿಪತಿಯಾದವನು ಗಣೇಶ. ನಾವು ಯಾವುದೇ ಪೂಜೆ ಮಾಡಿದರೂ ಅಲ್ಲಿ ವಿಘ್ನೇಶ್ವರನಿಗೆ ಮೊದಲ ಪೂಜೆ ಇರುತ್ತದೆ. ಹಲವರು ಪ್ರತಿ ತಿಂಗಳು ಸಂಕಷ್ಟಹರ ಚತುರ್ಥಿಯಂದು ಗಣೇಶನ ವ್ರತವನ್ನು ಆಚರಿಸುತ್ತಾರೆ. ಆದರೆ ಗಣೇಶ ಹುಟ್ಟಿದ ದಿನವನ್ನು ಪ್ರತಿ ವರ್ಷ ಗಣೇಶ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಯಾವ ದಿನ ಗೌರಿ ಹಾಗೂ ಗಣೇಶ ಹಬ್ಬವನ್ನು ಆಚರಿಸಬೇಕು....? ವ್ರತಾಚರಣೆಗೆ ಸೂಕ್ತವಾದ ಸಮಯ ಯಾವುದು...? ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಈ ಬಾರಿಯ ಭಾದ್ರಪದ ಮಾಸ ಆಗಸ್ಟ್‌ 28 ರಿಂದ ಆರಂಭವಾಗಿ ಸೆಪ್ಟೆಂಬರ್‌ 25ರಂದು ಕೊನೆಗೊಳ್ಳುತ್ತದೆ. ಭಾದ್ರಪದ ಮಾಸ ಆರಂಭವಾದ ಮೂರನೇ ದಿನದಂದು ಗೌರಿ ಹಬ್ಬ ಹಾಗೂ ನಾಲ್ಕನೇ ದಿನ ಗಣೇಶನ ಹಬ್ಬವನ್ನ ಆಚರಿಸಲಾಗುತ್ತದೆ. ಅದರಂತೆ ಈ ಬಾರಿ ಆಗಸ್ಟ್‌ 30, ಮಂಗಳವಾರದಂದು ಗೌರಿ ಹಾಗೂ 31, ಬುಧವಾರದದು ಗಣೇಶನ ಹಬ್ಬ ಇದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಗಣೇಶ ಜನಿಸಿದ ದಿನವನ್ನೇ ನಾವು ಪ್ರತಿ ವರ್ಷ ಗಣೇಶನ ಹಬ್ಬವಾಗಿ ಆಚರಿಸುತ್ತಾ ಬಂದಿದ್ದೇವೆ. ತವರಿಗೆ ಬಂದ ಗೌರಿಯನ್ನು ಕೈಲಾಸಕ್ಕೆ ಕರೆದೊಯ್ಯಲು ಮರುದಿನ ಪುತ್ರ ಗಣೇಶ ಭೂಮಿಗೆ ಬಂದ ದಿನವನ್ನು ಗಣೇಶ ಚತುರ್ಥಿಯನ್ನಾಗಿ ಆಚರಿಸುವ ಕಥೆ ಕೂಡಾ ಇದೆ.

ಗೌರಿ ವ್ರತ

ಕೆಲವೆಡೆ ಗಣೇಶ ಹಬ್ಬದಂದೇ ಗೌರಿಯನ್ನು ಗಣೇಶನೊಂದಿಗೆ ಒಟ್ಟಿಗೆ ಪ್ರತಿಷ್ಠಾಪಿಸಿದರೆ, ಕೆಲವರು ಸಂಪ್ರದಾಯದ ಪ್ರಕಾರ ಗೌರಿಯನ್ನು ಹಿಂದಿನ ದಿನ ಕರೆ ತರುತ್ತಾರೆ. ಆ ದಿನ ಗೌರಿ ವ್ರತವನ್ನು ಆಚರಿಸಿ ಮಹಿಳೆಯರಿಗೆ ಬಾಗಿನ ನೀಡಲಾಗುತ್ತದೆ. ರಾಹುಕಾಲ ಹಾಗೂ ಯಮಗಂಡ ಕಾಲ ಹೊರತುಪಡಿಸಿ ಇತರ ಸಮಯದಲ್ಲಿ ವಿಶೇಷವಾಗಿ ಬೆಳಗ್ಗೆ ಅಥವಾ ಸಂಜೆ ಮನೆಗೆ ತಂದು ಪೂಜೆ ಮಾಡಬಹುದು. ಶುಕ್ಲ ಪಕ್ಷದ ತೃತೀಯಾ ತಿಥಿ ಆಗಸ್ಟ್‌ 29, ಸೋಮವಾರ ಮಧ್ಯಾಹ್ನ 3:20ಕ್ಕೆ ಆರಂಭವಾದರೆ ಆಗಸ್ಟ್‌ 30, ಮಂಗಳವಾರ ಮಧ್ಯಾಹ್ನ 3:30ಕ್ಕೆ ಮುಕ್ತಾಯವಾಗುತ್ತದೆ. ಈ ಬಾರಿ ಮಂಗಳವಾರ ಗೌರಿ ಹಬ್ಬ ಇರುವುದು ಬಹಳ ವಿಶೇಷವಾಗಿದೆ. ಇದು ಹೆಣ್ಣು ಮಕ್ಕಳಿಗೆ ಬಹಳ ವಿಶೇಷವಾದ ವ್ರತವಾಗಿದೆ. ಮಂಗಳವಾರ ಬೆಳಗಿನ ಜಾವ 5:22 ರಿಂದ 7:52 ರ ಮುಹೂರ್ತದಲ್ಲಿ ನೀವು ಗೌರಿ ಪೂಜೆ ನೆರವೇರಿಸುವುದು ಶುಭದಾಯಕವಾಗಿದೆ.

ಗಣೇಶನ ಪೂಜೆ

ಆಗಸ್ಟ್‌ 30, ಮಂಗಳವಾರ ಸಂಜೆ 3:33ಕ್ಕೆ ಭಾದ್ರಪದ ಶುಕ್ಲಪಕ್ಷ ಚತುರ್ಥಿ ಆರಂಭವಾದರೆ ಆಗಸ್ಟ್‌ 31 ಬುಧವಾರ ಸಂಜೆ 3:23 ಕ್ಕೆ ಮುಗಿಯುತ್ತದೆ. ಅಷ್ಟರಲ್ಲಿ ನೀವು ಗಣೇಶನನ್ನು ಮನೆಗೆ ತಂದು ಪ್ರತಿಷ್ಠಾಪಿಸಬೇಕು. ಪುರಾಣಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ಗಣೇಶ ಜನಿಸಿದ್ದು ಮಧ್ಯಾಹ್ನವಾದ್ದರಿಂದ ಆ ಸಮಯದಲ್ಲಿ ಕೂಡಾ ಗಣೇಶನನ್ನು ಮನೆಗೆ ತರಬಹುದು. ರಾಹುಕಾಲ , ಯಮಗಂಡ ಕಾಲ ಹೊರತುಪಡಿಸಿ ಬೆಳಗ್ಗೆ11.05 ರಿಂದ ಮಧ್ಯಾಹ್ನ 1.38 ವರೆಗೆ ಗಣೇಶನನ್ನು ಪೂಜಿಸಲು ಉತ್ತಮ ಸಮಯವಾಗಿದೆ.

ಎಲ್ಲರೂ ಗಣೇಶನನ್ನು ಪ್ರತಿಷ್ಠಾಪಿಸಬಹುದಾ...?

ಪದ್ಧತಿ ಇರುವವರು ಪ್ರತಿ ವರ್ಷ ಗಣೇಶನನ್ನು ಮನೆಗೆ ತಂದು ಪೂಜಿಸುತ್ತಾರೆ. ಆದರೆ ಕೆಲವರಿಗೆ ಗಣೇಶನನ್ನು ಪ್ರತಿಷ್ಠಾಪಿಸುವ ಆಸೆ ಇದ್ದರೂ ಪದ್ಧತಿ ಇಲ್ಲ ಎಂದು ಸುಮ್ಮನಾಗುತ್ತಾರೆ. ಯಾರು ಬೇಕಾದರೂ ಗಣೇಶನನ್ನು ಪ್ರತಿಷ್ಠಾಪಿಸಬಹುದು. ಆದರೆ ಅದಕ್ಕೆಂದೇ ಕೆಲವು ನಿಯಮಗಳಿವೆ. ಮನೆಯಲ್ಲಿ ಗಣೇಶನನ್ನು ಪೂಜಿಸುವವರು ಸಂಕಲ್ಪ ಮಾಡಿಕೊಂಡು ವ್ರತ ಆಚರಿಸಬೇಕು. ಒಂದು ಬಾರಿ ಆಚರಿಸಿದರೆ ಕನಿಷ್ಠ ೩ ವರ್ಷಗಳಾದರೂ ವ್ರತ ಮುಂದುವರೆಸಬೇಕು. ಆದರೆ ಪೂಜೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಅದ್ಧೂರಿಯಾಗಿ ಆಚರಿಸುವುದಕ್ಕಿಂತ ನಿಮ್ಮ ಶಕ್ತ್ಯಾನುಸಾರ ಭಕ್ತಿಯಿಂದ ಪೂಜೆ ಆಚರಿಸಿದರೆ ಉತ್ತಮ ಫಲ ನಿಮಗೆ ದೊರೆಯತ್ತದೆ. ಹೆಚ್ಚಿನ ಮಾಹಿತಿಗಾಗಿ ಇದರ ಬಗ್ಗೆ ತಿಳಿದಿರುವ ಪುರೋಹಿತರನ್ನು ಸಂಪರ್ಕಿಸಿ.

Whats_app_banner