ವಾಂತಿ ಆದರೆ ಹೆಣ್ಣು ಮಗು, ಹೆಚ್ಚು ಸಿಹಿ ತಿಂದರೆ ಗಂಡು; ಗರ್ಭಿಣಿಯರ ಹೊಟ್ಟೆ ನೋಡಿ ಹಿರಿಯರು ಹೇಳುವ ಮಾತು ನಿಜವೇ?
ಹೆಣ್ಣು ಗರ್ಭವತಿಯಾದ ತಕ್ಷಣ ದೇಹದಲ್ಲಾಗುವ ಕೆಲವು ಬದಲಾವಣೆಗಳನ್ನು ಗಮನಿಸಿ ಹುಟ್ಟುವ ಮಗು ಗಂಡು ಅಥವಾ ಹೆಣ್ಣು ಎಂದು ಹಿರಿಯರು ಭವಿಷ್ಯ ನುಡಿಯುತ್ತಾರೆ. ಆ ರೀತಿಯಾಗಿ ಹೇಳುವುದು ಎಷ್ಟರ ಮಟ್ಟಿಗೆ ಸರಿಯಾಗಿರುತ್ತದೆ? ನಂಬಿಕೆಯನ್ನೇ ನಿಜ ಎಂದುಕೊಳ್ಳಬೇಡಿ, ಸತ್ಯವನ್ನು ಕೂಡಾ ತಿಳಿಯಿರಿ.

ನಮ್ಮ ದೇಶದಲ್ಲಿ ಗರ್ಭಾವಸ್ಥೆಯಲ್ಲಿರುವಾಗ ಮಗುವಿನ ಲಿಂಗವನ್ನು ತಿಳಿದುಕೊಳ್ಳುವುದು ಕಾನೂನುಬಾಹಿರ. ಆದರೆ ಹೊರ ದೇಶಗಳಲ್ಲಿ ಹಾಗಲ್ಲ. ಅಲ್ಲಿ ಮಗುವಿನ ಜನನದ ಪೂರ್ವದಲ್ಲಿಯೇ ಲಿಂಗ ಯಾವುದೆಂದು ಬಹಿರಂಗಪಡಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಆದುದರಿಂದಲೇ ಮಗು ಹೆಣ್ಣೋ ಅಥವಾ ಗಂಡೋ ಎಂಬ ಪ್ರಶ್ನೆ ಮಗು ಹುಟ್ಟುವವರೆಗೂ ಇದ್ದೇ ಇರುತ್ತದೆ. ಮನೆಯಲ್ಲಿರುವ ಹಿರಿಯರು ಗರ್ಭಿಣಿಯ ಗುಣಲಕ್ಷಣಗಳ ಆಧಾರದ ಮೇಲೆ ಹುಟ್ಟುವ ಮಗು ಯಾವುದಿರಬಹುದೆಂದು ಊಹಿಸುತ್ತಾರೆ. ಹಾಗಾದರೆ ಗರ್ಭಿಣಿ ಮಹಿಳೆಯ ಲಕ್ಷಣಗಳ ಮೇಲೆ ಹೇಳುವ ಭವಿಷ್ಯ ನಿಜವೋ ಅಥವಾ ಸುಳ್ಳೋ ಎಂಬುದನ್ನು ನೋಡೋಣ.
ಸಿಹಿ ತಿಂಡಿಗಳನ್ನು ತಿನ್ನುವುದು
ನಂಬಿಕೆ: ಗರ್ಭಿಣಿಯು ಹೆಚ್ಚು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಹುಟ್ಟುವ ಮಗುವನ್ನು ಗಂಡು ಎಂದು ಹೇಳಲಾಗುತ್ತದೆ. ಹುಳಿ ತಿನ್ನಬೇಕೆಂದು ಬಯಸಿದರೆ ಹೆಣ್ಣು ಮಗುವಾಗುತ್ತದೆ ಎಂಬ ಮಾತಿದೆ.
ಸತ್ಯ: ಈ ಕಡುಬಯಕೆಗಳನ್ನು ಉಂಟುಮಾಡುವುದು ಹಾರ್ಮೋನುಗಳ ಬದಲಾವಣೆಯಿಂದಾಗಿದೆ. ನಿಮ್ಮ ಮಗು ವಯಸ್ಸಾದಂತೆ ಸಿಹಿತಿಂಡಿಗಳ ಬಗ್ಗೆ ಒಲವು ಬೆಳೆಸಿಕೊಳ್ಳಬಹುದು. ಆದರೆ ಮಗು ಹೊಟ್ಟೆಯಲ್ಲಿರುವಾಗ ಐಸ್ ಕ್ರೀಂ, ಚಾಕಲೇಟ್ ತಿನ್ನುವುದು ಬೇಡ.
ಸುಸ್ತು ಮತ್ತು ವಾಂತಿ
ನಂಬಿಕೆ: ದಿನವಿಡೀ ಸುಸ್ತಾಗುವುದು ಮತ್ತು ಬೆಳಗ್ಗೆ ಎದ್ದ ತಕ್ಷಣ ವಾಂತಿಯಾದರೆ ಹೆಣ್ಣು ಮಗು ಜನಿಸುತ್ತದೆ ಎಂದು ಹೇಳಲಾಗುತ್ತದೆ.
ಸತ್ಯ: ಮಾರ್ನಿಂಗ್ ಸಿಕ್‌ನೆಸ್ ಅಥವಾ ಬೆಳಗಿನ ಬೇನೆಯು ತೀವ್ರ ಸ್ವರೂಪವಾದ ಹೈಪರ್‌ರೆಮಿಸಿಸ್ ಗ್ರಾವಿಡಾರಮ್‌ನಿಂದ ಆಗುತ್ತದೆ. ಅದರಿಂದ ಬಳಲುತ್ತಿರುವ ಮಹಿಳೆಯರು ಹೆಣ್ಣುಮಗುವಿಗೆ ಜನ್ಮ ನೀಡುವ ಸಾಧ್ಯತೆ ಹೆಚ್ಚು ಎಂಬ ವರದಿಗಳಿವೆ. ಆದರೆ, ಗಂಡು ಮಗುವಿಗೆ ಜನ್ಮ ನೀಡಲಿರುವ ಗರ್ಭಿಣಿಯರಲ್ಲಿಯೂ ಈ ಸಮಸ್ಯೆ ಎದುರಾಗಬಹುದು. ಕೇವಲ ಇದರಿಂದ ಮಾತ್ರ ಲಿಂಗವನ್ನು ನಿರ್ಧರಿಸಲಾಗುವುದಿಲ್ಲ. ಇದು ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುವ ಸಮಸ್ಯೆಯೂ ಆಗಿದೆ.
ಎದೆಯುರಿ
ನಂಬಿಕೆ: ಗರ್ಭಾವಸ್ಥೆಯಲ್ಲಿ ಎದೆಯುರಿ ಅಥವಾ ಅಸಿಡಿಟಿಯಂತಹ ಸಮಸ್ಯೆಗಳಿದ್ದರೆ, ಹುಟ್ಟುವ ಮಗುವಿಗೆ ದಪ್ಪ ಕೂದಲು ಇರುತ್ತದೆ ಮತ್ತು ಹೆಣ್ಣು ಮಗು ಹುಟ್ಟುತ್ತದೆ ಎಂದು ಹೇಳಲಾಗುತ್ತದೆ.
ಸತ್ಯ: ಮಗು ಬೆಳೆದಂತೆ ಹೊಟ್ಟೆಯ ಭಾಗ ಹಿಗ್ಗುತ್ತದೆ. ಅದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಒತ್ತಡವುಂಟಾಗುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ. ನಂತರ ಅದು ಆಮ್ಲೀಯವಾಗಲು ಪ್ರಾರಂಭಿಸುತ್ತದೆ. ಅಷ್ಟೇ ಅಲ್ಲದೆ ಎದೆಯುರಿ ಲಕ್ಷಣವು ಹಾರ್ಮೋನುಗಳ ಬದಲಾವಣೆಯಿಂದಲೂ ಉಂಟಾಗುತ್ತದೆ.
ಹೃದಯದ ಬಡಿತ
ನಂಬಿಕೆ: ಮಗುವಿನ ಹೃದಯವು ನಿಮಿಷಕ್ಕೆ 140 ಬಡಿತಗಳಿಗಿಂತ ವೇಗವಾಗಿ ಬಡಿಯುತ್ತಿದ್ದರೆ, ಅದು ಹೆಣ್ಣು ಎಂದು ನಂಬಲಾಗಿದೆ.
ಸತ್ಯ: ಇದು ಅನೇಕರು ನಂಬಿರುವ ಸಂಗತಿ. ಆದರೆ ಮಗುವಿನ ಲಿಂಗವನ್ನು ನಿರ್ಧರಿಸುವುದಕ್ಕೂ ಹೃದಯದ ಬಡಿತಕ್ಕೂ ಯಾವುದೇ ಸಂಬಂಧವಿಲ್ಲ.
ರಿಂಗ್ ಟೆಸ್ಟ್
ನಂಬಿಕೆ: ನಿಮ್ಮ ಕೂದಲನ್ನು ನಿಮ್ಮ ಮದುವೆಯ ಉಂಗುರ ಅಥವಾ ನೀವು ಯಾವಾಗಲೂ ಧರಿಸುವ ಉಂಗುರಕ್ಕೆ ಸುತ್ತಬೇಕು. ನಂತರ ಅದನ್ನು ಗರ್ಭಿಣಿ ಸ್ತ್ರೀಯ ಹೊಟ್ಟೆಯ ಮೇಲೆ ಇಡಬೇಕು. ಆಗ ಉಂಗುರುವು ವೃತ್ತಾಕಾರದಲ್ಲಿ ತಿರುಗಿದರೆ, ಅದು ಹೆಣ್ಣು ಮಗು. ಹಿಂದೆ ಮುಂದೆ ಚಲಿಸಿದರೆ ಗಂಡು ಮಗು ಎನ್ನಲಾಗುತ್ತದೆ.
ಸತ್ಯ: ಸಾಂಪ್ರದಾಯಿಕ ಚೀನೀ ಔಷಧವನ್ನು ಅಭ್ಯಾಸ ಮಾಡುವ ಜನರು ತೂಗಾಡುವ ಉಂಗುರವನ್ನು ದೇಹದ ನೈಸರ್ಗಿಕ ಶಕ್ತಿಯನ್ನು ಪರೀಕ್ಷಿಸಲು ಬಳಸಲಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಹೊಟ್ಟೆಯ ಸ್ಥಿತಿ
ನಂಬಿಕೆ: ಗರ್ಭಾವಸ್ಥೆಯಲ್ಲಿ, ಗರ್ಭಿಣಿ ಹೊಟ್ಟೆಯು ಮೇಲ್ಭಾಗದಲ್ಲಿ ಹೆಚ್ಚು ಬೆಳೆದರೆ ಹುಟ್ಟುವ ಮಗು ಹೆಣ್ಣು ಎಂದೂ ಮತ್ತು ಹೊಟ್ಟೆ ಕೆಳಕ್ಕೆ ಜಾರಿದ್ದರೆ ಗಂಡು ಮಗುವೆಂದೂ ಹೇಳಲಾಗುತ್ತದೆ.
ಸತ್ಯ: ಗರ್ಭಾವಸ್ಥೆಯಲ್ಲಿ ಹೊಟ್ಟೆಯು ಗರ್ಭಾಶಯದ ಆಕಾರ ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತದೆ. ಹುಟ್ಟಲಿರುವ ಮಗುವಿನ ಗಾತ್ರ ಕೂಡ ಹೊಟ್ಟೆಯ ಸ್ಥಾನವನ್ನು ಬದಲಾಯಿಸುತ್ತದೆ.
ಹೊಟ್ಟೆಯ ಆಕಾರ
ನಂಬಿಕೆ: ದುಂಡಗಿನ ಹೊಟ್ಟೆಯಾಗಿದ್ದರೆ ಹುಡುಗಿ. ಹೊಟ್ಟೆ ಸ್ವಲ್ಪ ಮುಂದೆ ಬಂದಂತೆ ಇದ್ದರೆ ಅದು ಹುಡುಗ ಎನ್ನಲಾಗುತ್ತದೆ.
ಸತ್ಯ: ಹೊಟ್ಟೆಯ ಆಕಾರವು ಹೊಟ್ಟೆಯಲ್ಲಿ ಮಗುವಿನ ಸ್ಥಾನವನ್ನು ಅವಲಂಬಿಸಿರುತ್ತದೆ. ಅದನ್ನು ಬಿಟ್ಟು ಹೆಣ್ಣು ಮಗು, ಗಂಡು ಮಗು ಎಂದು ಹೇಳಲಾಗದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವರದಿ: ಅರ್ಚನಾ ವಿ ಭಟ್
ಇನ್ನಷ್ಟು ಆರೋಗ್ಯ ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸಾವಿನಿಂದ ತಪ್ಪಿಸಿಕೊಳ್ಳಲು ದೇಹದ ಸಂರಕ್ಷಣೆ; ಏನಿದು ಕ್ರಿಯೋಪ್ರಿಸರ್ವೇಷನ್, ಸಾವನ್ನು ಮುಂದೂಡುವುದಾದರೂ ಹೇಗೆ?

ವಿಭಾಗ