Gold gifts for children: ಇಶಾ ಅಂಬಾನಿ ಪುತ್ರಿ ಆದಿಯಾಗೆ 108 ಚಿನ್ನದ ಘಂಟೆಯ ಗಿಫ್ಟ್, ಮಕ್ಕಳಿಗೆ ಚಿನ್ನದ ಉಡುಗೊರೆ ನೀಡಲು ಇಲ್ಲಿದೆ ಐಡಿಯಾ
Gold gifts children:ಇತ್ತೀಚೆಗೆ ಇಶಾ ಅಂಬಾನಿ ತನ್ನ ಪುಟ್ಟ ಮಗು ಆದಿಯಾಗೆ 108 ಚಿನ್ನದ ಗಂಟೆಗಳು ಸುಂದರ ಲೇಡರ್ ಉಡುಗೊರೆ ನೀಡಿದ್ದರು. ನೀವು ಕೂಡ ಮಕ್ಕಳಿಗೆ ಚಿನ್ನದ ಉಡುಗೊರೆ ನೀಡಲು ಬಯಸಿದರೆ ಇಲ್ಲಿ ಒಂದಿಷ್ಟು ಮಾಹಿತಿಯಿದೆ.
Gold gifts for children: ಮಕ್ಕಳಿಗೆ ಸೂಕ್ತ ಉಡುಗೊರೆ ಚಿನ್ನ ಎಂಬ ಮಾತಿದೆ. ಚಿನ್ನ ಎಂದರೆ ಅಲಂಕಾರವೂ ಹೌದು, ಭವಿಷ್ಯದಲ್ಲಿ ಉಪಯೋಗಕ್ಕೆ ಬರುವ ಹೂಡಿಕೆ ವಸ್ತುವೂ ಹೌದು. ಎಲ್ಲಾದರೂ ನೀವು ನಿಮ್ಮ ಆಪ್ತರ ಕುಟುಂಬದ ಬೇಬಿ ಬಾಯ್ ಅಥವಾ ಬೇಬಿ ಗರ್ಲ್ ತೊಟ್ಟಿಲು, ನಾಮಕರಣ ಕಾರ್ಯಕ್ರಮಕ್ಕೆ ಹೋಗುವಾಗ ಚಿನ್ನದ ಉಡುಗೊರೆ ನೀಡಬಹುದು. ಇದೇ ರೀತಿ ನಿಮ್ಮ ಮಗ ಅಥವಾ ಮಗಳಿಗೂ ಚಿನ್ನದ ಗಿಫ್ಟ್ ನೀಡಲು ಬಯಸಬಹುದು. ಇತ್ತೀಚೆಗೆ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿಯು ತನ್ನ ಪುಟ್ಟ ಮಗು ಆದಿಯಾಗೆ 108 ಚಿನ್ನದ ಗಂಟೆಗಳು ಇರುವ ಏಣಿ (ಲಾಡೆನ್) ಉಡುಗೊರೆ ನೀಡಿದ್ದರು. ಆದಿಯಾ ಹೆಸರು ಶಕ್ತಿ ಪಿರಾಮಲ್ ಆಗಿದ್ದು, ಸುಂದರ ಮತ್ತು ಮಂಗಳಕರ ಎಂಬ ಅರ್ಥ ಹೊಂದಿದೆ. ಶಕ್ತಿದೇವಿಯ ಹೆಸರಿನ ಅರ್ಥವನ್ನು ಆದಿಯಾ ಹೊಂದಿದೆ. ಈ ಪುಟ್ಟ ಮಗುವಿಗೆ 108 ಘಂಟೆಗಳನ್ನು ನೀಡಿದ್ದೇವೆ. ಇದು 108 ಸ್ತೋತ್ರ ಪಠಣಗಳನ್ನು ಪ್ರತಿನಿಧಿಸುತ್ತವೆ. ಶಕ್ತಿಶಾಲಿ ಶಕ್ತಿ ದೇವಿಯ ಆಶೀರ್ವಾದ ಈ ರೀತಿ ಮಗುವಿಗೆ ದೊರಕಲಿ ಎಂದು ಇಶಾ ಅಂಬಾನಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಟ್ರೆಂಡಿಂಗ್ ಸುದ್ದಿ
ಇಶಾ ಅಂಬಾನಿ ಬಿಡಿ, ಅವರು ಕುಬೇರನ ಪುತ್ರಿ. ಅವರ ಸಂಪತ್ತು ಹಲವು ನೂರು ಕೋಟಿ ಇರಬಹುದು. ಮಗಳಿಗೆ ನೂರೆಂಟು ಚಿನ್ನದ ಘಂಟೆ ನೀಡಿದರೆ ಅಚ್ಚರಿಯಿಲ್ಲ. ಆದರೆ, ಬಡವರು ಇರಲಿ, ಮಧ್ಯಮ ಕುಟುಂಬದವರು ಇರಲಿ, ತಮ್ಮ ಮಗುವಿಗೆ ಚಿನ್ನದ ಉಡುಗೊರೆ ನೀಡಿ ಸಂಭ್ರಮಿಸುತ್ತಾರೆ. ತಮ್ಮ ಆದಾಯ, ಸಂಪತ್ತು, ಶಕ್ತಿಗೆ ಅನುಸಾರವಾಗಿ ಪುಟ್ಟ ಚಿನ್ನದ ಉಂಗುರ, ಮೂಗಿನ ನತ್ತು, ಕಿವಿಯೊಳೆ, ಚಿನ್ನದ ಸರ, ನಕ್ಲೇಸ್ ಹಾಕಿ ಖುಷಿ ಪಡುತ್ತಾರೆ. ಪುಟ್ಟ ಮಗು/ಮಕ್ಕಳ ದೇಹದಲ್ಲಿ ಒಂದು ಪುಟ್ಟ ಚಿನ್ನದ ಆಭರಣ ಇದ್ದರೆ ಹೆತ್ತವರಿಗೆ ಸಂಭ್ರಮ.
ಮಕ್ಕಳಿಗೆ ಚಿನ್ನ ಏಕೆ?
ಮಕ್ಕಳಿಗೆ ದುಬಾರಿ ಆಟಿಕೆ ನೀಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಈ ಆಟಿಕೆಗಳ ಆಯಸ್ಸು ಕೆಲವು ಸಮಯ ಇರುತ್ತದೆ. ಆದರೆ, ದುಬಾರಿ ಆಟಿಕೆಗಳಲ್ಲಿ ಮಕ್ಕಳು ಎಷ್ಟು ದಿನ ಆಡ್ತಾರೋ ಗೊತ್ತಿರುವುದಿಲ್ಲ. ಆದರೆ, ಚಿನ್ನದಂತಹ ಆಭರಣಗಳು ನೀಡಿದರೆ ಅದರ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತದೆ. ಮಕ್ಕಳಿಗೆ ಕಷ್ಟಕಾಲದಲ್ಲಿ ನೆರವಿಗೂ ಬರಬಹುದು. ಈಗ ಎಂಟು ಗ್ರಾಂ ತೂಕದ ಚಿನ್ನದ ಸರವನ್ನು ಮಕ್ಕಳಿಗೆ ನೀಡಿದರೆ ಹದಿನೆಂಟು ಇಪತ್ತು ವರ್ಷ ಕಳೆದಾಗ ಆ ಚಿನ್ನದ ಮೌಲ್ಯ ಹಲವು ಪಟ್ಟು ಹೆಚ್ಚಿರುತ್ತದೆ. ಹೀಗಾಗಿ, ಹೂಡಿಕೆಯ ದೃಷ್ಟಿಯಿಂದಲೂ ಚಿನ್ನ ಅತ್ಯಂತ ಸೂಕ್ತವಾದ ವಸ್ತು. ಇದೇ ಕಾರಣಕ್ಕೆ ಮಕ್ಕಳಿಗೆ ಚಿನ್ನಾಭರಣ ಖರೀದಿಸುವ ಪ್ರವೃತ್ತಿ ಭಾರತದಲ್ಲಿ ಹೆಚ್ಚಾಗಿದೆ.
ಮಕ್ಕಳಿಗೆ ಚಿನ್ನದ ಗಿಫ್ಟ್ ಐಡಿಯಾಗಳು
ಬ್ರೇಸ್‌ಲೆಟ್: ಮಕ್ಕಳಿಗೆ ದೃಷ್ಟಿ ಮಣಿ ಇರುವ ಬ್ರೇಸ್‌ಲೆಟ್ ಉಡುಗೊರೆಯಾಗಿ ನೀಡಬಹುದು. ಇದು ಸಾಂಪ್ರದಾಯಿಕ ಆಭರಣ ಉಡುಗೊರೆ. ಎವಿಲ್ ಬ್ಲೂ ಐಗಳಿಂದ ರಕ್ಷಣೆ ನೀಡುವ ಇಂತಹ ಬ್ರೇಸ್‌ಲೈಟ್ ಬಹುತೇಕರ ಆಯ್ಕೆಯಾಗಿರುತ್ತದೆ. ಚಿನ್ನ ಮಾತ್ರವಲ್ಲದೆ ಬೆಳ್ಳಿಯ ಬ್ರೇಸ್‌ಲೆಟ್ ಕೂಡ ದೊರಕುತ್ತದೆ. ಬೇಬಿ ಬಾಯ್ ಮತ್ತು ಬೇಬಿ ಗರ್ಲ್‌ಗೆ ಸೂಕ್ತವಾದ ಬ್ರೇಸ್‌ಲೆಟ್‌ಗಳು ಚಿನ್ನದಂಗಡಿಯಲ್ಲಿ ದೊರಕುತ್ತದೆ.
ಬೇಬಿ ಗರ್ಲ್‌ಗೆ ಕ್ಯೂಟ್ ಪೆಂಡೆಂಟ್: ಹೆಣ್ಣು ಮಗುವಿನ ಕೊರಳಲ್ಲಿ ಮುದ್ದಾದ ಚಿನ್ನದ ಪೆಂಡೆಂಟ್ ಇದ್ದರೆ ಮಗುವಿನ ಕ್ಯೂಟ್‌ನೆಸ್ ಇನ್ನಷ್ಟು ಹೆಚ್ಚುತ್ತದೆ. ಮಗುವಿನ ಹುಟ್ಟುಹಬ್ಬ, ನಾಮಕರಣ ಇತ್ಯಾದಿಗಳಿಗೂ ಕ್ಯೂಟ್ ಪೆಂಡೆಂಟ್ ಉಡುಗರೆ ನೀಡಬಹುದು.
ಕಿವಿಯೋಲೆ: ಹೆಣ್ಣು ಮಗುವಿಗೆ ಕಿವಿಯೋಲೆ ಕೂಡ ಸೂಕ್ತವಾದ ಚಿನ್ನದ ಉಡುಗೊರೆಯಾಗಿದೆ. ಮಕ್ಕಳಿಗೆ ಉಡುಗೊರೆ ನೀಡಲು ಇದು ಸೂಕ್ತವಾದ ಆಯ್ಕೆಯೂ ಹೌದು. ಅವರವರ ಬಜೆಟ್‌ಗೆ ತಕ್ಕಂತೆ ವಿವಿಧ ಗಾತ್ರದ ಕಿವಿಯೋಲೆ ದೊರಕುತ್ತದೆ.
ಚಿನ್ನದ ಗೆಜ್ಜೆ ಗಿಫ್ಟ್: ಪುಟಾಣಿಗಳಿಗೆ ಆಂಕ್ಲೆಟ್ ಉಡುಗೊರೆ ನೀಡಬಹುದು. ಪುಟ್ಟ ಮಗು ಓಡಾಡುವಾಗ ಗೆಜ್ಜೆಯ ಸದ್ದು ಹೃದಯಕ್ಕೂ ಮುದ ನೀಡುತ್ತದೆ. ಗೆಜ್ಜೆಯ ಶಬ್ದ ದುಷ್ಟ ಶಕ್ತಿಗಳಿಂದ ದೂರವಿರಿಸಲು ಸಹಕಾರಿ.
ಚಿನ್ನದ ಕಡಗ: ಗಂಡು ಮಗುವಿನ ಕೈಯಲ್ಲಿ ಪುಟ್ಟ ಕಡಗವಿದ್ದರೆ ಶೋಭೆ. ನಿಮ್ಮ ಮನೆಯ ರಾಜಕುಮಾರನಿಗೆ ಕಡ ಉಡುಗೊರೆ ನೀಡಬಹುದು. ಹೆಣ್ಣು ಮಕ್ಕಳಿಗೂ ಸೂಕ್ತವಾದ ಕಡಗಳು ದೊರಕುತ್ತವೆ.
ಚಿನ್ನದ ಸರ: ಗಂಡು ಮಗು ಅಥವಾ ಹೆಣ್ಣು ಮಗುವಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಬಹುದು. ಈ ರೀತಿ ಚಿನ್ನದ ಸರ ನೀಡುವಾಗ ತುಸು ಗಟ್ಟಿಯಾದ ಸರವನ್ನೇ ಖರೀದಿಸಿ. ಇಲ್ಲವಾದರೆ ಮಕ್ಕಳು ಆಟವಾಡುವಾಗ ಚಿನ್ನದ ಸರ ತುಂಡಾಗಬಹುದು.
ಸಂಬಂಧಿತ ಲೇಖನ