ಗೌರಿ–ಗಣೇಶ ಹಬ್ಬಕ್ಕೆ ಕೊನೆಕ್ಷಣದಲ್ಲಿ ಲಾಡು ತಯಾರಿಸುವ ಮನಸು ಮಾಡಿದ್ದೀರಾ? ಹಾಗಾದ್ರೆ ರುಚಿಯಾದ ರವಾ ಲಾಡನ್ನು ಹೀಗೆ ಸಿಂಪಲ್ಲಾಗಿ ತಯಾರಿಸಿ
ಗೌರಿ–ಗಣೇಶ ಹಬ್ಬಕ್ಕೆ ಚಕ್ಕುಲಿ, ಕರ್ಜಿಕಾಯಿ, ಮೋದಕ ಹೀಗೆ ಬಗೆ ಬಗೆಯ ತಿನಿಸುಗಳನ್ನು ಮಾಡಲಾಗುತ್ತದೆ. ಈ ಹಬ್ಬಕ್ಕೆ ಲಾಡು ಬಹಳ ವಿಶೇಷವಾದದ್ದು. ಸುಲಭವಾಗಿ ತಯಾರಿಸಬಹುದಾದ ಲಾಡು ಯಾವುದು ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಅದಕ್ಕೆ ಉತ್ತರ. ಗೌರಿ–ಗಣೇಶ ಹಬ್ಬಕ್ಕೆ ಸಿಂಪಲ್ ಆದ ಅಷ್ಟೇ ರುಚಿಯಾದ ರವಾ ಲಾಡು ತಯಾರಿಸಿ.
ಹಿಂದೂಗಳ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾದ ಗೌರಿ–ಗಣೇಶ ಹಬ್ಬ ಇಂದಿನಿಂದ ಪ್ರಾರಂಭವಾಗಿದೆ. ಭಾದ್ರಪದ ಮಾಸದ ತದಿಗೆ ತಿಥಿಯಂದು ಗೌರಿಯನ್ನು ಕೂರಿಸಲಾಗುತ್ತದೆ. ಅದರ ಮರುದಿನ ಗಣಪತಿಯನ್ನು ತರುತ್ತಾರೆ. ಎಲ್ಲಾ ಮನೆಗಳಲ್ಲೂ ಹಬ್ಬದ ತಯಾರಿ ಜೋರಾಗಿಯೇ ನಡೆದಿದೆ. ಹಬ್ಬಕ್ಕೆ ಸಿಹಿ ತಿನಿಸು, ಕರಿದ ತಿಂಡಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಗೌರಿ–ಗಣೇಶ ಹಬ್ಬಕ್ಕೆ ತಯಾರಿಸುವ ಸಿಹಿ ತಿನಿಸುಗಳಲ್ಲಿ ಲಾಡುಗಳು ಒಂದು. ದೂರದ ಊರಿನಲ್ಲಿ ನೆಲೆಸಿರುವ ಮನೆಯ ಮಕ್ಕಳಿಗೆ ಹಬ್ಬ ಮುಗಿಸಿ ಹಿಂತಿರುಗುವಾಗ ಕಟ್ಟಿ ಕೊಡಲು ಲಾಡುಗಳು ಬೆಸ್ಟ್. ಅದರಲ್ಲೂ ರವೆ ಲಾಡು ಇನ್ನೂ ಬೆಸ್ಟ್. ಏಕೆಂದರೆ ಅದನ್ನು ವಾರದವರೆಗೆ ಕೆಡದೇ ಇಡಬಹುದಾಗಿದೆ. ರವೆ ಲಾಡು ಮಾಡುವುದು ಬಹಳ ಸುಲಭ. ಈ ವರ್ಷದ ಗೌರಿ–ಗಣೇಶ ಹಬ್ಬಕ್ಕೆ ಪರ್ಫೆಕ್ಟ್ ರವೆ ಲಾಡು ಮಾಡಿ ಮಕ್ಕಳಿಗೆ ತಿನಿಸುವ ಆಸೆ ಇದ್ದರೆ ಇಲ್ಲಿದೆ ಸುಲಭದ ವಿಧಾನ.
ರವೆ ಲಾಡು ಮಾಡಲು ಬೇಕಾಗುವ ಸಾಮಗ್ರಿಗಳು
ಸೂಜಿ ರವಾ ಒಂದು ಕಪ್
ಡೆಸಿಕೇಟೆಡ್ ತೆಂಗಿನ ತುರಿ ಕಾಲು ಕಪ್
ಸಕ್ಕರೆ ಒಂದು ಕಪ್
ಏಲಕ್ಕಿ ಪುಡಿ ಒಂದು ಚಮಚ
ತುಪ್ಪ ಒಂದು ಕಪ್
ದ್ರಾಕ್ಷಿ, ಗೋಡಂಬಿ ಒಂದು ಚಮಚ
ರವೆ ಲಾಡು ಮಾಡುವ ವಿಧಾನ
1) ಮೊದಲಿಗೆ ದಪ್ಪ ತಳದ ಪ್ಯಾನ್ ತೆಗದುಕೊಳ್ಳಿ. ಅದಕ್ಕೆ ಒಂದು ಕಪ್ ಸೂಜಿ ರವಾ ಮತ್ತು ಕಾಲು ಕಪ್ ಡೆಸಿಕೇಟೆಡ್ ತೆಂಗಿನ ತುರಿ ಹಾಕಿ. ಅದನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. 6 ರಿಂದ 7 ನಿಮಿಷಗಳ ನಂತರ ಸ್ಟವ್ ಆಫ್ ಮಾಡಿ, ಅದನ್ನು ಆರಲು ಬಿಡಿ.
2) ಒಂದು ಕಪ್ ಸಕ್ಕರೆ ತೆಗೆದುಕೊಂಡು ಅದನ್ನು ಮಿಕ್ಸರ್ ಜಾರ್‌ಗೆ ಹಾಕಿ ಗ್ರೈಂಡ್ ಮಾಡಿಕೊಳ್ಳಿ. ಅದಕ್ಕೆ ಒಂದು ಚಮಚ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಗ್ರೈಂಡ್ ಮಾಡಿ.
3) ಈಗ ಮಿಕ್ಸರ್ ಜಾರ್‌ನಲ್ಲಿರುವ ಸಕ್ಕರೆಯ ಜೊತೆಗೆ ಹುರಿದ ರವಾ ಸೇರಿಸಿ ಇನ್ನೊಮ್ಮೆ ಗ್ರೈಂಡ್ ಮಾಡಿಕೊಳ್ಳಿ. ಇದರಿಂದ ಸಕ್ಕರೆ ಮತ್ತು ರವಾ ಎರಡೂ ಚೆನ್ನಾಗಿ ಮಿಕ್ಸ್ ಆಗುತ್ತದೆ.
4) ಇದನ್ನು ಒಂದು ದೊಡ್ಡ ಪಾತ್ರೆಗೆ ವರ್ಗಾಯಿಸಿ. ಈಗ ಒಂದು ಕಪ್ ತುಪ್ಪವನ್ನು ಬಿಸಿ ಮಾಡಿಕೊಳ್ಳಿ. ಅದರಲ್ಲಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ.
5) ಉಳಿದ ತುಪ್ಪ ಮತ್ತು ಹುರಿದ ಗೋಡಂಬಿ, ದ್ರಾಕ್ಷಿಯನ್ನು ರವಾ ಮತ್ತು ಸಕ್ಕರೆ ಮಿಶ್ರಣಕ್ಕೆ ಹಾಕಿ. ತುಪ್ಪ ಬಿಸಿಯಿರುವುದರಿಂದ ಒಂದು ಸ್ಪೂನ್ ಸಹಾಯದಿಂದ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
6) ಸ್ವಲ್ಪ ಬಿಸಿ ಇರುವಾಗಲೇ ರವಾ ಲಾಡು ಮಾಡಲು ಪ್ರಾರಂಭಿಸಿ. ಸ್ವಲ್ಪ ಮಿಶ್ರಣ ಕೈಯಲ್ಲಿ ತೆಗೆದುಕೊಂಡು, ಅದನ್ನು ನಿಧಾನವಾಗಿ ಒತ್ತಿ, ಗೋಲಾಕಾರದ ಲಡ್ಡು ತಯಾರಿಸಿ. ಮಿಶ್ರಣದಿಂದ ಲಡ್ಡು ತಯಾರಿಸಲು ಕಷ್ಟವಾಗುತ್ತಿದ್ದರೆ ಅದಕ್ಕೆ ಸ್ವಲ್ಪ ತುಪ್ಪ ಬಿಸಿ ಮಾಡಿ ಹಾಕಿ. ಅಥವಾ ತುಪ್ಪವನ್ನು ಕೈಗೆ ಸವರಿಕೊಂಡು ಲಡ್ಡು ತಯಾರಿಸಬಹುದು.
7) ಇದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟುಕೊಂಡರೆ ವಾರದವರೆಗೆ ಉಪಯೋಗಿಸಬಹುದು.
ನೋಡಿದ್ರಲ್ಲ ಸುಲಭದ ರವಾ ಲಾಡು ಮಾಡುವು ವಿಧಾನ. ಈ ವರ್ಷದ ಗೌರಿ–ಗಣೇಶ ಹಬ್ಬಕ್ಕೆ ನೀವೂ ರವಾ ಲಾಡು ತಯಾರಿಸಿ.