Gowri Habba 2022: ಸ್ವರ್ಣ ಗೌರಿಯನ್ನು ಸರಳವಾಗಿ ಪೂಜಿಸುವುದು ಹೇಗೆ? ಇಲ್ಲಿವೆ ಕೆಲವು ವಿಡಿಯೋ
Gowri habba 2022: ಇಂದು ಸ್ವರ್ಣ ಗೌರಿ ಹಬ್ಬ. ಸ್ವರ್ಣ ಗೌರಿಯನ್ನು ಸರಳವಾಗಿ ಪೂಜಿಸುವುದು ಹೇಗೆ? ಗೌರಿಯನ್ನು ಅಲಂಕರಿಸುವುದು ಹೇಗೆ? ಪೂಜಾ ವಿಧಾನ? ಕೈ ದಾರ ಮಾಡುವುದು ಹೇಗೆ? ಹೀಗೆ ಹತ್ತು ಹಲವು ಪ್ರಶ್ನೆಗಳು, ಸಂದೇಹಗಳು ಕಾಡುವುದು ಸಹಜ. ಇಂತಹ ಸಂದೇಹಗಳನ್ನು ದೂರ ಮಾಡುವ ಕೆಲವು ಆಯ್ದ ವಿಡಿಯೋಗಳು ಇಲ್ಲಿವೆ ಗಮನಿಸಿ.

ಗೌರಿ ಹಬ್ಬವು ಪಾರ್ವತಿ ದೇವಿಯ ಗೌರಿ ಅವತಾರಕ್ಕೆ ಸಮರ್ಪಿತವಾದ ಹಬ್ಬ. ಹಿಂದುಗಳು ಆಚರಿಸುವ ಈ ಹಬ್ಬವನ್ನು ಗಣೇಶ ಚತುರ್ಥಿಯ ಮುನ್ನಾದಿನ ಆಚರಿಸಲಾಗುತ್ತದೆ. ಗೌರಿ ಹಬ್ಬವನ್ನು ಸ್ವರ್ಣಗೌರಿ ಹಬ್ಬ ಎಂದೂ ಕರೆಯಲಾಗುತ್ತದೆ. ಈ ಬಾರಿ ಗೌರಿ ಹಬ್ಬವನ್ನು ಆಗಸ್ಟ್ 30 ರಂದು ಅಂದರೆ ಇಂದೇ ಆಚರಿಸಲಾಗುತ್ತಿದೆ. ದಕ್ಷಿಣ ಭಾರತದ ಪ್ರದೇಶದಲ್ಲಿ ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಈ ಹಬ್ಬಕ್ಕೆ ವಿಶೇಷ ಮನ್ನಣೆ ಇದೆ.
ಶ್ರೀಮಧ್ವಾಚಾರ್ಯರು ಅನುವ್ಯಾಖ್ಯಾನ ಗ್ರಂಥದಲ್ಲಿ ಪಾರ್ವತಿ ಪರಮೇಶ್ವರರ ಚಿಂತನ ಕ್ರಮ :
ಉಮಾ ವೈ ವಾಕ್ ಸಮುದ್ದಿಷ್ಟಾ ಮನೋ ರುದ್ರ ಉದಾಹೃತ: |
ತದೇತನ್ಮಿಥುನಂ ಜ್ಞಾತ್ವಾ ನ ದಾಂಪತ್ಯಾದ್ ವಿಹೀಯತೇ ||
ವಾಕ್ ಎಂಬಉಮೆಮತ್ತು ಮನಸ್ ಎಂಬರುದ್ರಇವರೀರ್ವರ ಜೊತೆಯಾಗಿರುವುದನ್ನು ಚಿಂತನೆ ಮಾಡುವುದರಿಂದ ದಾಂಪತ್ಯದಿಂದ ಎಂದೂ ವಿಯೋಗವಾಗುವುದಿಲ್ಲ
ಸ್ವರ್ಣ ಗೌರಿ ಯಾರು ಎಂದರೆ ಪಾರ್ವತಿ ದೇವಿ. ಸ್ವರ್ಣಗೌರಿ ವ್ರತವನ್ನು ಭಾದ್ರಪದ ಶುಕ್ಲ ತೃತೀಯದಂದು ಆಚರಿಸಬೇಕು
ಭಾದ್ರಪದ ಶುಕ್ಲ ತೃತೀಯವೇ ಯಾಕೆ ಗೌರಿ ಹಬ್ಬ ಆಚರಿಸಬೇಕು ಎಂಬ ಪ್ರಶ್ನೆ ಮುಂದಿಟ್ಟರೆ ಸಿಗುವ ಉತ್ತರ ಇದು - ಘನಘೋರ ತಪಸ್ಸನ್ನು ಆಚರಿಸಿ ಶಿವನ ವರಿಸಿದ ಪಾರ್ವತಿ ಪತಿಯ ಲೋಕ ಕೈಲಾಸವಾಸಿಯಾದಳು. ಒಮ್ಮೆ ಆಕೆಗೆ ತನ್ನ ತವರುಮನೆಗೆ ಹೋಗಿ ಬರುವ ಬಯಕೆಯಾಯಿತು. ಹಿಮವಂತನ ಮಗಳಾಗಿ ಜನಿಸಿ ಹಿಮಾಲಯವನ್ನೇ ತನ್ನ ತವರಾಗಿ ಪಡೆದವಳು ಪಾರ್ವತಿ. ಮಹಾಶಿವನ ಅನುಮತಿ ಪಡೆದು ಭೂಲೋಕಕ್ಕೆ ಬಂದ ದಿನವೇ ಭಾದ್ರಪದ ಶುಕ್ಲ ತೃತೀಯ. ಹೀಗೆ ತವರಿಗೆ ಬಂದ ಆ ದಿನಕ್ಕಿಂತ ಉತ್ತಮ ದಿನ ಬೇಕೆ ಗೌರಿಯನ್ನು ಪೂಜಿಸಲು?
ಸ್ವರ್ಣಗೌರಿ ಹೆಸರು ಬಂದದ್ದು ಹೇಗೆ ಎಂಬ ಪ್ರಶ್ನೆಗೆ ಬಲ್ಲವರಿಂದ ಸಿಕ್ಕ ಉತ್ತರ ಇದು - ಮತ್ಸ್ಯ ಪುರಾಣದಲ್ಲಿ ಈ ಕುರಿತಾದ ಒಂದು ಉಲ್ಲೇಖವಿದೆ. ಪಾರ್ವತಿ ಮೂಲತಃ ಕಪ್ಪು ವರ್ಣದವಳು. ಒಮ್ಮೆ ಪರಮೇಶ್ವರನು ಪಾರ್ವತಿಯನ್ನು “ಕಾಳಿ” ಎಂದು ಸಂಬೋಧಿಸಿದ. ಕಾಳಿ ಎಂಬ ಪದ ಕತ್ತಲು ಮತ್ತು ಕಪ್ಪು ಬಣ್ಣವನ್ನು ಹೇಳುತ್ತದೆ. ಕಾಳಿ ಎಂದು ಕರೆಯಲ್ಪಟ್ಪದ್ದನ್ನು ಅವಹೇಳನ ಎಂದು ಭಾವಿಸಿದ ಪಾರ್ವತಿ, ಬ್ರಹ್ಮ ದೇವರನ್ನು ಒಲಿಸಲು ತಪಸ್ಸು ಮಾಡಿದಳು. ಬ್ರಹ್ಮದೇವರು ಪ್ರತ್ಯಕ್ಷನಾದ ಕೂಡಲೇ ತನ್ನ ಬಣ್ಣವನ್ನು ಬದಲಿಸುವಂತೆ ಕೋರಿದಳು. ಅವಳ ತಪಸ್ಸಿಗೆ ಮೆಚ್ಚಿದ ಚತುರ್ಮುಖನು ಹಾಗೆಯೇ ಅವಳ ವರ್ಣವನ್ನು ಬದಲಿಸಿದನು. ಹೀಗೆ ಬದಲಾದ ಬಣ್ಣದಿಂದ ಬಂದ ಹೆಸರು ಗೌರಿ ಅರ್ಥಾತ್ ಬಿಳಿ ಬಣ್ಣ ಅಥವಾ ಸುಂದರ ಎಂಬ ಅನ್ವರ್ಥವೂ ಇದೆ.
ಗೌರಿ ಪೂಜೆಗೆ ಕೇವಲ ಗೌರಿಯ ಮುಖವೇ ಏಕೆ? ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಬಲವರು ಹೇಳುವುದು ಹೀಗೆ - ಶಿವನಿಗೆ ಲಿಂಗದಲ್ಲಿ ಮಾತ್ರ ಪೂಜಿಸುವಂತೆ ಗೌರಿಯನ್ನು ಮುಖದಲ್ಲಿ ಮಾತ್ರ ಪೂಜಿಸುವ ಸಂಪ್ರದಾಯವಿದೆ.
ಗೌರೀ ಹಬ್ಬದಲ್ಲಿ 16ಗಂಟಿನ ದಾರ ಮತ್ತು ಅದರ ಮಹತ್ವ
ಮುತ್ತೈದೆಯರು ಈ ವ್ರತವನ್ನು 16 ವರ್ಷ ಮಾಡಿದರೆ ತುಂಬ ಒಳ್ಳೆಯದು ಎನ್ನುತ್ತಾರೆ. ಗೌರೀ ದೇವಿ ಶಿವನನ್ನು ಒಲಿಸಿಕೊಳ್ಳಲು ಬರೀ ಹಣ್ಣುಗಳನ್ನು ಮಾತ್ರ ಸೇವಿಸುತ್ತಾ 16 ವರ್ಷ ತಪಸ್ಸು ಮಾಡಿದಳು ಎಂಬ ಪೌರಾಣಿಕ ಕತೆಯಿದೆ. ಗೌರಿಯ ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿಯನ್ನು ಮದುವೆಯಾದ. ಗೌರಿ ಹಬ್ಬದಂದು 16 ಗಂಟುಗಳ ಗೌರಿದಾರವನ್ನು ಬಲ ಮಣಿಕಟ್ಟಿಗೆ ಧರಿಸಲಾಗುವುದು. ಇದರಿಂದ ಗೌರಿಯ ಆಶೀರ್ವಾದ ಸಿಗುತ್ತದೆ ಎಂಬುದು ನಂಬಿಕೆ.
ಈ ದಿನ ಮೊರದ ಬಾಗಿನ ಕೊಡುವುದೇಕೆ? ಎಂದರೆ, ಗೌರಿ (ಪಾರ್ವತಿ) ಕೈಲಾಸವಾಸಿ. ಈ ದಿನ ಕೈಲಾಸದಿಂದ ತನ್ನ ತವರಾದ ಹಿಮಾಲಯಕ್ಕೆ ಬರುತ್ತಾಳೆ. ತನ್ನ ತವರಿಗೆ ಬಂದ ಗೌರಿ ಮುತ್ತೈದೆಯರ ರೂಪದಲ್ಲಿ ನಮ್ಮ ಮನೆಗೆ ಬಂದಿರುವಳು ಎಂದು ಭಾವಿಸಿ ಮರದ ಬಾಗಿನ ಕೊಡುವ ಸಂಪ್ರದಾಯವಿದೆ.
ಜೊತೆ ಮೊರ – ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಬೇಕು.
ಧಾನ್ಯಗಳು – ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ, ಬೆಲ್ಲದ ಅಚ್ಚು, ಉಪ್ಪು, ತೆಂಗಿನಕಾಯಿ, ಹಣ್ಣು, ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ
ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು – ಗೆಜ್ಜೆವಸ್ತ್ರ, ಶ್ರೀಗಂಧ, ಇತ್ಯಾದಿ ಇಡುತ್ತಾರೆ.
ಮೊರದ ಬಾಗಿನದಲ್ಲಿ ಉಪಯೋಗಿಸುವ ಎಲ್ಲ ಪದಾರ್ಥಗಳಲ್ಲೂ ವಿಶೇಷ ದೇವತಾ ಸಾನ್ನಿಧ್ಯವಿರುತ್ತದೆ. ಬಾಗಿನದ ೧೬ ಪದಾರ್ಥಗಳಲ್ಲಿ ಸನ್ನಿಹಿತವಿರುವ ರೂಪಗಳು ಇಂತಿವೆ. ಅರಿಶಿನದಲ್ಲಿ ಗೌರಿ, ಕುಂಕುಮದಲ್ಲಿ ಪದ್ಮ, ಸಿಂಧೂರದಲ್ಲಿ ಶಚಿ, ಕನ್ನಡಿಯಲ್ಲಿ ಮೇಧಾ; ಬಾಚಣಿಗೆ -, ಸಾವಿತ್ರಿ, ಕಾಡಿಗೆಯಲ್ಲಿ – ವಿಜಯಾ, ಅಕ್ಕಿಯಲ್ಲಿ ಜಯಾ, ತೊಗರೀಬೇಳೆ – ದೇವಸೇನಾ, ಉದ್ದಿನಬೇಳೆ – ಸ್ವಾಹಾ, ತೆಂಗಿನಕಾಯಿ – ಸ್ವಧಾ ; ವಿಳ್ಳದೆಲೆ – ಲೋಕಮಾತಾ, ಅಡಿಕೆ – ಶಾಂತಿ; ಫಲ – ಫುಷ್ಠಿ, ಬೆಲ್ಲ – ಧೃತೀ, ವಸ್ತ್ರ -ತುಷ್ಟೀ, ಹೆಸರುಬೇಳೆ – ಪಾರ್ವತಿ.
ಮೊರದ ಬಾಗಿನ ಕೊಡುವಾಗ ಕೊಡುವವರು ಹೇಳಬೇಕಾದ್ದು ಹೀಗೆ
ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ತ್ವಯಾ
ಮೊರದ ಬಾಗಿನ ತೆಗೆದುಕೊಳ್ಳುವವರು ಹೇಳಬೇಕಾದ್ದು ಹೀಗೆ
ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ಮಯಾ
ಅಂತ ಹೇಳಿ ತೆಗೆದುಕೊಳ್ಳಬೇಕು…
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.