Banana Hair Mask: ರೇಷ್ಮೆಯಂತೆ ಹೊಳೆಯುವ ತಲೆಕೂದಲು ನಿಮ್ಮದಾಗಲು ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಸಿ
ನಿಮ್ಮ ತಲೆಕೂದಲು ನಿರ್ವಹಣೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆಯೇ? ಬಾಳೆಹಣ್ಣು ಬಳಸಿಕೊಂಡು ನಿಮ್ಮ ಕೂದಲಿಗೆ ರೇಷ್ಮೆಯಂತಹ ನಯವಾದ ಟಚ್ ಕೊಡಬಹುದು. ಆಕರ್ಷಕ ತಲೆಕೂದಲು ನಿಮ್ಮದಾಗಿಸುವುದು ಹೇಗೆ?

ಬಾಳೆಹಣ್ಣು ತಿನ್ನಲು ಮಾತ್ರವಲ್ಲ, ನಿಮ್ಮ ಸೌಂದರ್ಯದಲ್ಲೂ ಅದರ ಪಾತ್ರ ದೊಡ್ಡದಿದೆ. ಬಾಳೆಹಣ್ಣಿನಲ್ಲಿ ವಿಟಮಿನ್, ಆರ್ಗಾನಿಕ್ ಆಯಿಲ್, ಖನಿಜದ ಆಂಶಗಳು ಹೇರಳವಾಗಿರುತ್ತವೆ. ಅವುಗಳು ನಿಮ್ಮ ತಲೆಕೂದಲಿಗೆ ಹೊಳಪು, ನಯವಾದ ರೂಪವನ್ನು ನೀಡುತ್ತವೆ. ಹೀಗಾಗಿ ಬಾಳೆಹಣ್ಣು ಹೊಟ್ಟೆಗೆ ಮಾತ್ರವಲ್ಲ, ತಲೆಕೂದಲಿಗೂ ಹಿತವಾಗಿರುತ್ತದೆ. ಬಾಳೆಹಣ್ಣಿನಿಂದ ತಯಾರಿಸಿದ ಹೇರ್ ಮಾಸ್ಕ್, ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ತಯಾರಿಸಬಹುದಾದ ಹೇರ್ ಮಾಸ್ಕ್ ಆಗಿದೆ.
ನಗರಗಳಲ್ಲಿ ಬೋರ್‌ವೆಲ್ ಮತ್ತು ಗೀಸರ್ ನೀರಿನ ಸಮಸ್ಯೆಯಿಂದ ತಲೆಕೂದಲು ಉದುರುವುದು ಸಾಮಾನ್ಯ ಸಂಗತಿಯಾಗಿದೆ. ಜತೆಗೆ ಒತ್ತಡದ ಕೆಲಸ, ಜೀವನಶೈಲಿ, ಚಿಂತೆಯೂ ತಲೆಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ತಲೆಕೂದಲನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಒಂದು ಸವಾಲಿನ ಸಂಗತಿಯಾಗಿದೆ. ಅದರಲ್ಲೂ ಮಾರುಕಟ್ಟೆಗಳಲ್ಲಿ ದೊರೆಯುವ ವಿವಿಧ ರೀತಿಯ ಕಂಪನಿಗಳ ರಾಸಾಯನಿಕ ಸಹಿತ ಶಾಂಪೂ, ಕಂಡೀಶನರ್ ಬಳಸಿ ಕೂದಲಿನ ಆರೈಕೆ ಮಾಡಿದರೂ ನಿರೀಕ್ಷಿತ ಪರಿಣಾಮ ಕಾಣುವುದಿಲ್ಲ. ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ಕೂದಲಿನ ಉದುರುವಿಕೆ ಆರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೂದಲಿನ ಆರೈಕೆಗೆ ಸಾಧ್ಯವಾದಷ್ಟು ಮನೆಮದ್ದು ಬಳಕೆ ಸೂಕ್ತ. ಮನೆಯಲ್ಲೇ ಸುಲಭದಲ್ಲಿ ಸಿಗುವ ಬಾಳೆಹಣ್ಣು ಬಳಸಿಕೊಂಡು ಹೇರ್ ಮಾಸ್ಕ್ ತಯಾರಿಸಬಹುದು. ಬನಾನ ಹೇರ್ ಮಾಸ್ಕ್‌ನಿಂದ ಹಲವು ಪ್ರಯೋಜನಗಳಿವೆ.
ಬನಾನಾ ಹೇರ್ ಮಾಸ್ಕ್ ತಲೆಕೂದಲನ್ನು ಬುಡದಿಂದಲೇ ಗಟ್ಟಿ ಮಾಡಿ, ಸುಕ್ಕುಗಳನ್ನು ತೆಗೆದುಹಾಕಿ, ನಯವಾಗಿ, ರೇಷ್ಮೆಯಂತೆ ಕಾಣಿಸುವಂತೆ ಮಾಡುತ್ತದೆ. ಮಾರುಕಟ್ಟೆಗಳಲ್ಲಿ ದೊರಕುವ ರಾಸಾಯನಿಕ ಸಹಿತ ಹೇರ್ ಮಾಸ್ಕ್‌ಗಿಂತ ಇದು ಉತ್ತಮ ಆಯ್ಕೆಯಾಗಿದೆ. ಬಾಳೆಹಣ್ಣಿನಲ್ಲಿ ಇರುವ ಪೊಟ್ಯಾಶಿಯಂ ಅಂಶ, ತಲೆಕೂದಲು ಒಡೆಯುವುದು, ಸೀಳಾಗುವುದನ್ನು ತಡೆಯುತ್ತದೆ. ಅದರಲ್ಲಿನ ನೈಸರ್ಗಿಕ ಎಣ್ಣೆಯ ಅಂಶ ತಲೆಕೂದಲಿಗೆ ಮೃದುತ್ವ ಮತ್ತು ಹೊಳಪನ್ನು ನೀಡುತ್ತದೆ. ಜತೆಗೆ ಹೊರಗಿನ ಧೂಳಿನಿಂದ ಉಂಟಾಗುವ ಸಮಸ್ಯೆಗಳಿಗೂ ಮುಕ್ತಿ ನೀಡುತ್ತದೆ.
ಬಾಳೆಹಣ್ಣಿನ ಹೇರ್ ಮಾಸ್ಕ್‌ನ ಪ್ರಯೋಜನಗಳು
ಉತ್ತಮ ಕಂಡೀಶನರ್
ಬಾಳೆಹಣ್ಣಿನ ಹೇರ್ ಮಾಸ್ಕ್‌ನಲ್ಲಿ ನೈಸರ್ಗಿಕ ಎಣ್ಣೆಯ ಅಂಶಗಳು ಇದ್ದು, ಅದು ತಲೆಕೂದಲಿಗೆ ಉತ್ತಮ ಮಾಯಿಶ್ಚರ್ ಆಗಿಯೂ ಕೆಲಸ ಮಾಡುತ್ತದೆ, ಕೂದಲಿನ ಶುಷ್ಕತೆಯನ್ನು ದೂರಮಾಡುತ್ತದೆ. ಈ ಬಗ್ಗೆ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಕರೆಂಟ್ ಸೈನ್ಸ್‌ನಲ್ಲಿ ಕೂಡ ಪ್ರಕಟವಾಗಿದೆ. ಕೂದಲು ಹಾನಿಗೊಳಗಾಗಿದ್ದರೆ, ಅದನ್ನು ಮರಳಿ ಪಡೆಯಲು ಮತ್ತು ಕೂದಲಿನ ನೈಸರ್ಗಿಕ ಹೊಳಪನ್ನು ಒದಗಿಸಲು ಬಾಳೆಹಣ್ಣಿನ ಹೇರ್ ಮಾಸ್ಕ್ ಬೆಸ್ಟ್.
ಕೂದಲನ್ನು ಗಟ್ಟಿಗೊಳಿಸುತ್ತದೆ
ಕೆಲವರಿಗೆ ಕೂದಲು ಉದುರುವ ಸಮಸ್ಯೆಯಿರುತ್ತದೆ. ಬುಡದಲ್ಲಿ ಕೂದಲು ಗಟ್ಟಿಯಿಲ್ಲದೇ ಹೋದರೆ, ಅದು ಸುಲಭದಲ್ಲಿ ಉದುರುತ್ತದೆ. ಕೂದಲು ಉದುರಲು ಹಲವು ಕಾರಣಗಳು ಇರಬಹುದು. ಆದರೆ ಬಾಳೆಹಣ್ಣಿನ ಹೇರ್ ಮಾಸ್ಕ್, ಕೂದಲನ್ನು ಬುಡದಿಂದಲೇ ಗಟ್ಟಿಗೊಳಿಸುತ್ತದೆ. ಕೂದಲು ಬುಡದಿಂದಲೇ ಗಟ್ಟಿಯಾಗುತ್ತಾ ಹೋದರೆ, ಮತ್ತೆ ಉದುರುವುದು ನಿಲ್ಲುತ್ತದೆ.
ಕೂದಲನ್ನು ಮೃದುವಾಗಿಸುತ್ತದೆ
ಕೆಲವರ ತಲೆಕೂದಲು ಒರಟಾಗಿದ್ದು, ಗಡಸಿನಿಂದ ಕೂಡಿರುತ್ತದೆ. ಅವರು ಬನಾನ ಹೇರ್ ಮಾಸ್ಕ್ ಮಾಡಿದರೆ, ಅದರಿಂದ ಕೂದಲು ಮೃದುವಾಗುವ ಜತೆಗೆ, ಆಕರ್ಷಕವಾಗಿ ಕಾಣಿಸುತ್ತದೆ. ರೇಷ್ಮೆಯಂತೆಯೇ ಮೃದುವಾದ ಕೂದಲು ಇದ್ದರೆ, ನಿಮ್ಮಿಷ್ಟದ ಉಡುಪು ಧರಿಸಿ, ಅದಕ್ಕೆ ಹೊಂದುವ ರೀತಿಯ ಹೇರ್ ಸ್ಟೈಲ್ ಮಾಡಿಸಿಕೊಂಡು ಸಮಾರಂಭಗಳಲ್ಲಿ, ಪಾರ್ಟಿಗಳಲ್ಲಿ ಮಿಂಚಬಹುದು.
ಇದನ್ನೂ ಓದಿ: ಮೊಸರಿನೊಂದಿಗೆ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ
ಕಿರಿಕಿರಿಯನ್ನು ತೊಡೆದುಹಾಕುತ್ತದೆ
ಕೆಲವರ ತಲೆಕೂದಲು ಬುಡದಲ್ಲಿ ತುರಿಕೆ ಉಂಟಾಗಿರುತ್ತದೆ. ಅವರಿಗೆ ತಲೆಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಬಾಳೆಹಣ್ಣಿನ ಹೇರ್ ಮಾಸ್ಕ್ ಹಾಕಿದರೆ ತಲೆಹೊಟ್ಟು ಕಡಿಮೆಯಾಗಿ, ತುರಿಕೆ ಇಲ್ಲವಾಗುತ್ತದೆ. ಹೀಗಾಗಿ ಹಲವು ಪ್ರಯೋಜನಗಳಿರುವ ಬಾಳೆಹಣ್ಣಿನ ಹೇರ್ ಮಾಸ್ಕ್ ಟ್ರೈ ಮಾಡಲು ಮರೆಯಬೇಡಿ.
