Homemade Shampoo: ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದರೆ ಮನೆಯಲ್ಲೇ ತಯಾರಿಸಿ ಗ್ರೀನ್ ಟೀ, ಜೇನುತುಪ್ಪ ಬೆರೆಸಿದ ಶಾಂಪೂ
ಕನ್ನಡ ಸುದ್ದಿ  /  ಜೀವನಶೈಲಿ  /  Homemade Shampoo: ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದರೆ ಮನೆಯಲ್ಲೇ ತಯಾರಿಸಿ ಗ್ರೀನ್ ಟೀ, ಜೇನುತುಪ್ಪ ಬೆರೆಸಿದ ಶಾಂಪೂ

Homemade Shampoo: ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದರೆ ಮನೆಯಲ್ಲೇ ತಯಾರಿಸಿ ಗ್ರೀನ್ ಟೀ, ಜೇನುತುಪ್ಪ ಬೆರೆಸಿದ ಶಾಂಪೂ

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಳಿಗಾಲದಲ್ಲಂತೂ ಈ ಸಮಸ್ಯೆ ತುಸು ಹೆಚ್ಚಿರುತ್ತದೆ. ಕೂದಲನ್ನು ಆರೋಗ್ಯಕರವಾಗಿಡಲು ಮನೆಯಲ್ಲೇ ಶಾಂಪೂ ತಯಾರಿಸಿ ಬಳಸಬಹುದು.ಗ್ರೀನ್ ಟೀ ಮತ್ತು ಜೇನುತುಪ್ಪದಿಂದ ತಯಾರಿಸಿದ ಶಾಂಪೂ ಕೂದಲಿನ ಕಾಳಜಿಗೆ ಮುಖ್ಯವಾಗಿದೆ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದರೆ ಮನೆಯಲ್ಲೇ ತಯಾರಿಸಿ ಗ್ರೀನ್ ಟೀ, ಜೇನುತುಪ್ಪ ಬೆರೆಸಿದ ಶಾಂಪೂ
ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದರೆ ಮನೆಯಲ್ಲೇ ತಯಾರಿಸಿ ಗ್ರೀನ್ ಟೀ, ಜೇನುತುಪ್ಪ ಬೆರೆಸಿದ ಶಾಂಪೂ

ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿಡಲು ಶಾಂಪೂ ಬಳಸುವುದು ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಅನೇಕ ರೀತಿಯ ಶಾಂಪೂಗಳು ಲಭ್ಯವಿದೆ. ಆದರೆ ಅವುಗಳಲ್ಲಿ ಹೆಚ್ಚಿನವು ರಾಸಾಯನಿಕಗಳನ್ನು ಹೊಂದಿರುತ್ತವೆ. ಅವು ಕೂದಲಿಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತವೆ. ಆದ್ದರಿಂದ, ನೀವು ಸಾಧ್ಯವಾದಷ್ಟು ಮನೆಯಲ್ಲಿ ನೈಸರ್ಗಿಕ, ರಾಸಾಯನಿಕ ಮುಕ್ತ ಶಾಂಪೂಗಳನ್ನು ತಯಾರಿಸಿ ಬಳಸಬೇಕು ಎಂದು ತಜ್ಞರು ಸೂಚಿಸುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ಕೂದಲಿನ ಕಾಳಜಿ ಮಾಡುವುದು ಅಗತ್ಯ. ಈ ಅವಧಿಯಲ್ಲಿ, ಕೂದಲಿನಲ್ಲಿ ತೇವಾಂಶವು ಕಡಿಮೆಯಾಗುತ್ತದೆ, ಇದರಿಂದಾಗಿ ಕೂದಲು ನಿರ್ಜೀವ ಮತ್ತು ಶುಷ್ಕವಾಗುತ್ತದೆ.

ನೀವು ಸಹ ಇದೇ ರೀತಿಯ ಸಮಸ್ಯೆ ಹೊಂದಿದ್ದರೆ ಗ್ರೀನ್ ಟೀ ಮತ್ತು ಜೇನುತುಪ್ಪದಿಂದ ತಯಾರಿಸಿದ ಶಾಂಪೂವಿನಿಂದ ಪ್ರಯೋಜನ ಪಡೆಯಬಹುದು. ಇದು ನಿಮ್ಮ ಒಣ ಕೂದಲಿಗೆ ತೇವಾಂಶವನ್ನು ಒದಗಿಸುತ್ತದೆ ಮತ್ತು ಅದನ್ನು ಮೃದು ಮತ್ತು ಆರೋಗ್ಯಕರವಾಗಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಶೇಷವಾಗಿ ತಲೆಹೊಟ್ಟು ಸಮಸ್ಯೆ ಇರುವವರು ಈ ಶಾಂಪೂ ಬಳಸುವ ಮೂಲಕ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಈ ಶಾಂಪೂವನ್ನು ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ.

ಮನೆಯಲ್ಲೇ ಹೀಗೆ ಶಾಂಪೂ ತಯಾರಿಸಿ

ಬೇಕಾಗುವ ಸಾಮಗ್ರಿಗಳು: ಜೇನುತುಪ್ಪ- 2 ಚಮಚ, ಆಲಿವ್ ಎಣ್ಣೆ- 1 ಚಮಚ, ಗ್ರೀನ್ ಟೀ- ಅರ್ಧ ಕಪ್, ಕ್ಯಾಸ್ಟೈಲ್ ಸೋಪ್- 1/4 ಕಪ್, ನಿಂಬೆ ರಸ- 1 ಚಮಚ, ಅಲೋವೆರಾ- 1 ಚಮಚ, ಲ್ಯಾವೆಂಡರ್ ಎಸೆನ್ಷಿಯಲ್ ಆಯಿಲ್- 5 ರಿಂದ 10 ಹನಿ.

ಶಾಂಪೂ ತಯಾರಿಸುವ ವಿಧಾನ: ಗ್ರೀನ್ ಟೀ ಮತ್ತು ಜೇನುತುಪ್ಪವನ್ನು ಬೆರೆಸಿ ಶಾಂಪೂ ತಯಾರಿಸುವ ಮೊದಲು ಗ್ರೀನ್ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ 5 ರಿಂದ 7 ನಿಮಿಷಗಳ ಕಾಲ ನೆನೆಸಿಡಿ. ನಂತರ ಅದನ್ನು ಹೊರತೆಗೆದು ಈ ನೀರನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಅದಕ್ಕೆ ಜೇನುತುಪ್ಪವನ್ನು ಬೆರಿಸಿ. ನಂತರ ನಿಂಬೆ ರಸ, ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್, ಆಲಿವ್ ಎಣ್ಣೆ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕ್ಯಾಸ್ಟೈಲ್ ಸೋಪ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ನೈಸರ್ಗಿಕ, ರಾಸಾಯನಿಕ ಮುಕ್ತ ಶಾಂಪೂ ಆಗಿದ್ದು, ಅದನ್ನು ಬಾಟಲಿಯಲ್ಲಿ ತುಂಬಿ ಸಂಗ್ರಹಿಸಬಹುದು.

ವಾರಕ್ಕೆ ಕನಿಷ್ಟ ಎರಡು ಬಾರಿ ಈ ಶಾಂಪೂವಿನಿಂದ ತಲೆ ತೊಳೆದುಕೊಂಡರೆ ಕೂದಲಿನ ವಿವಿಧ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ. ಹೀಗಾಗಿ ಇದನ್ನು ನೀವೇ ತಯಾರಿಸಿ ಬಳಸಬಹುದು.

Whats_app_banner