ಬೇಸಿಗೆಯಲ್ಲಿ ಎಷ್ಟು ದಿನಕ್ಕೊಮ್ಮೆ ಶಾಂಪೂ ಬಳಸಿ ತಲೆಸ್ನಾನ ಮಾಡಬೇಕು, ಬಿಸಿಲಿನ ತಾಪ ಹೆಚ್ಚಿದ್ದಾಗ ಕೂದಲ ಕಾಳಜಿ ಹೇಗಿರಬೇಕು?
ಬೇಸಿಗೆಯಲ್ಲಿ ಚರ್ಮಕ್ಕೆ ಮಾತ್ರವಲ್ಲ ಕೂದಲಿಗೂ ಸಾಕಷ್ಟು ಹಾನಿಯಾಗುತ್ತದೆ. ಬೇಸಿಗೆಯಲ್ಲಿ ಕೂದಲ ಕಾಳಜಿ ಹೇಗೆ ಮಾಡಬೇಕು, ಎಷ್ಟು ದಿನಕ್ಕೊಮ್ಮೆ ಶಾಂಪೂ ಬಳಸಿ ತಲೆಸ್ನಾನ ಮಾಡಬೇಕು, ಪ್ರತಿದಿನ ತಲೆಸ್ನಾನಕ್ಕೆ ಶಾಂಪೂ ಬಳಸಿದ್ರೆ ಏನಾಗುತ್ತೆ ಈ ಎಲ್ಲಾ ವಿವರ ಇಲ್ಲಿದೆ.

ಬೇಸಿಗೆಯಲ್ಲಿ ಬಿಸಿಲು, ಧೂಳು ಚರ್ಮವನ್ನು ಮಾತ್ರವನ್ನು ಕೂದಲಿನ ಆರೋಗ್ಯವನ್ನು ಕೆಡಿಸುತ್ತದೆ. ತಾಪಮಾನ ಏರಿಕೆಯು ಕೂದಲು ಉದುರುವುದು, ತಲೆಹೊಟ್ಟು ಮತ್ತು ಒಣ ಕೂದಲಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ಕೂದಲನ್ನು ಒಣಗಿಸುತ್ತವೆ, ಇದರಿಂದ ಕೂದಲು ಸೀಳುವುದು, ದುರ್ಬಲವಾಗುವುದು ಉಂಟಾಗುತ್ತದೆ. ಆ ಕಾರಣದಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಜೀವನಶೈಲಿ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ.
ನಿಮ್ಮ ಕೂದಲು ಅತಿಯಾಗಿ ಉದುರುತ್ತಿದ್ದರೆ, ಅದಕ್ಕೆ ಸೂರ್ಯನ ಶಾಖ ಮಾತ್ರ ಕಾರಣವಲ್ಲ ದೇಹದಲ್ಲಿ ವಿಟಮಿನ್ ಡಿ 3, ವಿಟಮಿನ್ ಬಿ, ಬಿ 12 ಮತ್ತು ಕಬ್ಬಿಣದಂತಹ ಪೋಷಕಾಂಶಗಳ ಕೊರತೆಯೂ ಕಾರಣವಾಗಿರಬಹುದು.
ಬೇಸಿಗೆಯಲ್ಲಿ ನಿರಂತರವಾಗಿ ಬೆವರುವುದು, ನೆತ್ತಿಯ ಮೇಲೆ ಕೊಳಕು ಸಂಗ್ರಹವಾಗುವುದು ಮತ್ತು ತಲೆಹೊಟ್ಟು ಕೂಡ ಕೂದಲು ಉದುರುವ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಈ ಬೇಸಿಗೆಯಲ್ಲಿ ನಿಮ್ಮ ಸುಂದರ ಕೂದಲಿಗೆ ಹಾನಿಯಾಗದಂತೆ ನಿಮ್ಮ ಜೀವನಶೈಲಿಯನ್ನು ಯಾವೆಲ್ಲಾ ರೀತಿ ಬದಲಿಸಿಕೊಳ್ಳಬಹುದು ನೋಡಿ.
ಬೇಸಿಗೆಯಲ್ಲಿ ಅತಿಯಾದ ಸೆಖೆಯ ಕಾರಣದಿಂದ ಹಲವರು ಪ್ರತಿದಿನ ತಲೆಸ್ನಾನ ಮಾಡುತ್ತಾರೆ. ಪ್ರತಿ ಬಾರಿ ತಲೆಸ್ನಾನ ಮಾಡುವಾಗಲೂ ಶಾಂಪೂ ಬಳಸುವ ಅಭ್ಯಾಸ ಹಲವರಿಗೆ ಇರುತ್ತದೆ. ಕೂದಲಿನ ತುರಿಕೆ, ಬೆವರು ಹೋಗಲಿ ಎನ್ನುವ ಪ್ರತಿಬಾರಿ ತಲೆಸ್ನಾನ ಮಾಡುವಾಗಲೂ ಶಾಂಪೂ ಬಳಸುತ್ತಾರೆ. ಆದರೆ ಅತಿಯಾಗಿ ಶಾಂಪೂ ಬಳಸುವುದರಿಂದ ಕೂದಲು ಸ್ವಚ್ಛವಾಗುವುದಕ್ಕಿಂತ ಕೂದಲಿಗೆ ಹಾನಿಯಾಗುವುದೇ ಹೆಚ್ಚು.
ಪ್ರತಿದಿನ ಶಾಂಪೂ ಬಳಸಿದರೆ ಏನಾಗುತ್ತದೆ?
ಸೂರ್ಯನ ಬೆಳಕು, ನೀರಿನಲ್ಲಿರುವ ಕ್ಲೋರಿನ್ ಮತ್ತು ಶಾಂಪೂವಿನಲ್ಲಿರುವ ರಾಸಾಯನಿಕಗಳು ಸೇರಿ ಕೂದಲು ಬೇಗನೆ ಒಣಗುತ್ತದೆ. ಈ ಒಣ ಕೂದಲನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಪ್ರತಿದಿನ ಶಾಂಪೂ ಬಳಸುವ ಅಭ್ಯಾಸ ಒಳ್ಳೆಯದಲ್ಲ. ಅಲ್ಲದೆ, ಕೂದಲಿಗೆ ರಾಸಾಯನಿಕ ಯುಕ್ತ ಬಲವಾದ ಶಾಂಪೂ ಬಳಸುವ ಬದಲು ಸೌಮ್ಯ ಥರದ ಶಾಂಪೂ ಬಳಸಿ ತೊಳೆಯಿರಿ. ನಂತರ ಕಂಡಿಷನರ್ ಬಳಸಲು ಮರೆಯಬೇಡಿ.
ಬೇಸಿಗೆಯಲ್ಲಿ ಕೂದಲು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಸೌಂದರ್ಯವರ್ಧಕಗಳ ಅತಿಯಾದ ಬಳಕೆ ಕೂದಲಿನ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಕೂದಲಿಗೆ ಬಣ್ಣ ಹಚ್ಚುವುದನ್ನು ತಪ್ಪಿಸಬೇಕು.
ಕಂಡೀಷನರ್ ಬಳಸಿ
ಬೇಸಿಗೆಯಲ್ಲಿ, ಸೂರ್ಯನ ಬೆಳಕು ಕೂದಲಿನಲ್ಲಿರುವ ಎಲ್ಲಾ ತೇವಾಂಶವನ್ನು ಒಣಗಿಸುತ್ತದೆ. ಆದ್ದರಿಂದ ಕಂಡಿಷನರ್ ಮೂಲಕ ತೇವಾಂಶವನ್ನು ತುಂಬಲು ಪ್ರಯತ್ನಿಸಿ. ನಿಮ್ಮ ಕೂದಲಿನ ಪ್ರಕಾರಕ್ಕೆ ಸೂಕ್ತವಾದ ಕಂಡಿಷನರ್ ಅನ್ನು ಆರಿಸಿ. ಇದನ್ನು ನಿಯಮಿತವಾಗಿ ಬಳಸಿ. ನೀವು ಶಾಖದಿಂದ ತಪ್ಪಿಸಿಕೊಳ್ಳಲು ಈಜಲು ಹೋದರೆ, ಲೀವ್-ಇನ್ ಕಂಡಿಷನರ್ ಹಚ್ಚಿಕೊಂಡ ನಂತರ ಈಜು ಕ್ಯಾಪ್ ಧರಿಸಿ.
ಹೀಟ್ ಸ್ಟೈಲಿಂಗ್ ಬೇಡ
ಬೇಸಿಗೆಯಲ್ಲಿ ಸೂರ್ಯನ ಅತಿಯಾದ ಶಾಖದಿಂದ ಕೂದಲಿಗೆ ಸಾಕಷ್ಟು ಹಾನಿಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೀಟ್ ಸ್ಟೈಲಿಂಗ್ ಉಪಕರಣಗಳ ಬಳಕೆ ಸಲ್ಲ. ಇದು ಕೆಲ ಹೊತ್ತಿನವರೆಗೂ ಕೂದಲನ್ನು ಅಂದವಾಗಿ ಇಡಬಹುದು. ಆದರೆ ನಂತರ ದೀರ್ಘಕಾಲದವರೆಗೆ ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತೆ ಮಾಡಬಹುದು.
ಟ್ರಿಮ್ಮಿಂಗ್ ಮಾಡಿ
ಕೂದಲು ಒಣಗಿದ್ದರೆ ತುದಿಗಳು ಸೀಳುತ್ತವೆ. ಕೂದಲು ಗುಂಗುರು ಆಗಿರುವುದು ಒಳ್ಳೆಯದಲ್ಲ. ನಿಮ್ಮ ಕೂದಲನ್ನು ನಿಯಮಿತವಾಗಿ ಟ್ರಿಮ್ ಮಾಡಿಸಿ, ವಿಶೇಷವಾಗಿ ಬೇಸಿಗೆಯಲ್ಲಿ ತಪ್ಪದೇ ಟ್ರಿಮ್ ಮಾಡಿಸಿ. ಇದು ಕೂದಲು ಉದುರುವಿಕೆಯಿಂದ ಪರಿಹಾರ ನೀಡುತ್ತದೆ. ಕೂದಲು ವೇಗವಾಗಿ ಬೆಳೆಯುತ್ತದೆ.
ಸಾಕಷ್ಟು ದ್ರವಾಹಾರ ಸೇವಿಸಿ
ನೀವು ಈ ಎಲ್ಲಾ ವಿಧಾನಗಳನ್ನು ಅನುಸರಿಸುತ್ತಿದ್ದರೂ ನಿಮ್ಮ ಕೂದಲು ಆರೋಗ್ಯಕರವಾಗಿಲ್ಲದಿದ್ದರೆ, ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂದರ್ಥ. ವಿಶೇಷವಾಗಿ ಬೇಸಿಗೆಯಲ್ಲಿ ಸಾಕಷ್ಟು ನೀರು ಮತ್ತು ದ್ರವ ಪದಾರ್ಥಗಳನ್ನು ಕುಡಿಯಿರಿ. ನಿಮ್ಮ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಸಾಕಷ್ಟು ನೀರು ಅತ್ಯಗತ್ಯ.
ಕೂದಲಿನ ಆರೈಕೆಗೆ ಮನೆಮದ್ದು
ಬೇಸಿಗೆಯಲ್ಲಿ ಬೆವರು, ಕೊಳಕು ಮತ್ತು ಸೂರ್ಯನ ಬೆಳಕಿನಿಂದಾಗಿ ಅನೇಕ ಜನರಿಗೆ ತಲೆ ಸೋಂಕು ಉಂಟಾಗುತ್ತದೆ. ಇದನ್ನು ತಪ್ಪಿಸಲು, ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ, ಅವುಗಳನ್ನು ಪೇಸ್ಟ್ ಮಾಡಿ ಮತ್ತು ಅದಕ್ಕೆ ಸ್ವಲ್ಪ ಮೊಸರು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ತಲೆಯ ಮೇಲೆ ಸ್ವಲ್ಪ ಸಮಯ ಬಿಡಿ ಮತ್ತು ನಂತರ ತೊಳೆಯಿರಿ. ಇದು ಸೋಂಕು ಕಡಿಮೆ ಮಾಡುತ್ತದೆ.
ನಿಮ್ಮ ಕೂದಲು ಎಣ್ಣೆಯುಕ್ತವಾಗಿದ್ದರೆ, pH ಸಮತೋಲನದಲ್ಲಿರುವ ಕಂಡಿಷನರ್ ಖರೀದಿಸಿ. ಅಲ್ಲದೆ, ನಿಮ್ಮ ಕೂದಲನ್ನು ಬಿಳಿ ವಿನೆಗರ್ ನಿಂದ ತೊಳೆಯುವುದು ಸಹ ಬಹಳ ಮುಖ್ಯ.
ಬೇಸಿಗೆಯಲ್ಲಿ ನಿಮ್ಮ ಕೂದಲು ಸುಕ್ಕುಗಟ್ಟಿದ್ದಲ್ಲಿ, ಬಾರ್ಲಿ ನೀರಿನಿಂದ ತೊಳೆಯಿರಿ. ಬಾಳೆಹಣ್ಣನ್ನು ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕೂದಲಿಗೆ ಮಾಸ್ಕ್ ಆಗಿ ಹಚ್ಚುವುದು ಸಹ ಪರಿಣಾಮಕಾರಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)