Hair fall and food: ಕೂದಲು ಉದುರುತ್ತಿದೆಯೇ? ಚಿಂತೆ ಬಿಡಿ, ಈ ಆಹಾರ ಸೇವಿಸಿ
Hair fall and food: ಕಲುಷಿತ ವಾತಾವರಣ, ಅಸಮರ್ಪಕ ಆಹಾರಕ್ರಮ, ದೈಹಿಕ ಚಟುವಟಿಕೆಯ ಕೊರತೆ ಸೇರಿದಂತೆ ಇನ್ನೂ ಹಲವು ಅಂಶಗಳು ಉದುರಲು ಕಾರಣವಾಗಬಹುದು. ಕೆಲವೊಮ್ಮೆ ನೀವು ಕೂದಲಿಗೆ ಏನು ಹಚ್ಚುತ್ತಿದ್ದೀರಿ ಎಂಬುದಕ್ಕಿಂತ, ಯಾವ ರೀತಿಯ ಆಹಾರಗಳನ್ನು ಸೇವಿಸುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ.
ಕೂದಲಿನ ಸಮಸ್ಯೆ ಇತ್ತೀಚೆಗೆ ಬಹುತೇಕರನ್ನು ಕಾಡುತ್ತಿದೆ. ಮೊದಲೆಲ್ಲಾ ಹೆಣ್ಣುಮಕ್ಕಳು ಮಾತ್ರ ಈ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಗಂಡುಮಕ್ಕಳು ಕೂಡ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಕಲುಷಿತ ವಾತಾವರಣ, ಅಸಮರ್ಪಕ ಆಹಾರಕ್ರಮ, ದೈಹಿಕ ಚಟುವಟಿಕೆಯ ಕೊರತೆ ಸೇರಿದಂತೆ ಇನ್ನೂ ಹಲವು ಅಂಶಗಳು ಉದುರಲು ಕಾರಣವಾಗಬಹುದು. ಕೆಲವೊಮ್ಮೆ ನೀವು ಕೂದಲಿಗೆ ಏನು ಹಚ್ಚುತ್ತಿದ್ದೀರಿ ಎಂಬುದಕ್ಕಿಂತ, ಏನು ತಿನ್ನುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಕೂದಲಿಗೆ ಅವಶ್ಯ ಎನ್ನಿಸುವ ಪೋಷಕಾಂಶಗಳ ಸೇವನೆಯಿಂದ ಕೂದಲು ಉದುರುವುದನ್ನು ತಡೆಯಬಹುದು ಮಾತ್ರವಲ್ಲ, ಸೊಂಪಾದ, ಆರೋಗ್ಯಕರ ಹಾಗೂ ಹೊಳಪಿನ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.
ಈ ಕೆಳಗಿನ ಆಹಾರ ಪದಾರ್ಥಗಳ ಸೇವನೆಯಿಂದ ಕೂದಲು ಉದುರದಂತೆ ತಡೆಯಬಹುದು.
ಮೀನು
ಮೀನಿನಲ್ಲಿ ಪ್ರೊಟೀನ್ ಅಂಶ ಸಮೃದ್ಧವಾಗಿದೆ. ಇದಲ್ಲದೆ ಸಾಲ್ಮಾನ್, ಬೂತಾಯಿ, ಸಾರ್ಡಿನ್‌ನಂತಹ ಮೀನುಗಳಲ್ಲಿ ಒಮೆಗಾ- 3 ಕೊಬ್ಬಿನಾಮ್ಲಗಳ ಪ್ರಮಾಣ ಹೆಚ್ಚಿದೆ. ಇವು ದೇಹ ಹಾಗೂ ಕೂದಲಿನ ಬುಡಕ್ಕೆ ನೈಸರ್ಗಿಕ ಎಣ್ಣೆಯಂಶ ದೊರಕುವಂತೆ ಮಾಡುತ್ತದೆ. ಇದರಿಂದ ಬುಡದಿಂದಲೇ ಕೂದಲು ಸದೃಢವಾಗುತ್ತದೆ.
ಒಣಹಣ್ಣುಗಳು
ಸಸ್ಯಾಹಾರಿಗಳು ಒಮೆಗಾ- 3 ಕೊಬ್ಬನಾಮ್ಲ ಪಡೆಯಲು ಬಾದಾಮಿ, ವಾಲ್‌ನಟ್, ಗೋಡಂಬಿ, ಕುಂಬಳಬೀಜ, ಸೂರ್ಯಕಾಂತಿ ಬೀಜ, ಇದರೊಂದಿಗೆ ಫ್ಲ್ಯಾಕ್ಸ್ ಸೀಡ್ ಸೇವನೆಯನ್ನು ರೂಢಿಸಿಕೊಳ್ಳಬೇಕು. ವಾಲ್‌ನಟ್‌ನಲ್ಲಿ ವಿಟಮಿನ್ ಇ ಅಂಶ ಸಮೃದ್ಧವಾಗಿದೆ. ಇದರಲ್ಲಿರುವ ಬಯೋಟಿನ್ ಅಂಶ ಕೂದಲು ಉದುರುವುದನ್ನು ತಡೆಯುತ್ತದೆ. ವಾಲ್‌ನಟ್‌ನಲ್ಲಿರುವ ತಾಮ್ರದ ಅಂಶ ಕೂದಲಿನ ನೈಸರ್ಗಿಕ ಬಣ್ಣ ಉಳಿಯುವಂತೆ ಮಾಡುತ್ತದೆ, ಮಾತ್ರವಲ್ಲ ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.
ಹಸಿರು ಸೊಪ್ಪು
ಹಸಿರು ಸೊಪ್ಪುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಕೂದಲ ಅಂದ ಹೆಚ್ಚುತ್ತದೆ. ಎಲ್ಲಾ ರೀತಿ ಹಸಿರು ಸೊಪ್ಪುಗಳು ಕೂದಲು ಆರೋಗ್ಯಕ್ಕೆ ಉತ್ತಮ. ಪಾಲಾಕ್, ಪಾರ್ಸ್ಲಿಯಂತಹ ಹಸಿರು ಸೊಪ್ಪಿನಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಇದು ಕೂದಲು ಉದುರುವುದು ಹಾಗೂ ತುಂಡಾಗುವುದನ್ನು ತಡೆಯುತ್ತದೆ.
ಕ್ಯಾರೆಟ್
ಕಣ್ಣಿನ ಆರೋಗ್ಯಕ್ಕೆ ಮಾತ್ರವಲ್ಲ, ಕೂದಲಿನ ಆರೋಗ್ಯಕ್ಕೂ ಕ್ಯಾರೆಟ್ ಸೇವನೆ ಉತ್ತಮ. ಇದರಲ್ಲಿ ಬೀಟಾ ಕ್ಯಾರೊಟಿನ್ ಅಂಶ ಸಮೃದ್ಧವಾಗಿದ್ದು, ಇದು ವಿಟಮಿನ್ ಎ ಆಗಿ ಬದಲಾಗುತ್ತದೆ. ವಿಟಮಿನ್ ಎ ಇಲ್ಲದೆ ನಿಮ್ಮ ದೇಹದಲ್ಲಿನ ಯಾವುದೇ ಜೀವಕೋಶಗಳು ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ, ಆದ್ದರಿಂದ ಆಹಾರದಲ್ಲಿ ಸಾಕಷ್ಟು ವಿಟಮಿನ್ ಎ ಅನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಆಹಾರದಲ್ಲಿ ವಿಟಮಿನ್ ಎ ಕೊರತೆಯು ಕೂದಲು ಉದುರುವುದು, ತೆಳುವಾಗುವುದು ಮತ್ತು ಬೋಳಾಗಲು ಕಾರಣವಾಗಬಹುದು. ಸಿಹಿಗೆಣಸು, ಕುಂಬಳಕಾಯಿ, ಮಾವಿನಹಣ್ಣು ಹಾಗೂ ಏಪ್ರಿಕಾಟ್‌ಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ.
ಮೊಟ್ಟೆ
ಮೊಟ್ಟೆಯಲ್ಲಿ ವಿಟಮಿನ್ ಸಮೃದ್ಧವಾಗಿರುವುದು ಮಾತ್ರವಲ್ಲ, ಸತು, ಸಲ್ಫರ್, ಕಬ್ಬಿಣಾಂಶ ಹಾಗೂ ಸೆಲೇನಿಯಂ ಅಂಶಗಳು ಸಮೃದ್ಧವಾಗಿವೆ. ಈ ಎಲ್ಲಾ ಅಂಶಗಳು ಕೂದಲು ಬೆಳವಣಿಗೆಗೆ ಸಹಕರಿಸುತ್ತವೆ. ಮೊಟ್ಟೆಯಲ್ಲಿ ಬಯೊಟಿನ್ ಅಥವಾ ವಿಟಮಿನ್ ಬಿ7 ಅಂಶ ಅಧಿಕವಾಗಿದ್ದು, ಇದು ಕೂದಲ ಬೆಳವಣಿಗೆ ಹೆಚ್ಚಲು ಇದು ಪೂರಕವಾಗಿದೆ.
ಮೊಸರು
ಕೂದಲಿನ ಹಲವು ಸಮಸ್ಯೆಗಳಿಗೆ ಮೊಟ್ಟೆ ಉತ್ತಮ ಔಷಧಿ. ಇದು ವಿಟಮಿನ್ ಬಿ12, ಪ್ರೊಟೀನ್, ಆಯೊಡಿನ್ ಹಾಗೂ ಕ್ಯಾಲ್ಸಿಯಂ ಅಂಶಗಳನ್ನು ಹೊಂದಿದೆ. ಇದರೊಂದಿಗೆ ಕೆನೆ ರಹಿತ ಹಾಲು, ಕಾಟೇಜ್ ಚೀಸ್, ಕಡಿಮೆ ಕೊಬ್ಬಿನಾಂಶ ಇರುವ ಚೀಸ್ ಮತ್ತು ಮೊಸರು ಮುಂತಾದ ಡೇರಿ ಉತ್ಪನ್ನಗಳ ಕೂದಲಿನ ಕಿರುಚೀಲಗಳ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ.
ಬೆರಿಗಳು
ಇದರಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿದ್ದು, ಇದು ಕೂದಲಿನ ಆರೋಗ್ಯಕ್ಕೆ ಬಹಳ ಉತ್ತಮ. ಇವು ಕೂದಲಿನ ಆರೋಗ್ಯ ಸುಧಾರಿಸುವ ಜೊತೆಗೆ ಕೂದಲು ಉದುರುವುದನ್ನು ತಡೆಯುತ್ತವೆ.
ಬೀನ್ಸ್ ಹಾಗೂ ಕಾಳುಗಳು
ನಾವು ಪ್ರತಿನಿತ್ಯ ನಮ್ಮ ಆಹಾರದೊಂದಿಗೆ ಸೇವಿಸುವ ಬೀನ್ಸ್ ಹಾಗೂ ಕಾಳುಗಳು ಕೂದಲಿನ ಆರೋಗ್ಯದಲ್ಲಿ ನೀವು ಊಹಿಸದ ರೀತಿಯಲ್ಲಿ ಕೆಲಸ ಮಾಡುತ್ತವೆ. ಪ್ರೋಟೀನ್-ಸಮೃದ್ಧ ಸಸ್ಯಾಹಾರಿ ಆಹಾರವಾಗಿರುವುದರಿಂದ, ಬೀನ್ಸ್ ಮತ್ತು ಬೇಳೆಕಾಳುಗಳು ಬಯೋಟಿನ್ ಅನ್ನು ಹೊಂದಿರುತ್ತವೆ, ಇದರ ಕೊರತೆಯು ಕೂದಲು ತುಂಡಾಗಲು ಕಾರಣವಾಗಬಹುದು.
ಒಣದ್ರಾಕ್ಷಿ
ಒಣದ್ರಾಕ್ಷಿಯಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಒಣಕೂದಲಿನ, ತೆಳು ಕೂದಲು ಹಾಗೂ ಕೂದಲಿನ ಬಣ್ಣಗೆಟ್ಟಂತಿರುವವರು ಇದನ್ನು ಸೇವಿಸುವುದು ಉತ್ತಮ. ಇದು ಕೂದಲಿನ ಗುಣಮಟ್ಟವನ್ನೂ ಸುಧಾರಿಸುತ್ತದೆ.
ಸಿಗಡಿ
ಸಿಗಡಿ ಸೇವನೆ ಕೂಡ ಕೂದಲಿನ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಪ್ರೊಟೀನ್ ಅಂಶ ಅಧಿಕವಾಗಿದ್ದು, ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ.
ನೀರು
ಸಾಕಷ್ಟು ನೀರು ಕುಡಿಯುವುದರಿಂದ ಕೂಡ ಕೂದಲು ಉದುರುವುದನ್ನು ತಪ್ಪಿಸಬಹುದು.
ವಿಭಾಗ