ಹೊಸವರ್ಷಕ್ಕೆಂದು ನಿರ್ಣಯ ತಗೊಳ್ಳೋದು ಸರಿ, ಪಾಲಿಸುವುದು-ಸಾಧಿಸುವುದು ಹೇಗೆ? ಇಲ್ಲಿದೆ ನೀವು ತಿಳಿಯಲೇಬೇಕಾದ 8 ಅಂಶಗಳು -ಮನದ ಮಾತು
ಭವ್ಯಾ ವಿಶ್ವನಾಥ್ ಬರಹ: ಬೀಳಲೇ ಇಲ್ಲ ಎನ್ನುವುದು ಹೆಮ್ಮೆಯ ವಿಷಯವಲ್ಲ. ಬಿದ್ದು ಮತ್ತೆ ಎದ್ದರೆ ಅದು ಹೆಮ್ಮೆಯ ವಿಷಯ. ಸೋಲುವುದು ಸಾಮರ್ಥ್ಯದ ಅಭಾವದಿಂದಲ್ಲ, ಮನಃಪೂರ್ವಕವಾಗಿ ಕೆಲಸ ಮಾಡದಿರುವುದರಿಂದ. ಹೀಗಾಗಿ ಇಷ್ಟು ವರ್ಷ ನೀವು ತೆಗೆದುಕೊಂಡ ಹೊಸವರ್ಷದ ನಿರ್ಣಯಗಳು ಈಡೇರದಿದ್ದರೆ ಪರವಾಗಿಲ್ಲ. ಇವತ್ತಿನಿಂದ ಮರಳಿಯತ್ನವ ಮಾಡಿ. ಹ್ಯಾಪಿ ನ್ಯೂ ಇಯರ್.
ಪ್ರಶ್ನೆ: ನಾನು 40 ವರ್ಷದ ಮಹಿಳೆ. ನನಗೊಂದು ಸಮಸ್ಯೆಯಿದೆ. ಪ್ರತಿ ಹೊಸವಷ೯ ಬಂದಾಗಲೂ ಸಂತೋಷ, ಗೊಂದಲ, ಬೇಸರವಾಗುತ್ತದೆ. ನಾನು ನಿರ್ಣಯಗಳ (Resolution) ಪಟ್ಟಿಯೇ ಮಾಡುತ್ತೇನೆ. ಆರಂಭದಲ್ಲಿ ಉತ್ಸಾಹಭರಿತಳಾಗಿ ಪಾಲಿಸಿದರೂ ನಂತರದ ದಿನಗಳಲ್ಲಿ ಮುಂದುವರೆಸುವುದಿಲ್ಲ. ನೆನಪಾದರೂ ಸಹ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಮತ್ತೆ ಹೊಸವರ್ಷವೇ ಬರಬೇಕು. ಮತ್ತೆ ಪಾಪಪ್ರಜ್ಞೆ ಕಾಡುತ್ತದೆ. ಈ ವಷ೯ವೂ ಇದೇ ಸಮಸ್ಯೆ. ದಯವಿಟ್ಟು ನನಗೆ ಈ ಮನಸ್ಥಿತಿಯಿಂದ ಹೊರಬರಲು ಸಹಾಯಮಾಡಿ.
ಉತ್ತರ: ನೀವು ಬಹಳ ನಿರಾಶೆಗೊಂಡಂತೆ ಕಾಣುತ್ತದೆ. ಪ್ರತಿಬಾರಿ ನೀವು ಮಾಡುವ ನಿರ್ಣಯಗಳನ್ನು ಪಾಲಿಸುವುದಕ್ಕೆ ವಿಫಲರಾದ ಕಾರಣ ಬೇಸರಗೊಂಡಿರುವಿರಿ. ಹಾಗಾಗಿ ನಿಮ್ಮ ನಿರಾಶೆ ಮತ್ತು ಬೇಸರ ಸಹಜವೇ. ನಿಮ್ಮ ಗೊಂದಲಕ್ಕೆ ಕಾರಣ ಈಗ ಬರುವ ಹೊಸ ವರ್ಷಕ್ಕೆ ಪುನಃ ನೀವು ನಿರ್ಣಯಗಳನ್ನು ಮಾಡಬೇಕೇ ಅಥವಾ ಬೇಡವೇ ಎನ್ನುವುದರ ಸ್ಪಷ್ಟತೆ ಇಲ್ಲದಿರುವುದು.
ನಿಮ್ಮ ಹತಾಶೆಗೆ ಎರಡು ಕಾರಣಗಳಿವೆ. ಒಂದು, ಈ ಹಿಂದೆ ಮಾಡಿದ ಹೊಸ ವಷ೯ದ ನಿರ್ಣಯಗಳನ್ನು ಪೂರ್ಣಗೊಳಿಸದೇ ಇದ್ದುದು. ಇನ್ನೊಂದು, ಈ ಬಾರಿ ತೆಗೆದುಕೊಳ್ಳುವ ನಿರ್ಣಯಗಳನ್ನು ಸಹ ಪೂರ್ಣಗೊಳಿಸಲು ಆಗುತ್ತದೆಯೋ, ಇಲ್ಲವೋ ಎನ್ನುವ ಆತಂಕ. ಇದೇ ಕಾರಣಕ್ಕೆ ಎನ್ನುವ ಆತ್ಮವಿಶ್ವಾಸವನ್ನು (ಮನೋಬಲ) ಕಳೆದುಕೊಂಡಿರುವಂತೆ ಕಾಣುತ್ತಿದೆ. ಆದ್ದರಿಂದ ನೀವು ಯಾವುದೇ ನಿಣ೯ಯಗಳನ್ನು ತೆಗೆದುಕೊಳ್ಳುವ ಮುನ್ನ ಪೂರ್ವಸಿದ್ಧತೆಯನ್ನು ಮಾಡಿ. ದೈಹಿಕ, ಆರ್ಥಿಕ, ವೃತ್ತಿ, ಕೌಟುಂಬಿಕ ನಿಣ೯ಯಗಳು ಯಾವುದೇ ಇರಲಿ, ಇವುಗಳನ್ನು ಪೂಣ೯ಗೊಳಿಸುವುದಕ್ಕೆ ಮನೋಬಲ ಪ್ರಮುಖವಾದುದು. ಈ ಮನೋಬಲವೆೇ ಅತಿಮುಖ್ಯ ಮಾನಸಿಕ ಸಿದ್ಧತೆ.
1) ಮಾನಸಿಕ ಸಿದ್ಧತೆ: ಶಿಸ್ತು-ಮನಸ್ಸಿಗೆ ಶಿಸ್ತನ್ನು ಕಲಿಸಬೇಕು. ಅದು ಏನನ್ನು ಬಯಸುತ್ತದೆಯೋ, ಅದನ್ನು ತಕ್ಷಣವೇ ಒದಗಿಸಿ ತೃಪ್ತಿಪಡಿಸುವುದಕ್ಕೆ ಕಾದುಕುಳಿತಿರಬೇಡಿ. ಯಾಕೆಂದರೆ ಮನಸ್ಸು ಚಂಚಲವಾದಾಗ ಅದನ್ನು ಹೆಚ್ಚು ಉಪಚಾರಮಾಡುವ ಬದಲು ನಿಯಂತ್ರಿಸಿ. ಅದು ನಿಮ್ಮ ಮಾತನ್ನು ಕೇಳುವ ಹಾಗೆ ಪಳಗಿಸಿ. ಇಲ್ಲಗಿದ್ದರೆ ಅದರ ಗುಲಾಮರಾಗುತ್ತೀರಿ, ಅದೇ ನಿಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಇದೇ ಮನಸ್ಸಿಗೆ ಕಲಿಸುವ ಶಿಸ್ತು. ಉದಾ: ಪ್ರತಿದಿನ ಮುಂಜಾನೆ ಬೆಳಿಗೆ 6 ಘಂಟಗೆ ಏಳಬೇಕೆಂದು ರಾತ್ರಿ ನಿಧಾ೯ರ ಮಾಡಿ ಮಲಗುತ್ತೀರಿ. 6 ಗಂಟೆಗೆ ಅಲಾರ್ಮ್ ಸಹ ಹೊಡೆಯುತ್ತದೆ. ಆದರೆ ಅದನ್ನು ನಿಲ್ಲಿಸಿ ಮತ್ತೆ ಮಲಗುವಿರಿ. ಮನಸ್ಸು ಆ ಸಮಯದಲ್ಲಿ ಮಲಗಲೇಬೇಕೆಂದು ಬಯಸುತ್ತದೆ. ನೀವು ಮನಸ್ಸನ್ನು ಒಲಿಸುತ್ತೀರಿ. ಇದೇ ಅಭ್ಯಾಸವಾಗಿ ಹೋಗುತ್ತದೆ.
2) ಮನೋಬಲ ಅತಿಮುಖ್ಯ: ಮನೋಬಲ ಅಂದರೆ ಇಚ್ಛಾಶಕ್ತಿ - ನೀವು ನಿಜಕ್ಕೂ ನಿಮ್ಮ ಗುರಿಗಳನ್ನು ತಲುಪಲು ಇಚ್ಛಿಸುವಿರಾದರೆ ಇನ್ನು ನಿಮಗೆ ನಿರಂತರವಾಗಿ ಮುಂದುವರೆಯಲು ಬೇರೆ ಯಾವುದರ ಅಗತ್ಯವೂ ಇಲ್ಲ. ಈ ಇಚ್ಛಾಶಕ್ತಿಯನ್ನೇ ಛಲವೆನ್ನುವುದು. ಸಾಧಿಸುವ ಛಲ ನಿಮ್ಮದಾಗಿರಬೇಕು. ನೀವು ಕೆಲವು ಸಣ್ಣಗುರಿಗಳನ್ನು ಹಾಕಿಕೊಂಡು (2 ಅಥವಾ 3 ತಿಂಗಳು) ನಿಧಾನವಾಗಿ ನಿಮ್ಮ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳುತ್ತಾ ಹೋಗಿ. ಈ ರೀತಿಯ ಸಣ್ಣ ಮತ್ತು ವಾಸ್ತವಿಕ ಗುರಿಗಳನ್ನು ತಲುಪುವಲ್ಲಿ ನೀವು ಯಶಸ್ವಿಯಾದರೆ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಮತ್ತು ಇಚ್ಚಾಶಕ್ತಿ ಬಲಗೊಳ್ಳುತ್ತದೆ. ಪ್ರತಿಕೂಲ ಪರಿಸ್ಥಿತಿಯನ್ನೂ ಮೀರಿ ಸಾಧಿಸುತ್ತೇನೆ ಎಂಬ ಛಲ ನಿಮ್ಮದಾಗಿರಬೇಕು.
3) ಫಲಿತಾಂಶಗಳ ಮೇಲೆ ಹೆಚ್ಚಿನ ಗಮನ ಬೇಡ: ನೀವು ಮಾಡುವ ಕ್ರಿಯೆಯ ಪ್ರಕ್ರಿಯೆ ಮೇಲೆ ನಿಮ್ಮ ನಿಗಾ ಇರಬೇಕು. ಫಲಿತಾಂಶವು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ ಪ್ರಕ್ರಿಯೆಯಲ್ಲಿ ನಿಮ್ಮ ಪೂರ್ಣ ನಿಯಂತ್ರಣವಿರುತ್ತದೆ. ಆದ್ದರಿಂದ ಸಂಪೂಣ೯ವಾಗಿ ನಿಮ್ಮನ್ನು ನೀವು ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ, ಫಲಿತಾಂಶದ ಬಗ್ಗೆ ತಲೆ ಕೆಡಸಿಕೊಳ್ಳಬೇಡಿ. ಫಲಿತಾಂಶದ ಕಡೆ ಗಮನ ಹೋದರೆ ಮಾನಸಿಕ ಒತ್ತಡ ಮತ್ತು ಆತಂಕಗಳಿಗೆ ತುತ್ತಾಗುತ್ತೀರಿ. ಇದರಿಂದ ಕ್ರಿಯೆಯನ್ನು ಒಂದೇ ಮನಸ್ಸಿನಿಂದ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.
4) ನಿರಂತರ ಪ್ರಯತ್ನ: ಕೆಲವೊಮ್ಮೆ ಆಲಸ್ಯ, ಬೇಸರ ಅಥವಾ ಇನ್ನಿತ್ತರ ಕಾರಣಗಳಿಂದ ಒಂದೆರಡು ದಿನ ಅಭ್ಯಾಸ ತಪ್ಪಬಹುದು. ಇದರಿಂದ ನಿಮಗೆ ವಿರಾಮವೂ ಸಿಗುತ್ತದೆ. ಆದರೆ ಪುನಃ ಮುಂದುವರೆಸಲು ಮರೆಯಬೇಡಿ. ವಿರಾಮ ಚಿಕ್ಕದಾಗಿ ಚೊಕ್ಕದಾಗಿರಲಿ, ವಿರಾಮವೇ ಅಭ್ಯಾಸವಾಗುವುದು ಬೇಡ. ಎಷ್ಟೇ ಅನಿರೀಕ್ಷಿತ ಅಡ್ಡಿ ಆತಂಕಗಳು ಉದ್ಭವವಾದರೂ ಸರಿ, ಮರಳಿ ಪ್ರಯತ್ನ ಮುಂದುವರೆಸುವುದನ್ನು ಬಿಡಬೇಡಿ.
5) ಸೋಲು: ಬೀಳಲೇ ಇಲ್ಲ ಎನ್ನುವುದು ಹೆಮ್ಮೆಯ ವಿಷಯವಲ್ಲ. ಬಿದ್ದು ಮತ್ತೆ ಎದ್ದರೆ ಅದು ಹೆಮ್ಮೆಯ ವಿಷಯ. ಸೋಲುವುದು ಸಾಮರ್ಥ್ಯದ ಅಭಾವದಿಂದಲ್ಲ, ಮನಃಪೂವ೯ಕವಾಗಿ ಕೆಲಸ ಮಾಡದಿರುವುದರಿಂದ. ಯಶಸ್ವಿಯಾಗುತ್ತೇನೆಂಬ ಆತ್ಮವಿಶ್ವಾಸದ ಕೊರತೆಯಿದ್ದಾಗ. ಎಷ್ಟು ಸಲ ವಿಫಲವಾದರೂ ಸರಿ ಹಿಂದೆ ತಿರುಗದೇ, ಮುಂದಿನ ಯತ್ನದಲ್ಲಿ ಸಾಗಿರಿ. ಗೆಲುವಿನ ಮೊದಲನೆಯ ಮೆಟ್ಟಿಲು ಸೋಲು ಎನ್ನುವುದನ್ನು ನೆನಪಿಡಿ.
6) ಅತಿಯಾದ ಸ್ವ-ದೂಷಣೆ ಸಲ್ಲದು: ನಿಮ್ಮನ್ನು ನೀವು ಅತಿಯಾಗಿ ದೂಷಿಸಿಕೊಳ್ಳುವುದು, ನಿಮ್ಮ ಸಾಮರ್ಥ್ಯಗಳನ್ನು ಅನುಮಾನಿಸುವುದು, ಪಾಪಪ್ರಜ್ಞೆಯಿಂದ ನರಳುವುದನ್ನು ತಡೆಯಿರಿ. ಇಲ್ಲದಿದ್ದರೆ, ನಿಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ನಿಮ್ಮ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡರೆ, ಸಣ್ಣ ಕೆಲಸವನ್ನೂ ಮಾಡಲು ಸಾಧ್ಯವಾಗುವುದಿಲ್ಲ, ಇನ್ನು ನಿಮ್ಮ ಗುರಿಗಳನ್ನು ಮುಟ್ಟುವುದು ಅಸಾಧ್ಯದ ಮಾತು. ಬದಲಾಗಿ, ನಿಮ್ಮ ಪ್ರಯತ್ನಗಳಿಗೆ ಮೆಚ್ಚುಗೆಯಿರಲಿ, ನಿಮ್ಮ ಸಾಮಥ್ಯ೯ದ ಕುರಿತು ಹೆಮ್ಮೆಯಿರಲಿ. ಇದರ ಜೊತೆಗೆ, ಪ್ರತಿನಿತ್ಯ ಧನಾತ್ಮಕ ದೃಢೀಕರಣಗಳನ್ನು ಅಭ್ಯಾಸಮಾಡಿ (ನನ್ನಲ್ಲಿ ನನ್ನ ಗುರಿಗಳನ್ನು ಮುಟ್ಚುವ ಸಾಮಥ್ಯ೯ವಿದೆ, ನನ್ನ ಸಾಮಾಥ್ಯ೯ದ ಬಗ್ಗೆ ನನಗೆ ವಿಶ್ವಾಸವಿದೆ, ನನ್ನ ಪ್ರಯತ್ನ ಹಾಗು ಶ್ರಮದಿಂದ ನಾನು ಯಶಸ್ವಿಯಾಗುತ್ತೇನೆ). ಹೀಗೆ ಧೃಢೀಕರಣಗಳನ್ನು ಪ್ರತಿನಿತ್ಯ ಮೆಲುಕು ಹಾಕುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
7) ವಿಳಂಬ ಪ್ರಕೃತಿ (Procrastination): ನೀವು ಆಯ್ಕೆ ಮಾಡಿಕೊಂಡಿರವ ನಿಣ೯ಯಗಳು ನಿಮ್ಮ ಸಾಮಥ್ಯ೯ ಹಾಗೂ ಆಸಕ್ತಿಗೆ ಅನುಗುಣವಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿ. ಬೇರೆಯವರ ಬಲವಂತದಿಂದಲೋ ಅಥವಾ ನಿಮ್ಮನ್ನು ಇನ್ನೊಬ್ಬರನ್ನು ಓಲೈಸಲು (ಮೆಚ್ಚಿಸಲು), ಬೇರೆಯವರ ಜೊತೆ ಹೋಲಿಸಿಕೊಂಡು ಅವರನ್ನು ಅನುಕರಿಸಲು ನಿಣ೯ಯಗಳನ್ನು ಮಾಡಿದರೆ, ನಿಮ್ಮ ಕಾಯ೯ ನಿವ೯ಹಣೆ ನಿರಂತರವಾಗಿ ಸರಾಗವಾಗಿ, ಸಲೀಸಾಗಿ ನಡೆಯುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ತಪ್ಪಿಸಿಕೊಳ್ಳುವುದಕ್ಕೆ ನೆಪಗಳನ್ನು ಹುಡುಕಲೂಬಹುದು, ವಿಳಂಬವನ್ನೂ ಮಾಡಬಹುದು. ಬೇರೆ ಕಡೆಗೆ ನಿಮ್ಮ ಮನಸ್ಸು ಹರಿಯಲೂಬಹುದು (Distraction). ಆದ್ದರಿಂದ ಆಯ್ಕೆ ನಿಮ್ಮದಾಗಿರಲಿ, ಎಚ್ಚರಿಕೆಯಿಂದ ಆಯ್ದುಕೊಳ್ಳಿ.
8) ಸಂಯಮವೇ ತಳಹದಿ: ಕೊನೆಯದಾದರೂ ಬಹಳ ಮಹತ್ವವಾದ ಅಂಶ. ಮೇಲೆ ವಿವರಿಸಿದ ಎಲ್ಲಾ ಅಂಶಗಳನ್ನು ಅನುಸರಿಸಲು, ಒಂದು ಭದ್ರವಾದ ಅಡಿಪಾಯದ ಅಗತ್ಯವಿದೆ, ಅದೇ ಸಂಯಮ. ಪ್ರತಿ ಹಂತದಲ್ಲೂ ಅತಿಯಾಗಿ ಕುಗ್ಗದೇ, ಹಿಗ್ಗದೇ ಹಿಡಿದ ಕಾಯ೯ವನ್ನು ಮಧ್ಯದಲ್ಲಿ ಕೈ ಬಿಡದೇ ಸಂಪೂಣ೯ವಾಗಿ ಮುಗಿಯುವ ತನಕ ನಮ್ಮನ್ನು ಕೈ ಹಿಡಿದುಕೊಂಡು ನಡೆಸುವುದು ಸಂಯಮ. ಆದ್ದರಿಂದ ಸಂಯವನ್ನು ಬೆಳೆಸಿಕೊಳ್ಳಿ, ಸಂಯಮವಿದ್ದರೆ ಗೆಲುವು ಖಂಡಿತ. ಈ ಹೊಸ ವಷ೯ವು ಹೊಸ ಹುರುಪು, ಭರವಸೆ, ವಿಶ್ವಾಸ ನೀಡಲಿ. ಹೊಸ ಕನಸು ಮತ್ತು ಗುರಿಗಳತ್ತ ನಿಮ್ಮ ಬದುಕು ಸಾಗಲಿ. ನಿಮ್ಮ ಸಾಮಾಥ್ಯ೯ ಹೆಚ್ಚಲಿ, ಸುಖ, ಸಂತೋಷ ಮತ್ತು ಆರೋಗ್ಯ ನಿಮ್ಮದಾಗಲಿ ಎಂದು ಹಾರೈಸುವೆ.
ಎಲ್ಲಾ ಓದುಗರಿಗೂ ಹ್ಯಾಪಿ ನ್ಯೂ ಇಯರ್, ಆಲ್ ದಿ ಬೆಸ್ಟ್.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope