ಸಂಕ್ರಾಂತಿ: ನಿಮ್ಮ ಬಳಿ ಹಣವೇನೋ ಹೇರಳವಾಗಿದೆ, ಅದನ್ನ ನೀಡಿ ಖರೀದಿಸಲು ಧವಸಗಳೇ ಸಿಗದಿದ್ದರೆ? ರಂಗಸ್ವಾಮಿ ಮೂಕನಹಳ್ಳಿ ಬರಹ
Happy Sankranti: ನಿಮ್ಮ ಬಳಿ ಹಣವೇನೋ ಹೇರಳವಾಗಿದೆ, ಆದರೆ ಅದನ್ನ ನೀಡಿ ಖರೀದಿಸಲು ಧವಸಗಳೇ ಸಿಗದಿದ್ದರೆ ಏನಾಗಬಹುದು?. ಸಂಕ್ರಾಂತಿ ಹಬ್ಬದ ಸಮಯದಲ್ಲಿ ರಂಗಸ್ವಾಮಿ ಮೂಕನಹಳ್ಳಿ ಫೇಸ್‌ಬುಕ್‌ನಲ್ಲಿ ಬರೆದ ಬರಹವೊದು ಗಮನ ಸೆಳೆಯುತ್ತದೆ.

ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು "ಕೃಷಿಗೆ ಸಂಬಂಧಿಸಿದ ಒಂದು ನವೋದ್ಧಿಮೆ ಯೂನಿಕಾರ್ನ್ ಆಗಬೇಕು , ಆಗ ತಂತ್ರಜ್ಞಾನಕ್ಕೂ ಒಂದು ಬೆಲೆ , ಬದುಕಿಗೂ ಒಂದು ಅರ್ಥ. ಕೃಷಿಗೆ ಅಂತಹ ದಿನ ಬರುತ್ತದೆ. ಮತ್ತು ಅದು ಸನಿಹದಲ್ಲಿದೆ" ಎಂಬ ಆಶಾವಾದದ ಬರಹವೊಂದನ್ನು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ರಂಗಸ್ವಾಮಿ ಮೂಕನಹಳ್ಳಿ ಪೋಸ್ಟ್
"ಎಲ್ಲಾ ಪ್ರಿಯ ಸಹಜೀವಿಗಳಿಗೆ ನಮಸ್ಕಾರ . ಶುಭೋದಯ . ಭೋಗಿ ಮತ್ತು ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು . ಮೂಲಭೂತವಾಗಿ ಈ ಹಬ್ಬ ಪೈರು ಕಟಾವಿಗೆ ಬಂದ ಸಮಯದಲ್ಲಿ ಆಚರಿಸುತ್ತೇವೆ. ಇದು ಅಭಿವೃದ್ಧಿಯ ಸಂಕೇತ. ಇದು ನೇರವಾಗಿ ಕೃಷಿಗೆ ಸಂಬಂಧಪಟ್ಟದ್ದು. ಬದುಕಿಗೆ ಬೇಕಾಗಿರುವ ಅನ್ನವನ್ನ ನೀಡುವ ಕಾಯಕವಿದು. ಇವತ್ತು ಈ ವೃತ್ತಿ ಕವಲು ದಾರಿಯಲ್ಲಿ ಬಂದು ನಿಂತಿದೆ. ಕೃಷಿ ಯಾರಿಗೂ ಬೇಡದ ವೃತ್ತಿಯಾಗಿ ಬಿಟ್ಟಿದೆ. ಊರಲ್ಲಿ ಐದಾರು ಎಕರೆ ಜಮೀನು ಇದ್ದವರು ಕೂಡ ಪಟ್ಟಣವನ್ನ ಸೇರಿ ಹತ್ತನ್ನೆರೆಡು ಸಾವಿರ ರುಪಾಯಿಗೆ ದುಡಿಯಲು ಶುರು ಮಾಡಿದ್ದಾರೆ. ಹೀಗೇಕೆ ಎಂದರೆ ಸಿದ್ದ ಉತ್ತರ ಸಿದ್ಧವಿರುತ್ತದೆ. ನೀರಿಲ್ಲ , ಜನ ಸಿಕ್ಕುವುದಿಲ್ಲ ಇತ್ಯಾದಿ.
ಭಾರತ ಇಂದಿಗೆ ಯೂನಿಕಾರ್ನ್ ನವೋದ್ಯಮಗಳನ್ನ ಹೆಚ್ಚೆಚ್ಚು ನೀಡುತ್ತಾ ಶರವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಅದು ಒಳ್ಳೆಯದು, ಅದು ಬೇಕು. ಆದರೆ ಹೊಸ ಸ್ನೇಹ , ಸಂಬಂಧ ಬೆಸೆಯುವ ಭರದಲ್ಲಿ ಹಳೆಯ ಸ್ನೇಹ , ಸಂಬಂಧ ಮರೆಯುವುದು ಎಷ್ಟು ಸರಿ ? ಎನ್ನುವ ಪ್ರಶ್ನೆ ಇಂದು ನಮ್ಮ ಮುಂದೆ ನಿಂತಿದೆ. ಎಲ್ಲರಿಗೂ ದಿನ ಒಪ್ಪತ್ತಿನಲ್ಲಿ ಯೂನಿಕಾರ್ನ್ ಸಂಸ್ಥೆ ಕಟ್ಟುವ ತವಕ. ಅಯ್ಯಗಳಿರಾ ಈ ಯೂನಿಕಾರ್ನ್ ಸಂಸ್ಥೆಗಳನ್ನ ಸ್ವಲ್ಪ ನೋಡಿ ಅವೆಲ್ಲಾ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು, ಎಷ್ಟು ಬೇಗ ಮೇಲೆ ಹೋದವು ಅಷ್ಟೇ ಬೇಗ ಕೆಳಕ್ಕೂ ಬರಬಲ್ಲವು. ಬದುಕಿಗೆ ಬೇಕಾದ ಅನ್ನಕ್ಕೆ ಏನು ಮಾಡುವಿರಿ ? ಕೋಟಿ ಕೋಟಿ ಹಣದ ಗಂಟನ್ನ ಮನೆಯಲ್ಲಿ ಇಟ್ಟಿದ್ದಿರಿ , ಆದರೆ ರೈತನಿಗೆ ಆತನ ಬೆವರಿಗೆ ತಕ್ಕ ಬೆಲೆ ಸಿಗುತ್ತಿಲ್ಲ , ಅವನೇನು ಮಾಡುತ್ತಿದ್ದಾನೆ ಗೊತ್ತೇ ? ರಾಗಿ , ಹುರುಳಿ ಎಲ್ಲವನ್ನೂ ತಂದು ರಸ್ತೆಗೆ ಹಾಕುತ್ತಾನೆ , ಅದರ ಮೇಲೆ ಲಾರಿ ಬಸ್ಸು ಕಾರುಗಳು ಸಾಗುತ್ತವೆ , ಅವುಗಳ ಚಕ್ರದಲಿದ್ದ ಎಲ್ಲಾ ಹೊಲಸು ತಿನ್ನುವ ಕಾಳಿಗೂ ವರ್ಗಾವಣೆಯಾಗುತ್ತದೆ. ಅವನೇನು ಮಾಡಿಯಾನು ? ಕೆಲಸಕ್ಕೆ ಜನ ಸಿಕ್ಕುವುದಿಲ್ಲವಲ್ಲ !!
ಮುಂದೊಂದು ದಿನ ಬೆಳಿಗ್ಗೆ ಸಂಡಾಸಿಗೆ ಹೋಗಿ ನಂತರ ತೊಳೆಯಲು ನೀರಿಲ್ಲದ ಸಮಯ ಬರವರೆಗೂ ಕಾಯಬೇಕೆ ? ಇಂಟರ್ನೆಟ್ ಇಲ್ಲದೆ , ಸ್ಯಾಟಲೈಟ್ ಹ್ಯಾಕ್ ಆಗಿ ಇಡೀ ಪ್ರಪಂಚ ನಿಲ್ಲುವವರೆಗೆ ಕಾಯಬೇಕೆ ?
ಚಿತ್ರದಲ್ಲಿ ಹಬ್ಬ ಅಂತ ನಾವು ಕುಳಿತರೆ ನೀವು ಹೊಟ್ಟೆಗೇನು ತಿಂದೀರಿ ? ಎನ್ನುವ ರೈತರನ್ನ ಕಾಣಬಹುದು. ಇಂದು ಬೆಳಿಗ್ಗೆ ಮೈಸೂರಿನ ಸಮೀಪದಲ್ಲಿ ತೆಗೆದದ್ದು. ನಿಮ್ಮ ಬಳಿ ಹಣವೇನೋ ಹೇರಳವಾಗಿದೆ , ಆದರೆ ಅದನ್ನ ನೀಡಿ ಖರೀದಿಸಲು ಧವಸಗಳೇ ಸಿಗದಿದ್ದರೆ ? ಮತ್ತೊಮ್ಮೆ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
- ಬರಹ: ರಂಗಸ್ವಾಮಿ ಮೂಕನಹಳ್ಳಿ
ಇವರ ಪೋಸ್ಟ್‌ಗೆ ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಕೃಷಿಯ ಅಂತಿಮ ಗುರಿ ಬೆಳೆಗಳ ಬೆಳವಣಿಗೆಯಲ್ಲ, ಆದರೆ ಮಾನವನ ಕೃಷಿ ಮತ್ತು ಪರಿಪೂರ್ಣತೆ" "ನಾನು ನೋಡಿದ ಮಟ್ಟಿಗೆ ಊರಿನಲ್ಲಿ 12 ಎಕರೆ ಇದ್ದವರು ಬೆಂಗಳೂರಿನಲ್ಲಿ 20,000 ಸಂಬಳಕ್ಕೆ ಹೋಗಿದ್ದಾರೆ" "ಸಾರ್ ನಾವು ಚಿಕ್ಕವರಿದ್ದಾಗ ನಮ್ಮ ಹೊಲದಲ್ಲಿ ರಾಗಿ ಕಳ ಮಾಡಿ , ಸಗಣಿ ಹಾಕಿ ತಾರಿಸಿ ಪೂಜೆ ಮಾಡಿ ರೂಣ್ಕಲ್ಲಿನಲ್ಲಿ ಒಕ್ಕಣೆ ಮಾಡುತ್ತಾ ಇದ್ವು ಪಕ್ಕದಲ್ಲಿ ಒಂದೂ ಸಣ್ಣ ಗುಡಿಸಲು ಹಾಕುತ್ತಿದ್ದರು ನಮ್ಮ ತಂದೆ ಮತ್ತು ತಾತ, ನಾವು ಶಾಲೆ ಮುಗಿಸಿ ಹೋಗಿ, ಗುಡಿಸಲಿನಲ್ಲಿ ಮಲಗುವುದು, ಅವ್ವ ತಂದಿದ್ದಿದ್ದ ಉಪಸಾರು ಮುದ್ದೆ ಮಜ್ಜಿಗೆ ಊಟ, ಸಂಜೆ ಅಲ್ಲಿ ಕಾಯಿಸಿದ ಟೀ, ರಾತ್ರಿ ಆ ಗುಡಿಸಲಲ್ಲಿ ಮಲಗುವುದು ಸ್ವರ್ಗ, ಆ ಹುಣ್ಣಿಮೆ ಬೆಳಕು ನಕ್ಷತ್ರಗಳ ರಾಶಿ, ಮತ್ತೆ ಒಂದು ಕಡೆ ರಾಗಿ, ಜೋಳ ಮತ್ತು ಒಕ್ಕಣೆ ಮಾಡಿದ ಹುಲ್ಲಿನ ರಾಶಿ, ಅದುವೇ ನಮಗೆ ಹಾಸಿಗೆ ಆಟ ಆಡಲು ಖುಷಿ,ಕೊನೆಯಲ್ಲಿ ಬೆಲ್ಲದನ್ನ ಮಾಡಿ ಪೂಜೆ ಮಾಡಿ ಗೆಳೆಯರ ಜೊತೆ ಕಳದಲ್ಲಿ ಕೂತು ಊಟ ಮಾಡುವುದು, ಬೆಲ್ಲದ ಅನ್ನದ ಜೋತೆ ತೆಂಗಿನ ಕಾಯಿ ತಿನ್ನುವದು ಸ್ವರ್ಗ, ನಂತರ ನಾವು ಬೆಳದ ರಾಗಿಯನ್ನು ಹೊಲಗದ್ದೆ ಯಜಮಾನ್ರು ಅರ್ದ ಪಾಲು ಕೊಡುವುದು , ನನಗೆ ದುಖಃ ತಂದಂತಹ ಸಂಗತಿ, ನಂತರ ಮನೆಗೆ ಗಾಡಿಯಲ್ಲಿ ತಂದು ಹಾಕಿತಿದ್ದ ನೆನಪು ,ಇದೆಲ್ಲಾ ಮಾಯವಾಗಿದೆ ಇವಾಗ, ನೀವು ಹೇಳಿದಾಗೆ ಮೊನ್ನೆ ಊರಿಗೆ ಹೋಗಿದ್ದಾಗ ನಾನು ನನ್ನ ಗಾಡಿಯಲ್ಲಿ ಆಯತಪ್ಪಿ ರಾಗಿಮೇಲೆ ಜಾರಿ ಬಿದ್ದೆ, ಎದ್ದು ನಮ್ಮ ಊರಿನವರಿಗೆ ಹೇಳಿದೆ ಆದರೆ ಅದನ್ನೂ ಕೇಳುವ ಪರಿಸ್ಥಿತಿ ಇರಲಿಲ್ಲ" ಎಂದು ಸಾಕಷ್ಟು ಜನರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
