ಆರೋಗ್ಯಕರ ದೇಹಕ್ಕಾಗಿ ಸರ್ಕಸ್ ಮಾಡಬೇಕಿಲ್ಲ; ಖಾಲಿ ಹೊಟ್ಟೆಗೆ ಅರಿಶಿನ ನೀರು ಕುಡಿದರೆ ಸಾಕು, ಆರೋಗ್ಯ ಭಾಗ್ಯ ನಿಮ್ಮದು
ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯಕರ ದೇಹಕ್ಕಾಗಿ ಸರ್ಕಸ್ ಮಾಡಬೇಕಿಲ್ಲ; ಖಾಲಿ ಹೊಟ್ಟೆಗೆ ಅರಿಶಿನ ನೀರು ಕುಡಿದರೆ ಸಾಕು, ಆರೋಗ್ಯ ಭಾಗ್ಯ ನಿಮ್ಮದು

ಆರೋಗ್ಯಕರ ದೇಹಕ್ಕಾಗಿ ಸರ್ಕಸ್ ಮಾಡಬೇಕಿಲ್ಲ; ಖಾಲಿ ಹೊಟ್ಟೆಗೆ ಅರಿಶಿನ ನೀರು ಕುಡಿದರೆ ಸಾಕು, ಆರೋಗ್ಯ ಭಾಗ್ಯ ನಿಮ್ಮದು

ಆರೋಗ್ಯವಾಗಿರಬೇಕೆಂದರೆ ನಿತ್ಯವೂ ಆರೋಗ್ಯಕರ ಆಹಾರ ಸೇವಿಸಬೇಕು. ದೈಹಿಕ ಯೋಗಕ್ಷೇಮಕ್ಕಾಗಿ ನಿತ್ಯ ಕಠಿಣ ಶ್ರಮ ಬೇಕಿಲ್ಲ. ಕೆಲವೊಂದು ಸರಳ ವಿಧಾನದ ಮೂಲಕ ಆರೋಗ್ಯ ಕಾಪಾಡಬಹುದು. ಇದಕ್ಕೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಸೇವನೆ ಶಕ್ತಿಯುತ ವಿಧಾನ.

ಖಾಲಿ ಹೊಟ್ಟೆಗೆ ಅರಿಶಿನ ನೀರು ಕುಡಿದರೆ ಸಾಕು, ಆರೋಗ್ಯ ಭಾಗ್ಯ ನಿಮ್ಮದು
ಖಾಲಿ ಹೊಟ್ಟೆಗೆ ಅರಿಶಿನ ನೀರು ಕುಡಿದರೆ ಸಾಕು, ಆರೋಗ್ಯ ಭಾಗ್ಯ ನಿಮ್ಮದು (pexel)

ಭಾರತೀಯ ಸಾಂಪ್ರದಾಯಿಕ ಪಾಕಪದ್ಧತಿಯಲ್ಲಿ ನಿತ್ಯವೂ ಅಡುಗೆಗೆ ಅರಿಶಿನ ಬಳಸಲಾಗುತ್ತದೆ. ಇದರಲ್ಲಿರುವ ಹಲವು ಔಷಧಿಯ ಗುಣಗಳಿಂದಾಗಿ ಸಸ್ಯಹಾರಿ ಮಾತ್ರವಲ್ಲದೆ ಮಾಂಸಹಾರಿ ಅಡುಗೆಗಳಲ್ಲೂ ಹಳದಿ ಪುಡಿ ಬಳಕೆಯಾಗುತ್ತದೆ. ಅಡುಗೆ ಮಾತ್ರವಲ್ಲದೆ ಹಲವು ಬಾಗೆಯ ನಾಟಿ ಔಷಧಿಗಳಿಗೆ ಅರಿಶಿನ ಪುಡಿ ಅಥವಾ ಕೊಂಬು ಬಳಸಲಾಗುತ್ತದೆ. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿರುವ ಅರಿಶಿನ, ಅಜ್ಜಿ ಮಾಡುವ ಅಡುಗೆಯ ರುಚಿ ಹೆಚ್ಚಿಸುತ್ತದೆ. ಭಾರತೀಯ ಅಡುಗೆ ಮನೆಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಇದು, ಅಡುಗೆ ರುಚಿ ಹೆಚ್ಚಿಸುವುದಲ್ಲದೆ ಬಣ್ಣವನ್ನೂ ಕೊಡುತ್ತದೆ. ಅಡುಗೆಗೆ ಬಳಸುವುದು ಒಂದೆಡೆಯಾದರೆ, ಖಾಲಿ ಹೊಟ್ಟೆಗೂ ಅರಿಶಿನವನ್ನು ದೇಹಕ್ಕೆ ಸೇರಿಸಬಹುದು. ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಹಳದಿ ನೀರು ಸೇವಿಸಿ ದಿನಚರಿ ಆರಂಭಿಸುವುದರಿಂದ ಒಟ್ಟಾರೆ ಆರೋಗ್ಯ ಸುಧಾರಣೆಯಾಗುತ್ತದೆ.

ಆರೋಗ್ಯವಾಗಿರುವುದು ಒಂದು ಅಥವಾ ಎರಡು ದಿನಕ್ಕೆ ಸೀಮಿತವಲ್ಲ. ನಿತ್ಯವೂ ಆರೋಗ್ಯಕರ ದೇಹ ನಮ್ಮದಾಗಬೇಕು. ದೈಹಿಕ ಯೋಗಕ್ಷೇಮಕ್ಕಾಗಿ ಕಠಿಣ ಶ್ರಮ ಬೇಕಿಲ್ಲ. ನಿತ್ಯವೂ ಕೆಲವೊಂದು ಸರಳ ವಿಧಾನ ಅನುಸರಿಸುವ ಮೂಲಕ ಆರೋಗ್ಯ ಕಾಪಾಡಬಹುದು. ಇದಕ್ಕೆ ಅರಿಶಿನ ನೀರು ಶಕ್ತಿಯುತ ವಿಧಾನವಾಗಿದೆ. ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ ಸ್ವಲ್ಪ ಅರಶಿನ ಬೆರೆಸಿ ಕುಡಿದರೆ, ಹಲವು ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ.

ಜೀರ್ಣಕ್ರಿಯೆ ಸುಧಾರಣೆ

ಅರಿಶಿನದಲ್ಲಿ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿರುವ ಕರ್ಕ್ಯುಮಿನ್ ಇದೆ. ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಕುಡಿಯುವುದರಿಂದ ಪಿತ್ತಕೋಶದಲ್ಲಿ ಪಿತ್ತರಸದ ಉತ್ಪಾದನೆಗೆ ಉತ್ತೇಜನ ಸಿಗುತ್ತದೆ. ಆ ಮೂಲಕ ನೀವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ

ಪ್ರತಿರಕ್ಷಣೆ ಉತ್ತೇಜಿಸುವ ಅರಿಶಿನದ ಗುಣಲಕ್ಷಣಗಳು ಸೋಂಕು ಮತ್ತು ಅನಾರೋಗ್ಯದ ವಿರುದ್ಧ ದೇಹದ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಕೀಲು ನೋವು ನಿವಾರಿಸುತ್ತದೆ

ಇದರಲ್ಲಿರುವ ಕರ್ಕ್ಯುಮಿನ್‌ ಅಂಶದ ಉರಿಯೂತದ ಗುಣವು ಸಂಧಿವಾತದಂಥ ಪರಿಸ್ಥಿತಿಗಳಿಗೆ ಸಂಬಂಧಿಸಿದ ಕೀಲು ನೋವು ಮತ್ತು ಬಿಗಿತ ನಿವಾರಿಸಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಸೇವಿಸುವುದರಿಂದ ಅಸ್ವಸ್ಥತೆಗೆ ಪರಿಹಾರ ಸಿಗುತ್ತದೆ.

ಉರಿಯೂತ ಕಡಿಮೆ ಮಾಡುತ್ತದೆ

ದೀರ್ಘಕಾಲದ ಉರಿಯೂತವು ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ದೇಹದಲ್ಲಿನ ಉರಿಯೂತದ ಮಾರ್ಗಗಳನ್ನು ಪ್ರತಿಬಂಧಿಸುತ್ತದೆ. ಅರಿಶಿನ ನೀರಿನಿಂದ ದಿನಚರಿ ಆರಂಭಿಸುವುದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ಕಳೆದುಕೊಳ್ಳು ನೆರವು

ಚಯಾಪಚಯ ಪ್ರಕ್ರಿ‌ಯೆ ಸುಧಾರಿಸಲು ಅರಿಶಿನ ಸಹಕಾರಿ. ಕರ್ಕ್ಯುಮಿನ್ ಅಂಶವು ತೂಕ ನಷ್ಟ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಒಂದು ಲೋಟ ಅರಿಶಿನ ನೀರಿನಿಂದ ದಿನವನ್ನು ಆರಂಭಿಸುವುದು ಮತ್ತು ನಿಯಮಿತ ವ್ಯಾಯಾಮ ಮಾಡುವ ಮೂಲಕ ತೂಕ ನಷ್ಟ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ.

ಯಕೃತ್ತಿನ ಕಾರ್ಯಕ್ಕೆ ಬೆಂಬಲ

ಅರಿಶಿನವು ಹೆಪಟೊಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದು ಯಕೃತ್ತನ್ನು ಹಾನಿಯಿಂದ ರಕ್ಷಿಸಲು ಮತ್ತು ಅದರ ಒಟ್ಟಾರೆ ಕಾರ್ಯವನ್ನು ಬೆಂಬಲಿಸುತ್ತದೆ. ಅಲ್ಲದೆ, ಅರಿಶಿನ ನೀರನ್ನು ಕುಡಿಯುವುದರಿಂದ ಇದರಲ್ಲಿರುವ ನಿರ್ವಿಶೀಕರಣ ಪ್ರಕ್ರಿಯೆ ಹೆಚ್ಚಾಗುತ್ತದೆ.

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ

ಅರಿಶಿನವು ಚರ್ಮ ಪೋಷಿಸುವ ಗುಣ ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಸೇವಿಸುವ ಮೂಲಕ, ದೇಹದ ಒಳಗಿನಿಂದ ಆರೋಗ್ಯಕರ ಚರ್ಮವನ್ನು ಉತ್ತೇಜಿಸಬಲ್ಲದು. ಇದು ಮೊಡವೆಗಳನ್ನು ಕಡಿಮೆ ಮಾಡಲು, ಮೈಬಣ್ಣಕ್ಕೆ ಹೊಳಪು ತುಂಬಲ ನೆರವಾಗುತ್ತದೆ.

Whats_app_banner