ಕಡಿಮೆ ನೀರು ಕುಡಿದರೆ ಕಿಡ್ನಿ ಸ್ಟೋನ್ ಆಗುತ್ತಾ; ಮೂತ್ರಪಿಂಡದ ಆರೋಗ್ಯಕ್ಕೆ ದ್ರವಾಹಾರ ಸೇವನೆ ಎಷ್ಟು ಮುಖ್ಯ?
ಪ್ರತಿನಿತ್ಯ ಸಾಕಷ್ಟು ಪ್ರಮಾಣದ ನೀರು ಕುಡಿಯಬೇಕು ಎಂದು ಹೇಳುವುದುನ್ನು ಕೇಳಿದ್ದೇವೆ. ಇಲ್ಲದಿದ್ದರೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದು ಮುಂದೆ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಿಸುತ್ತದೆ. ಹೆಚ್ಚು ದ್ರವಾಹಾರ ಸೇವನೆಯಿಂದ ಕಿಡ್ನಿ ಸ್ಟೋನ್ ಕಡಿಮೆಯಾಗುವುದು ನಿಜವಾ? ತಿಳಿಯೋಣ ಬನ್ನಿ.

ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಹೊಂದಿರುವ ಜನರ ಸಂಖ್ಯೆ ದೊಡ್ಡದಿದೆ. ಇದಕ್ಕೆ ನೀರಿನ ಕೊರತೆಯಿಂದಾಗುವ ನಿರ್ಜಲೀಕರಣ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ದ್ರವ ರೂಪದ ಆಹಾರ ಸಿಗದಿದ್ದಾಗ ವ್ಯಕ್ತಿಯು ನಿರ್ಜಲೀಕರಣಕ್ಕೊಳಗಾಗುತ್ತಾನೆ. ಆಗ ದೇಹದ ನಿಯಮಿತ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯ ಪ್ರಮಾಣದ ದ್ರವ ಸಿಗುವುದಿಲ್ಲ. ಈ ದ್ರವದ ಕೊರತೆಯಿಂದಾಗಿ ಮೂತ್ರಪಿಂಡದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಮೂತ್ರಪಿಂಡಕ್ಕೆ ರಕ್ತದ ಹರಿವು ಕಡಿಮೆಯಾಗುವುದು, ಮೂತ್ರಪಿಂಡದ ಕಲ್ಲಿನ ಅಪಾಯ, ಮೂತ್ರಪಿಂಡದ ಗಾಯ ಸೇರಿದಂತೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ನಿರ್ಜಲೀಕರಣದಿಂದಾಗಿ ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆ ಅಪಾಯ ಹೆಚ್ಚು. ದೇಹಕ್ಕೆ ಅಗತ್ಯ ಪ್ರಮಾಣದ ದ್ರವಾಹಾರ ಸಿಗದಿದ್ದಾಗ, ಮೂತ್ರದಲ್ಲಿ ಖನಿಜಗಳು ಮತ್ತು ಲವಣಗಳ ಸಾಂದ್ರತೆ ಹೆಚ್ಚಾಗುತ್ತದೆ. ಇದು ಕಲ್ಲುಗಳ ರಚನೆಯನ್ನು ಉತ್ತೇಜಿಸುವ ವಾತಾವರಣ ಸೃಷ್ಟಿಸುತ್ತದೆ. ಕ್ರಮೇಣ ಭಾರಿ ನೋವು ಉಂಟು ಮಾಡುವ ಕಲ್ಲುಗಳು ಕಿಡ್ನಿಯಲ್ಲಿ ಕಾಣಿಸಿಕೊಳ್ಳಬಹುದು.
ವೈದ್ಯರ ಪ್ರಕಾರ, ಮೂತ್ರಪಿಂಡದೊಳಗೆ ಸಂಗ್ರಹವಾಗುವ ಖನಿಜಗಳು ಮತ್ತು ಲವಣಗಳ ಗಟ್ಟಿ ಅಂಶಗಳನ್ನು ಮೂತ್ರಪಿಂಡದ ಕಲ್ಲು ಎಂದು ಹೇಳಲಾಗುತ್ತದೆ. ಇದು ಸಣ್ಣ ಮರಳಿನ ಗಾತ್ರದಿಂದ ಹಿಡಿದು ಗಾಲ್ಫ್ ಚೆಂಡುಗಳವರೆಗೂ ಬೆಳೆಯುತ್ತದೆ. ಮೂತ್ರದ ಸಾಂದ್ರತೆ ಹೆಚ್ಚಿನ ಮಟ್ಟ ತಲುಪಿದಾಗ ಕಲ್ಲಿನ ರಚನೆ ಆರಂಭವಾಗುತ್ತದೆ. ಸಾಕಷ್ಟು ನೀರಿನ ಕೊರತೆಯಿಂದಾಗಿ ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಮ್ಲದಂತಹ ಖನಿಜಗಳು ಗಟ್ಟಿಯಾಗಿ ಒಟ್ಟಿಗೆ ಸೇರಿಕೊಂಡು ಕಲ್ಲುಗಳ ರಚನೆಗೆ ಕಾರಣವಾಗುತ್ತದೆ.
ದೇಹಕ್ಕೆ ಅಗತ್ಯ ಪ್ರಮಾಣದ ನೀರು ಸಿಗದಿದ್ದಾಗ ಮೂತ್ರದ ಉತ್ಪಾದನೆ ಕೂಡಾ ಸಹಜವಾಗಿ ಕಡಿಮೆಯಾಗುತ್ತದೆ. ಆಗ ಮೂತ್ರ ವಿಸರ್ಜನೆಗೂ ಕಷ್ಟವಾಗುತ್ತದೆ. ಈ ಅಲ್ಪ ಪ್ರಮಾಣದ ಮೂತ್ರದಲ್ಲಿ ಆಕ್ಸಲೇಟ್ ಮತ್ತು ಯೂರಿಕ್ ಆಮ್ಲದಂತಹ ಖನಿಜಗಳು ಮತ್ತು ಲವಣಗಳು ಅಧಿಕವಿರುತ್ತದೆ. ನಿಧಾನವಾಗಿ ಇದು ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ. ಆರಂಭದಲ್ಲಿ ಮರಳಿನ ಗಾತ್ರದ ಸಣ್ಣ ಹರಳುಗಳಾಗಿ ಆರಂಭವಾಗಿ ನಿಧಾನಕ್ಕೆ ಅದರ ಗಾತ್ರ ದೊಡ್ಡದಾಗಬಹುದು.
ಹೆಚ್ಚು ನೀರು ಕುಡಿದರೆ ಏನಾಗುತ್ತದೆ?
ಕಿಡ್ನಿ ಸ್ಟೋನ್‌ನ ಆರಂಭಿಕ ಅಪಾಯ ತಿಳಿದುಬಂದಾಗಲೇ ದೇಹವನ್ನು ಹೈಡ್ರೀಕರಿಸಬೇಕು. ಹೆಚ್ಚು ನೀರು ದೇಹ ಸೇರಿದಾಗ ಮೂತ್ರದಲ್ಲಿ ಇರುವ ಖನಿಜಗಳು ಮತ್ತು ಲವಣಗಳನ್ನು ಅದು ದುರ್ಬಲಗೊಳಿಸುತ್ತದೆ. ಆಗ ಕಲ್ಲಿನ ರಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ದಿನವಿಡೀ ಸಾಕಷ್ಟು ನೀರು ಕುಡಿಯುವುದು ದ್ರವಾಹಾರ ಸೇವನೆ ಮಾಡುವುದು ತುಂಬಾ ಮುಖ್ಯ.
ಬೇಸಿಗೆಯಲ್ಲಿ ದೇಹದ ನೀರು ಹೆಚ್ಚಾಗಿ ಬೆವರಿನ ಮೂಲಕ ಹೊರಹೋಗುತ್ತದೆ. ಅದರಲ್ಲೂ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾದರೆ ಕೇಳುವುದೇ ಬೇಡ. ಈ ಸಮಯದಲ್ಲಿ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹೆಚ್ಚು ನೀರು ಕುಡಿಯುವುದು ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಕಿಡ್ನಿಯ ಪ್ರಾಥಮಿಕ ಕಾರ್ಯವೆಂದರೆ, ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ವಸ್ತುಗಳನ್ನು ಫಿಲ್ಟರ್ ಮಾಡುವುದು. ನಿರ್ಜಲೀಕರಣಗೊಂಡಾಗ ದೇಹವು ಕಡಿಮೆ ಮೂತ್ರವನ್ನು ಮತ್ತು ಹೆಚ್ಚು ಕೇಂದ್ರೀಕೃತ ಮೂತ್ರವನ್ನು ಉತ್ಪಾದಿಸುತ್ತದೆ. ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ಆಯಾಸ ಹಾಗೂ ಗಾಢ ಹಳದಿ ಬಣ್ಣದ ಮೂತ್ರವು ನಿರ್ಜಲೀಕರಣದ ಆರಂಭಿಕ ಲಕ್ಷಣ.
ಕಿಡ್ನಿ ಸ್ಟೋನ್ ಚಿಕಿತ್ಸೆ ಹೇಗೆ ?
ಕಿಡ್ನಿ ಸ್ಟೋನ್‌ಗೆ ಚಿಕಿತ್ಸೆಗಳಿವೆ. ಕಲ್ಲಿನ ಗಾತ್ರ ಮತ್ತು ಪ್ರಕಾರವನ್ನು ಅವಲಂಬಿಸಿ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ನೈಸರ್ಗಿಕವಾಗಿ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಬಹುದು. ಯಥೇಚ್ಛವಾಗಿ ನೀರು ಕುಡಿದರೆ ಮೂತ್ರ ವಿಸರ್ಜನೆಯೊಂದಿಗೆ ಕಲ್ಲು ಹೊರಬರುತ್ತದೆ. ಸಾಕಷ್ಟು ನೀರು ಕುಡಿಯುವ ಮೂಲಕವೇ ಇದನ್ನು ಸಾಧ್ಯವಾಗಿಸಬಹುದು. ಆದರೆ ದೊಡ್ಡ ಕಲ್ಲುಗಳಾದರೆ ವೈದ್ಯರ ಸಹಾಯ ಬೇಕಾಗುತ್ತದೆ.
ಇನ್ನಷ್ಟು ಆರೋಗ್ಯ ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಭಾಗ