ವಿಪರೀತ ಕರಣಿ ಯೋಗಾಸನ ಅಭ್ಯಾಸ ಮಾಡುವುದು ಹೇಗೆ, ಇದರ ಪ್ರಯೋಜನಗಳು-ಅಡ್ಡಪರಿಣಾಮಗಳೇನು: ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಿಪರೀತ ಕರಣಿ ಯೋಗಾಸನ ಅಭ್ಯಾಸ ಮಾಡುವುದು ಹೇಗೆ, ಇದರ ಪ್ರಯೋಜನಗಳು-ಅಡ್ಡಪರಿಣಾಮಗಳೇನು: ಇಲ್ಲಿದೆ ಮಾಹಿತಿ

ವಿಪರೀತ ಕರಣಿ ಯೋಗಾಸನ ಅಭ್ಯಾಸ ಮಾಡುವುದು ಹೇಗೆ, ಇದರ ಪ್ರಯೋಜನಗಳು-ಅಡ್ಡಪರಿಣಾಮಗಳೇನು: ಇಲ್ಲಿದೆ ಮಾಹಿತಿ

ಉತ್ತಮ ಆರೋಗ್ಯಕ್ಕಾಗಿ ಯೋಗಾಸನ ಮಾಡುವುದು ಅತ್ಯವಶ್ಯ. ದೈನಂದಿನ ಜೀವನದ ಜಂಜಾಟ, ಒತ್ತಡವನ್ನು ನಿಯಂತ್ರಿಸಲು ಯೋಗ ಸಹಕಾರಿ. ಯೋಗಾಸನಗಳಲ್ಲಿ ಹಲವಾರು ಭಂಗಿಗಳಿದ್ದು, ಪ್ರತಿಯೊಂದು ಆಸನಗಳು ಮಹತ್ವ ಪಡೆದಿದೆ. ಅವುಗಳಲ್ಲಿ ವಿಪರೀತ ಕರಣಿ ಆಸನವೂ ಒಂದಾಗಿದ್ದು, ಇದರ ಪ್ರಯೋಜನಗಳು, ಅಡ್ಡಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ. (ಬರಹ:ಪ್ರಿಯಾಂಕ ಪಿ.)

ವಿಪರೀತ ಕರಣಿ ಯೋಗಾಸನ ಅಭ್ಯಾಸ ಮಾಡುವುದು ಹೇಗೆ, ಇದರ ಪ್ರಯೋಜನಗಳು-ಅಡ್ಡಪರಿಣಾಮಗಳೇನು: ಇಲ್ಲಿದೆ ಮಾಹಿತಿ
ವಿಪರೀತ ಕರಣಿ ಯೋಗಾಸನ ಅಭ್ಯಾಸ ಮಾಡುವುದು ಹೇಗೆ, ಇದರ ಪ್ರಯೋಜನಗಳು-ಅಡ್ಡಪರಿಣಾಮಗಳೇನು: ಇಲ್ಲಿದೆ ಮಾಹಿತಿ

ದೇಹವನ್ನು ಫಿಟ್ ಆಗಿರಿಸಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಯೋಗಾಸನವನ್ನು ಅಭ್ಯಾಸ ಮಾಡಿದರೆ ಒಳಿತು. ಒತ್ತಡವನ್ನು ನಿಭಾಯಿಸಲು ಕೂಡ ಯೋಗಾಸನ ಅತ್ಯುತ್ತಮ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಯೋಗಾಸನದಲ್ಲಿ ಹಲವಾರು ಭಂಗಿಗಳಿದ್ದು, ಪ್ರತಿಯೊಂದು ಆಸನಗಳು ಪ್ರಾಮುಖ್ಯತೆ ಪಡೆದಿವೆ. ಅವುಗಳಲ್ಲಿ ವಿಪರೀತ ಕರಣಿ ಆಸನವೂ ಒಂದು. ಇಂದಿನ ದಿನಗಳಲ್ಲಿ ಬಹುತೇಕರ ಬದುಕು ಒತ್ತಡದಿಂದ ಕೂಡಿರುವುದರಿಂದ ಈ ಆಸನವನ್ನು ಪ್ರಯತ್ನಿಸಬಹುದು. ಇದರಿಂದ ದೇಹ, ಮನಸ್ಸಿಗೆ ವಿಶ್ರಾಂತಿ ದೊರಕುತ್ತದೆ.

ವಿಪರೀತ ಕರಣಿ ಆಸನವನ್ನು ಅಭ್ಯಾಸ ಮಾಡುವುದರಿಂದ ದೇಹದ ಶಕ್ತಿ ಮತ್ತು ಸಮತೋಲನವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯೂ ಹೆಚ್ಚಳವಾಗಲು ಈ ಆಸನವನ್ನು ಪ್ರಯತ್ನಿಸಬಹುದು. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಚೇರಿ ಕೆಲಸ, ಮನೆ ನಿಭಾಯಿಸುವುದು ಇತ್ಯಾದಿಗಳಿಂದ ನಿದ್ದೆಯ ಕೊರತೆ ಉಂಟಾಗುತ್ತಿದೆ. ಮಲಗುವಾಗ ಮೊಬೈಲ್ ನೋಡುತ್ತಾ ನಿದ್ದೆ ಮಾಡುವುದರಿಂದಲೂ ಬೇಗನೆ ನಿದ್ದೆ ಬರುವುದಿಲ್ಲ. ಹೀಗಾಗಿ ಈ ಆಸನವನ್ನು ಪ್ರಯತ್ನಿಸುವುದರಿಂದ ನಿದ್ದೆಯ ಸಮಸ್ಯೆ ದೂರವಾಗುತ್ತದೆ. ಈ ಆಸನವನ್ನು ಮಾಡುವುದು ಹೇಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ:

ವಿಪರೀತ ಕರಣಿ ಎಂದರೇನು?

ವಿಪರೀತ ಕರಣಿ ಆಸನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ: ‘ವಿಪರಿತ’ ಎಂದರೆ ಹಿಮ್ಮುಖವಾಗಿ ಅಥವಾ ತಲೆಕೆಳಗಾದ ಎಂಬರ್ಥವಿದ್ದರೆ, ‘ಕರಣಿ’ ಎಂದರೆ ಮಾಡುವುದು ಅಥವಾ ಕ್ರಿಯೆ ಹಾಗೂ ‘ಆಸನ’ ಎಂದರೆ ಭಂಗಿ ಎಂದರ್ಥ. ಇದು ಸರಳ ಆಸನವಾಗಿದ್ದು, ನಿಮ್ಮ ಕಾಲುಗಳನ್ನು ಗೋಡೆಯ ಕಡೆಗೆ ಮೇಲಕ್ಕೆತ್ತಬೇಕು. ಈ ಆಸನವನ್ನು ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ನಿಮ್ಮ ರಕ್ತಪರಿಚಲನೆಯನ್ನು ಸುಧಾರಿಸುವುದಲ್ಲದೆ ವಿಶ್ರಾಂತಿ ಪಡೆಯಲು ಉಪಯುಕ್ತವಾಗಿದೆ.

ವಿಪರೀತ ಕರಣಿ ಆಸನದ ಪ್ರಯೋಜನಗಳು

ಒತ್ತಡವನ್ನು ದೂರ ಮಾಡುತ್ತದೆ: ನಿಯಮಿತ ಯೋಗಾಸನ ಮಾಡುವುದರಿಂದ ಗಮನವನ್ನು ಹೆಚ್ಚಿಸುತ್ತದೆ. ಹಾಗೆಯೇ ದೈನಂದಿನ ಬದುಕಿನ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದಲ್ಲದೆ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸಿ, ಆಹಾರವನ್ನು ಜೀರ್ಣಿಸಿಕೊಳ್ಳಲು ಈ ಯೋಗಾಸನವನ್ನು ಬಹಳ ಉಪಯುಕ್ತವಾಗಿದೆ. ಈ ಭಂಗಿಯು ಸ್ನಾಯುವಿನ ಒತ್ತಡ, ತಲೆನೋವು ಮತ್ತು ಆಯಾಸವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.

ರಕ್ತ ಪರಿಚಲನೆ ಸುಧಾರಿಸಲು ಸಹಕಾರಿ: ಈ ಭಂಗಿಯನ್ನು ಅಭ್ಯಾಸ ಮಾಡುವುದರಿಂದ ಕಾಲುಗಳು ಮತ್ತು ಪಾದಗಳಿಂದ ಹೃದಯದ ಕಡೆಗೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಇದು ಊತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.ದೀರ್ಘಕಾಲದವರೆಗೆ ಕುಳಿತು ಅಥವಾ ನಿಂತು ಕೆಲಸ ಮಾಡುವ ಜನರಿಗೆ ಇದು ವಿಶೇಷವಾಗಿ ಸಹಾಯಕವಾಗಬಹುದು.

ಬೆನ್ನು ನೋವನ್ನು ಕಡಿಮೆ ಮಾಡಲು ಸಹಕಾರಿ: ಯೋಗದ ನಿಯಮಿತ ಅಭ್ಯಾಸವು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಭಂಗಿಯನ್ನು ಪ್ರಯತ್ನಿಸಬಹುದು. ಈ ಭಂಗಿಯು ಕೆಳ ಬೆನ್ನನ್ನು ನಿಧಾನವಾಗಿ ಹಿಗ್ಗಿಸುತ್ತದೆ. ಅಲ್ಲದೆ, ಸೊಂಟದ ಬೆನ್ನುಮೂಳೆಯಲ್ಲಿನ ಒತ್ತಡ ಮತ್ತು ನೋವನ್ನು ನಿವಾರಿಸುತ್ತದೆ.

ಸಮತೋಲನವನ್ನು ಸುಧಾರಿಸಲು ಸಹಕಾರಿ: ನಿಯಮಿತ ಯೋಗಾಭ್ಯಾಸವು ನಮ್ಯತೆ ಮತ್ತು ಸಮತೋಲನವನ್ನು ಸುಧಾರಿಸಬಹುದು. ದೇಹದ ಕೆಳಭಾಗದಲ್ಲಿ ನಮ್ಯತೆಯನ್ನು ಸುಧಾರಿಸುತ್ತದೆ. ಕಠಿಣಕರ ಯೋಗಾಸನವನ್ನು ಪ್ರಯತ್ನಿಸುವ ಮುನ್ನ ವಿಪರೀತ ಕರಣಿಯನ್ನು ಅಭ್ಯಾಸ ಮಾಡಬಹುದು. ಬಳಿಕ ಕಠಿಣ ತಾಲೀಮು ಮಾಡಬಹುದು.

ನಿದ್ದೆಯ ಸಮಸ್ಯೆ ನಿವಾರಿಸಲು ಸಹಕಾರಿ: ಇಂದಿನ ದೈನಂದಿನ ಜೀವನದ ಹೋರಾಟದಲ್ಲಿ ಮನಶ್ಶಾಂತಿ ಮತ್ತು ನಿದ್ದೆಗೆ ಭಂಗವಾಗುತ್ತಿದೆ. ಇದಕ್ಕಾಗಿ ಪ್ರತಿದಿನ ಈ ಆಸನವನ್ನು ಅಭ್ಯಾಸ ಮಾಡುವುದರಿಂದ ನಿದ್ದೆಯ ಸಮಸ್ಯೆ ದೂರವಾಗಲು ಸಹಕಾರಿಯಾಗುತ್ತದೆ. ಶಾಂತಿಯುತವಾಗಿ ನಿದ್ದೆ ಮಾಡಲು ಈ ಆಸನವು ಸಹಕಾರಿಯಾಗಿದೆ. ಯೋಗವು ನಿದ್ದೆಯ ವಿಳಂಬವನ್ನು ಕಡಿಮೆ ಮಾಡಲು, ನಿದ್ದೆಯ ಅವಧಿ ಹೆಚ್ಚಿಸಲು ಮತ್ತು ನಿದ್ದೆಯ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಅಧ್ಯಯನವೊಂದರ ಪ್ರಕಾರ ತಿಳಿದುಬಂದಿದೆ. ವಿಶ್ರಾಂತಿಯನ್ನು ಉತ್ತೇಜಿಸುವ ಮತ್ತು ಒತ್ತಡವನ್ನು ನಿಭಾಯಿಸುವ ಮೂಲಕ ಈ ಭಂಗಿಯು ನಿದ್ದೆಯ ಸಮಸ್ಯೆಯನ್ನು ದೂರಮಾಡಿ, ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ದೇಹದಿಂದ ಟಾಕ್ಸಿನ್ ತೆಗೆದುಹಾಕಲು ಸಹಕಾರಿ: ಈ ಭಂಗಿಯನ್ನು ಅಭ್ಯಾಸ ಮಾಡುವುದರಿಂದ ದೇಹದ ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ದೇಹದಿಂದ ತ್ಯಾಜ್ಯ ಮತ್ತು ಟಾಕ್ಸಿನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತದೆ.

ವಿಪರೀತ ಕರಣಿ ಆಸನ ಮಾಡುವುದು ಹೇಗೆ?

- ಈ ಭಂಗಿಯನ್ನು ಪ್ರಯತ್ನಿಸುವಾಗ ಮೊದಲಿಗೆ ಗೋಡೆಯ ಬಳಿ ನೆಲದ ಮೇಲೆ ಕುಳಿತುಕೊಳ್ಳಿ.

- ನಿಧಾನವಾಗಿ ಮಲಗಿ. ನಿಮ್ಮ ಬೆನ್ನನ್ನು ನೆಲದ ಮೇಲೆ ಇರಿಸಿ, ನಿಮ್ಮ ಎರಡೂ ಕಾಲುಗಳನ್ನು ಗೋಡೆಯ ಕಡೆಗೆ ಮೇಲಕ್ಕೆತ್ತಿ. ದೇಹವು ಗೋಡೆಗೆ 90 ಡಿಗ್ರಿ ಕೋನ ಮಾಡಬೇಕು. ಕಾಲುಗಳನ್ನು ನೇರವಾಗಿ ಇರಿಸಿ.

- ಕೈಗಳನ್ನು ನಿಮ್ಮ ಬದಿಗೆ ಇರಿಸಿ, ನಿಮ್ಮ ಕಣ್ಣುಗಳನ್ನು ಮುಚ್ಚಿ. ಉಸಿರಾಟದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. 15 ನಿಮಿಷಗಳ ಕಾಲ ಆಳವಾದ ಉಸಿರಾಟದಲ್ಲಿ ತೊಡಗಿಸಿಕೊಳ್ಳಿ. ಅಥವಾ ನಿಮಗೆ ಆರಾಮದಾಯಕವಾಗುವವರೆಗೂ ಹಿಡಿದಿಟ್ಟುಕೊಳ್ಳಿ.

- ನಿಧಾನವಾಗಿ ಕುಳಿತುಕೊಳ್ಳುವ ಮೊದಲು ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ. ಕಾಲುಗಳನ್ನು ಎದೆಗೆ ತಂದು ಆ ಸ್ಥಾನದಿಂದ ಕಾಲುಗಳನ್ನು ಗೋಡೆಯಿಂದ ಕೆಳಕ್ಕಿಳಿಸಿ ವಿಶ್ರಾಂತಿ ಪಡೆಯಿರಿ.

ವಿಪರೀತ ಕರಣಿ ನಿರ್ವಹಿಸಲು ಉಸಿರಾಟದ ಮಾದರಿ

- ಈ ಭಂಗಿಯನ್ನು ಅಭ್ಯಾಸ ಮಾಡುವಾಗ ಆಳವಾಗಿ, ನಿಧಾನವಾದ ಉಸಿರಾಟದ ಮೇಲೆ ಕೇಂದ್ರೀಕರಿಸಿ.

- ನಿಮ್ಮ ಮೂಗಿನ ಮೂಲಕ ಆಳವಾಗಿ ಉಸಿರಾಡಿ. ಮೂಗಿನ ಮೂಲಕ ನಿಧಾನವಾಗಿ ಉಸಿರಾಡಿ.

- ಉಸಿರು ಒಳತೆಗೆದುಕೊಳ್ಳುವುದು ಮತ್ತು ಹೊರಬಿಡಲು 1:2 ಅನುಪಾತವನ್ನು ಗುರಿಮಾಡಿ.

- ಆಸನದ ಉದ್ದಕ್ಕೂ ಈ ಉಸಿರಾಟದ ಮಾದರಿಯನ್ನು ಮುಂದುವರಿಸಿ. ಇದು ನಿಮ್ಮ ವಿಶ್ರಾಂತಿಯನ್ನು ಗಾಢವಾಗಿಸಲು ಅನುವು ಮಾಡಿಕೊಡುತ್ತದೆ.

ಅಡ್ಡ ಪರಿಣಾಮಗಳು

ಈ ಭಂಗಿಯು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿದ್ದರೂ, ಕೆಲವರು ಇದರಿಂದ ತೊಂದರೆ ಅನುಭವಿಸಬಹುದು. ಅವುಗಳು ಏನೆಂಬುದು ಇಲ್ಲಿದೆ:

- ರಕ್ತದ ಹರಿವಿನಿಂದಾಗಿ ಕಾಲುಗಳಲ್ಲಿ ಜುಮ್ಮೆನ್ನುವುದು.

- ಆಸನದಿಂದ ಹೊರಬಂದ ಬಳಿಕ ತಲೆತಿರುಗುವುದು.

- ಕೆಳ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳಬಹುದು ( ಇದಕ್ಕಾಗಿ ಈ ಆಸನವನ್ನು ಪ್ರಯತ್ನಿಸುವಾಗ ನೀವು ಕೆಳ ಬೆನ್ನಿನ ಕೆಳಗೆ ದಿಂಬಿ ಇರಿಸಬಹುದು).

ಸುರಕ್ಷಿತ ಅಭ್ಯಾಸಕ್ಕಾಗಿ ನಿಮ್ಮ ದೇಹದ ಮೇಲೆ ಸಂಪೂರ್ಣ ಗಮನವಿರಲಿ ಹಾಗೂ ಭಂಗಿಯನ್ನು ಬದಲಾಯಿಸಿ. ಮೊದಲ ಬಾರಿಗೆ ಪ್ರಯತ್ನಿಸುತ್ತಿದ್ದರೆ ಯೋಗ ತಜ್ಞರ ನೆರವನ್ನು ಪಡೆಯುವುದು ಉತ್ತಮ.

Whats_app_banner