ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಪ್ರತಿದಿನ ಸೇವಿಸುವ ಔಷಧಿಗಳ ಅಡ್ಡಪರಿಣಾಮ ಗುರುತಿಸುವುದು ಹೇಗೆ? ಮೆಡಿಸಿನ್‌ಗಳಿಂದ ಈ ಅಪಾಯವೂ ಇವೆ

ನೀವು ಪ್ರತಿದಿನ ಸೇವಿಸುವ ಔಷಧಿಗಳ ಅಡ್ಡಪರಿಣಾಮ ಗುರುತಿಸುವುದು ಹೇಗೆ? ಮೆಡಿಸಿನ್‌ಗಳಿಂದ ಈ ಅಪಾಯವೂ ಇವೆ

ನೀವು ಪ್ರತಿದಿನ ಸೇವಿಸುವ ಔಷಧಿಗಳ ಪ್ರಯೋಜನದ ಜೊತೆಗೆ, ಅವುಗಳ ಅಡ್ಡ ಪರಿಣಾಮಗಳನ್ನು ತಿಳಿದುಕೊಂಡಿರುವುದು ತುಂಬಾ ಮುಖ್ಯ. ನಿತ್ಯ ಗುಳಿಗೆಗಳನ್ನು ತಿನ್ನುವವರು ಈ ಬಗ್ಗೆ ತುಂಬಾ ಎಚ್ಚರದಿಂದಿರಬೇಕು.

ಪ್ರತಿದಿನ ಸೇವಿಸುವ ಔಷಧಿಗಳ ಅಡ್ಡಪರಿಣಾಮ ಗುರುತಿಸುವುದು ಹೇಗೆ?
ಪ್ರತಿದಿನ ಸೇವಿಸುವ ಔಷಧಿಗಳ ಅಡ್ಡಪರಿಣಾಮ ಗುರುತಿಸುವುದು ಹೇಗೆ? (Pixabay)

ರೋಗಗಳಿದ್ದರೆ ಔಷಧಿಗಳು ಬೇಕೇ ಬೇಕು. ಹಲವಾರು ಜನರ ದಿನಚರಿಯಲ್ಲಿ ಔಷಧಿಗಳು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಏನಿಲ್ಲದಿದ್ದರೂ ಬಿಪಿ, ಶುಗರ್‌ನಂಥ ಸಾಮಾನ್ಯ ಎನಿಸಿರುವ ಕಾಯಿಲೆಗಳಿಗೆ ನಿತ್ಯ ಔಷಧಿ ಸೇವಿಸುವವರಿದ್ದಾರೆ. ಪೇನ್‌ ಕಿಲ್ಲರ್‌, ಆಂಟಿಬಯೋಟಿಕ್‌ಗಳನ್ನು ಆಗಾಗಾ ಬಳಸುವವರೂ ಇದ್ದಾರೆ. ಇದನ್ನು ಹೊರತುಪಡಿಸಿದರೆ, ಹೇಳದೆ ಕೇಳದೆ ಬರುವ ಜ್ವರ, ನೆಗಡಿಯಂಥ ಸಮಸ್ಯೆಗಳಿಗೆ ಮುಂಚಿತವಾಗಿ ಔಷಧ ತಂದು ಮನೆಯಲ್ಲಿ ಇಟ್ಟುಕೊಳ್ಳುವವರಿದ್ದಾರೆ. ಆಗಾಗ ಔಷಧಗಳನ್ನು ಸೇವಿಸುವುದರಿಂದ ರೋಗಗಳು ನಮ್ಮಿಂದ ದೂರ ಹೋಗುತ್ತವೆ ಎಂಬುದು ನಿಜ. ಇದೇ ವೇಳೆ, ಔಷಧಿಗಳ ಮೇಲಿನ ಅತಿಯಾದ ಅವಲಂಬನೆಯಿಂದ ದೇಹದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳು ಸಹ ಬೀರುತ್ತವೆ.

ಟ್ರೆಂಡಿಂಗ್​ ಸುದ್ದಿ

ನೀವು ಸೇವಿಸುವ ಔಷಧಿಗಳ ಪ್ರಯೋಜನ ನಿಮಗೆ ತಿಳಿದಿರಬಹುದು. ವೈದ್ಯರು ಕೂಡಾ ಈ ಬಗ್ಗೆ ತಿಳಿಸಿರುತ್ತಾರೆ. ಕೆಲವೊಮ್ಮೆ ಮೆಡಿಕಲ್‌ ಸ್ಟೋರ್‌ಗಳಿಂದ ಔಷಧಗಳನ್ನು ತಮ್ಮಿಷ್ಟದಂತೆ ತಿನ್ನುವ ಜನರೂ ಇರುತ್ತಾರೆ. ಇಂಥಾ ಸಂದರ್ಭಗಳಲ್ಲಿ ಸೇವಿಸುವ ಔಷಧಗಳ ಅಡ್ಡ ಪರಿಣಾಮಗಳನ್ನು ತಿಳಿದುಕೊಂಡಿರುವುದು ತುಂಬಾ ಮುಖ್ಯ.

ಆರೋಗ್ಯದ ಕುರಿತು ಪ್ರತಿಯೊಬ್ಬರಿಗೂ ಕಾಳಜಿ ಇರುತ್ತದೆ. ಹೀಗಾಗಿ ಸೇವಿಸುವ ಔಷಧಗಳ ಅಡ್ಡ ಪರಿಣಾಮಗಳನ್ನು ಗುರುತಿಸುವುದು ಆರೋಗ್ಯ ಮತ್ತು ಯೋಗಕ್ಷೇಮದ ಹಿನ್ನೆಲೆಯಿಂದ ಅತ್ಯಗತ್ಯ. ಪ್ರತಿ ಔಷಧಿಗಳು ಕೂಡಾ ನಿರ್ದಿಷ್ಟ ಅನಾರೋಗ್ಯ ಅಥವಾ ರೋಗಲಕ್ಷಣಕ್ಕೆ ಪರಿಹಾರವಾಗಿ ಬಳಸಿದರೂ, ಅವು ದೇಹದ ಮೇಲೆ ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು. ಆ ಅರಿವು ಔಷಧ ಸೇವಿಸುವ ಪ್ರತಿಯೊಬ್ಬರಲ್ಲೂ ಇರಬೇಕು.

ಔಷಧಿಗಳ ಅಡ್ಡ ಪರಿಣಾಮ ಗುರುತಿಸುವುದು ಮತ್ತು ನಿರ್ವಹಿಸುವುದು ಹೇಗೆ?

ವೈದ್ಯರು ಅಥವಾ ಮೆಡಿಕಲ್‌ಗಳಲ್ಲಿ ನೀಡಿದ ಔಷಧಿಯ ರಶೀದಿ ಅಥವಾ ಔಷಧಿ ಪ್ಯಾಕೇಜಿಂಗ್‌ನೊಂದಿಗೆ ನೀಡಿದ ಔಷಧಿ ಲೇಬಲ್ ಅನ್ನು ಗಮನವಿಟ್ಟು ಎಚ್ಚರಿಕೆಯಿಂದ ಓದಿಕೊಳ್ಳಿ. ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ. ಅದರಲ್ಲಿ ಬರೆದಿರುವ ಅಡ್ಡಪರಿಣಾಮಗಳು (Side Effects) ಅಥವಾ ಪ್ರತಿಕೂಲ ಪ್ರತಿಕ್ರಿಯೆಗಳು (Adverse Reactions) ವಿಭಾಗಗಳನ್ನು ಹೆಚ್ಚು ಗಮನವಿಟ್ಟು ಓದಿ. ಅಲ್ಲಿ ಆ ಔಷಧಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಅಥವಾ ಸಂಭಾವ್ಯ ಅಡ್ಡ ಪರಿಣಾಮಗಳನ್ನು ಪಟ್ಟಿ ಮಾಡಲಾಗಿರುತ್ತದೆ. ಔಷಧಿ ಸೇವಿಸುವ ಸಮಯದಲ್ಲಿ ಸೇವಿಸಬಾರದ ಆಹಾರ ಅಥವಾ ಮಾಡಬಾರದ ಚಟುವಟಿಕೆಗಳ ಕುರಿತ ಯಾವುದೇ ನಿರ್ದಿಷ್ಟ ಸೂಚನೆಗಳನ್ನು ಎಚ್ಚರಿಕೆಯಿಂದ ಗಮನಿಸಿ.

ಇದನ್ನೂ ಓದಿ | Alejandra Rodriguez; ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 60 ವರ್ಷದ ಸುರಸುಂದರಿ, ಪತ್ರಕರ್ತೆ, ನ್ಯಾಯವಾದಿ ಅಲೆಜಾಂಡ್ರಾ ರೋಡ್ರಿಗಸ್ ಫೋಟೋಸ್

ಕೆಲವು ಔಷಧಿಗಳ ಸಾಮಾನ್ಯ ಅಡ್ಡ ಪರಿಣಾಮಗಳು

ಆಂಟಿಬಯೋಟಿಕ್‌, ಪೇನ್‌ ಕಿಲ್ಲರ್‌ ಇಂಥ ಔಷಧಗಳನ್ನು ಜನರು ಸಾಮಾನ್ಯವಾಗಿ ಸೇವಿಸುತ್ತಾರೆ. ಹೀಗಾಗಿ ನೀವು ತೆಗೆದುಕೊಳ್ಳುತ್ತಿರುವ ಔಷಧಿಯ ಪ್ರಕಾರದ ಆಧಾರದಲ್ಲಿ, ಅದರಿಂದ ಸಂಭವಿಸಬಹುದಾದ ಸಾಮಾನ್ಯ ಅಡ್ಡ ಪರಿಣಾಮಗಳನ್ನು ಮುಂಚಿತವಾಗಿ ತಿಳಿದುಕೊಳ್ಳಿ. ಉದಾಹರಣೆಗೆ, ಆಂಟಿಬಯೋಟಿಕ್‌ಗಳ ಸಾಮಾನ್ಯ ಅಡ್ಡಪರಿಣಾಮಗಳೆಂದರೆ ವಾಕರಿಕೆ, ಅತಿಸಾರ ಅಥವಾ ಅಲರ್ಜಿಯಂಥ ಸಮಸ್ಯೆ ಒಳಗೊಂಡಿರುತ್ತದೆ. ಇದೇ ವೇಳೆ ನೋವು ನಿವಾರಕಗಳ (ಪೇನ್‌ ಕಿಲ್ಲರ್‌) ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಹೊಟ್ಟೆ ಹಾಳಾಗುವುದು ಅಥವಾ ಅರೆನಿದ್ರಾವಸ್ಥೆಯಂಥ ಸಮಸ್ಯೆ ಹೆಚ್ಚಬಹುದು. ಇದು ತಿಳಿದಿರಬೇಕಾದ ಅಂಶಗಳು.

ಈ ಅಂಶಗಳು ಗಮದಲ್ಲಿರಲಿ

ಕೆಲವೊಂದು ಮಾತ್ರೆ ಅಥವಾ ಔಷಧಗಳ ಅಡ್ಡಪರಿಣಾಮ ತಾತ್ಕಾಲಿಕವಾಗಿರಬಹುದು. ಆದರೆ, ಸೇವನೆ ಹೆಚ್ಚಾದಂತೆ ದೇಹಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬುದು ನೆನಪಲ್ಲಿರಲಿ. ಯಾವುದೇ ಹೊಸ ರೋಗಲಕ್ಷಣಗಳು ಕಾಣಿಸಿಕೊಂಡರೂ, ಆರಂಭದಲ್ಲೇ ಅದರ ಮೇಲೆ ನಿಗಾ ಇಟ್ಟು ವೈದ್ಯರನ್ನು ಸಂಪರ್ಕಿಸಿ. ಔಷಧಿಗಳನ್ನು ಸೇವಿಸುವ ಮೊದಲು ವೈದ್ಯರೊಂದಿಗೆ ಅದರ ಅಡ್ಡಪರಿಣಾಮಗಳನ್ನು ಕೇಳಿ ವಿವರವಾಗಿ ತಿಳಿದುಕೊಳ್ಳಿ. ಇಲ್ಲವಾದಲ್ಲಿ ಅದು ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ಔಷಧಗಳ ಸಾಮಾನ್ಯ ಅಡ್ಡ ಪರಿಣಾಮಗಳು

  • ಅಲರ್ಜಿಯಂಥ ಸಮಸ್ಯೆ (ಉಸಿರಾಟದ ತೊಂದರೆ, ಮುಖ ಅಥವಾ ಗಂಟಲಿನ ಊತ, ದದ್ದುಗಳು)
  • ತೀವ್ರ ಹೊಟ್ಟೆ ನೋವು, ವಾಂತಿ, ಅಥವಾ ಅತಿಸಾರ
  • ಎದೆ ನೋವು, ಅನಿಯಮಿತ ಹೃದಯ ಬಡಿತ
  • ತೀವ್ರ ತಲೆನೋವು, ತಲೆತಿರುಗುವಿಕೆ
  • ದೃಷ್ಟಿ, ಶ್ರವಣ ಅಥವಾ ಮಾತಿನಲ್ಲಿ ದಿಢೀರ್ ಬದಲಾವಣೆಗಳು
  • ಆತ್ಮಹತ್ಯಾ ಆಲೋಚನೆಗಳು ಅಥವಾ ನಡವಳಿಕೆ