ನಿತ್ಯ 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡೋ ಅಭ್ಯಾಸವಿದೆಯಾ; ನಿದ್ರಾಹೀನತೆ ಖಿನ್ನತೆಗೆ ಕಾರಣವಾಗಬಹುದು
ದಿನವಿಡೀ ದಣಿದ ದೇಹಕ್ಕೆ ರಾತ್ರಿ ವೇಳೆ ನೆಮ್ಮದಿಯ ನಿದ್ದೆ ಬೇಕು. ಆರೋಗ್ಯಕರ ದೇಹಕ್ಕೆ ಪ್ರತಿನಿತ್ಯ ಕನಿಷ್ಠ 7 ಗಂಟೆ ನಿದ್ದೆ ಅವಶ್ಯ. ಒಂದು ವೇಳೆ ಕನಿಷ್ಠ 5 ಗಂಟೆಗಳ ಕಾಲ ನಿದ್ದೆ ಮಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ, ಗಂಭೀರ ಆರೋಗ್ಯ ಸಮಸ್ಯೆ ಎದುರಾಗಬಹುದು.

ದಿನವಿಡಿ ಉಲ್ಲಾಸದಿಂದ ಇರಬೇಕೆಂದರೆ ಮನಸ್ಸು ಹಾಗೂ ದೇಹದ ಬೆಂಬಲ ಬೇಕು. ದೈಹಿಕ ಆರೋಗ್ಯದ ಜೊತೆಗೇ ಮಾನಸಿಕ ಆರೋಗ್ಯವೂ ಮುಖ್ಯ. ಹೊತ್ತು ಹೊತ್ತಿಗೆ ಊಟ, ಸರಿಯಾದ ನಿದ್ರೆ ಸಾಧ್ಯವಾದರೆ ನಿತ್ಯಬದುಕಿನಲ್ಲಿ ಒಟ್ಟಾರೆ ಕಾರ್ಯಕ್ಷಮತೆ ಸುಧಾರಿಸುತ್ತದೆ. ಆರೋಗ್ಯವನ್ನು ಹೆಚ್ಚಿಸುವ ಮೆದುಳಿನ ಅತ್ಯುತ್ತಮ ಕಾರ್ಯಕ್ಕಾಗಿ ಉತ್ತಮ ನಿದ್ರೆ ತುಂಬಾ ಮುಖ್ಯ. ಪ್ರತಿನಿತ್ಯ ಇಂತಿಷ್ಟು ಗಂಟೆಗಳ ಕಾಲ ನಿದ್ರಿಸಬೇಕು. ನಿಯಮಿತವಾಗಿ ಗುಣಮಟ್ಟದ ನಿದ್ರೆ ಆಗದಿದ್ದರೆ ಹೃದಯಾಘಾತ, ಟೈಪ್-2 ಮಧುಮೇಹ, ಬೊಜ್ಜು ಸೇರಿದಂತೆ ಕೆಲವು ಮಾರಣಾಂತಿಕ ಕಾಯಿಲೆಗಳ ದಾಸರಾಗಬೇಕಾದೀತು. ಇಂಥಾ ಅಪಾಯದಿಂದ ಹೊರಬರಲು ದೇಹಕ್ಕೇ ವಿಶ್ರಾಂತಿ ಕೊಡಬೇಕು.
ಅಧ್ಯಯನವೊಂದರ ಪ್ರಕಾರ, ದಿನಕ್ಕೆ ಐದು ಗಂಟೆಗಳಿಗಿಂತ ಕಡಿಮೆ ನಿದ್ರಿಸಿದರೆ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತವೆ, ನಿರಂತರವಾಗಿ 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ, ಖಿನ್ನತೆಯ ಅಪಾಯ ಹೆಚ್ಚಾಗುತ್ತದೆ. ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ನೇತೃತ್ವದ ಮತ್ತು ಜರ್ನಲ್ ಟ್ರಾನ್ಸ್ಲೇಶನಲ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಸಂಶೋಧನಾ ವರದಿ ಪ್ರಕಾರ, ನಿದ್ರೆಯ ಅವಧಿ ಮತ್ತು ಖಿನ್ನತೆ ಎರಡೂ ಸಾಮಾನ್ಯವಾಗಿ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಆನುವಂಶಿಕವಾಗಿ ಮುಂದುವರೆಯುತ್ತದೆ ಎಂದು ಹೇಳಿದೆ. ಕಡಿಮೆ ನಿದ್ರೆಯು ಖಿನ್ನತೆಯ ರೋಗಲಕ್ಷಣಕ್ಕೆ ಸಂಬಂಧಿಸಿದೆ ಎಂದು ಅಧ್ಯಯನ ಕಂಡುಹಿಡಿದಿದೆ.
ನಿದ್ರೆಯ ಅವಧಿ ಮತ್ತು ಖಿನ್ನತೆ ಎರಡೂ ಬಹುತೇಕ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಆನುವಂಶಿಕವಾಗಿರುತ್ತವೆ. ದಿನಕ್ಕೆ ಐದು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಪ್ರವೃತ್ತಿ ಹೊಂದಿರುವವರು, ಮುಂದಿನ ದಶಕದಲ್ಲಿ ಖಿನ್ನತೆಗೆ ಒಳಗಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ನಿದ್ರೆಯ ಅಭಾವಕ್ಕೆ ಕಾರಣಗಳು
ನಿದ್ರೆಯ ಕೊರತೆಗೆ ಹಲವು ಕಾರಣಗಳಿವೆ. ಅವುಗಳು ಯಾವುವು ಎಂಬುದನ್ನು ನೋಡೋಣ.
- ಕೆಲಸದ ಸಮಯದಲ್ಲಿ ವ್ಯತ್ಯಾಸ
- ಆಲ್ಕೊಹಾಲ್ ಸೇವನೆ
- ಮೊಬೈಲ್ ಬಳಕೆ ಅಥವಾ ಸ್ಕ್ರೀನಿಂಗ
- ನಿದ್ರೆಗೆ ಸಂಬಂಧಿಸಿದ ಕೆಟ್ಟ ಅಭ್ಯಾಸಗಳು
- ಹೆಚ್ಚಿನ ಮಟ್ಟದ ಒತ್ತಡ
- ಮೆದುಳಿನ ಅಸ್ವಸ್ಥತೆಗಳು
ಕಡಿಮೆ ನಿದ್ರೆಯ ಅಡ್ಡಪರಿಣಾಮಗಳು
ಖಿನ್ನತೆ ಮತ್ತು ಇತರ ಮಾನಸಿಕ ಸಮಸ್ಯೆಗಳ ಹೊರತಾಗಿ, ನಿದ್ರಾಹೀನತೆಯಿಂದ ಕೆಲವು ಅಡ್ಡಪರಿಣಾಮಗಳಿವೆ.
ಹೃದಯ ಮತ್ತು ರಕ್ತಪರಿಚಲನೆಯ ಸಮಸ್ಯೆ. ನಿದ್ರಾಹೀನತೆಯಿಂದಾಗಿ ಹೃದಯ ಮತ್ತು ರಕ್ತಪರಿಚಲನೆ ಮೇಲೆ ದೀರ್ಘಕಾಲೀನ ಪರಿಣಾಮಗಳಾಗುತ್ತವೆ. ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಅಥವಾ ಹೈಪರ್ಲಿಪಿಡೆಮಿಯಾಗೆ ಒಳಗಾಗುವ ಸಾಧ್ಯತೆಯಿದೆ.
ದೀರ್ಘಕಾಲದ ನಿದ್ರಾಹೀನತೆಯಿಂದ ಟೈಪ್ -2 ಮಧುಮೇಹ ಹೆಚ್ಚಾಗುವ ಅಪಾಯವಿದೆ.
ಸಾಕಷ್ಟು ನಿದ್ರೆ ಮಾಡದಿದ್ದರೆ ದೇಹದ ನೈಸರ್ಗಿಕ ರಕ್ಷಣೆಯು ಸೋಂಕುಗಳ ವಿರುದ್ಧ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಆಗಾಗ ಅನಾರೋಗ್ಯಕ್ಕೆ ಒಳಗಾಗಬಹುದು.
ಆಲ್ಝೈಮರ್ ಅಥವಾ ಪಾರ್ಕಿನ್ಸನ್ ಬೆಳವಣಿಗೆಯಲ್ಲಿ ನಿದ್ರಾಹೀನತೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಭಾರತದ ಮಕ್ಕಳನ್ನು ಕಾಡುತ್ತಿದೆ ಸೂಕ್ಷ್ಮ ಪೋಷಕಾಂಶಗಳ ಕೊರತೆ; ಪೋಷಕರು ಮಗುವಿನಲ್ಲಿ ತಪ್ಪದೇ ಗಮನಿಸಬೇಕಾದ ಅಂಶಗಳಿವು
