ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್ ಅದ್ದಿ ತಿನ್ನುವ ಅಭ್ಯಾಸ ನಿಮಗೂ ಇದೆಯಾ? ಪ್ರತಿದಿನ ತಿಂದರೆ ಏನಾಗುತ್ತೆ ತಿಳ್ಕೊಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್ ಅದ್ದಿ ತಿನ್ನುವ ಅಭ್ಯಾಸ ನಿಮಗೂ ಇದೆಯಾ? ಪ್ರತಿದಿನ ತಿಂದರೆ ಏನಾಗುತ್ತೆ ತಿಳ್ಕೊಳಿ

ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್ ಅದ್ದಿ ತಿನ್ನುವ ಅಭ್ಯಾಸ ನಿಮಗೂ ಇದೆಯಾ? ಪ್ರತಿದಿನ ತಿಂದರೆ ಏನಾಗುತ್ತೆ ತಿಳ್ಕೊಳಿ

ಚಹಾ ಜೊತೆಗೆ ಬಿಸ್ಕೆಟ್‌ ತಿನ್ನುವುದು ಒಳ್ಳೆಯದಲ್ಲ ಎಂದು ನಿಮ್ಮ ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣಗಳೂ ಇವೆ. ಈ ಎರಡರ ಸಂಯೋಜನೆ ಆರೋಗ್ಯಕ್ಕೆ ತುಸು ಹಾನಿಕಾರಕ. ಈ ಕುರಿತು ತಜ್ಞರು ಕೂಡಾ ಎಚ್ಚರಿಸಿದ್ದಾರೆ.

ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್ ಅದ್ದಿ ತಿನ್ನುವ ಅಭ್ಯಾಸ ನಿಮಗೂ ಇದೆಯಾ?
ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್ ಅದ್ದಿ ತಿನ್ನುವ ಅಭ್ಯಾಸ ನಿಮಗೂ ಇದೆಯಾ? (Pexel)

ಭಾರತದಲ್ಲಿ ಬಿಸಿಬಿಸಿ ಚಹಾ ಇಷ್ಟಪಡುವ ಜನರು ಹಲವರು. ಹೆಚ್ಚಿನವರಿಗೆ ಚಹಾ ಜೊತೆಗೆ ಬಿಸ್ಕೆಟ್‌ ತಿನ್ನುವ ಅಭ್ಯಾಸವಿದೆ. ಅಷ್ಟೇ ಅಲ್ಲ, ಆ ಬಿಸ್ಕೆಟ್‌ ಅನ್ನು ಟೀಗೆ ಅದ್ದಿ ಮೃದುವಾಗಿಸಿ ತಿಂದರಷ್ಟೇ ಖುಷಿ. ಕೆಲವೊಬ್ಬರು ಬೆಳಗ್ಗೆ ಈ ರೀತಿ ಚಹಾ ಮತ್ತು ಬಿಸ್ಕೆಟ್‌ ಸೇವಿಸಿದರೆ, ಇನ್ನೂ ಕೆಲವರಿಗೆ ಸಂಜೆ ವೇಳೆ ಬಿಸ್ಕೆಟ್ ಮತ್ತು ಚಹಾ ಬೇಕು. ಒಮ್ಮೆ ಈ ಅಭ್ಯಾಸ ಆರಂಭವಾದರೆ, ನಿಲ್ಲಿಸುವುದು ಕಷ್ಟ. ನಿಮಗೂ ಈ ಅಭ್ಯಾಸವಿದ್ದರೆ, ಆದಷ್ಟು ಬೇಗ ಹತೋಟಿಗೆ ತರುವುದು ಒಳ್ಳೆಯದು. ಡಯೆಟೀಷನ್‌ಗಳ ಪ್ರಕಾರ, ಬಿಸ್ಕೆಟ್ ಮತ್ತು ಚಹಾ ಕಾಂಬಿನೇಷನ್ ನಿಮ್ಮ ಹಾರ್ಮೋನ್ ಕಾರ್ಯಕ್ಕೆ ಹಾನಿ ಮಾಡುತ್ತದೆಯಂತೆ. ಅಲ್ಲದೆ ಈ ಅಭ್ಯಾಸವು ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಬಿಸ್ಕೆಟ್‌ ತಯಾರಿಯಲ್ಲಿ ಬಳಸುವ ಕೆಲವೊಂದು ಪದಾರ್ಥಗಳು ದೇಹಕ್ಕೆ ಆರೋಗ್ಯಕರವಲ್ಲ. ಬಿಸ್ಕೆಟ್‌ನ ಆ ರುಚಿಯು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವಂತೆ ಪ್ರೇರೇಪಿಸುತ್ತದೆ. ಹೀಗಾಗಿ ಚಹಾ ಜೊತೆಗೆ ಬಿಸ್ಕೆಟ್‌ ಸೇವನೆ ಅಭ್ಯಾಸ ರೂಢಿಯಾಗುತ್ತದೆ. ತಜ್ಞರ ಪ್ರಕಾರ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಯಾಕೆ ಎನ್ನುವುದನ್ನು ಮುಂದೆ ಓದಿ.

ಸಕ್ಕರೆ ಮಟ್ಟ ಏರಿಕೆ

ಬಿಸ್ಕೆಟ್‌ ಪ್ಯಾಕ್‌ ಮಾಡಿದ ತಿನಿಸು. ಪೊಟ್ಟಣಗಳಲ್ಲಿರುವ ಬಿಸ್ಕತ್ತುಗಳಲ್ಲಿ ರಿಫೈನ್ಡ್ ಸಕ್ಕರೆಯ ಅಂಶ ಹೆಚ್ಚಿರುತ್ತದೆ. ಹೀಗಾಗಿ ಆ ಬಿಸ್ಕೆಟ್‌ಗಳನ್ನು ಚಹಾದೊಂದಿಗೆ ಬೆರೆಸಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಇದು ಹೊಟ್ಟೆಗೆ ಹೋದರೆ ಹಾರ್ಮೋನ್ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ಕ್ರಮೇಣ ನಿಮ್ಮ ತೂಕ ಹೆಚ್ಚಾಗಲು ಸಹ ಕಾರಣವಾಗುತ್ತದೆ. ಹೀಗಾಗಿ ಆಹಾರಕ್ರಮ ಅನುಸರಿಸುವವರು ಈ ಅಭ್ಯಾಸದಿಂದ ದೂರ ಇರುವುದು ಒಳ್ಳೆಯದು.

ಮೈದಾ ಹಿಟ್ಟು ಬಳಕೆ ಹೆಚ್ಚು

ಬಿಸ್ಕೆಟ್‌ ತಯಾರಿಕೆಯಲ್ಲಿ ಮೈದಾ ಹಿಟ್ಟನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ಪ್ರತಿದಿನ ಸಂಸ್ಕರಿಸಿದ ಹಿಟ್ಟಿನಿಂದ ಮಾಡಿದ ಬಿಸ್ಕತ್ತುಗಳನ್ನು ಸೇವಿಸಿದರೆ ಅದು ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಮೈದಾವನ್ನು ಅತಿಯಾಗಿ ಬಳಸುವುದರಿಂದ ಉರಿಯೂತ ಮತ್ತು ಹಾರ್ಮೋನ್ ಸಿಗ್ನಲಿಂಗ್ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅಂಟಿನಂತಾ ಹಿಟ್ಟು ಹೊಟ್ಟೆಗೆ ಹೋಗುವುದರಿಂದ, ಹಸಿವು ಕಡಿಮೆಯಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೂ ಅಡ್ಡಿ ಉಂಟಾಗುತ್ತದೆ.

ತಾಳೆ ಎಣ್ಣೆ/ಪಾಮ್‌ ಆಯಿಲ್‌ ಬಳಕೆ

ಬಿಸ್ಕೆಟ್ ತಯಾರಿಕೆಯಲ್ಲಿ ಹೆಚ್ಚಾಗಿ ತಾಳೆ ಎಣ್ಣೆಯನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ, ಬಿಸ್ಕತ್ತುಗಳಂತಹ ಸಂಸ್ಕರಿಸಿದ ಆಹಾರ ತಯಾರಿಕೆಯಲ್ಲಿ ಹೆಚ್ಚಾಗಿ ಪಾಮ್‌ ಆಯಿಲ್‌ ಬಳಸಲಾಗುತ್ತದೆ. ಹೀಗಾಗಿ ಆ ಬಿಸ್ಕತ್ತುಗಳನ್ನು ತಿಂದರೆ ಇನ್ಸುಲಿನ್, ಉರಿಯೂತ ಮತ್ತಿತರ ಆರೋಗ್ಯ ಸಮಸ್ಯೆಗಳು ಬರುವ ಅಪಾಯವಿದೆ.

ಹೀಗಾಗಿ ಚಹಾ ಜೊತೆಗೆ ಬಿಸ್ಕೆಟ್‌ ಸಂಯೋಜನೆ ಮಾಡಿ ಕುಡಿಯುವುದರ ಬದಲಿಗೆ, ದೇಹದ ಹಾರ್ಮೋನ್ ಸಮತೋಲನಗೊಳಿಸಲು ನೆರವಾಗುವ ಚಹಾಗಳನ್ನು ಕುಡಿಯಿರಿ. ಮನೆಯಲ್ಲೇ ಲಭ್ಯವಿರುವ ಹಲವರು ಪದಾರ್ಥಗಳಿಂದ ಆರೋಗ್ಯಕರ ಚಹಾ ತಯಾರಿಸಬಹುದು. ಕೊತ್ತಂಬರಿ ಬೀಜಗಳ ಚಹಾ, ಕರಿಬೇವಿನ ಚಹಾ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಬಳಸಬಹುದು.

Whats_app_banner