ಕನ್ನಡ ಸುದ್ದಿ  /  ಜೀವನಶೈಲಿ  /  ದೈಹಿಕ ಮಾತ್ರವಲ್ಲದೆ ಮಾನಸಿಕ ನೆಮ್ಮದಿಗೂ ಮದ್ದು; ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಹೆಜ್ಜೆ ನಡೆಯುವುದರಿಂದ ಹಲವು ಪ್ರಯೋಜನ

ದೈಹಿಕ ಮಾತ್ರವಲ್ಲದೆ ಮಾನಸಿಕ ನೆಮ್ಮದಿಗೂ ಮದ್ದು; ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಹೆಜ್ಜೆ ನಡೆಯುವುದರಿಂದ ಹಲವು ಪ್ರಯೋಜನ

ವಾಕಿಂಗ್‌, ಜಾಗಿಂಗ್‌ ನಿತ್ಯ ಮಾಡುವುದರಿಂದ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬಹುದು. ನಿತ್ಯ ನಡೆಯುವ ಅಭ್ಯಾಸವಿದ್ದರೆ ಆರೋಗ್ಯ ಸಮತೋಲನದಲ್ಲಿರುತ್ತದೆ. ಸಾಮಾನ್ಯ ನಡಿಗೆಗಿಂತ ನಿತ್ಯ ಹತ್ತು ಸಾವಿರಕ್ಕೂ ಅಧಿಕ ಹೆಜ್ಜೆ ನಡೆದರೆ ಏನೆಲ್ಲಾ ಅನುಕೂಲಗಳಿವೆ ಎಂಬುದನ್ನು ನೋಡೋಣ.

ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಹೆಜ್ಜೆ ನಡೆಯುವುದರಿಂದ ಹಲವು ಪ್ರಯೋಜನ
ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಹೆಜ್ಜೆ ನಡೆಯುವುದರಿಂದ ಹಲವು ಪ್ರಯೋಜನ (Pexel)

ವ್ಯಾಯಾಮಗಳಲ್ಲಿ ವಾಕಿಂಗ್ ಅತ್ಯಂತ ಸರಳ. ಎಷ್ಟು ಸರಳವೋ ಅಷ್ಟೇ ಪರಿಣಾಮಕಾರಿ ಕೂಡಾ ಹೌದು. ನಮ್ಮಲ್ಲಿ ಹೆಚ್ಚಿನವರು ನಡಿಗೆಯ ಪ್ರಯೋಜನವನ್ನು ಯೋಚಿಸುವುದೇ ಇಲ್ಲ ಕೆಲವೊಬ್ಬರು ಪ್ರತಿದಿನ ಕಿಲೋಮೀಟರ್‌ಗಟ್ಟಲೆ ವಾಕ್‌ ಮಾಡ್ತಾರೆ. ಇನ್ನೂ ಕೆಲವೊಬ್ಬರು ಕುಳಿತಲ್ಲೇ ಕೆಲಸ ಮಾಡಿದರೂ, ದಿನಕ್ಕೆ ಹತ್ತು ಹೆಜ್ಜೆ ನಡೆಯಲು ಕಷ್ಟಪಡುತ್ತಾರೆ. ಆದರೆ, ನಿತ್ಯ ವಾಕಿಂಗ್‌ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಪ್ರತಿನಿತ್ಯ 10,000 ಹೆಜ್ಜೆಗಳಿಗಿಂತ ಹೆಚ್ಚು ನಡೆಯುವುದರಿಂದ ಆರೋಗ್ಯಕ್ಕೆ ಭಾರಿ ಒಳ್ಳೆಯದು. ಇದು ಬಹುತೇಕರಿಗೆ ತಿಳಿದಿಲ್ಲ. ದೇಹ ಆರೋಗ್ಯಕರವಾಗಿರಬೇಕು, ಫಿಟ್‌ ಆಗಿ ಕಾಣಬೇಕೆಂದು ಇಲ್ಲದ ಕಸರತ್ತುಗಳನ್ನು ಮಾಡುವವರಿದ್ದಾರೆ. ಅದರ ಬದಲಿಗೆ ನಿತ್ಯ ಹತ್ತು ಸಾವಿರ ಹೆಜ್ಜೆ ನಡೆಯಬಹುದು.

ಆರೋಗ್ಯದ ಸುಧಾರಣೆಗಾಗಿ ನಡೆಯಲು ಉತ್ತಮ ಸಮಯ ಯಾವುದು?

ನಡೆಯಲು ಸೀಮಿತ ಸಮಯ ಎಂಬುದೇನೂ ಇಲ್ಲ. ಆರೋಗ್ಯ ಪ್ರಯೋಜನ ಪಡೆಯಲು ವೈಯಕ್ತಿಕ ಬಿಡುವಿನ ಆಧಾರದಲ್ಲಿ ವೇಳಾಪಟ್ಟಿ ರಚಿಸಿ ಆದ್ಯತೆಯ ಮೇಲೆ ನಡೆಯಬಹುದು. ಅನೇಕ ಜನರು ಬೆಳಗ್ಗೆ ವಾಕಿಂಗ್ ಮಾಡುತ್ತಾರೆ. ಇದು ಚಯಾಪಚಯ ಕ್ರಿಯೆ ಸರಾಗಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಬೆಳಗ್ಗಿನ ಸೂರ್ಯನ ಕಿರಣ ಮೈಮೇಲೆ ಬಿದ್ದರೆ ಒಳ್ಳೆಯದು. ಒಂದು ವೇಳೆ ನಿಮ್ಮಿಂದ ಬೆಳಗ್ಗೆ ಸಾಧ್ಯವಾಗದಿದ್ದರೆ ದಿನದ ಯಾವುದೇ ಸಮಯದಲ್ಲೂ ನಡೆಯಬಹುದು.

ನಿತ್ಯ ಹತ್ತು ಸಾವಿರ ಹೆಜ್ಜೆ ನಡೆಯುವುದರಿಂದ ಆಗುವ ಹಲವು ಅನುಕೂಲಗಳು ಹೀಗಿವೆ...

ಒತ್ತಡ ಕಡಿಮೆ ಮಾಡಿ ಮನಸ್ಥಿತಿ ಸುಧಾರಿಸುತ್ತದೆ

ಮಾನಸಿಕ ಆರೋಗ್ಯಕ್ಕೆ ವಾಕಿಂಗ್‌ ಸಹಕಾರಿ. ಒತ್ತಡದ ಮಟ್ಟವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನು ಸುಧಾರಿಸುತ್ತದೆ. ದಿನಕ್ಕೆ ಕನಿಷ್ಠ ಕೇವಲ 10 ನಿಮಿಷಗಳ ಕಾಲ ನಡೆಯುವುದರಿಂದಲೂ ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಬಹುದು.

ಟ್ರೆಂಡಿಂಗ್​ ಸುದ್ದಿ

ಶ್ವಾಸಕೋಶದ ಸಾಮರ್ಥ್ಯ ವೃದ್ಧಿಸುತ್ತದೆ

ನಿಯಮಿತವಾಗಿ ಹೆಚ್ಚು ಹೆಚ್ಚು ನಡೆಯುವುದರಿಂದ ಶ್ವಾಸಕೋಶದ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ನಡೆಯುವಾಗ ಪ್ರತಿ ಹೆಜ್ಜೆಗೂ ಪ್ರತಿ ಉಸಿರಿನೊಂದಿಗೆ ಹೆಚ್ಚು ಆಮ್ಲಜನಕ ದೇಹ ಸೇರುತ್ತದೆ. ಕೆಲವು ಅಧ್ಯಯಗಳ ಪ್ರಕಾರ, ವಾಕಿಂಗ್ ಉಸಿರಾಟದ ಸ್ನಾಯುಗಳನ್ನು ಬಲಪಡಿಸುತ್ತದೆ ಹಾಗೂ ಒಟ್ಟಾರೆ ಶ್ವಾಸಕೋಶದ ಕಾರ್ಯವನ್ನು ಹೆಚ್ಚಿಸುತ್ತದೆ.

ಮಹಿಳೆಯರಲ್ಲಿ ಪಾರ್ಶ್ವವಾಯು ಅಪಾಯ ಕಡಿಮೆ ಮಾಡುತ್ತದೆ

ಜರ್ನಲ್ ಸ್ಟ್ರೋಕ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಡಿಮೆ ನಡೆಯುವವರಿಗೆ ಹೋಲಿಸಿದರೆ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಹೆಜ್ಜೆಗಳನ್ನು ನಡೆಯುವ ಮಹಿಳೆಯರಲ್ಲಿ ಪಾರ್ಶ್ವವಾಯು ಅಪಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ

ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡಲು ವಾಕಿಂಗ್ ಸರಳ ಹಾಗೂ ಪರಿಣಾಮಕಾರಿ ಮಾರ್ಗ. ನಿತ್ಯ 10,000 ಹೆಜ್ಜೆ ನಡೆಯುವುದರಿಂದ ಮಧುಮೇಹದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಡಯಾಬೆಟೋಲೊಜಿಯಾ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ.

ತೂಕ ನಷ್ಟ ಉತ್ತೇಜಿಸಿ ದೇಹದ ತೂಕ ಸಮತೋಲನಗೊಳಿಸುತ್ತದೆ

ಕ್ಯಾಲರಿಗಳನ್ನು ಬರ್ನ್ ಮಾಡಿ ತೂಕ ಕಳೆದುಕೊಳ್ಳಲು ವಾಕಿಂಗ್ ಸಹಕಾರಿ. ದಿನಕ್ಕೆ 10,000ಕ್ಕಿಂತ ಹೆಚ್ಚು ಹೆಜ್ಜೆ ನಡಿಗೆ ಮಾಡುವುದರಿಂದ ತೂಕ ಕಳೆದುಕೊಳ್ಳಬಹುದು.

ಪ್ರತಿರಕ್ಷಣಾ ಕಾರ್ಯ ಹೆಚ್ಚಿಸುತ್ತದೆ

ನಿಯಮಿತ ನಡಿಗೆ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ದೇಹವು ಸೋಂಕುಗಳು ಮತ್ತು ಅನಾರೋಗ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ನಿದ್ರೆಯ ಗುಣಮಟ್ಟ ಸುಧಾರಣೆಯಾಗುತ್ತದೆ

ನಡಿಗೆಯು ಪ್ರಮುಖ ದೈಹಿಕ ಚಟುವಟಿಕೆ. ಇದು ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಅಲ್ಲದೆ ತುಸು ಜಾಸ್ತಿ ಅವಧಿ ಆರೋಗ್ಯಕರ ನಿದ್ದೆ ಮಾಡಬಹುದು.