ಹೊಟ್ಟೆ ಉಬ್ಬರ ನಿತ್ಯ ಕಾಡುತ್ತಾ; ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪ್ರತಿದಿನ ಈ ಸರಳ ಯೋಗಗಳನ್ನು ಅಭ್ಯಾಸ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಟ್ಟೆ ಉಬ್ಬರ ನಿತ್ಯ ಕಾಡುತ್ತಾ; ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪ್ರತಿದಿನ ಈ ಸರಳ ಯೋಗಗಳನ್ನು ಅಭ್ಯಾಸ ಮಾಡಿ

ಹೊಟ್ಟೆ ಉಬ್ಬರ ನಿತ್ಯ ಕಾಡುತ್ತಾ; ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪ್ರತಿದಿನ ಈ ಸರಳ ಯೋಗಗಳನ್ನು ಅಭ್ಯಾಸ ಮಾಡಿ

ಯೋಗ ದೇಹದ ಸರ್ವೋತೋಮುಖ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೇಹದ ಅಂಗಾಂಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಂದು ಆಸನವು ವಿವಿಧ ರೀತಿಯಲ್ಲಿ ನಮ್ಮ ದೇಹಕ್ಕೆ ಕೊಡುಗೆ ನೀಡುತ್ತವೆ. ಅದೇ ರೀತಿ ನೀವು ಹೊಟ್ಟೆ ಉಬ್ಬರ ಸಮಸ್ಯೆ ಅನುಭವಿಸುತ್ತಿದ್ದರೆ ಈ 5 ಯೋಗ ಭಂಗಿಗಳನ್ನು ಪ್ರಯತ್ನಿಸಿ.

ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪ್ರತಿದಿನ ಈ ಸರಳ ಯೋಗಗಳನ್ನು ಅಭ್ಯಾಸ ಮಾಡಿ
ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪ್ರತಿದಿನ ಈ ಸರಳ ಯೋಗಗಳನ್ನು ಅಭ್ಯಾಸ ಮಾಡಿ (Pixel)

ಇತ್ತೀಚೆಗೆ ಬಹಳಷ್ಟು ಮಂದಿ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆ ಊದಿಕೊಂಡಾಗ ಗ್ಯಾಸ್‌ ತುಂಬಿದಂತಾಗಿ ಬಹಳ ಕಷ್ಟಪಡಬೇಕಾಗುತ್ತದೆ. ಹೊಟ್ಟೆ ಉಬ್ಬರ ಸಮಸ್ಯೆ ಉಂಟಾದಾಗ ನಿಮ್ಮ ಹೊಟ್ಟೆಯು ದೊಡ್ಡದಾಗಿ ಕಾಣಿಸಬಹುದು. ಹೊಟ್ಟೆ ತುಂಬಿದ ಅನುಭವ ಆಗಬಹುದು ಅಥವಾ ನಿಮ್ಮ ಬಟ್ಟೆಗಳು ಬಿಗಿಯಾಗಬಹುದು. ಇದಕ್ಕೆ ನಿಮ್ಮ ಆಹಾರ ಪದ್ಧತಿ, ವೈದ್ಯಕೀಯ ಸಮಸ್ಯೆಗಳು ಕೂಡಾ ಕಾರಣವಿರಬಹುದು. ಕೆಲವೊಮ್ಮೆ ಅತಿಯಾಗಿ ತಿನ್ನುವುದರಿಂದ, ಬೀನ್ಸ್ ಅಥವಾ ಎಲೆಕೋಸಿನಂಥ ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ನೀವು ತುಂಬಾ ಒತ್ತಡ ಅಥವಾ ಆತಂಕದಲ್ಲಿರುವಾಗ ಸಹ ಹೊಟ್ಟೆ ಉಬ್ಬರ ಸಮಸ್ಯೆ ಉಂಟಾಗಬಹುದು.

ಹೊಟ್ಟೆ ಉಬ್ಬರ ಸಮಸ್ಯೆ ಆಗಾಗ್ಗೆ ಕಾಣಿಸಿಕೊಳ್ಳುವುದರಿಂದ ಯೋಗಾಸನದಿಂದ ಇದಕ್ಕೆ ಪರಿಹಾರ ಪಡೆದುಕೊಳ್ಳಬಹುದು. ಯೋಗಾಸನವು ಹೊಟ್ಟೆ ಉಬ್ಬರಕ್ಕೆ ಸಂಬಂಧಿತ ಅಸ್ವಸ್ಥತೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಸ್ಥಿರತೆ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಹುದು. ಕೆಲವು ಯೋಗ ಭಂಗಿಗಳನ್ನು ಮಾಡುವುದರಿಂದ ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಯೋಗವು ಜೀರ್ಣಕ್ರಿಯೆಗೆ ಸಹಕಾರಿ. ಅನಿಲ ಶೇಖರಣೆಯನ್ನು ಸಹ ಕಡಿಮೆ ಮಾಡಿ, ನಿಮಗೆ ಆರಾಮವಾಗಿರಲು ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಅತ್ಯುತ್ತಮ ಯೋಗ ಭಂಗಿಗಳ ಮಾಹಿತಿ ಇಲ್ಲಿದೆ.

ಹೊಟ್ಟೆ ಉಬ್ಬರಕ್ಕೆ ಸಹಾಯ ಮಾಡುವ 5 ಯೋಗಾಸನಗಳು

1. ಪಶ್ಚಿಮೋತ್ತನಾಸನ (Paschimottanasana)

ಈ ಯೋಗಾಸನವು ಕುಳಿತುಕೊಳ್ಳುವ ಯೋಗ ಭಂಗಿಯಾಗಿದೆ. ಇಲ್ಲಿ ನೀವು ಮೊಣಕಾಲುಗಳನ್ನು ನೇರವಾಗಿ ಇರಿಸಿಕೊಂಡು ಸೊಂಟದಿಂದ ಸಾಧ್ಯವಾದಷ್ಟು ಬಾಗಿಸಿ, ಪಾದವನ್ನು ಕೈಗಳಿಂದ ಮುಟ್ಟಬೇಕು. ಈ ಯೋಗಾಸನವನ್ನು ಮಾಡುವುದರಿಂದ ಜಠರದ ಸ್ನಾಯುಗಳು ಬಲಗೊಳ್ಳುತ್ತವೆ. ಜೀರ್ಣಕ್ರಿಯೆಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ. ಇದರಿಂದ ಹೊಟ್ಟೆ ಉಬ್ಬರ ಸಮಸ್ಯೆಯೂ ನಿಧಾನಕ್ಕೆ ಕಡಿಮೆಯಾಗುತ್ತದೆ. ಅಲ್ಲದೆ, ಹೆಚ್ಚಾಗಿ ಕುರ್ಚಿಯಲ್ಲೇ ಕುಳಿತು ಕೆಲಸ ಮಾಡುವವರು ಈ ಭಂಗಿಯನ್ನು ಮಾಡುವುದರಿಂದ ಬೆನ್ನು ಮತ್ತು ಸೊಂಟದ ಭಾಗಗಳಿಗೆ ಹೆಚ್ಚಿನ ವ್ಯಾಯಾಮ ದೊರಕಿ ದೇಹದ ಎಲ್ಲಾ ಭಾಗಕ್ಕೆ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ.

2. ಪವನಮುಕ್ತಾಸನ (Pavanamuktasana)

ಪವನ ಎಂದರೆ ವಾಯು, ಮುಕ್ತ ಎಂದರೆ ಬಿಡುಗಡೆ ಎಂಬ ಅರ್ಥವನ್ನು ಇದು ನೀಡುತ್ತದೆ. ಈ ಭಂಗಿಯನ್ನು ಮಾಡಲು ನಿಮ್ಮ ಎರಡೂ ಕಾಲುಗಳನ್ನು ಹತ್ತಿರ ತಂದು ನಿಮ್ಮ ಬೆನ್ನಿನ ಮೇಲೆ ಮಲಗಿ. ತೋಳುಗಳನ್ನು ನಿಮ್ಮ ಶರೀರದ ಪಕ್ಕದಲ್ಲಿರಿಸಿ. ಉಸಿರನ್ನು ನಿಧಾನಕ್ಕೆ ಒಳಗೆ ತೆಗೆದುಕೊಳ್ಳಿ ಮತ್ತು ಉಸಿರನ್ನು ಬಿಡುತ್ತಾ, ನಿಮ್ಮ ಬಲಮಂಡಿಯನ್ನು ನಿಮ್ಮ ಎದೆಯ ಕಡೆಗೆ ತನ್ನಿರಿ ಮತ್ತು ತೊಡೆಯನ್ನು ನಿಮ್ಮ ಹೊಟ್ಟೆಯ ಕಡೆಗೆ ತಂದು ಕೈಗಳಿಂದ ಒತ್ತಿ ಹಿಡಿಯಿರಿ. ಹೀಗೆ ಎರಡೂ ಕಾಲುಗಳನ್ನು ಮಾಡಿ. ಈ ಆಸನವು ಹೊಟ್ಟೆ ಮತ್ತು ಕರುಳಿನಿಂದ ಹೆಚ್ಚುವರಿ ಜೀರ್ಣಕಾರಿ ಅನಿಲವನ್ನು ನಿವಾರಿಸಲು ಸಹಾಯ ಮಾಡುತ್ತದೆ.

3. ಬಾಲಾಸನ (Balasana)

ಈ ಭಂಗಿಯು ದೇಹವು ನಿಶ್ಚಲವಾಗಿರುವಂಥ ವಿಶ್ರಾಂತಿಯ ಕ್ಷಣವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನೆಲದ ಮೇಲೆ ಮೊಣಕಾಲಿಟ್ಟು ಮಡಚಿ, ನಿಮ್ಮ ಹಿಮ್ಮಡಿಗಳ ಮೇಲೆ ಕುಳಿತುಕೊಳ್ಳುವಾಗ ನಿಮ್ಮ ಹೆಬ್ಬೆರಳುಗಳನ್ನು ಪರಸ್ಪರ ಸ್ಪರ್ಶಿಸಿ. ನಿಮ್ಮ ತೊಡೆಯ ನಡುವೆ ನಿಮ್ಮ ತಲೆಯನ್ನು ಇರಿಸಿ. ಎರಡೂ ಕೈಗಳನ್ನು ಮುಂದಕ್ಕೆ ತನ್ನಿ. ಈ ಭಂಗಿಯನ್ನು ಮಾಡುವುದರಿಂದ ಶಾಂತವಾಗಿರಬಹುದು ಮತ್ತು ವಿಶ್ರಾಂತಿ ಪಡೆಯಬಹುದು. ಇದು ಒತ್ತಡವನ್ನು ನಿರ್ವಹಿಸಲು ಕೂಡ ಸಹಾಯ ಮಾಡುತ್ತದೆ. ಈ ಭಂಗಿಯು ರಕ್ತದೊತ್ತಡವನ್ನು ಕಡಿಮೆ ಮಾಡಲು ಅಥವಾ ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ಅಧೋ ಮುಖ ಶ್ವಾನಾಸನ (ಕೆಳಮುಖವಾಗಿ ಶ್ವಾನ ಭಂಗಿ) (Adho Mukha Svanasana)

ಇದು ವಿಲೋಮ ಆಸನವಾಗಿದ್ದು, ಶ್ವಾನವು ಎದ್ದೇಳಿದಾಗ ಚಾಚುವ ಭಂಗಿಯ ಹೋಲಿಕೆಯಿಂದ ಈ ಹೆಸರು ಬಂದಿದೆ. ಈ ಭಂಗಿಯನ್ನು ಮಾಡಲು ನಿಮ್ಮ ಸೊಂಟವನ್ನು ನಿಮ್ಮ ಮೊಣಕಾಲುಗಳ ಮೇಲೆ ಮತ್ತು ಭುಜಗಳನ್ನು ನಿಮ್ಮ ಮಣಿಕಟ್ಟಿನ ಮೇಲೆ ಇರಿಸಿ. ನಿಮ್ಮ ಕೈಗಳನ್ನು ನಿಮ್ಮ ಭುಜಗಳಿಂದ ಸ್ವಲ್ಪ ಮುಂದಕ್ಕೆ ತನ್ನಿ. ತಲೆಕೆಳಗಾದ ವಿ ಭಂಗಿಯನ್ನು ನೀವಿಲ್ಲಿ ಮಾಡಬೇಕು. ನಿಮ್ಮ ಸೊಂಟವನ್ನು ಹಿಂದಕ್ಕೆ ಮತ್ತು ಮೇಲಕ್ಕೆ ಎತ್ತಿ. ಶ್ವಾನವು ಮಲಗಿ ಎದ್ದಾಗ ಯಾವ ರೀತಿಯಾಗಿ ವರ್ತಿಸುತ್ತೋ ಅದೇ ರೀತಿಯ ಭಂಗಿಯನ್ನು ಇಲ್ಲಿ ಮಾಡಬೇಕಾಗುತ್ತದೆ.

5. ಲೆಗ್ಸ್ ಅಪ್ ದಿ ವಾಲ್ ಪೋಸ್ (ಗೋಡೆಗೆ ಪಾದಗಳನ್ನು ಇರಿಸುವ ಭಂಗಿ)

ಈ ಆಸನವನ್ನು ಮಾಡಲು ಗೋಡೆಯ ಕಡೆಗೆ ಕಾಲು ಬರುವಂತೆ ಅಂಗಾತವಾಗಿ ಮಲಗಿ. ಕಾಲುಗಳನ್ನು ನಿಧಾನವಾಗಿ ಗೋಡೆಯ ಕಡೆಗೆ ಚಾಚಬೇಕು. ಪ್ರತಿದಿನ ಈ ಆಸನವನ್ನು 20 ನಿಮಿಷ ಮಾಡುವುದರಿಂದ ಬಲಹೀನವಾದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೆ, ಇದರಿಂದ ರಕ್ತ ಪರಿಚಲನೆ ಸುಧಾರಣೆಯಾಗುತ್ತದೆ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಪರಿಹರಿಸುವಲ್ಲಿ ಈ ಯೋಗಾಸನವು ಪ್ರಯೋಜನಕಾರಿ.

ಇತ್ತೀಚಿನ ದಿನಗಳಲ್ಲಿ ಈ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದು, ನಾನಾ ಔಷಧಿಗಳನ್ನು ಸೇವಿಸುತ್ತಾರೆ. ಇದರ ಬದಲು ಈ ಯೋಗಾಸನಗಳನ್ನು ಪ್ರತಿದಿನ ಪ್ರಯತ್ನಿಸಿದ್ರೆ ನಿಮ್ಮ ಹೊಟ್ಟೆ ಉಬ್ಬರ ಸಮಸ್ಯೆಯನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಎರಡು ಮಾತಿಲ್ಲ.

Whats_app_banner