High Protein Dosa: ದೋಸೆ ದುಂಡಗಿದ್ರೆ ಸಾಲದು, ಪೋಷಕಾಂಶವೂ ಬೇಕಲ್ಲ; ಇಲ್ಲಿದೆ ಪ್ರೊಟೀನ್ ದೋಸೆ ರೆಸಿಪಿ
ಹಲವು ಬಗೆಯ ದೋಸೆಗಳನ್ನು ಮಾಡಬಹುದು. ರೀತಿಯಲ್ಲಿ ಸಹ ತಯಾರಿಸಬಹುದು. ದೇಹಕ್ಕೆ ಸಾಕಷ್ಟು ಪ್ರೋಟೀನ್ ಸಿಗುವಂತೆ ದೋಸೆಯನ್ನು ಸಹ ತಯಾರಿಸಬಹುದು. ಇದು ಆರೋಗ್ಯಕರ ಮತ್ತು ರುಚಿಯಾಗಿದೆ. ಈ ಹೆಚ್ಚಿನ ಪ್ರೋಟೀನ್ ದೋಸೆಯನ್ನು ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ.
ದಕ್ಷಿಣ ಭಾರತದಲ್ಲಿ ಬೆಳಗ್ಗಿನ ಉಪಾಹಾರಕ್ಕೆ ದೋಸೆ ತುಂಬಾ ಫೇಮಸ್. ಹಲವರಿಗೆ ವೈವಿಧ್ಯಮಯ ದೋಸೆಯೇ ನೆಚ್ಚಿನ ಉಪಾಹಾರ. ದಕ್ಷಿಣ ಭಾರತದ ಕೆಲವು ಸೆಲೆಬ್ರಿಟಿಗಳು ಕೂಡಾ ದೋಸೆ ತಮ್ಮ ನೆಚ್ಚಿನ ತಿನಿಸು ಎಂದಿರುವುದನ್ನು ನೀವು ಕೇಳಿರುತ್ತೀರಿ. ಅನೇಕ ವಿಧದ ದೋಸೆಗಳನ್ನು ಮಾಡಿ ಸವಿಯಬಹುದು. ಬೇಕಾದ ಹಿಟ್ಟನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಬೇಕಾದ ಪದಾರ್ಥಗಳನ್ನು ಸೇರಿಸಿ ವೈವಿಧ್ಯಮಯ ಬ್ರೇಕ್‌ಫಾಸ್ಟ್ ಮಾಡಿಕೊಳ್ಳಬಹುದು. ಆದರೆ, ದೋಸೆಗಳನ್ನು ಕೂಡಾ ಆರೋಗ್ಯಕರವಾಗಿ ಮತ್ತು ಪ್ರೊಟೀನ್‌ಯುಕ್ತವಾಗಿ ಮಾಡುವ ಆಯ್ಕೆ ಇದೆ. ವಿವಿಧ ಸಿರಿಧಾನ್ಯಗಳಿಂದ ತಯಾರಿಸಬಹುದಾದ ಈ ದೋಸೆ ಆರೋಗ್ಯಕ್ಕೂ ಒಳ್ಳೆಯದು. ಹಾಗಿದ್ದರೆ ಇಂದು ನಾವು ಹೆಚ್ಚಿನ ಪ್ರೊಟೀನ್ ತುಂಬಿರುವ ಹೈ ಪ್ರೊಟೀನ್ ದೋಸೆ ಹೇಗೆ ಮಾಡುವುದು ಎಂಬುದನ್ನು ನೋಡೋಣ.
ಪ್ರೊಟೀನ್ ದೋಸೆಗೆ ಬೇಕಾಗುವ ಸಾಮಗ್ರಿಗಳು
- 2 ಕಪ್ ಅಕ್ಕಿ
- ಒಂದು ಕಪ್ ರಾಗಿ
- ಒಂದು ಕಪ್ ಜೋಳ
- ಒಂದು ಕಪ್ ಉದ್ದಿನ ಬೇಳೆ
- ಒಂದು ಕಪ್ ಹೆಸರು ಕಾಳು
- ಅರ್ಧ ಟೀ ಚಮಚ ಮೆಂತ್ಯೆ ಬೀಜ
- ಒಂದು ಟೀ ಚಮಚ ಜೀರಿಗೆ
- ಸ್ವಲ್ಪ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಪ್ರೊಟೀನ್ ದೋಸೆ ಮಾಡುವ ವಿಧಾನ
- ಅಕ್ಕಿ, ರಾಗಿ, ಜೋಳ, ಉದ್ದಿನ ಬೇಳೆ, ಹೆಸರು ಕಾಳು ಮತ್ತು ಮೆಂತ್ಯ ಬೀಜಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಬೇಕು. ರಾತ್ರಿಯಿಡೀ, ಅಥವಾ ಸುಮಾರು 8ರಿಂದ 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
- ಧಾನ್ಯಗಳನ್ನು ಚೆನ್ನಾಗಿ ನೆನೆಸಿದ ನಂತರ ಅದನ್ನು ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿದ ದೋಸೆ ಹಿಟ್ಟಿಗೆ ಒಂದು ಬಟ್ಟೆಯಲ್ಲಿ ಸುತ್ತಿ, ಮುಚ್ಚಳವನ್ನು ಮುಚ್ಚಿ ಸುಮಾರು 6-8 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ.
- ಹಿಟ್ಟು ಚೆನ್ನಾಗಿ ಹುದುಗಬೇಕು. ಆ ನಂತರ ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಜೀರಿಗೆ ಸೇರಿಸಿ ಮತ್ತೊಮ್ಮೆ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.
- ದೋಸೆ ಕಾವಲಿಯನ್ನು ಒಲೆ ಮೇಲೆ ಇಟ್ಟು ದೋಸೆ ಉಯ್ಯಿರಿ. ದೋಸೆ ಕಾಯುವಾಗ ದೋಸೆ ಸುತ್ತಲೂ ಎಣ್ಣೆಯನ್ನು ಸೇರಿಸಿ. ಗೋಲ್ಡನ್ ಬ್ರೌನ್ ಆಗುವವರೆಗೂ ಕಾಯಿಸಿ. ಅಗತ್ಯವಿದ್ದರೆ ಇನ್ನೊಂದು ಬದಿಗೆ ಮಗುಚಿ ಹಾಕಿ ಮತ್ತೆ ಕಾಯಿಸಿ. ಆ ನಂತರ ಚಟ್ನಿ ಜೊತೆಗೆ ಬಿಸಿಬಿಸಿಯಾಗಿ ಸವಿಯಿರಿ.
ಇದನ್ನೂ ಓದಿ | ಬೆಳಗಿನ ಉಪಹಾರಕ್ಕೂ ಓಕೆ, ಮಕ್ಕಳ ಲಂಚ್ ಬಾಕ್ಸ್‌ಗೂ ಬೆಸ್ಟ್: ಗರಿಗರಿ ಮೂಲಂಗಿ ಪೂರಿ ತಯಾರಿಸುವುದು ತುಂಬಾನೇ ಸಿಂಪಲ್
ಹೈ ಪ್ರೊಟೀನ್ ದೋಸೆಯನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿದರೆ ಭಾರಿ ರುಚಿಕರ. ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಈ ದೋಸೆಯಲ್ಲಿ ಪ್ರೊಟೀನ್ ಸಮೃದ್ಧವಾಗಿದೆ. ಮಕ್ಕಳಿಗೆ ಹೆಚ್ಚಿನ ಪ್ರೊಟೀನ್ ನೀಡಲು ಬಯಸಿದರೆ, ರಾಗಿ ಉತ್ತಮ ಆಯ್ಕೆಯಾಗಿದೆ. ಇದರೊಂದಿಗೆ ಸಿರಿಧಾನ್ಯಗಳೊಂದಿಗೆ ದೋಸೆ ಮಾಡಿದರೆ, ಆರೋಗ್ಯದ ಜೊತೆಗೆ ಬಾಯಿಗೂ ರುಚಿಯಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ದೋಸೆ ಒಳ್ಳೆಯದು.
ಪ್ರೊಟೀನ್ ಸೇವನೆಯ ಆರೋಗ್ಯ ಪ್ರಯೋಜನಗಳು
ಪ್ರೊಟೀನ್ ಸೇವನೆಯು ಸ್ನಾಯುಗಳಿಗೆ ಭಾರಿ ಒಳ್ಳೆಯದು. ಪ್ರೊಟೀನ್ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಮೂಳೆಗಳ ಆರೋಗ್ಯ ಸುಧಾರಿಸುತ್ತದೆ. ಚಯಾಪಚಯವನ್ನು ಸುಧಾರಿಸುವ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಒಳ್ಳೆಯದು. ಇದು ಕ್ಯಾಲರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನಷ್ಟು ರೆಸಿಪಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವಿಭಾಗ