ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ; ಪರಿಣಾಮಕಾರಿ 6 ಯೋಗಾಸನಗಳ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ; ಪರಿಣಾಮಕಾರಿ 6 ಯೋಗಾಸನಗಳ ಮಾಹಿತಿ ಇಲ್ಲಿದೆ

ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ; ಪರಿಣಾಮಕಾರಿ 6 ಯೋಗಾಸನಗಳ ಮಾಹಿತಿ ಇಲ್ಲಿದೆ

ಯೋಗವು ನಿಮ್ಮ ಹೃದಯದ ಆರೋಗ್ಯವನ್ನು ರಕ್ಷಿಸುವುದರ ಜೊತೆಗೆ ರಕ್ತದೊತ್ತಡ, ರಕ್ತದ ಕೊಲೆಸ್ಟ್ರಾಲ್, ರಕ್ತದಲ್ಲಿನ ಗ್ಲೂಕೋಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ನಿಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಮತ್ತು ಅವುಗಳನ್ನು ನಿರ್ವಹಿಸಲು ಕೆಳಗೆ ತಿಳಿಸಿರುವ ಈ ಯೋಗದ ಭಂಗಿಗಳನ್ನು ಅಭ್ಯಾಸ ಮಾಡಿ.

ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ
ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ (pixabay)

ಹೃದಯದ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹುಮುಖ್ಯ. ನಿಮ್ಮ ಹೃದಯ ಆರೋಗ್ಯಕರವಾಗಿ ಇಡಲು ನಿತ್ಯ ಯೋಗ ಅಭ್ಯಾಸ ಮಾಡಿದರೆ ಅನೇಕ ಪ್ರಯೋಜನಗಳನ್ನು ಪಡೆಯುವಿರಿ. ಯೋಗವು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತ ಯೋಗವು ನಿಮ್ಮ ರಕ್ತದೊತ್ತಡ, ಕೊಲೆಸ್ಟ್ರಾಲ್, ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಧ್ಯಾನ ಮತ್ತು ಯೋಗದ ನಿಯಮಿತ ಅಭ್ಯಾಸವು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ಆತಂಕ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಕೆಲವರು ಬೆವರು ಸುರಿಸಲೆಂದೇ ಜಿಮ್‌ಗೆ ಹೋಗಿ ತಾಲೀಮು ಮಾಡುತ್ತಾರೆ. ಯೋಗ ಮಾಡಿದರೆ ಸಾಕು ಬೆವರು ಹೊರಬರುತ್ತದೆ. ನಿಮ್ಮ ಹೃದಯದ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ನೀವು ತೀವ್ರವಾದ ಕಠಿಣ ವ್ಯಾಯಾಮಗಳನ್ನೇ ಮಾಡಬೇಕಾಗಿಲ್ಲ. ಕೆಲವೊಂದು ಸರಳ ಯೋಗಾಸನಗಳನ್ನು ಅಭ್ಯಾಸ ಮಾಡಬಹುದು. ಹೃದಯರಕ್ತನಾಳದ ಆರೋಗ್ಯ ಸುಧಾರಿಸಲು ಸಹಾಯ ಮಾಡುವ ನಿರ್ದಿಷ್ಟ ಯೋಗದ ಭಂಗಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹೃದಯದ ಆರೋಗ್ಯಕ್ಕಾಗಿ 6 ಸರಳ ಯೋಗಾಸನಗಳು

ಸೂರ್ಯ ನಮಸ್ಕಾರ

ಇದು ನಿಮ್ಮ ದೇಹದ ಶೇ. 99 ರಷ್ಟು ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮವಾಗಿದೆ. ಯೋಗಾಭ್ಯಾಸಕ್ಕಾಗಿ ಪ್ರತಿದಿನ 10 ರಿಂದ 15 ನಿಮಿಷಗಳನ್ನು ತೆಗೆದುಕೊಳ್ಳುವವರಿಗೆ ಇದು ಉತ್ತಮ ತಾಲೀಮು. ವೃತ್ತಿಪರ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯಾವುದೇ ವಯಸ್ಸಿನ ಜನರು ಇದನ್ನು ಅಭ್ಯಾಸ ಮಾಡಬಹುದು.

ವೃಕ್ಷಾಸನ (ಮರದ ಭಂಗಿ)

ಮರದ ಭಂಗಿ ಅಥವಾ ವೃಕ್ಷಾಸನವು ದೇಹವನ್ನು ಸಮತೋಲನಗೊಳಿಸುವ ಸರಳ ಆಸನವಾಗಿದೆ. ನಿಂತಿರುವ ಭಂಗಿ ಇದಾಗಿದ್ದು, ಒಂದು ಕಾಲಿನಲ್ಲಿ ನೀವು ನಿಲ್ಲಬೇಕು. ಈ ಭಂಗಿಗಾಗಿ ನೀವು, ಒಂದು ಕಾಲಿನಲ್ಲಿ ನಿಂತು ಇನ್ನೊಂದು ಕಾಲನ್ನು ತೊಡೆಯ ಮೇಲಿಡಬೇಕು. ಕೈಯನ್ನು ಮೇಲಕ್ಕೆತ್ತಿ ನಮಸ್ಕರಿಸಬೇಕು. ಪ್ರತಿದಿನ ಈ ಭಂಗಿಯನ್ನು ಅಭ್ಯಾಸ ಮಾಡಬಹುದು. ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ | Garlic Benefits: ಪ್ರತಿದಿನ ಬೆಳ್ಳುಳ್ಳಿ ತಿಂದ್ರೆ ಕ್ಯಾನ್ಸರ್‌ ಬರೋಲ್ಲ, ಇದ್ರಿಂದ ಇನ್ನೂ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಉತ್ಕಟಾಸನ (ಕುರ್ಚಿ ಭಂಗಿ)

ಕುರ್ಚಿಯ ರೀತಿಯಲ್ಲಿ ಕೂರುವ ಈ ಭಂಗಿಗೆ ಉತ್ಕಟಾಸನ ಎಂದು ಕರೆಯುತ್ತಾರೆ. ಈ ಭಂಗಿಯನ್ನು ಮಾಡಲು ಮೊದಲು ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ನಂತರ ಎರಡು ಕೈಗಳನ್ನೂ ನಿಧಾನವಾಗಿ ಮೇಲಕ್ಕೆ ತೆಗೆದುಕೊಳ್ಳಿ. ಭುಜದ ನೇರಕ್ಕೆ ಅಂಗೈಗಳನ್ನು ಮೇಲ್ಮುಖ ಮಾಡಿ ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ಸಂಪೂರ್ಣ ಮೇಲಕ್ಕೆ ತೆಗೆದುಕೊಳ್ಳಿ. ನಂತರ ಕುರ್ಚಿಯಲ್ಲಿ ಕೂರುವಂತೆ ಈ ಭಂಗಿ ಮಾಡಬೇಕು. ಇದು ನಿಮ್ಮ ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ನಿಮ್ಮ ಹೃದಯ ಬಡಿತವನ್ನು ನಿಧಾನವಾಗಿ ಸಮತೋಲನಗೊಳಿಸುತ್ತದೆ. ಕಡಿಮೆ ರಕ್ತದೊತ್ತಡ ರೋಗಿಗಳು ತಮ್ಮ ರಕ್ತದ ಹರಿವು ಮತ್ತು ಪರಿಚಲನೆ ಸುಧಾರಿಸಲು ಈ ಯೋಗ ಭಂಗಿಯನ್ನು ಅಭ್ಯಾಸ ಮಾಡಬಹುದು.

ಭುಜಂಗಾಸನ (ಕೋಬ್ರಾ ಸ್ಟ್ರೆಚ್)

ಭುಜಂಗ ಎಂದರೆ ಸರ್ಪ ಎಂಬರ್ಥ ಬರುತ್ತದೆ. ಈ ಆಸನವನ್ನು ಹೆಡೆ ಎತ್ತಿದ ಸರ್ಪದ ಆಕಾರಕ್ಕೆ ಹೋಲಿಸಲಾಗಿದೆ. ಹೀಗಾಗಿ ಇದನ್ನು ಭುಜಂಗಾಸನ ಎಂದು ಕರೆಯಲಾಗುತ್ತದೆ. ಈ ಭಂಗಿಯಲ್ಲಿ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಕೈಗಳನ್ನು ಮುಂದೆ ಚಾಚಿ, ತಲೆಯನ್ನು ಹಿಂದಕ್ಕೆ ಎತ್ತಬೇಕು. ಈ ಆಸನವನ್ನು ಅಸ್ತಮಾ ರೋಗಿಗಳು ಮಾಡುವುದರಿಂದ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸಬಹುದು. ಸ್ತ್ರೀಯರ ಮುಟ್ಟಿನ ಸಮಸ್ಯೆ ಹಾಗೂ ಸಂತಾನೋತ್ಪತಿ ಸಮಸ್ಯೆಯನ್ನು ಸಹ ಸುಧಾರಿಸಬಹುದು. ಒತ್ತಡ ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಚಕ್ರಾಸನ (ಚಕ್ರ ಭಂಗಿ)

ಹೆಸರೇ ಹೇಳುವಂತೆ ಈ ಭಂಗಿಯಲ್ಲಿ, ದೇಹವನ್ನು ಬಿಲ್ಲಿನಂತೆ ಚಕ್ರದ ಆಕಾರದಲ್ಲಿ ಬಾಗಿಸುವುದು. ಈ ಯೋಗಾಸನವು ಸ್ವಲ್ಪ ಕಷ್ಟಕರವಾಗಿದ್ದು, ವೃತ್ತಿಪರರ ಮೂಲಕ ಕಲಿಯುವುದು ಉತ್ತಮ. ಈ ಯೋಗಾಸನವನ್ನು ಮಾಡುವುದರಿಂದ ಎದೆಯ ಸ್ನಾಯುಗಳು ಹಿಗ್ಗುತ್ತವೆ. ಹೃದಯದ ಕಾರ್ಯವು ಸುಧಾರಿಸುತ್ತದೆ. ಜೊತೆಗೆ ರಕ್ತನಾಳದ ಅಡಚಣೆಗಳು ಕಡಿಮೆಯಾಗುತ್ತವೆ.

ತ್ರಿಕೋನಾಸನ

ಈ ಆಸನವನ್ನು ಮಾಡಲು ನೇರವಾಗಿ ನಿಂತು, ನಿಮ್ಮ ಕಾಲುಗಳನ್ನು ಅಗಲವಾಗಿ ಇರಿಸಬೇಕು. ಬಲ ಪಾದವನ್ನು 90 ಡಿಗ್ರಿ ಹಾಗೂ ಎಡಪಾದವನ್ನು 15 ಡಿಗ್ರಿಗಳಲ್ಲಿ ಇರಿಸಬೇಕು. ತೋಳುಗಳನ್ನು ಎರಡೂ ಬದಿಗಳಲ್ಲಿ ಅಗಲವಾಗಿ ಇರಿಸಬೇಕು. ಎರಡೂ ಕಾಲುಗಳಿಗೆ ಸಮವಾಗಿ ನಿಮ್ಮ ಭಾರವನ್ನು ಹಾಕಬೇಕು. ನಂತರ ಆಳವಾಗಿ ಉಸಿರಾಡಿ, ನಿಧಾನವಾಗಿ ನಿಮ್ಮ ದೇಹವನ್ನು ಬಲಭಾಗಕ್ಕೆ, ಸೊಂಟದ ಕೆಳಗೆ ಬಗ್ಗಿಸಿ. ನಂತರ ನಿಮ್ಮ ಬಲಗೈಯನ್ನು ಕೆಳಕ್ಕೆ ಮತ್ತು ಎಡಗೈಯನ್ನು ಮೇಲೆ ತೆಗೆದುಕೊಳ್ಳಿ. ಈ ಆಸನವನ್ನು ನಿಧಾನವಾಗಿ ಮಾಡಬೇಕು. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಬೆನ್ನುನೋವಿನಿಂದಲೂ ಪರಿಹಾರ ನೀಡುತ್ತದೆ. ದೇಹದಾದ್ಯಂತ ರಕ್ತದ ಹರಿವನ್ನು ಸಾಗಿಸಲು ಸಹಾಯ ಮಾಡುತ್ತದೆ.

ಒಟ್ಟಿನಲ್ಲಿ ಯೋಗವು ಹೃದಯದ ಆರೋಗ್ಯಕ್ಕೆ ಉತ್ತಮ ವ್ಯಾಯಾಮ. ಇದು ರಕ್ತದೊತ್ತಡ, ರಕ್ತದ ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯದ ಸಮಸ್ಯೆ ಹೊಂದಿರುವವರು ನಿರ್ದಿಷ್ಟ ಆಸನಗಳನ್ನು ಅಭ್ಯಾಸ ಮಾಡಬಹುದು.

Whats_app_banner