Iron Rich Food: ದೇಹಕ್ಕೆ ಅಗತ್ಯವಿರುವ ಕಬ್ಬಿಣದ ಅಂಶ ಪಡೆಯಲು ಊಟದ ತಟ್ಟೆಯಲ್ಲಿ ಈ ಆಹಾರಗಳಿರಲಿ
ದೇಹಕ್ಕೆ ಅಗತ್ಯವಿರುವ ಖನಿಜಗಳಲ್ಲಿ ಕಬ್ಬಿಣ ಬಹಳ ಮುಖ್ಯ. ಅದು ದೇಹದ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವಂತಹ ಕೆಲಸ ಮಾಡುತ್ತದೆ. ಅದಕ್ಕಾಗಿ ಆಹಾರದಲ್ಲಿ ಹೆಚ್ಚೆಚ್ಚು ಕಬ್ಬಿಣ ಅಂಶವಿರುವ ಆಹಾರ ಸೇವಿಸುವುದು ಅಗತ್ಯವಾಗಿದೆ. ನಿಮ್ಮ ಊಟದಲ್ಲಿ ಕಬ್ಬಿಣ ಅಂಶವಿರುವ ಆಹಾರ ಸೇರಿಸಿಕೊಳ್ಳಲು ಹೀಗೆ ಮಾಡಿ.

ಆರೋಗ್ಯವೇ ಭಾಗ್ಯವೆಂಬ ಗಾದೆ ಮಾತು ಎಲ್ಲಾ ಕಾಲಗಳಲ್ಲೂ ಬಹಳ ಸತ್ಯವಾದ ಮಾತಾಗಿದೆ. ಬಹಳಷ್ಟು ಜನರು ಆರೋಗ್ಯವಿಲ್ಲದೆ ಅನೇಕ ಕಾಯಿಲೆಗಳಿಗೆ ತುತ್ತಾಗಿ, ಬಳಲುತ್ತಿದ್ದಾರೆ. ಆಧುನಿಕ ಜೀವನ ಪದ್ಧತಿಯಿಂದಾಗಿ ದೇಹಕ್ಕೆ ಅಗತ್ಯವಾಗಿ ಪೂರೈಕೆಯಾಗಬೇಕಿದ್ದ ಪೋಷಕಾಂಶ, ಖನಿಜ, ಪ್ರೋಟೀನ್ನ ಕೊರತೆ ಎದುರಿಸುತ್ತಿದ್ದಾರೆ. ಅದರ ಪರಿಣಾಮವಾಗಿ ಆರೋಗ್ಯ ಹದಗೆಡುತ್ತಿದೆ. ದೇಹಕ್ಕೆ ಖನಿಜಗಳು ಅತ್ಯಗತ್ಯವಾಗಿ ಬೇಕು. ಖನಿಜಗಳ ಕೊರತೆಯು ಅನೇಕ ರೋಗಗಳನ್ನು ತರುತ್ತದೆ. ದೇಹದ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವಂತಹ ಮಹತ್ವದ ಕೆಲಸ ಮಾಡುವ ಖನಿಜವೆಂದರೆ ಅದು ಕಬ್ಬಿಣ. ಕಬ್ಬಿಣದ ಕೊರತೆಯಿಂದ ದೇಹದಲ್ಲಿ ಆಯಾಸ ಉಂಟಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಕಬ್ಬಿಣದ ಕೊರತೆಯನ್ನು ನೀಗಿಸಿ, ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಕಬ್ಬಿಣ–ಭರಿತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯವಾಗಿದೆ. ಕಬ್ಬಿಣದ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಅದರ ಕೊರತೆಯನ್ನು ನೀಗಿಸಿಕೊಳ್ಳಬಹುದು. ಊಟದಲ್ಲಿ ಕಬ್ಬಿಣ ಭರಿತ ಪದಾರ್ಥಗಳನ್ನು ಹೆಚ್ಚು ಸೇವಿಸಲು ಸರಳ ಮಾರ್ಗಗಳಿವೆ. ನಿಮ್ಮ ಊಟದ ತಟ್ಟೆಯಲ್ಲಿ ಕಬ್ಬಿಣದ ಅಂಶ ಹೆಚ್ಚಿರುವಂತಹ ಆಹಾರಗಳನ್ನು ಸೇರಿಸಿಕೊಳ್ಳಲು ಈ ಕೆಳಗೆ ಹೇಳಿದಂತೆ ಮಾಡಿ.
ಕಬ್ಬಿಣದ ಅಂಶ ಹೆಚ್ಚಿಸುವ ಆಹಾರಗಳು
ಸಸ್ಯಾಧಾರಿತ ಆಹಾರಗಳು: ಸಸ್ಯಾಧಾರಿತ ಆಹಾರಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಅವುಗಳನ್ನು ಊಟದಲ್ಲಿ ಹೆಚ್ಚೆಚ್ಚು ಬಳಸುವುದು ಕಬ್ಬಿಣದ ಅಂಶವನ್ನು ಹೆಚ್ಚಿಸುವ ಸುಲಭವಾದ ಮಾರ್ಗವಾಗಿದೆ. ಕಬ್ಬಿಣದ ಅಂಶ ಹೆಚ್ಚಾಗಿರುವ ಸಸ್ಯಾಧಾರಿತ ಆಹಾರಗಳೆಂದರೆ ಮಸೂರ, ಕಡಲೆ, ಬೀನ್ಸ್, ನವಣೆ, ಸಿರಿಧಾನ್ಯಗಳು. ಇವು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ. ನೀವು ಸೂಪ್, ಸ್ಟ್ಯೂ ಅಥವಾ ಸಲಾಡ್ಗಳಿಗೆ ಕಡಲೆ, ಮಸೂರಗಳಂತಹ ಧಾನ್ಯಗಳನ್ನು ಬೆರೆಸಿ ತಿನ್ನಬಹುದು. ಸೋಯಾ ಟೋಫುಗಳು ಪ್ರಮುಖವಾಗಿ ಕಬ್ಬಿಣದ ಖನಿಜಾಂಶವನ್ನು ಹೊಂದಿರುವ ಆಹಾರವಾಗಿದೆ.
ವಿಟಮಿನ್ ಸಿ: ವಿಟಮಿನ್ ಸಿ ಸಸ್ಯಾಹಾರಿ ಆಹಾರಗಳಲ್ಲಿ ಕಂಡುಬರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಉತ್ತೇಜಿಸುತ್ತದೆ. ಕಿತ್ತಳೆ, ಸ್ಟ್ರಾಬೆರಿ, ದೊಣ್ಣೆ ಮೆಣಸಿನಕಾಯಿ, ಬ್ರೊಕೊಲಿ ಮತ್ತು ಟೊಮೆಟೊಗಳಂತಹ ವಿಟಮಿನ್ ಸಿ ಭರಿತ ಆಹಾರಗಳನ್ನು ಕಬ್ಬಿಣ ಸಮೃದ್ಧವಾಗಿರುವ ಆಹಾರಗಳೆಂದು ಕರೆಯಲಾಗುತ್ತದೆ. ಇವುಗಳು ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಬಲ್ಲವು. ಉದಾಹರಣೆಗೆ ಪಾಲಕ್ ಸಲಾಡ್ಗೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಸೇರಿಸಿಕೊಳ್ಳುವುದು. ಕಡಲೆಬೇಳೆಯ ಭಕ್ಷ್ಯಗಳಿಗೆ ದೊಣ್ಣೆಮೆಣಸಿನಕಾಯಿ ಸೇರಿಸಿಕೊಳ್ಳುವುದುರಿಂದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಬಹುದು. ಕಬ್ಬಿಣದ ಕೊರತೆಯನ್ನು ನೀಗಿಸಲು ಊಟದಲ್ಲಿ ಬಳಸುವ ಆಹಾರಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಕಬ್ಬಿಣದ ಎರಕ ಇರುವ ಪಾತ್ರೆಗಳ ಬಳಕೆ: ಕಾಸ್ಟ್ ಐರನ್ ಅಥವಾ ಕಬ್ಬಿಣದ ಎರಕ ಹೊಯ್ದಿರುವ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಊಟದ ಜೊತೆಗೆ ಕಬ್ಬಿಣದ ಅಂಶವನ್ನು ದೇಹಕ್ಕೆ ಸುಲಭವಾಗಿ ಸೇರಿಸಿಕೊಳ್ಳಬಹುದು. ಟೊಮೆಟೊಗಳಂತಹ ಆಮ್ಲೀಯ ಪದಾರ್ಥಗಳನ್ನು ಕಬ್ಬಿಣದ ಎರಕ ಹೊಯ್ದ ಪಾತ್ರೆಗಳಲ್ಲಿ ಬೇಯಿಸುವುದರಿಂದ ಕಬ್ಬಿಣದ ಅಂಶವು ಆಹಾರಕ್ಕೆ ಸೇರಿಕೊಳ್ಳುತ್ತದೆ. ಸ್ಟ್ಯೂ, ಸೂಪ್ಗಳಂತಹ ಭಕ್ಷ್ಯಗಳಲ್ಲಿ ಕಬ್ಬಿಣದ ಅಂಶ ಸೇರಿಕೊಳ್ಳುವ ಪ್ರಮಾಣ ಹೆಚ್ಚಿರುತ್ತದೆ.
ಬೀಜಗಳು: ಬೀಜಗಳು ಕಬ್ಬಿಣದ ಅತ್ಯತ್ತಮ ಮೂಲಗಳಾಗಿವೆ. ಇದನ್ನು ಸುಲಭವಾಗಿ ಊಟ, ತಿಂಡಿಗಳಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಕುಂಬಳಕಾಯಿ ಬೀಜಗಳು, ಎಳ್ಳು, ಸೆಣಬಿನ ಬೀಜಗಳು ಮತ್ತು ಬಾದಾಮಿಗಳು ಕಬ್ಬಿಣದಿಂದ ಸಮೃದ್ಧವಾಗಿರುವ ಬೀಜಗಳಾಗಿವೆ. ಇವುಗಳನ್ನು ಸಲಾಡ್, ಓಟ್ಮೀಲ್ ಅಥವಾ ಮೊಸರಿನ ಜೊತೆ ಅಥವಾ ಸ್ಮೂಥಿಗಳಿಗೆ ಸೇರಿಸಿಕೊಳ್ಳಬಹುದು.
ಹಸಿರೆಲೆ ತರಕಾರಿಗಳು: ಪಾಲಕ್, ಕೇಲ್, ಸ್ವಿಸ್ ಚಾರ್ಡ್ ಮತ್ತು ಕೊಲ್ಲಾರ್ಡ್ ಗ್ರೀನ್ಸ್ನಂತಹ ಗಾಢ ಹಸಿರೆಲೆ ತರಕಾರಿಗಳಲ್ಲಿ ಕಬ್ಬಿಣದ ಅಂಶ ಹೆಚ್ಚಿರುತ್ತದೆ. ಇವುಗಳನ್ನು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನಬಹುದು. ಸಲಾಡ್, ಸ್ಮೂಥಿ, ಸೂಪ್ ಅಥವಾ ಸೈಡ್ ಡಿಶ್ಗಳಾಗಿ ಸೇರಿಸಿಕೊಳ್ಳಬಹುದು. ಮಾಂಸಾಹಾರಿ ಆಹಾರಗಳಲ್ಲಿ ಕಂಡುಬರುವಷ್ಟು ಕಬ್ಬಿಣದ ಅಂಶವಿರದಿದ್ದರೂ, ಸುಲಭವಾಗಿ ಹೀರಿಕೊಳ್ಳುವ ಕಬ್ಬಿಣದ ಪ್ರಕಾರವನ್ನು ಹೊಂದಿದೆ. ಅವುಗಳನ್ನು ವಿಟಮಿನ್ ಸಿ ಭರಿತ ಆಹಾರಗಳೊಂದಿಗೆ ಸೇರಿಸುವುದರಿಂದ ಹೀರುವಿಕೆಯು ಇನ್ನಷ್ಟು ಹೆಚ್ಚುತ್ತದೆ.