ಮಾರುಕಟ್ಟೆಯಲ್ಲಿ ಎಷ್ಟು ಬಗೆಯ ಮಾವಿನ ಹಣ್ಣು ಲಭ್ಯವಿದೆ? ಹಣ್ಣುಗಳ ರಾಜನ ಕುರಿತು ನೀವು ತಿಳಿಯಲೇ ಬೇಕಾದ ವಿಚಾರಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಮಾರುಕಟ್ಟೆಯಲ್ಲಿ ಎಷ್ಟು ಬಗೆಯ ಮಾವಿನ ಹಣ್ಣು ಲಭ್ಯವಿದೆ? ಹಣ್ಣುಗಳ ರಾಜನ ಕುರಿತು ನೀವು ತಿಳಿಯಲೇ ಬೇಕಾದ ವಿಚಾರಗಳಿವು

ಮಾರುಕಟ್ಟೆಯಲ್ಲಿ ಎಷ್ಟು ಬಗೆಯ ಮಾವಿನ ಹಣ್ಣು ಲಭ್ಯವಿದೆ? ಹಣ್ಣುಗಳ ರಾಜನ ಕುರಿತು ನೀವು ತಿಳಿಯಲೇ ಬೇಕಾದ ವಿಚಾರಗಳಿವು

ರುಚಿ ರುಚಿಯಾದ ಮಾವಿನ ಹಣ್ಣುಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ಬೇಸಿಗೆಯ ಬಿರು ಬಿಸಿಲಿನಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ದುಬಾರಿ ಬೆಲೆ ತೆತ್ತರೂ ಸರಿಯೇ ಮಾವಿನ ಹಣ್ಣನ್ನು ಸವಿಯುತ್ತಾರೆ. ಹಾಗಾದರೆ ಕರ್ನಾಟಕದಲ್ಲಿ ಯಾವೆಲ್ಲಾ ಬಗೆಯ ಮಾವಿನ ಹಣ್ಣುಗಳು ಮಾವು ಪ್ರಿಯರಿಗಾಗಿ ಲಭ್ಯ? ಇಲ್ಲಿದೆ ಇನ್ನಷ್ಟು ಮಾಹಿತಿ.

ಹಣ್ಣುಗಳ ರಾಜನ ಕುರಿತು ನೀವು ತಿಳಿಯಲೇ ಬೇಕಾದ ವಿಚಾರಗಳಿವು
ಹಣ್ಣುಗಳ ರಾಜನ ಕುರಿತು ನೀವು ತಿಳಿಯಲೇ ಬೇಕಾದ ವಿಚಾರಗಳಿವು

ಬೇಸಿಗೆ ಕಾಲ ಬಂತೆಂದರೆ ಸಾಕು ಸುಡುವ ಬಿಸಿಲು, ತಾಪಮಾನದ ನಡುವೆಯೂ ಖುಷಿ ಪಡುವ ವಿಚಾರವೊಂದಂತೂ ಇದ್ದೇ ಇದೆ. ಅದುವೇ ಮಾವಿನ ಹಣ್ಣಿನ ಸೀಸನ್‌ ಬಂದೇ ಬಿಟ್ಟಿದೆ ಎನ್ನುವುದು. ಹೌದು, ಎಪ್ರಿಲ್‌-ಮೇ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳದ್ದೇ ಕಾರುಬಾರು. ಆದರೆ ಮಾವು ಪ್ರಿಯರಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಯಾವೆಲ್ಲಾ ವಿಧದ ಮಾವಿನ ಹಣ್ಣುಗಳು ಲಭ್ಯವಿದೆ? ಆ ಮಾವಿನ ಹಣ್ಣುಗಳ ವಿಶೇಷತೆಗಳೇನು ಎಂಬುದರ ಮಾಹಿತಿ ನಿಮಗಾಗಿ.

ಅಲ್ಫೋನ್ಸೋ

ಮಾವಿನ ಹಣ್ಣಿನ ರಾಜ ಎಂದು ಕರೆಯಲ್ಪಡುವ ಅಲ್ಫೋನ್ಸೋ, ನಾರುರಹಿತವಾಗಿದ್ದು ಬಹಳ ಸಿಹಿ ಮತ್ತು ರುಚಿಕರ ತಿರುಳಿನಿಂದಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದರಲ್ಲಿ ವಿಟಮಿನ್ ‘ಎ’ ಹಾಗೂ ‘ಸಿ’ ಅಂಶ ಹೇರಳವಾಗಿದ್ದು, ಬಂಗಾರದ ಹಳದಿ ಬಣ್ಣ ಹೊಂದಿರುತ್ತವೆ. ಹೆಚ್ಚು ದಿನಗಳವರೆಗೆ ಉಳಿಯುವ ಈ ಮಾವಿನ ತಳಿಯು ರಫ್ತಿಗೆ ಸೂಕ್ತವಾಗಿದೆ.

ತೋತಾಪುರಿ

ಈ ಹಣ್ಣು ಆಕಾರದಲ್ಲಿ ದೊಡ್ಡದಾಗಿದ್ದು, ಹೆಚ್ಚಾಗಿ ಉಪ್ಪಿನಕಾಯಿ, ಚಟ್ನಿ ಸೇರಿದಂತೆ ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ. ವಿಶಿಷ್ಟ ಪರಿಮಳ ಹಾಗೂ ರುಚಿಯೊಂದಿಗೆ ಬಂಗಾರದ ಹಳದಿ ಬಣ್ಣದ ಈ ಹಣ್ಣುಗಳು ತಿನ್ನಲು ಬಹಳ ರುಚಿ.

ಬಾದಾಮಿ ಮಾವು

ಬಾದಾಮಿ ಮಾವು ಭಾರತದಲ್ಲಿ ಲಭ್ಯವಿರುವ ಹಣ್ಣಾಗಿದ್ದು ಸಿಹಿ ಮತ್ತು ಹೆಚ್ಚು ತಿರುಳನ್ನು ಹೊಂದಿದೆ. ಇದನ್ನು ಕಾಯಿ ರೂಪದಲ್ಲೂ ಬಳಸುತ್ತಾರೆ ಮತ್ತು ಮ್ಯಾಂಗೋ ಶೇಕ್ಸ್‌ಗಳನ್ನು ತಯಾರಿಸಲು ಹೆಚ್ಚು ಬಳಸುತ್ತಾರೆ.

ಇದನ್ನೂ ಓದಿ | Summer Drinks: ಉರಿ ಬಿಸಿಲಿನಲ್ಲಿ ದೇಹ ತಂಪಾಗಿಸುವ ಹೂವಿನ ಪಾನೀಯಗಳಿವು, ಯಾವೆಲ್ಲಾ ಹೂಗಳಿಂದ ಜ್ಯೂಸ್‌ ತಯಾರಿಸಬಹುದು ನೋಡಿ

ಬೈಗನಾಪಲ್ಲಿ

ಹಿಂದಿಯಲ್ಲಿ ಇದನ್ನು ಸಾಮಾನ್ಯವಾಗಿ ಬನೇಶನ್ ಎಂದು ಕರೆಯುತ್ತಾರೆ. ಮೇ-ಜುಲೈ ತಿಂಗಳ ನಡುವೆ ದೊರೆಯುವ ಮಧ್ಯಂತರ ತಳಿಯಿದು. ಈ ಹಣ್ಣುಗಳು ಸಾಧಾರಣವಾಗಿ ದೊಡ್ಡ ಗಾತ್ರ ಹೊಂದಿದ್ದು, ಸರಾಸರಿ 350-400 ಗ್ರಾಂಗಳಷ್ಟು ತೂಗುತ್ತವೆ. ಇದರ ತಿರುಳು ನಾರುರಹಿತವಾಗಿದ್ದು, ಹಳದಿ ಬಣ್ಣದಲ್ಲಿರುತ್ತವೆ. ತಿನ್ನಲು ಬಹಳ ಸಿಹಿಯಾಗಿರುತ್ತವೆ.

ಕೇಸರ್

ಮಾವಿನ ಸೀಸನ್‌ ನಲ್ಲಿ ಲಭ್ಯವಾಗುವ ಆರಂಭದ ತಳಿ ಇದಾಗಿದ್ದು, ಮಾವುಗಳ ವಿಧದಲ್ಲಿ ಇದು ತುಂಬಾ ಪ್ರಸಿದ್ಧವಾಗಿದೆ. ಇದನ್ನು ಕಾಯಿ ರೂಪದಲ್ಲೂ ಬಳಸುತ್ತಾರೆ. ಸಿಹಿತಿಂಡಿಗಳಲ್ಲಿ ಹೆಚ್ಚಾಗಿ ಬಳಸಲಾಗುವ ಈ ಮಾವಿನ ಹಣ್ಣುಗಳು ಮಾಗಿದ ಮೇಲೆ ಆಕರ್ಷಕ ಏಪ್ರಿಕಾಟ್ ಹಳದಿ ಬಣ್ಣದಿಂದ ತಿಳಿ ಕೆಂಪು ಬಣ್ಣಕ್ಕೆ ಬದಲಾಗುತ್ತವೆ. ಜೊತೆಗೆ ಹೆಚ್ಚು ದಿನ ಇದು ಕೆಡುವುದಿಲ್ಲ.

ದಾಶೇರಿ

ಈ ಮಾವಿನ ಹಣ್ಣನ್ನು ಹೆಚ್ಚಾಗಿ ಐಸ್ ಕ್ರೀಮ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಣ್ಣಿನ ಸಿಪ್ಪೆ ದಪ್ಪಗಿದ್ದು, ಹಳದಿ ಬಣ್ಣವನ್ನು ಹೊಂದಿರುತ್ತದೆ. ಇದರ ರುಚಿ ಸಿಹಿಯಾಗಿದ್ದು, ಸಾಧಾರಣ ಗಾತ್ರ ಹೊಂದಿರುತ್ತದೆ.

ಲಾಂಗ್ರಾ

ಲಾಂಗ್ರಾ ಮಾವಿನ ತಳಿಯು ಹಸಿರು ಮತ್ತು ಹಳದಿ ಮಿಶ್ರಿತ ಬಣ್ಣವನ್ನು ಹೊಂದಿರುತ್ತದೆ. ಈ ಹಣ್ಣಿನಲ್ಲಿ ನಾರಿನಾಂಶಗಳು ಹೆಚ್ಚಾಗಿ ಕಂಡುಬರುತ್ತದೆ.

ಮಲ್ಗೋವಾ

ರುಚಿಯಲ್ಲಿ ಹುಳಿಯಾಗಿರುವುದರಿಂದ ಮಲ್ಗೋವಾವನ್ನು ಕಾಯಿ ರೂಪದಲ್ಲಿ ಸೇವಿಸುವುದಿಲ್ಲ. ಉಪ್ಪಿನಕಾಯಿ ಹಾಗೂ ಮ್ಯಾಂಗೋ ಶೇಕ್ಸ್‌ಗಳಲ್ಲಿ ಮಲ್ಗೋವಾವನ್ನು ಹೆಚ್ಚು ಬಳಸುತ್ತಾರೆ. ದೊಡ್ಡ ಗಾತ್ರ, ಗುಂಡಾದ ಆಕಾರ ಹಾಗೂ ತಿಳಿ ಹಳದಿ ಬಣ್ಣ ಹೊಂದಿರುವ ನಾರುರಹಿತ ಹಣ್ಣು ಇದಾಗಿದೆ.

ಮಲ್ಲಿಕಾ

ಇದು ನೀಲಂ ಮತ್ತು ದುಸ್ಸೇರಿಯಾ ಹೈಬ್ರೀಡ್ ತಳಿಯಾಗಿರುವ ಮಲ್ಲಿಕಾದ ತವರು ಭಾರತವಾಗಿದೆ. ತಳಿ ಸಂವರ್ಧನೆಯ ಮೂಲಕ ಅಭಿವೃದ್ಧಿಪಡಿಸಿರುವ ಮೊದಲ ಮಾವಿನ ಹೈಬ್ರಿಡ್ ತಳಿ ಇದು. ಹಣ್ಣುಗಳು ದೊಡ್ಡ ಗಾತ್ರದಲ್ಲಿದ್ದು, ಕೇಸರಿ ಹಳದಿ ಬಣ್ಣ ಹೊಂದಿರುತ್ತವೆ.

ರಸ್‌ಪೂರಿ

ಪೈರಿ, ಕಲಮಿ ಎಂದೂ ಕರೆಯಲ್ಪಡುವ ರಸ್‌ಪೂರಿ ಮಾವಿನ ಹಣ್ಣು ಓವಲ್ ಆಕಾರದಲ್ಲಿದ್ದು, ಹಳದಿ ಬಣ್ಣದಿಂದ ಕೂಡಿರುತ್ತದೆ. ಭಾರತದ ದಕ್ಷಿಣ ರಾಜ್ಯಗಳಲ್ಲಿ ಇದು ಹೆಸರುವಾಸಿ. ರುಚಿಕರವಾದ ಈ ಹಣ್ಣಿನ ತಿರುಳು ಮೃದುವಾಗಿರುತ್ತದೆ ಹಾಗೂ ನಾರುರಹಿತವಾಗಿರುತ್ತವೆ.

ಸಿಂಧೂರಾ

ಸೆಂದೂರ ಎಂದೂ ಕರೆಯಲ್ಪಡುವ ಸಿಂಧೂರಾ ಮಾವು ಗಾಢ ಕೆಂಪು ಮತ್ತು ಹಸಿರು ವರ್ಣದಿಂದ ಕೂಡಿದ್ದು, ರುಚಿಯಲ್ಲಿ ಸಿಹಿ ಮತ್ತು ಹೆಚ್ಚು ತಿರುಳಿನಿಂದ ಸಮೃದ್ಧವಾಗಿದೆ. ಇದರ ಸವಿಯಾದ ರುಚಿ ಹಾಗೂ ಪರಿಮಳದಿಂದಾಗಿ “ಜೇನು ಮಾವು” ಎಂದೂ ಕರೆಯಲ್ಪಡುತ್ತದೆ.

ನೀಲಂ

ಮಧ್ಯಮ ಗಾತ್ರ, ಅಂಡಾಕಾರ ಹಾಗೂ ಕೇಸರಿ ಮಿಶ್ರಿತ ಹಳದಿ ಬಣ್ಣದಲ್ಲಿರುವ ನೀಲಂ ಮಾವು ನಾರುರಹಿತ ಹಣ್ಣು. ಪ್ರತಿ ನೀಲಂ ಹಣ್ಣು ಸರಾಸರಿ 200-250 ಗ್ರಾಂ ತೂಗುತ್ತವೆ

ಆಮ್ರಪಾಲಿ

ದಶೇಹರಿ ಹಾಗೂ ನೀಲಂನಿಂದ ಪಡೆದಿರುವ ಹೈಬ್ರಿಡ್ ತಳಿ ಇದು. ಚಿಕ್ಕ ಗಾತ್ರದ ಈ ಹಣ್ಣುಗಳು ರುಚಿಯಲ್ಲೂ ಎಲ್ಲರ ಮೆಚ್ಚುಗೆ ಗಳಿಸಿದೆ.

ಹಿಮಾಮ್ ಪಸಂದ್

ಹಿಮಾಯತ್ ಮಾವು ಇಮಾಮ್ ಪಸಂದ್ ಅಥವಾ ಹಿಮಾಮ್ ಪಸಂದ್ ಅಥವಾ ಹಿಮಯುದ್ದೀನ್ ಅಥವಾ ಹುಮಾಯೂನ್ ಪಸಂದ್ ಅಥವಾ ಹಿಮ್ಮಾ ಪಸಂದ್ ಎಂದೂ ಕರೆಯುತ್ತಾರೆ . ಸಾಮಾನ್ಯವಾಗಿ ಸುಮಾರು 500 ರಿಂದ 750 ಗ್ರಾಂ ತೂಗುತ್ತದೆ. ಇದು ತೆಳುವಾದ ಸಿಪ್ಪೆಯನ್ನು ಹೊಂದಿದೆ.

ಒಟ್ಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಈ ಬಗೆ ಬಗೆಯ ಮಾವಿನಹಣ್ಣುಗಳು ಬೆಲೆಯಲ್ಲಿ ಕೊಂಚ ದುಬಾರಿಯೇ ಇವೆ. ಆದರೂ ರುಚಿಯಲ್ಲಿ ರಾಜಿಯಿಲ್ಲದ ಈ ಸೀಸನಲ್‌ ಫ್ರುಟ್‌ಗಳನ್ನು ತಿನ್ನದೇ ಇರುವುದಾದರೂ ಹೇಗೆ ಅಲ್ವಾ?

Whats_app_banner