ದಿನಕ್ಕೆ ಒಂದು ಪೆಗ್‌ ಕುಡಿದ್ರೆ ಕ್ಯಾನ್ಸರ್‌ ಬರೋಲ್ವ? ಆಲ್ಕೋಹಾಲ್‌ಗೂ ಅರ್ಬುದಕ್ಕೂ ಇದೆ ನಂಟು, ಹೀಗಿದೆ ಸಂಶೋಧಕರ ಅಭಿಪ್ರಾಯ
ಕನ್ನಡ ಸುದ್ದಿ  /  ಜೀವನಶೈಲಿ  /  ದಿನಕ್ಕೆ ಒಂದು ಪೆಗ್‌ ಕುಡಿದ್ರೆ ಕ್ಯಾನ್ಸರ್‌ ಬರೋಲ್ವ? ಆಲ್ಕೋಹಾಲ್‌ಗೂ ಅರ್ಬುದಕ್ಕೂ ಇದೆ ನಂಟು, ಹೀಗಿದೆ ಸಂಶೋಧಕರ ಅಭಿಪ್ರಾಯ

ದಿನಕ್ಕೆ ಒಂದು ಪೆಗ್‌ ಕುಡಿದ್ರೆ ಕ್ಯಾನ್ಸರ್‌ ಬರೋಲ್ವ? ಆಲ್ಕೋಹಾಲ್‌ಗೂ ಅರ್ಬುದಕ್ಕೂ ಇದೆ ನಂಟು, ಹೀಗಿದೆ ಸಂಶೋಧಕರ ಅಭಿಪ್ರಾಯ

ಆಲ್ಕೋಹಾಲ್‌ ಸೇವನೆಯು ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಲ್ಲಿ ಒಂದಾಗಿದೆ. ಅಮೆರಿಕದಲ್ಲಿ ವಾರ್ಷಿಕ 1 ಲಕ್ಷ ಕ್ಯಾನ್ಸರ್‌ ಪ್ರಕರಣಗಳು ಮತ್ತು 20 ಸಾವಿರ ಕ್ಯಾನ್ಸರ್‌ ಸಂಬಂಧಿತ ಸಾವಿಗೆ ಆಲ್ಕೋಹಾಲ್‌ ಕಾರಣವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ದಿನಕ್ಕೆ ಒಂದು ಡ್ರಿಂಕ್‌ ಕುಡಿಯುವುದೂ ಅಪಾಯಕಾರಿಯೇ?

ದಿನಕ್ಕೆ ಒಂದು ಪೆಗ್‌ ಕುಡಿದ್ರೆ ಕ್ಯಾನ್ಸರ್‌ ಬರೋಲ್ವ? ಆಲ್ಕೋಹಾಲ್‌ಗೂ ಅರ್ಬುದಕ್ಕೂ ಇದೆ ನಂಟು
ದಿನಕ್ಕೆ ಒಂದು ಪೆಗ್‌ ಕುಡಿದ್ರೆ ಕ್ಯಾನ್ಸರ್‌ ಬರೋಲ್ವ? ಆಲ್ಕೋಹಾಲ್‌ಗೂ ಅರ್ಬುದಕ್ಕೂ ಇದೆ ನಂಟು (Pexels)

ಆಲ್ಕೋಹಾಲ್ ಸೇವನೆಯು ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ ಕ್ಯಾನ್ಸರ್‌ ಪ್ರಕರಣಗಳಿಗೆ ಆಲ್ಕೋಹಾಲ್‌ ಗಣನೀಯವಾಗಿ ಕೊಡುಗೆ ನೀಡುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾರ್ಷಿಕವಾಗಿ ಸುಮಾರು 1 ಲಕ್ಷ ಕ್ಯಾನ್ಸರ್ ಪ್ರಕರಣಗಳು ಮತ್ತು 20,000 ಕ್ಯಾನ್ಸರ್-ಸಂಬಂಧಿತ ಸಾವುಗಳು ಆಲ್ಕೋಹಾಲ್‌ ಸೇವನೆಯಿಂದ ಸಂಭವಿಸುತ್ತವೆ ಎಂದು ಅಲ್ಲಿನ ಸರ್ಜನ್‌ ಜನರಲ್‌ ಹೇಳಿದ್ದಾರೆ.

ಆಲ್ಕೋಹಾಲ್‌ ಸಂಬಂಧಿತ ಕ್ಯಾನ್ಸರ್‌ಗಳು ಅಭಿವೃದ್ಧಿಯಾಗುವ ಅಪಾಯವೂ ಎಷ್ಟು ಮದ್ಯ ಸೇವಿಸುತ್ತೇವೆ ಎನ್ನುವುದನ್ನೂ ಅವಲಂಬಿಸಿದೆ. ಪ್ರತಿದಿನ ಎರಡು ಡ್ರಿಂಕ್ಸ್‌ ಸೇವಿಸುವ ಮಹಿಳೆಯರಿಗೆ ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್‌ ಬರುವ ಸಾಧ್ಯತೆ ಶೇಕಡ 15.3ರಷ್ಟು ಇರುತ್ತದೆ. ಇದು ವಾರಕ್ಕೆ ಒಂದು ಡ್ರಿಂಕ್‌ಗಿಂತ ಕಡಿಮೆ ಸೇವಿಸುವವರಿಗೆ ಶೇಕಡ 11.3ರಷ್ಟು ಇರುವ ಕ್ಯಾನ್ಸರ್‌ ಅಪಾಯಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಹೆಚ್ಚು ಆಲ್ಕೋಹಾಲ್‌ ಸೇವನೆಯು ಬಾಯಿ ಮತ್ತು ಗಂಟಲು ಕ್ಯಾನ್ಸರ್‌ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಆಲ್ಕೋಹಾಲ್‌ನಿಂದ ಕಡಿಮೆಯೆಂದರೂ ಏಳು ಬಗೆಯ ಕ್ಯಾನ್ಸರ್‌ ಅಪಾಯವಿದೆ ಎಂದು ಸಂಶೋಧನೆಗಳು ಹೇಳಿವೆ. ಇವುಗಳಲ್ಲಿ ಸ್ತನ (ಮಹಿಳೆಯರಲ್ಲಿ), ಯಕೃತ್ತು, ಬಾಯಿ, ಗಂಟಲು, ಅನ್ನನಾಳ, ಧ್ವನಿಪೆಟ್ಟಿಗೆ (ಲಾರೆಂಕ್ಸ್) ಮತ್ತು ಕೊಲೊರೆಕ್ಟಮ್ ಕ್ಯಾನ್ಸರ್ ಸೇರಿವೆ. ದಿನಕ್ಕೆ ಒಂದು ಡ್ರಿಂಕ್ಸ್‌ಗಿಂತ (ನಾವಿದನ್ನು ಒಂದು ಪೆಗ್‌ ಎನ್ನಬಹುದು) ಕಡಿಮೆ ಆಲ್ಕೋಹಾಲ್ ಸೇವನೆಯು ಸ್ತನ ಮತ್ತು ಬಾಯಿಯ ಕ್ಯಾನ್ಸರ್‌ಗಳಂತಹ ಕೆಲವು ವಿಧದ ಕ್ಯಾನ್ಸರ್‌ಗಳನ್ನು ಉಂಟು ಮಾಡುವ ಅಪಾಯವಿದೆ.

ಆಲ್ಕೋಹಾಲ್‌ನಿಂದ ಕ್ಯಾನ್ಸರ್‌ ಬರುವುದಕ್ಕೂ ವಿವಿಧ ಬಯೋಲಾಜಿಕಲ್‌ ಅಂಶಕ್ಕೂ ಸಂಬಂಧವಿದೆ. ಆಲ್ಕೋಹಾಲ್ ಅಸೆಟಾಲ್ಡಿಹೈಡ್ ಆಗಿ ಚಯಾಪಚಯಗೊಳ್ಳುತ್ತದೆ. ಇದು ಡಿಎನ್ಎಗೆ ಹಾನಿ ಮಾಡುವ ವಿಷಕಾರಿ ಸಂಯುಕ್ತವಾಗಿದೆ. ಇದು ಗೆಡ್ಡೆಯ ರಚನೆಗೆ ಕಾರಣವಾಗುತ್ತದೆ. ಆಲ್ಕೋಹಾಲ್ ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳನ್ನು (reactive oxygen species) ಉತ್ಪಾದಿಸುತ್ತದೆ. ಇದು ಉರಿಯೂತ ಮತ್ತು ಇನ್ನಷ್ಟು ಡಿಎನ್‌ಎ ಹಾನಿಗೆ ಕಾರಣವಾಗುತ್ತದೆ.

ಆಲ್ಕೋಹಾಲ್ ಹಾರ್ಮೋನ್ ಮಟ್ಟದ ಮೇಲೆ ಕೂಡ ಪರಿಣಾಮ ಬೀರುತ್ತದೆ. ವಿಶೇಷವಾಗಿ ಈಸ್ಟ್ರೊಜೆನ್ ಮೇಲೆ ಪರಿಣಾಮ ಬೀರುತ್ತದೆ. ಇದು ಸ್ತನ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು. ಹೀಗೆ ಆಲ್ಕೋಹಾಲ್‌ನಿಂದ ಕ್ಯಾನ್ಸರ್‌ ಸಂಭವಿಸಬಹುದಾದ ಸಾಧ್ಯತೆಗಳು ಸಾಕಷ್ಟು ಇವೆ ಎಂದು ಸಂಶೋಧಕರು ಹೇಳಿದ್ದಾರೆ.

ಮೇಲಿನ ಅಪಾಯಗಳ ಕುರಿತು ಸಂಶೋಧನೆಗಳು ಹೇಳಿದರೂ ಈ ಕುರಿತು ಸಾರ್ವಜನಿಕ ಜಾಗೃತಿ ಕೊರತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. ತಂಬಾಕಿನಿಂದ ಕ್ಯಾನ್ಸರ್‌ ಉಂಟಾಗುತ್ತದೆ ಎಂದು ಪ್ರಚಾರ ಮಾಡಿದ್ದಷ್ಟು ಮದ್ಯಪಾನದಿಂದ ಕ್ಯಾನ್ಸರ್‌ ಉಂಟಾಗುತ್ತದೆ ಎಂದು ಪ್ರಚಾರ ಮಾಡುತ್ತಿಲ್ಲ. ಆಲ್ಕೋಹಾಲ್‌ನಿಂದ ಕ್ಯಾನ್ಸರ್‌ ಉಂಟಾಗಬಹುದೆಂದು ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸುವ ಪ್ರಯತ್ನ ಹೆಚ್ಚಬೇಕಿದೆ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಮದ್ಯಪಾನ  ಕಡಿಮೆ ಮಾಡಲು/ನಿಲ್ಲಿಸಲು ಜನರಿಗೆ ಪ್ರೋತ್ಸಾಹ ನೀಡುವ ಮೂಲಕ ಕ್ಯಾನ್ಸರ್‌ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ತಡೆಗಟ್ಟಬಹುದಾದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದು ಅತ್ಯಂತ ಅಗತ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

Whats_app_banner