ಬೆಳಗ್ಗೆ ಒಂದು ಕಪ್ ಅಶ್ವಗಂಧ ಚಹಾ ಕುಡಿಯಿರಿ, ಶೀತ-ಗಂಟಲು ನೋವಿಗೆ ಪರಿಹಾರ ಪಡೆಯಿರಿ: ತಯಾರಿಸುವ ವಿಧಾನ ಹೀಗಿದೆ
ಬೆಳಗ್ಗೆ ಚಹಾ ಕುಡಿಯುವ ಮೂಲಕ ಅನೇಕರು ತಮ್ಮ ದಿನಚರಿ ಪ್ರಾರಂಭಿಸುತ್ತಾರೆ. ಅಂತಹವರು ಇನ್ಮುಂದೆ ಸಾಮಾನ್ಯ ಚಹಾ ಬದಲಿಗೆ ಅಶ್ವಗಂಧ ಚಹಾವನ್ನು ಕುಡಿಯಲು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲಿದ್ದೀರಿ. ವಿಶೇಷವಾಗಿ ಚಳಿಗಾಲದಲ್ಲಿ ಶೀತ ಮತ್ತು ಗಂಟಲಿನ ಸಮಸ್ಯೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿದೆ.ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಇಂದು ಬಹಳಷ್ಟು ಮಂದಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಆಯುರ್ವೇದದಲ್ಲಿ ಪರಿಹಾರವೂ ಇದೆ. ಬೆಚ್ಚಗಿನ ಹಾಲು ಕುಡಿಯುವುದರಿಂದ ನಿದ್ರಾಹೀನತೆಗೆ ಉತ್ತಮ ಪರಿಹಾರವಾಗಿದೆ. ಆಯುರ್ವೇದದಲ್ಲಿ ಬಹಳ ಮುಖ್ಯವಾದ ಅಶ್ವಗಂಧವು ದೈಹಿಕ ಮತ್ತು ಮಾನಸಿಕ ಒತ್ತಡದ ವಿರುದ್ಧ ಹೋರಾಡುವುದು, ಶಕ್ತಿಯನ್ನು ಹೆಚ್ಚಿಸುವುದು ಮತ್ತು ಹಾರ್ಮೋನುಗಳನ್ನು ಸಮತೋಲನಗೊಳಿಸುವಂತಹ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ದಾಲ್ಚಿನ್ನಿ ಪುಡಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಹಲವು ಅನೂಕಲಗಳನ್ನು ಹೊಂದಿರುವ ಅಶ್ವಗಂಧವನ್ನು ಸೇವಿಸುವುದರಿಂದ ಪ್ರಯೋಜನಗಳನ್ನು ಪಡೆಯಬಹುದು. ಅದರಂತೆಯೇ ದಿನಾ ಬೆಳಗ್ಗೆ ಎದ್ದು ಒಂದು ಕಪ್ ಅಶ್ವಗಂಧ ಚಹಾವನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು. ಕೆಲವು ಪದಾರ್ಥಗಳನ್ನು ಉಪಯೋಗಿಸಿ ಈ ಚಹಾವನ್ನು ತಯಾರಿಸಲಾಗುತ್ತದೆ. ಇದನ್ನು ತಯಾರಿಸುವುದು ತುಂಬಾ ಸರಳ. ಆದರೆ, ಇವಿಷ್ಟು ಪದಾರ್ಥಗಳಿದ್ದರೆ ಸಾಕು, ಅಶ್ವಗಂಧ ಚಹಾ ಸಿದ್ಧವಾಗುತ್ತದೆ.
ಅಶ್ವಗಂಧ ಚಹಾ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಹಾಲು- ಒಂದು ಕಪ್, ಅಶ್ವಗಂಧ- 1 ಚಿಕ್ಕ ತುಂಡು, ಅರಿಶಿನ- ಒಂದು ಚಿಟಿಕೆ, ದಾಲ್ಚಿನ್ನಿ ಪುಡಿ- ಒಂದು ಚಮಚ, ಏಲಕ್ಕಿ ಪುಡಿ- ಒಂದು ಚಿಟಿಕೆ, ಶುಂಠಿ ಪುಡಿ- ಒಂದು ಚಿಟಿಕೆ, ಜಾಯಿಕಾಯಿ ಪುಡಿ- ಒಂದು ಚಿಟಿಕೆ, ಕಾಳುಮೆಣಸಿನ ಪುಡಿ- ಕಾಲು ಟೀ ಚಮಚ, ಚಹಾ ಪುಡಿ- ಒಂದು ಟೀ ಚಮಚ, ತುಪ್ಪ- ಒಂದು ಚಮಚ, ಜೇನುತುಪ್ಪ- 1 ಟೀ ಚಮಚ.
ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಸುರಿಯಿರಿ ಮತ್ತು ಅದನ್ನು ಬಿಸಿ ಮಾಡಿ.
- ಹಾಲು ಬೆಚ್ಚಗಾದ ನಂತರ ಅದಕ್ಕೆ ದಾಲ್ಚಿನ್ನಿ ಪುಡಿ, ಅರಿಶಿನ, ಅಶ್ವಗಂಧ ತುಂಡು ಅಥವಾ ಅಶ್ವಗಂಧ ಪುಡಿ 1 ಟೀ ಚಮಚ, ಏಲಕ್ಕಿ ಪುಡಿ, ಶುಂಠಿ ಪುಡಿ, ಜಾಯಿಕಾಯಿ ಪುಡಿ, ಚಹಾ ಪುಡಿ, ಕಾಳುಮೆಣಸಿನ ಪುಡಿ ಸೇರಿಸಿ.
- ಹಾಲು ಹಾಳಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಅದಕ್ಕೆ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಹತ್ತು ನಿಮಿಷ ಬಿಸಿ ಮಾಡಿ.
- ನಂತರ ಸ್ಟೌವ್ ಆಫ್ ಮಾಡಿ. ಹಾಲು ಸ್ವಲ್ಪ ತಣ್ಣಗಾಗುವವರೆಗೆ ಕಾಯಿರಿ.
- ತಣ್ಣಗಾದ ನಂತರ ಹಾಲನ್ನು ಸೋಸಿ ಅದಕ್ಕೆ ಜೇನುತುಪ್ಪ ಸೇರಿಸಿ.
- ಇಷ್ಟು ಮಾಡಿದರೆ ಬಿಸಿಯಾದ, ಆರೋಗ್ಯಕರ ಮತ್ತು ಟೇಸ್ಟಿ ಅಶ್ವಗಂಧ ಚಹಾ ಸಿದ್ಧ. ಇದನ್ನು ಒಂದು ಕಪ್‌ಗೆ ಸುರಿದು ಬಿಸಿ ಬಿಸಿಯಾಗಿ ಕುಡಿಯಿರಿ.
ಈ ಚಹಾ ಕುಡಿಯುವುದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಹಳ ಒಳ್ಳೆಯದು. ವಿಶೇಷವಾಗಿ ಚಳಿಗಾಲದಲ್ಲಿ ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಈ ಚಹಾ ಉತ್ತಮ ಪರಿಹಾರವಾಗಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)