ಬ್ಲಾಕ್ ಕಾಫಿ ಸೇವನೆಯ ಮೂಲಕ ಪ್ರಾರಂಭಿಸಿ ದಿನಚರಿ: ಇದರ ಆರೋಗ್ಯ ಪ್ರಯೋಜನ ತಿಳಿದ್ರೆ ಪ್ರತಿದಿನ ಕುಡಿಯುವಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬ್ಲಾಕ್ ಕಾಫಿ ಸೇವನೆಯ ಮೂಲಕ ಪ್ರಾರಂಭಿಸಿ ದಿನಚರಿ: ಇದರ ಆರೋಗ್ಯ ಪ್ರಯೋಜನ ತಿಳಿದ್ರೆ ಪ್ರತಿದಿನ ಕುಡಿಯುವಿರಿ

ಬ್ಲಾಕ್ ಕಾಫಿ ಸೇವನೆಯ ಮೂಲಕ ಪ್ರಾರಂಭಿಸಿ ದಿನಚರಿ: ಇದರ ಆರೋಗ್ಯ ಪ್ರಯೋಜನ ತಿಳಿದ್ರೆ ಪ್ರತಿದಿನ ಕುಡಿಯುವಿರಿ

ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿರುವ ಬ್ಲಾಕ್ ಕಾಫಿ ಸೇವನೆಯಿಂದ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ತೂಕ ಇಳಿಕೆಯಿಂದ, ಹೃದ್ರೋಗ, ಟೈಪ್ 2 ಮಧುಮೇಹ ಕಾಯಿಲೆಯಂತಹ ಪರಿಸ್ಥಿತಿಗಳಿಂದ ರಕ್ಷಣೆ ನೀಡುವಲ್ಲಿಯೂ ಇದು ಸಹಕಾರಿಯಾಗಿದೆ.

ಬೆಳಗ್ಗೆ ಬ್ಲಾಕ್ ಕಾಫಿ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೆಳಗ್ಗೆ ಬ್ಲಾಕ್ ಕಾಫಿ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. (Canva)

ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ, ಹಾಲು, ಸಕ್ಕರೆ ಹಾಕದ ಬ್ಲಾಕ್ ಕಾಫಿ ಸೇವೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬ್ಲಾಕ್ ಕಾಫಿ ಸರಳವಾಗಿದ್ದರೂ ಶಕ್ತಿಯುತ ಪಾನೀಯವಾಗಿದೆ. ಅದರ ಸುವಾಸನೆ ಮತ್ತು ಉತ್ತೇಜಕ ಪರಿಮಳವನ್ನು ಮೀರಿ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಸಕ್ಕರೆ ಹಾಕದ, ಕೊಬ್ಬಿನಿಂದ ಮುಕ್ತವಾದ ಬ್ಲಾಕ್ ಕಾಫಿಯಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಆರೋಗ್ಯಕರ ಜೀವನಶೈಲಿಗೆ ಉತ್ತಮ ಸೇರ್ಪಡೆಯಾಗಿದೆ. ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿರುವ ಬ್ಲಾಕ್ ಕಾಫಿ ಸೇವನೆಯು ಅರಿವಿನ ಕಾರ್ಯವನ್ನು ವರ್ಧಿಸುತ್ತದೆ. ಅಲ್ಲದೆ, ಚಯಾಪಚಯವನ್ನು ಹೆಚ್ಚಿಸುತ್ತದೆ. ಒಟ್ಟಾರೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ತೂಕ ಇಳಿಕೆಯಿಂದ, ಹೃದ್ರೋಗ, ಟೈಪ್ 2 ಮಧುಮೇಹ ಕಾಯಿಲೆಯಂತಹ ಪರಿಸ್ಥಿತಿಗಳಿಂದ ರಕ್ಷಣೆ ನೀಡುವಲ್ಲಿಯೂ ಇದು ಸಹಕಾರಿಯಾಗಿದೆ. ಬೆಳಗ್ಗೆ ಕಪ್ಪು (Black) ಕಾಫಿ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೆಳಗ್ಗೆ ಬ್ಲಾಕ್ ಕಾಫಿಯನ್ನು ಸೇವಿಸುವುದರ ಪ್ರಯೋಜನಗಳು

ತೂಕ ಇಳಿಕೆಗೆ ಸಹಕಾರಿ: ಕಾಫಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪಾನೀಯವಾಗಿದೆ. ಇದರಲ್ಲಿ ಕ್ಯಾಲೋರಿಗಳಿಲ್ಲದೆ ಇರುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಇದು ಬಹಳಷ್ಟು ಕೆಫೀನ್ ಅನ್ನು ಹೊಂದಿದ್ದು, ಚಯಾಪಚಯವನ್ನು ವೇಗಗೊಳಿಸುತ್ತದೆ. ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಸಿವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಸಂತೋಷವನ್ನು ಹೆಚ್ಚಿಸುತ್ತದೆ: ಬ್ಲಾಕ್ ಕಾಫಿ ಸೇವನೆಯು ನರವೈಜ್ಞಾನಿಕ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ನೊರ್‌ಪೈನ್ಫ್ರಿನ್ ಮತ್ತು ಡೋಪಮೈನ್‌ನಂತಹ ಸಂತೋಷದ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮಲ್ಲಿ ಲವಲವಿಕೆ ಮತ್ತು ಸಂತೋಷವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ: ಬ್ಲಾಕ್ ಕಾಫಿಯನ್ನು ಕುಡಿಯುವುದರಿಂದ ಮಧುಮೇಹ ಬರುವ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಕಾಫಿಗೆ ಪ್ರತಿಕ್ರಿಯೆಯಾಗಿ ದೇಹವು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸಬಹುದು. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಖಿನ್ನತೆ ಶಮನಕಾರಿ: ಬ್ಲಾಕ್ ಕಾಫಿಯು ಖಿನ್ನತೆಯನ್ನು ಶಮನ ಮಾಡುವ ಪರಿಣಾಮವನ್ನು ಹೊಂದಿದೆ. ಏಕೆಂದರೆ ಇದು ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ದುಃಖ ಮತ್ತು ಒಂಟಿತನ ಸೇರಿದಂತೆ ಖಿನ್ನತೆಯ ಭಾವನೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಸ್ಮರಣೆಯನ್ನು ಹೆಚ್ಚಿಸುತ್ತದೆ: ಬ್ಲಾಕ್ ಕಾಫಿ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ನಮ್ಮ ಅರಿವಿನ ಸಾಮರ್ಥ್ಯಗಳು ವಯಸ್ಸಾದಂತೆ ಹದಗೆಡುತ್ತವೆ. ದಿನನಿತ್ಯ ಬ್ಲಾಕ್ ಕಾಫಿ ಸೇವನೆಯಿಂದ ನೆನಪಿನ ಶಕ್ತಿ ವರ್ಧನೆಗೆ ಸಹಾಯಕವಾಗಿದೆ.

ಯಕೃತ್ತಿನ ಆರೋಗ್ಯಕ್ಕೆ ಸಹಕಾರಿ: ಯಕೃತ್ತು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ಅತ್ಯಗತ್ಯ ಅಂಗವಾಗಿದೆ. ಬ್ಲ್ಯಾಕ್ ಕಾಫಿಯ ಸೇವನೆಯಿಂದ ರಕ್ತದಲ್ಲಿನ ಅಪಾಯಕಾರಿ ಪಿತ್ತಜನಕಾಂಗದ ಕಿಣ್ವಗಳ ಮಟ್ಟವನ್ನು ಕಡಿಮೆ ಮಾಡಬಹುದು. ಕೆಲವು ಸಂಶೋಧನೆಗಳ ಪ್ರಕಾರ, ಕಾಫಿ ಹೆಪಟೈಟಿಸ್, ಲಿವರ್ ಸಿರೋಸಿಸ್, ಫ್ಯಾಟಿ ಲಿವರ್ ಕಾಯಿಲೆ ಮತ್ತು ಯಕೃತ್ತಿನ ಕ್ಯಾನ್ಸರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ: ಬ್ಲಾಕ್ ಕಾಫಿಯ ಉತ್ಕರ್ಷಣ ನಿರೋಧಕ ಅಂಶವು ಅದರ ಅನೇಕ ಆರೋಗ್ಯ ಪ್ರಯೋಜನಗಳಿಗೆ ಕೊಡುಗೆ ನೀಡುತ್ತದೆ. ಬ್ಲಾಕ್ ಕಾಫಿಯು ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ B2, B3 ಮತ್ತು B5 ಸೇರಿದಂತೆ ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

ಟಾಕ್ಸಿನ್ ಹೊರಹಾಕಲು ಸಹಕಾರಿ: ಕಾಫಿಯು ಮೂತ್ರವರ್ಧಕವಾಗಿರುವುದರಿಂದ, ಹೆಚ್ಚು ಕುಡಿದಷ್ಟೂ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆ. ಇದರಿಂದ ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ. ದೇಹದಲ್ಲಿರುವ ಟಾಕ್ಸಿನ್ ಮತ್ತು ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ: ಕಾಫಿ ಒಂದು ಅದ್ಭುತ ಪಾನೀಯವಾಗಿದ್ದು, ಅದು ಆತಂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಒಂದು ಕಪ್ ಬ್ಲಾಕ್ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುವ ಮೂಲಕ ಮನಸ್ಥಿತಿಯನ್ನು ತ್ವರಿತವಾಗಿ ಸುಧಾರಿಸಬಹುದು.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ: ಕಾಫಿಯಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಕೆಲವು ಅಧ್ಯಯನಗಳ ಪ್ರಕಾರ ಯಕೃತ್ತು, ಸ್ತನ ಕ್ಯಾನ್ಸರ್‌ನಂತಹ ಕೆಲವು ಕ್ಯಾನ್ಸರ್‌ಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆ.

ಒಟ್ಟಾರೆ ಬ್ಲಾಕ್ ಕಾಫಿಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆಯೇನೋ ಹೌದು. ಆದರೆ, ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಮಿತವಾಗಿ ಸೇವಿಸಬೇಕು. ಹೆಚ್ಚು ಹೆಚ್ಚು ಸೇವಿಸುವುದರಿಂದ ಅಡ್ಡಪರಿಣಾಮಗಳನ್ನು ಎದುರಿಸಬೇಕಾದೀತು.

 

Whats_app_banner