Muskmelon Seeds: ಕರ್ಬೂಜ ಬೀಜಗಳನ್ನು ಎಸೆಯಬೇಡಿ ಪ್ಲೀಸ್, ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
Muskmelon seeds health benefits: ಕರ್ಬೂಜ ಜ್ಯೂಸ್‌ನ ಸವಿಯನ್ನು ಎಲ್ಲರೂ ಸವಿದಿರುತ್ತಾರೆ. ಆದರೆ ಎಂದಾದರೂ ಕರ್ಬೂಜದ ಬೀಜಗಳಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನವಿದೆ ಎಂದು ತಿಳಿದಿದ್ದೀರಾ? ಹೃದ್ರೋಗದ ಸಮಸ್ಯೆಗಳಿಂದ ನಿಮ್ಮನ್ನು ದೂರವಿಡುವುದರಿಂದ ಹಿಡಿದು ಮಲಬದ್ಧತೆಗಳನ್ನು ತಡೆಯುವಲ್ಲಿ ಕರ್ಬೂಜದ ಬೀಜ ಮಹತ್ವದ ಪಾತ್ರ ವಹಿಸುತ್ತದೆ.

Muskmelon seeds health benefits: ರಸಭರಿತವಾದ, ಸುವಾಸನೆಯನ್ನು ಹೊಂದಿರುವ ಹಾಗೂ ರುಚಿಕರವಾದ ಕರ್ಬೂಜ ಹಣ್ಣಿನ ಜ್ಯೂಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಮಳೆಯ ನಡುವೆಯೂ ಕಾಡುವ ಸೆಖೆಯ ನಡುವೆ ದೇಹವನ್ನು ತಂಪಗಾಗಿಸಲು ನೀವು ಸವಿಯಬಹುದಾದ ಫ್ರೆಶ್ ಜ್ಯೂಸ್‌ಗಳ ಪೈಕಿ ಕರ್ಬೂಜ ಹಣ್ಣು ಕೂಡ ಒಂದಾಗಿದೆ. ಆದರೆ ನಾವು ಕರ್ಬೂಜ ಹಣ್ಣನ್ನು ಕತ್ತರಿಸುವ ಸಂದರ್ಭದಲ್ಲಿ ಸಿಪ್ಪೆಯ ಜೊತೆಯಲ್ಲಿ ಅದರ ಬೀಜವನ್ನು ಎಸೆದುಬಿಡುತ್ತೇವೆ. ಈ ರೀತಿ ಮಾಡುವುದರಿಂದ ನೀವು ನಿಮಗೆ ತಿಳಿಯದಂತೆ ನಿಮ್ಮ ದೇಹಕ್ಕೆ ಸೇರಬೇಕಿದ್ದ ಉತ್ತಮ ಪೋಷಕಾಂಶವನ್ನು ಕಳೆದುಕೊಂಡಂತೆಯೇ ಸರಿ. ಖರ್ಬೂಜದ ಬೀಜಗಳು ವಿಟಮಿನ್ ಎ. ಕೆ ,ಸಿ , ಬಿ1, ಇ ಹಾಗೂ ಸತು, ಪ್ರೊಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳನ್ನು ಹೇರಳವಾಗಿ ಹೊಂದಿರುತ್ತದೆ. ಭಾರತೀಯ ಅಡುಗೆ ಮನೆಗಳಲ್ಲಿ ಕರ್ಬೂಜದ ಬೀಜಗಳನ್ನು ನಾನಾ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಕರ್ಬೂಜದ ಬೀಜಗಳ ಪ್ರಯೋಜನಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಸೇವಿಸುವ ಆಹಾರದಲ್ಲಿ ಕರ್ಬೂಜ ಬೀಜದ ಸತ್ವವಿರಲಿ
ಕರ್ಬೂಜದ ಬೀಜಗಳನ್ನು ಅಡುಗೆಯಲ್ಲಿ ಬಳಕೆ ಮಾಡುವ ಮುನ್ನ ಇದನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು. ಬೀಜಗಳನ್ನು ತಿರುಳಿನಿಂದ ಬೇರ್ಪಡಿಸಿದ ಬಳಿಕ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಸಂಪೂರ್ಣವಾಗಿ ಬೀಜಗಳು ತಿರುಳಿನಿಂದ ಹೊರಬಂದ ಬಳಿಕ ಸಾಮಾನ್ಯ ಶಾಖದಲ್ಲಿ ಅದನ್ನು ಒಣಗಿಸಲು ಬಿಡಿ. ಬೀಜದ ತೇವಾಂಶಗಳೆಲ್ಲ ಮಾಯವಾಗಿ ಅವುಗಳು ಒಣಗಿದ ಬಳಿಕ ನೀವು ಬೀಜಗಳನ್ನು ನೇರವಾಗಿ ಹಾಗೆಯೇ ಸೇವಿಸಬಹುದು. ಇಲ್ಲವಾದಲ್ಲಿ ಸಲಾಡ್ಗಳಲ್ಲಿ, ಬ್ರೆಡ್, ಬನ್ ಇಲ್ಲವೇ ಕೇಕ್ಗಳಲ್ಲಿ ಸಿಂಪಡಿಸಿ ಕೂಡ ತಿನ್ನಬಹುದು. ನೀವು ಯಾವುದೇ ಸಿಹಿತಿಂಡಿಗಳು, ಸ್ಮೂದಿಗಳಲ್ಲಿ ಕೂಡ ಕರ್ಬೂಜದ ಬೀಜಗಳನ್ನು ಬಳಕೆ ಮಾಡಬಹುದಾಗಿದೆ.
ಸಸ್ಯಾಹಾರಿಗಳು ತಮ್ಮ ದೇಹದಲ್ಲಿ ಪ್ರೊಟೀನ್ ಶೇಖರಣೆಯನ್ನು ಹೆಚ್ಚಿಸಿಕೊಳ್ಳಲು ಕರ್ಬೂಜದ ಬೀಜಗಳು ಒಳ್ಳೆಯ ಕೊಡುಗೆ ನೀಡುತ್ತವೆ. ಅಲ್ಲದೇ ಹಾರ್ಮೋನ್ಗಳ ಆರೋಗ್ಯಕ್ಕೆ ಕೂಡ ಸಹಾಯ ಮಾಡುತ್ತವೆ. ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಕೂಡ ಈ ಬೀಜಗಳಿಗೆ ಇದೆ. ಈ ಬೀಜಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.
ಕರ್ಬೂಜದ ಬೀಜಗಳು ಉತ್ತಮ ಪೋಷಕಾಂಶಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವುದರಿಂದ ಸೂಪರ್ ಫುಡ್ ಎಂದೇ ಕರೆಯಬಹುದಾಗಿದೆ. ವಿಟಮಿನ್ ಎ, ಸಿ ಹಾಗೂ ಇ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲೂ ಕರ್ಬೂಜದ ಬೀಜಗಳು ಸಹಕಾರಿಯಾಗಿವೆ. ಇವುಗಳು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತವೆ.
ಕರ್ಬೂಜದ ಬೀಜಗಳ ಸೇವನೆಯಿಂದ ಆರೋಗ್ಯ ಪ್ರಯೋಜನಗಳು
ಮೂಳೆಗಳ ಆರೋಗ್ಯ ವೃದ್ಧಿಸಲು ಖನಿಜಾಂಶಗಳ ಪೂರೈಕೆ : ಕರ್ಬೂಜದ ಬೀಜಗಳಲ್ಲಿ ಕಂಡುಬರುವ ಮೆಗ್ನಿಷಿಯಂ, ಪೊಟ್ಯಾಷಿಯಂ ಹಾಗೂ ಸತುವಿನಂತಹ ಖನಿಜಗಳು ಆರೋಗ್ಯಕರ ಮೂಳೆಗಳು ಹಾಗೂ ಹಲ್ಲುಗಳನ್ನು ನೀಡುತ್ತವೆ.
ಅಗಾಧ ಪ್ರಮಾಣದ ಪ್ರೊಟೀನ್ : ಕರ್ಬೂಜ ಹಣ್ಣಿನ ಬೀಜಗಳಲ್ಲಿ ಪ್ರೊಟೀನ್ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇವುಗಳು ಸ್ನಾಯುಗಳ ದುರಸ್ತಿ, ಬೆಳವಣಿಗೆ ಮಾತ್ರವಲ್ಲದೇ ಒಟ್ಟಾರೆ ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಪ್ರೊಟೀನ್ ಸೇವನೆ ಹೆಚ್ಚಿಸಿಕೊಳ್ಳಬೇಕು ಎಂದರೆ ಕರ್ಬೂಜದ ಬೀಜ ಉತ್ತಮ ಆಯ್ಕೆಯಾಗಿದೆ.
ಉತ್ತಮ ಆಂಟಿಆಕ್ಸಿಡೆಂಟ್‌ಗಳು : ಸೀತಾಫಲ ಬೀಜಗಳು ಲಿಗ್ನಾನ್ನ ಉತ್ತಮ ಮೂಲವಾಗಿವೆ. ಇವುಗಳು ಅಗಸೆ ಬೀಜಗಳಲ್ಲಿಯೂ ಕಂಡು ಬರುತ್ತದೆ. ಇವುಗಳು ಆಂಟಿಆಕ್ಸಿಡಂಟ್ ಗುಣಗಳನ್ನು ಹೊಂದಿರುತ್ತವೆ. ಹಾಗೂ ಹಾರ್ಮೋನ್ಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ: ಕರ್ಬೂಜದ ಬೀಜಗಳಲ್ಲಿ ಇರುವ ಸಫೋನಿನ್ಗಳು ಹಾಗೂ ಫೈಟೊಸ್ಟೆರಾಲ್ಗಳು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ.ಸಫೋನಿನ್ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಹೃದಯದ ಆರೋಗ್ಯ : ಕರ್ಬೂಜದ ಬೀಜಗಳಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಫ್ಯಾಟಿ ಆ್ಯಸಿಡ್ಗಳಿದ್ದು ಇವುಗಳು ಹೃದಯದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತವೆ. ಈ ಆರೋಗ್ಯಕರ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಮಾಡುವ ಮೂಲಕ ಹೃದ್ರೋಗದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
ವಯಸ್ಸಾಗುವಿಕೆಯನ್ನು ಕಡಿಮೆ ಮಾಡುತ್ತದೆ : ಕರ್ಬೂಜದ ಬೀಜಗಳಲ್ಲಿ ಇರುವ ಕೊಬ್ಬನಾಮ್ಲಗಳು ಚರ್ಮವನ್ನು ಪೋಷಿಸುವ ಕಾರ್ಯ ಮಾಡುತ್ತವೆ. ನೆರಳಾತೀತ ಕಿರಣಗಳಿಂದ ಮುಖಕ್ಕಾದ ಹಾನಿಯನ್ನು ಕಡಿಮೆ ಮಾಡುವ ಜೊತೆಯಲ್ಲಿ ವಯಸ್ಸಾಗುವಿಕೆಯನ್ನು ಮರೆಮಾಡುತ್ತದೆ.
ಫೈಬರ್ ಸಮೃದ್ಧ: ಕರ್ಬೂಜದ ಬೀಜಗಳಲ್ಲಿ ಸಮೃದ್ಧವಾಗಿ ಫೈಬರ್ ಇರುತ್ತವೆ. ಇವುಗಳು ಸರಾಗ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಕರುಳಿನ ಚಲನೆಯನ್ನು ಸುಧಾರಿಸುತ್ತವೆ. ಮಲಬದ್ಧತೆಯ ಲಕ್ಷಣಗಳನ್ನು ದೂರ ಮಾಡುತ್ತವೆ.
ಸರಾಗ ಜೀರ್ಣಕ್ರಿಯೆಗೆಂದು ನೀವು ಕರ್ಬೂಜದ ಬೀಜಗಳನ್ನು ಸೇವಿಸಬೇಕು ಎಂದುಕೊಂಡಿದ್ದರೆ ರಾತ್ರಿಯಿಡೀ ಅಥವಾ ಬೆಳಗ್ಗೆ ಒಂದು ಗಂಟೆಗಳ ಕಾಲ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ಬಳಿಕ ಸೇವಿಸಿ. ಗರ್ಭಿಣಿಯರು ಈ ಬೀಜಗಳ ಸೇವನೆ ಮಾಡುವುದು ಬೇಡ. ದೇಹದಲ್ಲಿ ಫೈಬ್ರಾಯ್ಡ್ಗಳು ಇದ್ದಾಗ ಆರ್ಯುವೇದ ವೈದ್ಯರೊಂದಿಗೆ ಸಂಪರ್ಕಿಸಿ ಬಳಿಕ ಸೇವನೆ ಮಾಡುವುದು ಒಳ್ಳೆಯದು .
ಲೇಖನ: ರಶ್ಮಿ
