ಕನ್ನಡ ಸುದ್ದಿ  /  Lifestyle  /  Health Diet Makhana Vs Popcorn Which Is More Nutritious And Which One Is A Healthier Snack Weight Loss Bgy

ಮಖಾನಾ vs ಪಾಪ್‌ಕಾರ್ನ್, ಯಾವುದರಲ್ಲಿ ಪೋಷಕಾಂಶ ಹೆಚ್ಚಿದೆ, ಆರೋಗ್ಯಕ್ಕೆ ಯಾವುದು ಉತ್ತಮ; ಇಲ್ಲಿದೆ ಉತ್ತರ

ಮಖಾನಾ ಆಗಿರಲಿ ಅಥವಾ ಪಾಪ್‌ಕಾರ್ನ್ ಆಗಿರಲಿ, ಎರಡೂ ಸಹ ನೋಡಲು ಬಣ್ಣದಲ್ಲಿ, ರುಚಿಯಲ್ಲಿ ಮಾತ್ರವಲ್ಲ ಅವುಗಳು ನಮ್ಮ ದೇಹಕ್ಕೆ ನೀಡುವ ಪೋಷಕಾಂಶದಲ್ಲೂ ಸಹ ಸಾಮ್ಯತೆ ಮಾತ್ರವಲ್ಲದೆ ವೈವಿಧ್ಯತೆಯನ್ನೂ ಹೊಂದಿದೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕರ ತಿಂಡಿ ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ.

ಮಖಾನಾ vs ಪಾಪ್‌ಕಾರ್ನ್, ಯಾವುದರಲ್ಲಿ ಪೋಷಕಾಂಶ ಹೆಚ್ಚಿದೆ, ಆರೋಗ್ಯಕ್ಕೆ ಯಾವುದು ಉತ್ತಮ; ಇಲ್ಲಿದೆ ಉತ್ತರ
ಮಖಾನಾ vs ಪಾಪ್‌ಕಾರ್ನ್, ಯಾವುದರಲ್ಲಿ ಪೋಷಕಾಂಶ ಹೆಚ್ಚಿದೆ, ಆರೋಗ್ಯಕ್ಕೆ ಯಾವುದು ಉತ್ತಮ; ಇಲ್ಲಿದೆ ಉತ್ತರ

ಸಂಜೆಯ ವೇಳೆ ಶಾಲಾ-ಕಾಲೇಜುಗಳನ್ನೋ ಇಲ್ಲವೇ ಆಫೀಸು ಮುಗಿಸಿ ದಣಿದು ಮನೆ ಬಂದಾಗ, ಹಸಿದ ಹೊಟ್ಟೆಗೆ ಲಘು ಉಪಹಾರದ ಅಗತ್ಯವಿರುತ್ತದೆ. ರಾತ್ರಿಯ ಊಟಕ್ಕೂ ಅಡ್ಡಿಯಾಗದಂತೆ, ತಕ್ಷಣದ ಹಸಿವೆಯನ್ನು ತಣಿಸುವುದಕ್ಕಾಗಿ ಆರೋಗ್ಯಕರವಾದ ತಿಂಡಿಗಳನ್ನು ಹುಡುಕುವ ಮಂದಿಗೆ ಮಖಾನಾ ಇಲ್ಲವೇ ತಾವರೆ ಬೀಜಗಳು ಮಾತ್ರವಲ್ಲದೇ ಪಾಪ್‌ಕಾರ್ನ್‌ ಸಹ ಒಳ್ಳೆಯ ಆಯ್ಕೆಯೇ ಸರಿ. ಕ್ರಿಸ್ಪಿಯಾಗಿದ್ದು, ಹೊಟ್ಟೆಗೆ ಹಗುರವಾದ ಅನುಭವವನ್ನು ನೀಡುವ ಈ ಎರಡೂ ಖಾದ್ಯಗಳು ಹಸಿವೆಯನ್ನು ನೀಗಿಸುವುದರೊಂದಿಗೆ ಅಗತ್ಯ ಪ್ರಮಾಣದಲ್ಲಿ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತವೆ.

ಫೂಲ್‌ ಮಖಾನಾದಲ್ಲಿ ಪ್ರೋಟೀನ್‌, ಪೊಟಾಷಿಯಂ, ಫಾಸ್ಫರಸ್‌, ಕಾರ್ಬೊಹೈಡ್ರೇಟ್ಸ್‌, ಫೈಬರ್‌, ಮೆಗ್ನೇಷಿಯಂ, ಕಬ್ಬಿಣ, ಜಿಂಕ್‌ ಮುಂತಾದ ಪೋಷಕಾಂಶಗಳಿವೆ. ಮತ್ತೊಂದೆಡೆ, ಪಾಪ್‌ಕಾರ್ನ್‌ನಲ್ಲಿ ಫೋಲೇಟ್, ನಿಯಾಸಿನ್, ರಿಬೋಫ್ಲಾವಿನ್, ಥಯಾಮಿನ್, ಪ್ಯಾಂಟೊಥೆನಿಕ್ ಆಮ್ಲ, ವಿಟಮಿನ್ ಬಿ 6, ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಅನೇಕ ಅರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.

ತಾವರೆ ಬೀಜಗಳು

ಮಖಾನಾ ಎಂಬ ಪೌಷ್ಟಿಕ ಆಹಾರ: ಫೂಲ್‌ ಮಖಾನ, ಫಾಕ್ಸ್‌ ನಟ್ಸ್‌, ಲೋಟಸ್‌ ಸೀಡ್ಸ್‌ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ತಾವರೆ ಬೀಜವು ಪೌಷ್ಟಿಕ ಆಹಾರವಾಗಿ ಜನಪ್ರಿಯತೆಯನ್ನು ಗಳಿಸಿದೆ. ತಾವರೆ ಬೀಜಗಳಿಂದ ಮಾಡಿದ ಖಾದ್ಯಗಳು ರುಚಿಕರ ಮಾತ್ರವಲ್ಲದೆ, ಹಲವಾರು ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ.

ಪೋಷಕಾಂಶಗಳ ಶಕ್ತಿ ಕೇಂದ್ರ: ಮಖಾನಾ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಪ್ರೋಟೀನ್, ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಈ ಪೋಷಕಾಂಶಗಳು ದೇಹದ ವಿವಿಧ ಅಂಗಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಸ್ನಾಯುವಿನ ಕಾರ್ಯಕ್ಷಮತೆಯಿಂದ ತೊಡಗಿ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಇದು ಸಹಕಾರಿ.

ಕಡಿಮೆ ಕ್ಯಾಲೊರಿ ಆಯ್ಕೆ: ಅಧಿಕ ಕ್ಯಾಲೊರಿ ಆಹಾರದಿಂದ ದೂರವಿರಲು ಬಯಸುವ ಮಂದಿ ಅಂದರೆ ದೇಹ ತೂಕ ಇಳಿಸಿಕೊಳ್ಳಲು ಯತ್ನಿಸುವವರು ಕಡಿಮೆ ಕ್ಯಾಲೊರಿ ಮತ್ತು ಅಧಿಕ ಪೋಷಕಾಂಶವುಳ್ಳ ಮಖಾನಾವನ್ನು ಮೊದಲ ಆಯ್ಕೆಯಾಗಿಸಿಕೊಳ್ಳುತ್ತಾರೆ.

ಗ್ಲುಟನ್ ಮುಕ್ತ ಗುಣಲಕ್ಷಣ: ಮಖಾನಾ ಸ್ವಾಭಾವಿಕವಾಗಿ ಗ್ಲುಟನ್-ಮುಕ್ತವಾಗಿದೆ. ಗ್ಲುಟನ್ ಮುಕ್ತ ಪದಾರ್ಥಗಳು ತೂಕ ನಷ್ಟ, ಹೃದಯದ ಆರೋಗ್ಯ, ಮಧುಮೇಹ ರೋಗಿಗಳಿಗೆ ಆರೋಗ್ಯ ಸುಧಾರಣೆಗೆ ಅತ್ಯಂತ ಸಹಕಾರಿಯಾಗಿದೆ. ಅಲ್ಲದೆ ಕೆಲವು ಆಹಾರ ಪದಾರ್ಥಗಳು ಅಲರ್ಜಿ ಎಂದು ದೂರ ಉಳಿಯುವ ಮಂದಿಗಿದು ಸುರಕ್ಷಿತ ಆಯ್ಕೆಯಾಗಿದೆ.

ಪಾಪ್‌ಕಾರ್ನ್

ಪ್ರಪಂಚದಾದ್ಯಂತ ಹಲವರು ಇಷ್ಟಪಡುವ ಈ ಪಾಪ್‌ಕಾರ್ನ್ ಉಪ್ಪು, ಬೆಣ್ಣೆ ಮತ್ತು ಸುವಾಸನೆಗಾಗಿ ಕ್ಯಾರಮೆಲ್‌ಗಳಿಂದ ಮಿಶ್ರಿತವಾಗಿರುತ್ತದೆ. ಈ ರೀತಿಯ ಪಾಪ್‌ಕಾರ್ನ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದೇ ರೀತಿಯ ಸುವಾಸನೆಗಳನ್ನು ಬೆರೆಸದೇ ಇರುವ ತಾಜಾ ಪಾಪ್‌ಕಾರ್ನ್‌ ಆರೋಗ್ಯಕ್ಕೆ ಉತ್ತಮ.

ಜೀರ್ಣಕ್ರಿಯೆಗೆ ಸಹಕಾರಿ: ಪಾಪ್‌ಕಾರ್ನ್‌ನಲ್ಲಿ ಫೈಬರ್, ಆಂಟಿಆಕ್ಸಿಡೆಂಟ್‌ಗಳು, ವಿವಿಧ ಜೀವಸತ್ವಗಳು ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳಿವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಎಲ್ಲಾ ರೀತಿಯ ನಾರಿನಾಂಶವನ್ನು ಹೊಂದಿರುತ್ತದೆ. ಇದರ ಸೇವನೆಯಿಂದ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕಡಿಮೆ ಕ್ಯಾಲೊರಿ, ನಾರಿನಾಂಶ ಸಮೃದ್ಧ: ಅತಿಯಾದ ಬೆಣ್ಣೆ ಅಥವಾ ಎಣ್ಣೆ ಇಲ್ಲದ, ಚೀಸ್ ಇಲ್ಲವೇ ಇನ್ಯಾವುದೇ ಮಿಶ್ರಣಗಳನ್ನು ಬಳಸದೇ ಹೋದರೆ ಪಾಪ್‌ಕಾರ್ನ್ ಕಡಿಮೆ ಕ್ಯಾಲೊರಿ ಅಂಶವಿರುವ ತಿಂಡಿ. ಆದ್ದರಿಂದಲೇ ಡಯಟ್‌ ಮಾಡುವ ಮಂದಿಗಿದು ಮೊದಲ ಆಯ್ಕೆಯಾಗಿರುತ್ತದೆ. ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಹಾಯ ಮಾಡುವ ಅಂಶಗಳು ಪಾಪ್‌ಕಾರ್ನ್‌ನಲ್ಲಿದೆ. ಇದರ ಹೆಚ್ಚಿನ ನಾರಿನಾಂಶ, ಅದರ ಕಡಿಮೆ ಕ್ಯಾಲೊರಿ ನಿಮ್ಮ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ತೂಕ ನಿರ್ವಹಣೆಗೆ ಪ್ರಯೋಜನಕಾರಿಯಾಗಿದೆ.

ಚರ್ಮದ ಆರೋಗ್ಯ: ಪಾಪ್‌ಕಾರ್ನ್‌ನಲ್ಲಿರುವ ಪೋಷಕಾಂಶಗಳು ನಿಮ್ಮ ಸೌಂದರ್ಯವನ್ನು ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದೆ, ಅದು ಚರ್ಮದ ಆರೋಗ್ಯಕ್ಕೆ ಉತ್ತಮ. ದೇಹಕ್ಕೆ ಅನುಕೂಲಕರವಾದ ಖನಿಜಾಂಶಗಳು, ಥಯಾಮಿನ್ ಮತ್ತು ನಯಾಸಿನ್ ಅಂಶಗಳು ನಮ್ಮ ಚರ್ಮದ ಅಂದವನ್ನು ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತವೆ.

ಅಲರ್ಜಿಯಾಗಬಹುದು ಎಚ್ಚರ: ಮಖಾನಾ ಸೇವನೆಯು ಅಲರ್ಜಿಯನ್ನು ಉಂಟು ಮಾಡುವ ಸಾಧ್ಯತೆ ಕಡಿಮೆ. ಸಾಮಾನ್ಯವಾಗಿ ಆಹಾರ ಅಲರ್ಜಿ ಇರುವವರಿಗೆ ಇದು ಸುರಕ್ಷಿತ ಆಯ್ಕೆಯಾಗಿದೆ. ಪಾಪ್‌ಕಾರ್ನ್ ಕೆಲವರಿಗೆ ಅಲರ್ಜಿ ಉಂಟು ಮಾಡುತ್ತದೆ. ಹಾಗಾಗಿ ತಿನ್ನುವ ಮುನ್ನ ಎಚ್ಚರ ವಹಿಸಬೇಕು.

ಅದೇನೇ ಆದರೂ ಸಾಮಾನ್ಯ ಗುಣಲಕ್ಷಣಗಳನ್ನು ನೋಡಿದರೆ ಮಖಾನಾ ಹಾಗೂ ಪಾಪ್‌ಕಾರ್ನ್‌ ಎರಡೂ ಕೂಡ ಆರೋಗ್ಯಕ್ಕೆ ಉತ್ತಮವಾಗಿದ್ದು, ಲಘು ಉಪಹಾರಕ್ಕಿದು ಉತ್ತಮ ಆಯ್ಕೆಯಾಗಿದೆ.