ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಹೇಗೆ? ಡಾಕ್ಟರ್ ಸಾನ್ಯೋ ಡಿಸೋಜಾ ಬರಹ
ಇತ್ತೀಚೆಗೆ ಕ್ಯಾನ್ಸರ್ ರೋಗ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್ ರೋಗ ಪತ್ತೆ ಹಾಗೂ ಚಿಕಿತ್ಸೆ ಹೇಗೆ ಎಂಬಿತ್ಯಾದಿ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಅಂಕಾಲಜಿ ತಜ್ಞ ಡಾ ಸಾನ್ಯೋ ಡಿಸೋಜಾಅವರ ಬರಹ ಇಲ್ಲಿದೆ.

ಇತ್ತೀಚೆಗೆ ಕ್ಯಾನ್ಸರ್ ರೋಗ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್ ರೋಗ ಪತ್ತೆ ಹಾಗೂ ಚಿಕಿತ್ಸೆ ಹೇಗೆ ಎಂಬಿತ್ಯಾದಿ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಅಂಕಾಲಜಿ ತಜ್ಞ ಡಾ.ಸಾನ್ಯೋ ಡಿಸೋಜಾ ಅವರ ಬರಹ ಇಲ್ಲಿದೆ. ವೈರಸ್, ಬ್ಯಾಕ್ಟೀರಿಯಾ ಹಾಗೂ ಫಂಗಸ್ ಶ್ವಾಸನಾಳವನ್ನು ಹೊಕ್ಕು ಸೃಷ್ಟಿಸುವ ಸೋಂಕಿನಿಂದ ನ್ಯುಮೋನಿಯಾ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಈ ನ್ಯುಮೋನಿಯಾಗೆ ಸಾಮಾನ್ಯವಾಗಿ ಕಾರಣವಾಗುವ ವೈರಸ್ ಎಂದರೆ ಅದು ಫ್ಲೂ ವೈರಸ್‌ಗಳು. ಅತಿಯಾದ ಧೂಮಪಾನ, ವಾತಾವರಣದಲ್ಲಿನ ವಿಷಕಾರಿ ಅನಿಲ ಸೇವನೆಯಿಂದ ಶ್ವಾಸಕೋಶದಲ್ಲಿ ಜೀವಕೋಶಗಳ ಅನಿಯಮಿತವಾದ ಬೆಳವಣಿಗೆ, ಜೀವಕೋಶಗಳಲ್ಲಿ ರೂಪಾಂತರಗಳಿಂದ ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ 50 ವರ್ಷ ವಯಸ್ಸಿನ ಬಳಿಕ ಕ್ಯಾನ್ಸರ್ ಪತ್ತೆಯಾಗುವುದು ಹೆಚ್ಚು. ಆದರೆ ಪತ್ತೆಯಾದ ಪ್ರಕರಣಗಳಲ್ಲಿ ಶೇ.50 ರಷ್ಟು ಪ್ರಕರಣಗಳಲ್ಲಿ ಕ್ಯಾನ್ಸರ್ ರೋಗಿಯ ವಿವಿಧ ಅಂಗಗಳಿಗೂ ಹರಡಿರುತ್ತದೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಗುರಿಯಾದವರಲ್ಲಿ ಅರ್ಧದಷ್ಟು ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ನ್ಯುಮೋನಿಯಾ ಸೇರಿ ಶ್ವಾಸನಾಳದ ಸೋಂಕಿಗೆ ಗುರಿಯಾಗುತ್ತಾರೆ. ಹೀಗಾಗಿ ಶೀಘ್ರ ರೋಗ ಪತ್ತೆ ಬಹಳ ಮುಖ್ಯವಾಗುತ್ತದೆ.
ನ್ಯುಮೋನಿಯಾ ಹಾಗೂ ಶ್ವಾಸನಾಳದ ಕ್ಯಾನ್ಸರ್‌ನ ರೋಗಲಕ್ಷಣಗಳಲ್ಲಿ ಸಾಮ್ಯತೆ ಇರಬಹುದು. ಕೆಮ್ಮು, ಎದೆನೋವು, ಉಸಿರಾಟದಲ್ಲಿ ಸಮಸ್ಯೆ, ಸುಸ್ತು, ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಈ ಲಕ್ಷಣಗಳು ಸಾಮಾನ್ಯವಿರಬಹುದು. ಆದರೆ ಶ್ವಾಸಕೋಶದ ಕ್ಯಾನ್ಸರ್‌ನ ಕೆಲ ಲಕ್ಷಣಗಳಾದ ತೂಕ ಇಳಿಕೆ, ಮೂಳೆಗಳಲ್ಲಿ ನೋವು ( ಕ್ಯಾನ್ಸರ್ ಮೂಳೆಗಳಿಗೆ ಹರಡಿದ್ದರೆ), ತಲೆ ತಿರುಗುವಂತಾಗುವುದು( ಕ್ಯಾನ್ಸರ್ ಮೆದುಳಿಗೆ ಹರಡಿದ್ದರೆ), 3 ರಿಂದ 4 ವಾರಗಳ ಕಾಲ ನಿರಂತರ ಕೆಮ್ಮು, ಇವು ನ್ಯುಮೋನಿಯಾ ಉಂಟಾದಾಗ ಸಾಮಾನ್ಯವಾಗಿ ಕಂಡು ಬರುವುದಿಲ್ಲ. ಚಳಿ ಜ್ವರ, ವಿಪರೀತ ಬೆವರುವುದು, ಹಸಿರು ಅಥವಾ ಹಳದಿ ಬಣ್ಣದಲ್ಲಿ ಕಫ ಕಾಣಿಸಿಕೊಳ್ಳುವುದು ನ್ಯುಮೋನಿಯಾ ಕಾಯಿಲೆಯ ಕೆಲ ರೋಗಲಕ್ಷಣಗಳು. ಆದರೆ ಇವು ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ.
ರೋಗ ಪತ್ತೆ ಹೇಗೆ?
ವೈದ್ಯರಿಂದ ಸಂಪೂರ್ಣ ತಪಾಸಣೆಯ ನಂತರ, ಎದೆಯ ಎಕ್ಸ್ ರೇ ಜತೆಗೆ ರಕ್ತ ಹಾಗೂ ಕಫದ ಪರೀಕ್ಷೆಗೆ ಸಲಹೆ ನೀಡಲಾಗುತ್ತದೆ. ಈ ಮೂಲಕ ಶ್ವಾಸಕೋಶದಲ್ಲಿ ಸೋಂಕು (ನ್ಯುಮೋನಿಯಾ) ಪತ್ತೆ ಹಚ್ಚಬಹುದು. ಕೆಲವೊಮ್ಮೆ ಈ ಪರೀಕ್ಷೆಯಿಂದ ಶ್ವಾಸಕೋಶದಲ್ಲಿ ಗಂಭೀರವಾದ ರೋಗದ ಲಕ್ಷಣ ಕಂಡುಬಂದಲ್ಲಿ ಎದೆಯ ಸಿ.ಟಿ ಸ್ಕ್ಯಾನ್ ಪರೀಕ್ಷೆಗೆ ಸಲಹೆ ನೀಡಲಾಗುತ್ತದೆ. ಈ ಪರೀಕ್ಷೆಯಿಂದ ಶ್ವಾಸಕೋಶದಲ್ಲಿ ಕ್ಯಾನ್ಸರ್ ಬೆಳವಣಿಗೆ ಇದ್ದಲ್ಲಿ ಪತ್ತೆ ಹಚ್ಚಲಾಗುತ್ತದೆ. ಇನ್ನು ಬ್ರೊಂಕೊಸ್ಕೋಪಿ ಪರೀಕ್ಷೆಯನ್ನು ಕೂಡ ತಿಳಿಸಲಾಗುತ್ತದೆ. ಶ್ವಾಸನಾಳದಲ್ಲಿ ಟ್ಯೂಬ್ ತೂರಿಸಿ ಗಡ್ಡೆ ರಚನೆ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ. ಆದರೆ ಸೂಜಿ ಆಧಾರಿತ ಬಯಾಪ್ಸಿ ಪರೀಕ್ಷೆಯ ಬಳಿಕವೇ ಕ್ಯಾನ್ಸರ್ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಬಹುದಾಗಿದೆ.
ಇದಕ್ಕೆ ಚಿಕಿತ್ಸೆ ಹೇಗೆ?
ನ್ಯುಮೋನಿಯಾ ಸಮಸ್ಯೆ ಸಾಮಾನ್ಯವಾಗಿ ರೋಗ ನಿರೋಧಕ, ಆಂಟಿವೈರಲ್ ಹಾಗೂ ಆಂಟಿ ಫಂಗಲ್ ಚಿಕಿತ್ಸೆಯನ್ನು ರೋಗಿಯ ಆರೋಗ್ಯಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಸಾಕಷ್ಟು ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗಿರುತ್ತದೆ. ಕ್ಯಾನ್ಸರ್ ಚಿಕಿತ್ಸೆ ರೋಗಿಯಲ್ಲಿ ಕ್ಯಾನ್ಸರ್ ಯಾವ ಹಂತದಲ್ಲಿದೆ ಹಾಗೂ ಅನಿಯಮಿತ ಜೀವಕೋಶ ರೂಪಾಂತರಗಳ ಪತ್ತೆ ಮೇಲೆ ನಿರ್ಧರಿಸಲಾಗುತ್ತದೆ. ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ಇಮ್ಯುನೋಥೆರಪಿ, ಟಾರ್ಗೆಟೆಡ್ ಥೆರಪಿ, ರೆಡಿಯೋಥೆರಪಿ ಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತದೆ.
