ತಲೆಗೂದಲು ಹೊಳೆಯಲು, ಸಿಲ್ಕಿಯಾಗಿರಲು ಕೆರಾಟಿನ್ ಟ್ರೀಟ್ಮೆಂಟ್ ಅನ್ನು ಇಷ್ಟಪಡುತ್ತೀರಾ: ಇದು ಮೂತ್ರಪಿಂಡಗಳಿಗೆ ಹಾನಿ ಮಾಡಬಹುದು, ಎಚ್ಚರ
ಕೂದಲು ಸ್ಟ್ರೈಟನಿಂಗ್ ಚಿಕಿತ್ಸೆಗಳು,ವಿಶೇಷವಾಗಿ ಕೆರಾಟಿನ್ ಅನ್ನು ಒಳಗೊಂಡಿದೆ. ತಲೆಗೂದಲನ್ನು ನಯವಾಗಿಸಲು ಮತ್ತು ಹೊಳಪಿಗೆ ಇದು ಬಹಳ ಜನಪ್ರಿಯವಾಗಿದೆ. ನೋಡಲು ಸುಂದರವಾಗಿ ಕಂಡರೂ ಇದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯೆದ್ದಿದೆ. ಕೆರಾಟಿನ್ ಚಿಕಿತ್ಸೆ ಮಾಡುವುದರಿಂದ ಮೂತ್ರಪಿಂಡಕ್ಕೆ ಹಾನಿಯುಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಗುಂಗುರು ಕೂದಲು ಹೊಂದಿರುವವರಿಗೆ ತಮ್ಮ ತಲೆಗೂದಲು ಸಿಲ್ಕಿಯಾಗಿರಬೇಕು ಎಂಬ ಆಸೆ ಹೆಚ್ಚೇ ಇರುತ್ತದೆ. ಗುಂಗುರು ಕೂದಲನ್ನು ಬಾಚಿ, ಅದರ ಸಿಕ್ಕು ಬಿಡಿಸುವಷ್ಟರಲ್ಲಿ ಸುಸ್ತಾಗಿ ಬಿಡುತ್ತಾರೆ. ಈ ಗುಂಗುರು ಬದಲು ತನ್ನ ತಲೆಗೂದಲು ಸಿಲ್ಕಿಯಾಗಿ ಇರಬಾರದಿತ್ತೇ ಎಂದು ನೊಂದುಕೊಳ್ಳುವವರು ಅನೇಕರು. ಹೀಗಾಗಿ ಕೆಲವರು ಕೂದಲು ಸ್ಟ್ರೈಟನಿಂಗ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಗುಂಗುರು ಕೂದಲಿನವರು ಮಾತ್ರವಲ್ಲ ಬಹುತೇಕರು ಸ್ಟ್ರೈಟನಿಂಗ್ ಟ್ರೀಟ್‌ಮೆಂಟ್ ಅನ್ನು ಇಷ್ಟಪಡುತ್ತಾರೆ. ಇದರಿಂದ ಕೂದಲು ನಯವಾಗುವುದು ಮಾತ್ರವಲ್ಲದೆ, ಹೊಳೆಯುತ್ತದೆ. ಪ್ರಸ್ತುತ ಕೆರಾಟಿನ್ ಟ್ರೀಟ್ಮೆಂಟ್ ಅನ್ನು ಬಹುತೇಕ ಮಂದಿ ಆರಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಪ್ರಿಯರು ಕೂದಲು ಸ್ಟ್ರೈಟನಿಂಗ್ ಜೊತೆಗೆ ಕೆರಾಟಿನ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕೇವಲ ಸ್ಟ್ರೈಟನಿಂಗ್ ಮಾತ್ರವಲ್ಲ ಕೂದಲನ್ನು ಕರ್ಲಿ (ಗುಂಗುರು) ಮಾಡುವ ಟ್ರೀಟ್‍ಮೆಂಟ್ ಅನ್ನು ಕೂಡ ಆರಿಸಿಕೊಳ್ಳುತ್ತಾರೆ. ತಲೆಗೂದಲು ನೇರಗೊಳಿಸುವಿಕೆಯು (ಸ್ಟ್ರೈಟನಿಂಗ್) ಫಾರ್ಮಾಲಿನ್ (ಬ್ರೆಜಿಲಿಯನ್ ಬ್ಲೋಔಟ್) ಬಳಕೆಯನ್ನು ಒಳಗೊಂಡಿರುತ್ತದೆ. ಇಂದು ಬಹುತೇಕ ಮಂದಿ ಕೆರಾಟಿನ್ ಟ್ರೀಟ್ಮೆಂಟ್‍ಗೆ ಒಳಪಡುತ್ತಿದ್ದಾರೆ. ಕೂದಲ ಹೊಳಪಿಗೆ ಇದು ಉತ್ತಮ ಎಂದು ಸ್ಟ್ರೈಟನಿಂಗ್ ಜೊತೆಗೆ ಕೆರಾಟಿನ್ ಚಿಕಿತ್ಸೆಯನ್ನು ಆರಿಸಿಕೊಳ್ಳುತ್ತಾರೆ. ಆದರೆ. ಇದು ಸ್ಟ್ರೈಟನಿಂಗ್ ಮಾಡುವವರಿಗೆ ಮತ್ತು ಅದರ ಚಿಕಿತ್ಸೆ ನೀಡುವವರಿಗೆ ಬಹಳ ಅಪಾಯಕಾರಿಯಾಗಿದೆ.
ತಲೆಗೂದಲು ನೇರಗೊಳಿಸುವಿಕೆಯು ಮೂರರಿಂದ ನಾಲ್ಕು ಗಂಟೆಗಳ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಈ ಚಿಕಿತ್ಸೆ ವೇಳೆ ಮುಖಕ್ಕೆ ಮಾಸ್ಕ್ ಹಾಕಿದ್ದರೂ ರಾಸಾಯನಿಕದ ವಾಸನೆ ಮೂಗಿಗೆ ಬಡಿಯುತ್ತದೆ. ಕೆರಾಟಿನ್ ಚಿಕಿತ್ಸೆ ವೇಳೆ ಗ್ಲೈಕೋಲಿಕ್ ಆಮ್ಲ ಹೊರಹೊಮ್ಮುತ್ತದೆ. ಮೊದಲೇ ತಿಳಿಸಿದಂತೆ ರೇಷ್ಮೆಯಂತಹ ನೇರ ಕೂದಲನ್ನು ಸಾಧಿಸಲು ಸಲೂನ್ ಹೇರ್ ಸ್ಟ್ರೈಟನಿಂಗ್ ಟ್ರೀಟ್‌ಮೆಂಟ್‌ಗಳು ಕೆರಾಟಿನ್ ಅನ್ನು ಹೆಚ್ಚಾಗಿ ಬಳಸುತ್ತವೆ. ಅಂತಹ ಉತ್ಪನ್ನಗಳು ಮೂತ್ರಪಿಂಡಕ್ಕೆ ಹಾನಿಯನ್ನು ಉಂಟುಮಾಡಬಹುದು ಎಂಬುದಾಗಿ ತಜ್ಞರು ಎಚ್ಚರಿಸಿದ್ದಾರೆ.
ಇತ್ತೀಚಿನ ವರದಿಯೊಂದರ ಪ್ರಕಾರ, ತಲೆಗೂದಲನ್ನು ನೇರಗೊಳಿಸುವಿಕೆ (ಸ್ಟ್ರೈಟನಿಂಗ್) ಮಾಡುವುದರಿಂದ ರಾಸಾಯನಿಕ (ಗ್ಲೈಕೋಲಿಕ್ ಆಮ್ಲ)ವು ಮೂತ್ರಪಿಂಡಗಳ ಮೇಲೆ ತೀವ್ರ ಪರಿಣಾಮವನ್ನು ಬೀರಬಹುದು. 2019 ಮತ್ತು 2022 ರ ನಡುವೆ, 14 ಕೇಂದ್ರಗಳಿಂದ ಮೂತ್ರಪಿಂಡ ಸಮಸ್ಯೆಯ 26 ಪ್ರಕರಣಗಳು ದಾಖಲಾಗಿದ್ದವು. ಎಲ್ಲರೂ 20 ವರ್ಷದ ಯುವತಿಯರಾಗಿದ್ದರು. ಕಿಡ್ನಿ ಕಾಯಿಲೆಯು ಎಷ್ಟು ತೀವ್ರವಾಗಿತ್ತು ಎಂದರೆ ಮೂರು ರೋಗಿಗಳಿಗೆ ಡಯಾಲಿಸಿಸ್ ಅಗತ್ಯವಿತ್ತು. ಅಧ್ಯಯನವೊಂದರ ಪ್ರಕಾರ, ಗ್ಲೈಆಕ್ಸಿಲಿಕ್ ಆಮ್ಲವನ್ನು ಹೊಂದಿರುವ ಕೆರಾಟಿನ್ ಆಧಾರಿತ ಕೂದಲು ನೇರಗೊಳಿಸುವ (ಸ್ಟ್ರೈಟನಿಂಗ್) ಉತ್ಪನ್ನಗಳು ಮೂತ್ರಪಿಂಡಗಳಲ್ಲಿ ಆಕ್ಸಲೇಟ್ ಸ್ಫಟಿಕಗಳ ರಚನೆಯಿಂದಾಗಿ ತೀವ್ರವಾದ ಮೂತ್ರಪಿಂಡ ಸಮಸ್ಯೆಯ ಅಪಾಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದೆ.
ಕೂದಲು ನೇರಗೊಳಿಸುವಿಕೆ (ಸ್ಟ್ರೈಟನಿಂಗ್) ಚಿಕಿತ್ಸೆಯು ಮೂತ್ರಪಿಂಡದ ಹಾನಿಯನ್ನು ಹೇಗೆ ಉಂಟುಮಾಡುತ್ತದೆ?
ಗ್ಲೈಆಕ್ಸಿಲಿಕ್ ಆಮ್ಲವು ಎಪಿಡರ್ಮಿಸ್ ಮೂಲಕ ಹಾದುಹೋಗುತ್ತದೆ. ಈ ವೇಳೆ ರಕ್ತಪ್ರವಾಹದಲ್ಲಿ ಇವು ಹೀರಲ್ಪಡುತ್ತದೆ. ಅಲ್ಲದೆ ಇದು ಬಹಳ ವೇಗವಾಗಿ ಗ್ಲೈಆಕ್ಸಿಲೇಟ್ ಆಗಿ ಪರಿವರ್ತನೆಯಾಗುತ್ತದೆ. ಗ್ಲೈಆಕ್ಸಿಲೇಟ್ ಅಂತಿಮವಾಗಿ ಆಕ್ಸಲೇಟ್ ಅನ್ನು ಚಯಾಪಚಯಗೊಳಿಸುತ್ತದೆ. ಇದು ಮೂತ್ರಪಿಂಡಗಳಿಗೆ ಬಹಳ ವಿಷಕಾರಿಯಾಗಿದೆ. ಕೂದಲು ನೇರಗೊಳಿಸಲು ಗ್ಲೈಆಕ್ಸಿಲಿಕ್ ಆಮ್ಲವನ್ನು ಬಳಸುವುದರಿಂದ ಕಿಡ್ನಿ ಅಂಗಾಂಶದಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಶೇಖರಣೆಗೆ ಕಾರಣವಾಗುತ್ತದೆ ಮತ್ತು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
ಈ ಸಮಸ್ಯೆ ತೀವ್ರವಾದರೆ, ಡಯಾಲಿಸಿಸ್ ಮಾಡಬೇಕಾಗುತ್ತದೆ. ಕೆರಾಟಿನ್ ಚಿಕಿತ್ಸೆಯ ನಂತರ ತಲೆಗೂದಲಿನ ಬುಡದಲ್ಲಿ ತುರಿಸುವುದು, ಅಥವಾ ಹುಣ್ಣುಗಳು ಕಾಣಿಸಿಕೊಳ್ಳುವುದು ಆರಂಭಿಕ ಲಕ್ಷಣಗಳಾಗಿರಬಹುದು. ಈ ರೀತಿ ಆದಲ್ಲಿ ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಚಿಕಿತ್ಸೆ ಪಡೆಯುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದು. ಹೀಗಾಗಿ, ಕೆರಾಟಿನ್ ಚಿಕಿತ್ಸೆಯನ್ನು ಆಯ್ಕೆಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಸೂಕ್ತ. ಈ ಚಿಕಿತ್ಸೆಗಳನ್ನು ಮಿತವಾಗಿ ಮತ್ತು ತಯಾರಕರ ಸೂಚನೆಗಳ ಪ್ರಕಾರ ಬಳಸಬೇಕು.
ವಿಭಾಗ