Diabetic Foot: ರಕ್ತದಲ್ಲಿ ಸಕ್ಕರೆ ಅಧಿಕವಾಗಿದ್ದರೆ ಪಾದಗಳ ಮೇಲೆ ಕೆಟ್ಟ ಪರಿಣಾಮ, ಈ 6 ಚಿಹ್ನೆಗಳನ್ನು ಗುರುತಿಸಿ, ಪಾದಗಳ ಆರೈಕೆ ಹೀಗಿರಲಿ
Diabetic Foot Problems: ಇಂದಿನ ದಿನಗಳಲ್ಲಿ ಮಧುಮೇಹವು ಹೆಚ್ಚಿನ ಜನರಲ್ಲಿ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿ. ರಕ್ತದಲ್ಲಿ ಸಕ್ಕರೆ ಮಟ್ಟವು ಅಧಿಕವಾಗಿದ್ದರೆ ನೀವು ನಿಮ್ಮ ಪಾದಗಳ ಮೇಲೆ ಗಮನ ಕೇಂದ್ರಿಕರಿಸುವುದು ಮುಖ್ಯ. ಯಾಕೆ ಅಂತೀರಾ? ಹಾಗಿದ್ದರೆ ಮುಂದೆ ಓದಿ.

ಇತ್ತೀಚೆಗೆ ಎಲ್ಲಾ ವರ್ಗದ ಜನರಲ್ಲಿ ಮಧುಮೇಹ ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ. ವಯಸ್ಕರು, ಯುವಕರು ಮಾತ್ರವಲ್ಲದೆ ಸಣ್ಣ ಮಕ್ಕಳನ್ನೂ ಮಧುಮೇಹ ಕಾಡುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಅಧಿಕ ರಕ್ತದ ಸಕ್ಕರೆ ಅಥವಾ ಹೈಪರ್ಗ್ಲೈಸೀಮಿಯಾ ಎನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಿರುವ ಸ್ಥಿತಿಯಾಗಿದೆ. ಟೈಪ್ 1 ಮತ್ತು ಟೈಪ್ 2 ಎರಡರಲ್ಲೂ ಮಧುಮೇಹ ಹೊಂದಿರುವ ಜನರಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸದಿದ್ದಾಗ ಇದು ಸಂಭವಿಸುತ್ತದೆ.
ಮಧುಮೇಹಕ್ಕೆ ಸರಿಯಾಗಿ ಚಿಕಿತ್ಸೆ ಮಾಡದೇ ಹೋದಲ್ಲಿ, ಇದು ಹೃದ್ರೋಗ, ನರಗಳ ಹಾನಿ ಮತ್ತು ಮಧುಮೇಹ ರೆಟಿನೋಪತಿಯಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು ಮತ್ತು ನಿರ್ವಹಿಸುವುದು ಬಹಳ ಮುಖ್ಯ. ಇದನ್ನು ನಿರ್ವಹಿಸುವ ಮೊದಲ ಹಂತವು ಸ್ಥಿತಿಯ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು. ಮಧುಮೇಹ ಇರುವವರಲ್ಲಿ ಪಾದದ ಸಮಸ್ಯೆ ಸಾಮಾನ್ಯವಾಗಿದೆ.
ಮಧುಮೇಹದಿಂದ ಕಾಲ್ಬೆರಳು ಅಥವಾ ಕಾಲು ಕಳೆದುಕೊಳ್ಳುವ ಭಯ ಅನೇಕರಿಗಿದೆ. ಇದಕ್ಕಾಗಿ ಪ್ರತಿದಿನ ನಿಮ್ಮ ಪಾದಗಳನ್ನು ಗಮನಿಸುತ್ತಿರಬೇಕು. ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವುದು, ಇದನ್ನು ರಕ್ತದಲ್ಲಿನ ಸಕ್ಕರೆ ಮಟ್ಟ ಎಂದೂ ಕರೆಯುತ್ತಾರೆ. ಇದು ನಿಮ್ಮ ಪಾದಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ನಿಮ್ಮ ಪಾದಗಳ ಮೇಲೆ ನೀವು ಗುರುತಿಸಬಹುದಾದ ಮಧುಮೇಹದ ಆರು ಚಿಹ್ನೆಗಳ ಬಗ್ಗೆ ಇಲ್ಲಿದೆ ಮಾಹಿತಿ.
1. ನಡೆಯಲು ಸಾಧ್ಯವಾಗದಂತಹ ನೋವು (ವಿಶೇಷವಾಗಿ ಹಿಮ್ಮಡಿ, ಅಡಿಭಾಗ ಮತ್ತು ಕಾಲ್ಬೆರಳುಗಳಲ್ಲಿ)
2. ಮರಗಟ್ಟುವಿಕೆ
3. ಅಸ್ವಸ್ಥತೆ ಅಥವಾ ದೌರ್ಬಲ್ಯ. ಇದು ಸಾಮಾನ್ಯವಾಗಿ ಎರಡೂ ಪಾದಗಳಲ್ಲಿ ಪ್ರಾರಂಭವಾಗುತ್ತದೆ.
4. ಜುಮ್ಮೆನಿಸುವಿಕೆ
5. ಇದ್ದಕ್ಕಿದ್ದಂತೆ ಪಾದಗಳು ತಣ್ಣಗಾಗುವುದು
6. ಪಾದಗಳಲ್ಲಿ ಸ್ಪರ್ಶ ಜ್ಞಾನ ಕಳೆದುಕೊಳ್ಳುವುದು.
ಮಧುಮೇಹವು ಪಾದಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಮಧುಮೇಹವು ನರಗಳ ಹಾನಿಯನ್ನು ಉಂಟುಮಾಡಬಹುದು. ಇದನ್ನು ಡಯಾಬಿಟಿಕ್ ನ್ಯೂರೋಪತಿ ಎಂದೂ ಕರೆಯುತ್ತಾರೆ. ಇದು ಜುಮ್ಮೆನಿಸುವಿಕೆ ಮತ್ತು ನೋವನ್ನು ಉಂಟುಮಾಡಬಹುದು. ಅಲ್ಲದೆ ಪಾದದಲ್ಲಿ ಏನಾದರು ಇಟ್ಟರೆ, ಮುಟ್ಟಿದರೆ ನಿಮಗೆ ಸ್ಪರ್ಶ ಜ್ಞಾನ ಸಿಗದಂತಾಗಬಹುದು. ಇದರಿಂದ ಕಡಿತ ಮತ್ತು ಹುಣ್ಣುಗಳಿಗೆ ಕಾರಣವಾಗಿ, ಸೋಂಕಿಗೆ ಒಳಗಾಗಬಹುದು.
ಮಧುಮೇಹವು ನಿಮ್ಮ ಪಾದಗಳಲ್ಲಿ ರಕ್ತದ ಹರಿವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಾಲುಗಳು ಮತ್ತು ಪಾದಗಳಿಗೆ ಸಾಕಷ್ಟು ರಕ್ತ ಹರಿಯದಿರುವುದು ಹುಣ್ಣು ಅಥವಾ ಸೋಂಕನ್ನು ಗುಣಪಡಿಸಲು ಕಷ್ಟವಾಗುತ್ತದೆ. ಈ ಸೋಂಕು ಗ್ಯಾಂಗ್ರೀನ್‌ಗೆ ಕಾರಣವಾಗಬಹುದು.
ಗ್ಯಾಂಗ್ರೀನ್ ಮತ್ತು ಪಾದದ ಹುಣ್ಣುಗಳಿಂದಾಗಿ ಕಾಲ್ಬೆರಳು, ಪಾದ ಅಥವಾ ಕಾಲಿನ ಭಾಗವನ್ನು ಕತ್ತರಿಸಲು ಕಾರಣವಾಗಬಹುದು. ಗಂಭೀರವಾದ ಸೋಂಕುಗಳು ಮತ್ತು ಗ್ಯಾಂಗ್ರೀನ್ ತಡೆಗಟ್ಟಲು ಉತ್ತಮ ಪಾದದ ಆರೈಕೆ ಬಹಳ ಮುಖ್ಯ. ಬಹಳ ಅಪರೂಪವಾಗಿದ್ದರೂ, ಮಧುಮೇಹದಿಂದ ನರಗಳ ಹಾನಿಯು ಪಾದಗಳ ಆಕಾರದಲ್ಲಿ ಬದಲಾವಣೆಗೆ ಕಾರಣವಾಗಬಹುದು.
ನಿಮ್ಮ ಪಾದದ ಆರೈಕೆಯಲ್ಲಿ ಈ ಹಂತಗಳನ್ನು ಅನುಸರಿಸಿ
- ಪ್ರತಿದಿನ ನಿಮ್ಮ ಪಾದಗಳನ್ನು ಪರೀಕ್ಷಿಸಿ.
- ಪ್ರತಿದಿನ ನಿಮ್ಮ ಪಾದಗಳನ್ನು ತೊಳೆಯಿರಿ.
- ನಿಮ್ಮ ಕಾಲ್ಬೆರಳ ಉಗುರುಗಳನ್ನು ನೇರವಾಗಿ ಟ್ರಿಮ್ ಮಾಡಿ.
- ಎಲ್ಲಾ ಸಮಯದಲ್ಲೂ ಬೂಟುಗಳು ಮತ್ತು ಸಾಕ್ಸ್ ಧರಿಸಿ.
- ನಿಮ್ಮ ಪಾದಗಳಿಗೆ ಬಿಸಿ ಮತ್ತು ಕೋಲ್ಡ್ ನೀರು ಸುರಿಯದಿರಿ.
- ನಿಮ್ಮ ಪಾದಗಳಿಗೆ ರಕ್ತ ಹರಿಯುವಂತೆ ಮಾಡಿ.
- ಪ್ರತಿಸಲ ವೈದ್ಯರನ್ನು ಭೇಟಿ ಮಾಡಿದಾಗ ಕಾಲು ತಪಾಸಣೆ ಮಾಡಿ.
ಪ್ರತಿದಿನ ನಿಮ್ಮ ಪಾದಗಳನ್ನು ಪರೀಕ್ಷಿಸಿ
ನೀವು ಪಾದದ ಸಮಸ್ಯೆಗಳನ್ನು ಹೊಂದಿರಬಹುದು. ಆದರೆ, ನಿಮ್ಮ ಪಾದಗಳಲ್ಲಿ ನೋವು ಇಲ್ಲದಿರಬಹುದು. ನೀವು ಕೆಲವು ಪಾದದ ಸಮಸ್ಯೆಗಳನ್ನು ಹೊಂದಿದ್ದರೆ ಅದು ನಿಮ್ಮ ಪಾದದ ಮೇಲೆ ನೋವನ್ನು ಉಂಟುಮಾಡುವ ಸಾಧ್ಯತೆಯಿದೆ. ಒಂದು ಗುಳ್ಳೆ ಅಥವಾ ಹುಣ್ಣು ಆರಂಭಿಕ ರೋಗ ಲಕ್ಷಣವಾಗಿರಬಹುದು. ಪ್ರತಿ ದಿನವೂ ನಿಮ್ಮ ಪಾದಗಳನ್ನು ಪರೀಕ್ಷಿಸುವುದರಿಂದ ಸಮಸ್ಯೆ ಹದಗೆಡುವ ಮೊದಲು ಅವನ್ನು ಗುರುತಿಸಲು ಸಹಾಯಕವಾಗುತ್ತದೆ.
ಪ್ರತಿದಿನ ನಿಮ್ಮ ಪಾದಗಳನ್ನು ತೊಳೆಯಿರಿ
ನಿಮ್ಮ ಪಾದಗಳನ್ನು ಸಾಬೂನಿನಿಂದ ಉಗುರು ಬೆಚ್ಚಗಿನ (ತುಂಬಾ ಬಿಸಿ ನೀರು ಬಳಸಬಾರದು) ನೀರಿನಲ್ಲಿ ತೊಳೆಯಿರಿ. ನಿಮ್ಮ ಪಾದಗಳನ್ನು ತೊಳೆದು ಟವೆಲ್ ನಿಂದ ಒರೆಸಿದ ನಂತರ, ನಿಮ್ಮ ಕಾಲ್ಬೆರಳುಗಳ ನಡುವೆ ಟಾಲ್ಕಮ್ ಪೌಡರ್ ಹಾಕಿ. ಕಾಲ್ಬೆರಳುಗಳ ನಡುವಿನ ಚರ್ಮವು ತೇವವಾಗಿರುತ್ತದೆ. ಹೀಗಾಗಿ ಸೋಂಕನ್ನು ತಡೆಗಟ್ಟಲು ಪೌಡರ್ ಹಾಕುವುದರಿಂದ ಇದು ಚರ್ಮವನ್ನು ಒಣಗಿಸುತ್ತದೆ.
ನಿಮ್ಮ ಪಾದಗಳಿಗೆ ರಕ್ತ ಹರಿಯುವಂತೆ ಮಾಡಿ
ನಿಮ್ಮ ಪಾದಗಳಿಗೆ ರಕ್ತದ ಹರಿವನ್ನು ಸುಧಾರಿಸಲು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ:
ನೀವು ಕುಳಿತಿರುವಾಗ ನಿಮ್ಮ ಪಾದಗಳನ್ನು ಮೇಲಕ್ಕೆ ಇರಿಸಿ.
- ದಿನವಿಡೀ ಕೆಲವು ನಿಮಿಷಗಳ ಕಾಲ ನಿಮ್ಮ ಕಾಲ್ಬೆರಳುಗಳನ್ನು ತಿರುಗಿಸಿ. ನಿಮ್ಮ ಪಾದಗಳು ಮತ್ತು ಕಾಲುಗಳಲ್ಲಿ ರಕ್ತದ ಹರಿವನ್ನು ಸರಾಗವಾಗಿ ಸಂಚರಿಸುವಂತೆ ಮಾಡಲು ಕುಳಿತಲ್ಲೇ ಕಾಲುಗಳ ವ್ಯಾಯಾಮ ಮಾಡಬಹುದು.
ಬಿಗಿಯಾದ ಸಾಕ್ಸ್ ಧರಿಸಬೇಡಿ.
- ಹೆಚ್ಚು ದೈಹಿಕವಾಗಿ ಕ್ರಿಯಾಶೀಲರಾಗಿರಿ. ವಾಕಿಂಗ್, ಡ್ಯಾನ್ಸ್, ಯೋಗ ಈಜು ಅಥವಾ ಸೈಕಲ್ ಸವಾರಿ ಮುಂತಾದವುಗಳನ್ನು ಪ್ರಯತ್ನಿಸಿ.
ಧೂಮಪಾನ ಮಾಡುತ್ತಿದ್ದರೆ ಅದನ್ನು ನಿಲ್ಲಿಸಿ.
ನೀವು ಮಧುಮೇಹದಿಂದ ಬಳಲುತ್ತಿದ್ದು, ಇದು ವಿಪರೀತ ಮಟ್ಟಕ್ಕೆ ಹೋಗಿದ್ದರೆ ನೀವು ಬಹಳ ಜಾಗರೂಕರಾಗಿರಬೇಕು. ಮೇಲೆ ತಿಳಿಸಿದಂತಹ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪಾದಗಳನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ. ಯಾಕೆಂದರೆ ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ. ಒಮ್ಮೆ ನಿಮ್ಮಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಅವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇಲ್ಲದಿದ್ದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬಹುದು.
ಲೇಖನ: ಪ್ರಿಯಾಂಕ ಗೌಡ
