ಮಧುಮೇಹ ನಿಯಂತ್ರಣಕ್ಕೆ ನೆರವಾಗುವ 5 ನೈಸರ್ಗಿಕ ಪಾನೀಯಗಳು; ಮನೆಯಲ್ಲೇ ತಯಾರಿಸಬಹುದಾದ ಈ ಕಷಾಯಗಳು ಹಲವು ರೋಗಗಳಿಗೆ ಮದ್ದು-health home remdies 5 natural drinks which can control diabetes home made drinks for health problem rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಧುಮೇಹ ನಿಯಂತ್ರಣಕ್ಕೆ ನೆರವಾಗುವ 5 ನೈಸರ್ಗಿಕ ಪಾನೀಯಗಳು; ಮನೆಯಲ್ಲೇ ತಯಾರಿಸಬಹುದಾದ ಈ ಕಷಾಯಗಳು ಹಲವು ರೋಗಗಳಿಗೆ ಮದ್ದು

ಮಧುಮೇಹ ನಿಯಂತ್ರಣಕ್ಕೆ ನೆರವಾಗುವ 5 ನೈಸರ್ಗಿಕ ಪಾನೀಯಗಳು; ಮನೆಯಲ್ಲೇ ತಯಾರಿಸಬಹುದಾದ ಈ ಕಷಾಯಗಳು ಹಲವು ರೋಗಗಳಿಗೆ ಮದ್ದು

ಇತ್ತೀಚೆಗೆ ಮಧುಮೇಹದ ಸಮಸ್ಯೆ ಜನರನ್ನು ಹೆಚ್ಚು ಕಾಡುತ್ತಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣ ನಿಜಕ್ಕೂ ಸವಾಲಾಗಿದೆ. ಆದರೆ ಖಂಡಿತ ಇದು ಅಸಾಧ್ಯವಲ್ಲ. ಮನೆಯಲ್ಲೇ ತಯಾರಿಸಬಹುದಾದ ಈ ಕೆಲವು ಪಾನೀಯಗಳು ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ, ಮಾತ್ರವಲ್ಲ ಇವು ಹಲವು ರೋಗಗಳಿಗೆ ಮದ್ದು. ಆದರೆ ನಿಯಮಿತ ಸೇವನೆಯನ್ನು ಮರೆಯಬಾರದು.

ಮಧುಮೇಹ ನಿಯಂತ್ರಣ
ಮಧುಮೇಹ ನಿಯಂತ್ರಣ

ಮಧುಮೇಹ ಸಮಸ್ಯೆ ಇರುವವರಿಗೆ ಎಲ್ಲವನ್ನೂ ಇಷ್ಟಪಟ್ಟು ತಿನ್ನುವ ಹಾಗಿಲ್ಲ. ಒಂದು ವೇಳೆ ತಿಂದರೂ ಎಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುತ್ತದೋ ಎಂಬ ಭಯದಲ್ಲೇ ಕಾಲ ಕಳೆಯಬೇಕಾಗಬಹುದು. ಮಧುಮೇಹಿಗಳು ತಮ್ಮ ಆಹಾರದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಬೇಕು. ನೀವು ಎಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬಹುದು ಮತ್ತು ಅದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ವೆಜಿಟೇಬಲ್‌ ಜ್ಯೂಸ್‌ನಂತಹ ಕಡಿಮೆ ಸಕ್ಕರೆಯಂಶ ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಆದರೆ ಇದನ್ನು ಮಿತವಾಗಿ ಕುಡಿಯಲು ಮರೆಯಬಾರದು.

ಖ್ಯಾತ ಪೌಷ್ಟಿಕ ತಜ್ಞ ಲೋವ್ನಿತ್‌ ಬಾತ್ರಾ ಅವರ ಪ್ರಕಾರ ʼಭಾರತದಲ್ಲಿ ಮಧುಮೇಹ ಸಮಸ್ಯೆ ವ್ಯಾಪಕವಾಗಿ ಹರಡುತ್ತಿದೆ. ವಿಶ್ವದಲ್ಲೇ ಭಾರತವು ಮಧುಮೇಹದ ರಾಜಧಾನಿಯಾಗಿದೆ. ಸುಮಾರು 62 ಮಿಲಿಯನ್‌ ಮಂದಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಈ ಸಮಸ್ಯೆ ವೇಗವಾಗಿ ಬೆಳೆಯುತ್ತಿದೆ, ಅಲ್ಲದೆ ಇದರಿಂದ ಇತರ ಸಮಸ್ಯೆಗಳು ಉಂಟಾಗುತ್ತಿದೆ. ಮಧುಮೇಹ ಹೆಚ್ಚಲು ಅನುವಂಶೀಯತೆ, ಪರಿಸರ ಹಾಗೂ ಜೀವನಶೈಲಿಯ ಬದಲಾವಣೆ ಈ ಅಂಶಗಳು ಪ್ರಮುಖ ಕಾರಣವಿರಬಹುದು. ಅದರಲ್ಲೂ ನಗರೀಕರಣ ಜೀವನಶೈಲಿ ಈ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆʼ ಎಂದು ಇಂಡಿಯಾ ಡಾಟ್‌ ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಬಾತ್ರಾ ಹೇಳಿದ್ದಾರೆ.

ಹಾಗಂತ ಮಧುಮೇಹ ನಿಯಂತ್ರಣ ಸಾಧ್ಯವಿಲ್ಲ ಎಂದಲ್ಲ. ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಕೆಲವು ನೈಸರ್ಗಿಕ ಪಾನೀಯಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು.

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುವ 5 ನೈಸರ್ಗಿಕ ಪಾನೀಯಗಳಿವು

ಮೆಂತ್ಯದ ನೀರು

ಮೆಂತ್ಯದಲ್ಲಿ ಕರಗುವ ನಾರಿನಾಂಶ ಸಮೃದ್ಧವಾಗಿದೆ. ಇದರಲ್ಲಿ ಗ್ಲುಕೋಮನ್ನನ್‌ ಎಂಬ ಅಂಶವಿದ್ದು, ಇದು ದೇಹದಲ್ಲಿ ಸಕ್ಕರೆಯ ಮಟ್ಟದಲ್ಲಿ ಇಳಿಕೆಯಾಗಲು ಸಹಾಯ ಮಾಡುತ್ತದೆ. ಮಧುಮೇಹಗಳು ಪ್ರತಿನಿತ್ಯ ಖಾಲಿಹೊಟ್ಟೆಯಲ್ಲಿ ಮೆಂತ್ಯದ ನೀರು ಸೇವಿಸುವುದು ಉತ್ತಮ

ಅಮೃತಬಳ್ಳಿ ಕಷಾಯ

ಅಮೃತಬಳ್ಳಿ ಹಲವು ರೋಗಗಳಿಗೆ ರಾಮಬಾಣ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಈ ಸಂಪ್ರದಾಯಿಕ ಗಿಡಮೂಲಿಕೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿನ ಬಾರ್ಬೆರಿನ್‌ ಎಂಬ ಅಂಶವು ಮಧುಮೇಹ ನಿಯಂತ್ರಣಕ್ಕೆ ನೆರವಾಗುತ್ತದೆ.

ದಾಲ್ಚಿನ್ನಿ ಚಹಾ

ದಾಲ್ಚಿನ್ನಿ ಗ್ಲೈಕೊಜೆನ್ ಸಂಶ್ಲೇಷಣೆಯ ಚಟುವಟಿಕೆಯ ಮೇಲೆ ಪರಿಣಾಮ ಬೀರುವ ಮೂಲಕ ಗ್ಲೈಕೊಜೆನ್ ಸಂಗ್ರಹವನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿಯಲ್ಲಿರುವ ನೈಸರ್ಗಿಕ ಅಂಶ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವನ್ನು ಸ್ಥಿರವಾಗಿಡಲು ಇನ್ಸುಲಿನ್‌ ರೀತಿ ಕಾರ್ಯನಿರ್ವಹಿಸುತ್ತದೆ.

ಬೇವಿನ ಕಷಾಯ

ಬೇವಿನ ಕಷಾಯದ ಹೆಸರು ಕೇಳಿದರೆ ಮುಖ ಸಿಂಡರಿಸುತ್ತದೆ. ಕಹಿ ರುಚಿಯ ಈ ಕಷಾಯ ಯಾರಿಗೂ ಇಷ್ಟವಾಗುವುದು ಕಷ್ಟ. ಆದರೆ ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿರುವುದು ನಿಜ. ಇದು ಮಧುಮೇಹಿಗಳಿಗೆ ಬಹಳ ಉತ್ತಮ. ಇದರಲ್ಲಿ ಉತ್ಕರ್ಷಣ ವಿರೋಧಿ ಗುಣವಿದ್ದು ಇದು ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಹಾಗಲಕಾಯಿ ರಸ

ಹಾಗಲಕಾಯಿ ಮಧುಮೇಹಿಗಳಿಗೆ ದೈವದತ್ತವಾಗಿ ಸಿಕ್ಕ ವರವಾಗಿದೆ. ಯಾಕೆಂದರೆ ಇದರಲ್ಲಿ ಅಡಕವಾಗಿರುವ ಇನ್ಸುಲಿನ್‌ ಅಂಶ ಹಾಗೂ ಮಧುಮೇಹ ವಿರೋಧಿ ಅಂಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿ ಟೈಪ್‌ 2 ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಬಾಯಿಗೆ ಕಹಿಯಾದರೂ ಆರೋಗ್ಯಕ್ಕೆ ಖಂಡಿತ ಸಿಹಿ ಎನ್ನುವುದನ್ನು ಮರೆಯದಿರಿ.

ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಈ ಮೇಲಿನ ಪಾನೀಯಗಳನ್ನು ನಿಯಮಿತವಾಗಿ ಸೇವಿಸಬಹುದು. ಆದರೂ ಇದರ ಸೇವನೆಗೂ ಮುನ್ನ ತಜ್ಞರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆಯುವುದು ಉತ್ತಮ.

mysore-dasara_Entry_Point