ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರವಿದು: ಆರಂಭಿಕ ಹಂತದಲ್ಲೇ ಪತ್ತೆ ಹೇಗೆ, ಇಲ್ಲಿ ತಿಳಿಯಿರಿ
ಪ್ರಪಂಚದಾದ್ಯಂತ ಮಹಿಳೆಯರನ್ನು ಸ್ತನ ಕ್ಯಾನ್ಸರ್ ಹೆಮ್ಮಾರಿಯಂತೆ ಕಾಡುತ್ತಿದೆ. ಕೆಲವೊಬ್ಬರು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಗುಣಮುಖರಾದರೆ, ಇನ್ನೂ ಕೆಲವರಿಗೆ ಮೂರು ಅಥವಾ 4ನೇ ಹಂತ ತಲುಪಿದ ಬಳಿಕ ತಿಳಿಯುತ್ತದೆ. ಆರಂಭಿಕ ಹಂತದಲ್ಲೇ ಈ ರೋಗವನ್ನು ಹೇಗೆ ಪತ್ತೆಹಚ್ಚಬಹುದು, ಇದರ ರೋಗಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ.
ವಿಶ್ವಾದ್ಯಂತ ಮಹಿಳೆಯರ ಮೇಲೆ ತೀವ್ರ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು. ಸ್ತನ ಕ್ಯಾನ್ಸರ್ ಎನ್ನುವುದು ಸ್ತನದ ಜೀವಕೋಶಗಳಲ್ಲಿ ಹುಟ್ಟುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಮಹಿಳೆಯರಿಗೆ ಮಾತ್ರವಲ್ಲ ಪುರುಷರಲ್ಲೂ ಈ ಮಹಾಮಾರಿ ಸಂಭವಿಸಬಹುದು. ಸ್ತನ ಅಂಗಾಂಶದಲ್ಲಿನ ಅಸಹಜ ಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಈ ರೋಗ ಬಾಧಿಸುತ್ತದೆ. ಗೆಡ್ಡೆಗಳು ರೂಪುಗೊಂಡು, ದೇಹದ ಇತರ ಭಾಗಗಳಿಗೂ ಹರಡಬಹುದು. ಯಶಸ್ವಿ ಚಿಕಿತ್ಸೆಗಾಗಿ ಈ ರೋಗದ ಲಕ್ಷಣಗಳ ಬಗ್ಗೆ ಆರಂಭದ ಹಂತದಲ್ಲೇ ಪತ್ತೆ ಹಚ್ಚುವುದು ನಿರ್ಣಾಯಕವಾಗಿದೆ. ಅನೇಕ ಮಹಿಳೆಯರು ಸ್ತನದಲ್ಲಿ ಗಡ್ಡೆ ಉಂಟಾಗುವಂತಹ ಹೆಚ್ಚು ಸ್ಪಷ್ಟವಾದ ರೋಗಲಕ್ಷಣಗಳ ಬಗ್ಗೆ ಮಾತ್ರ ತಿಳಿದಿರುತ್ತಾರೆ. ಆದರೆ, ಸ್ತನ ಕ್ಯಾನ್ಸರ್ ರೋಗಲಕ್ಷಣಗಳು ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಪ್ರತಿ ಮಹಿಳೆ ತಿಳಿದಿರಬೇಕಾದ ಸ್ತನ ಕ್ಯಾನ್ಸರ್‌ನ ಐದು ರೋಗಲಕ್ಷಣಗಳು ಇಲ್ಲಿವೆ:
ಸ್ತನ ಕ್ಯಾನ್ಸರ್‌ನ ಐದು ರೋಗಲಕ್ಷಣಗಳು
ಚರ್ಮದ ವಿನ್ಯಾಸದಲ್ಲಿ ಬದಲಾವಣೆಗಳು: ಸ್ತನದ ಮೇಲೆ ದದ್ದುಗಳಂತಹ ಚಿಹ್ನೆ, ಏನೋ ಚುಚ್ಚಿದಂತಹ ಅಥವಾ ಚರ್ಮದ ದಪ್ಪವಾದಂತಹ ಲಕ್ಷಣಗಳಿದ್ದರೆ ಅವು ಸ್ತನ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು. ಈ ರೋಗಲಕ್ಷಣವು ಕೆಲವೊಮ್ಮೆ ಕಿತ್ತಳೆ ಸಿಪ್ಪೆಯ ವಿನ್ಯಾಸವನ್ನು ಹೋಲುತ್ತದೆ. ಇಂತಹ ಬದಲಾವಣೆಗಳು ಸ್ತನದ ಮೇಲೆ ಗೆಡ್ಡೆ ಬೆಳೆಯುವುದನ್ನು ಸೂಚಿಸಬಹುದು.
ಸ್ತನ ಅಥವಾ ಮೊಲೆತೊಟ್ಟುಗಳಲ್ಲಿ ವಿವರಿಸಲಾಗದ ನೋವು: ಸ್ತನ ಅಥವಾ ಮೊಲೆತೊಟ್ಟುಗಳಲ್ಲಿನ ನೋವು ಸಾಮಾನ್ಯವಾಗಿ ಸ್ತನ ಕ್ಯಾನ್ಸರ್‌ನ ಮೊದಲ ಚಿಹ್ನೆಯಾಗಿಲ್ಲದಿದ್ದರೂ ಇದನ್ನು ನಿರ್ಲಕ್ಷಿಸಬಾರದು. ಋತುಚಕ್ರ ಆಗದಿದ್ದರೆ, ಸ್ತನದಲ್ಲಿ ವಿವರಿಸಲಾಗದ ನೋವು ಉಂಟಾದರೆ ಇದು ಸ್ತನ ಕ್ಯಾನ್ಸರ್‌ನ ಎಚ್ಚರಿಕೆಯ ಸಂಕೇತವಾಗಿರಬಹುದು. ಸ್ತನದ ಒಂದು ಸ್ಥಳದಲ್ಲಿ ಮಾತ್ರ ನೋವನ್ನು ಅನುಭವಿಸಿದರೆ ತಜ್ಞ ವೈದ್ಯರನ್ನು ಭೇಟಿಯಾಗುವುದು ಸೂಕ್ತ.
ಮೊಲೆತೊಟ್ಟು (Nipple) ಚಪ್ಪಟೆಯಾಗುವಿಕೆ: ಮೊಲೆತೊಟ್ಟು ಒಳಮುಖವಾಗಿ ತಿರುಗುವುದು ಅಥವಾ ಚಪ್ಪಟೆಯಾಗುವುದು ಕೂಡ ಸ್ತನ ಕ್ಯಾನ್ಸರ್‌ನ ಲಕ್ಷಣವಿರಬಹುದು. ವಯಸ್ಸಾದಾಗ ಸ್ವಾಭಾವಿಕವಾಗಿ ಸಂಭವಿಸಬಹುದಾದರೂ, ಇದ್ದಕ್ಕಿದ್ದಂತೆ ಈ ರೀತಿ ಉಂಟಾದರೆ ಅಥವಾ ಇತರ ಬದಲಾವಣೆಗಳು ಉಂಟಾದರೆ, ಅದು ಸ್ತನ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
ಸ್ತನದ ಮೇಲೆ ಕೆಂಪಾಗುವಿಕೆ ಅಥವಾ ಊತ: ಸ್ತನದ ಮೇಲೆ ಕೆಂಪಾಗುವಿಕೆ ಅಥವಾ ಊದಿಕೊಂಡಂತಹ ಲಕ್ಷಣಗಳನ್ನು ಸಾಮಾನ್ಯವಾಗಿ ಸೋಂಕು ತಗುಲಿರಬಹುದು ಎಂದು ಗ್ರಹಿಸಬಹುದು. ಆದರೆ, ಇದು ಸ್ತನ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು. ಈ ರೀತಿಯ ಲಕ್ಷಣ ಕಂಡುಬರುವುದು ಬಹಳ ಅಪರೂಪವಾಗಿದ್ದು, ಆದರೂ ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸುವುದು ಸರಿಯಲ್ಲ.
ಮೊಲೆತೊಟ್ಟುಗಳಿಂದ ಸ್ರವಿಸುವಿಕೆ: ಮೊಲೆತೊಟ್ಟುಗಳ ಸ್ರವಿಸುವಿಕೆಯು ವಿಶೇಷವಾಗಿ ರಕ್ತಸಿಕ್ತವಾಗಿದ್ದರೆ ಅಥವಾ ಮೊಲೆತೊಟ್ಟುಗಳನ್ನು ಹಿಸುಕದೆ ಈ ರೀತಿ ಉಂಟಾದರೆ, ಅದು ಕ್ಯಾನ್ಸರ್‌ನ ಲಕ್ಷಣ. ಈ ರೀತಿಯ ಸ್ರವಿಸುವಿಕೆಯು ಹಾನಿಕರವಲ್ಲದ ಪರಿಸ್ಥಿತಿಗಳಿಂದ ಉಂಟಾಗಬಹುದಾದರೂ, ಏಕಾಏಕಿ ಈ ರೀತಿ ಉಂಟಾದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಮೇಲೆ ತಿಳಿಸಿರುವ ರೋಗಲಕ್ಷಣಗಳ ಬಗ್ಗೆ ತಿಳಿದು ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಬಹುದು. ಸ್ತನದಲ್ಲಿ ಇಂಥ ಯಾವುದೇ ಬದಲಾವಣೆಗಳನ್ನು ನೀವು ಗಮನಿಸಿದರೆ, ಸಾಧ್ಯವಾದಷ್ಟು ಬೇಗ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ನಿಯಮಿತ ಸ್ವಯಂ-ಪರೀಕ್ಷೆಗಳು, ಮ್ಯಾಮೊಗ್ರಾಮ್ ಮತ್ತು ಸ್ತನ ಆರೋಗ್ಯವನ್ನು ಅರ್ಥಮಾಡಿಕೊಳ್ಳುವುದು ಆರಂಭಿಕ ಪತ್ತೆಯ ಪ್ರಮುಖ ಅಂಶಗಳಾಗಿವೆ.