ನಾನ್‌ಸ್ಟಿಕ್ ಪಾತ್ರೆ ಅತಿಯಾಗಿ ಬಿಸಿ ಮಾಡುವುದು ಅಪಾಯಕಾರಿ ಎಂದ ಐಸಿಎಂಆರ್; ಸುರಕ್ಷಿತ ಬಳಕೆ ಹೇಗೆ?
ಖಾಲಿ ನಾನ್-ಸ್ಟಿಕ್ ಪ್ಯಾನ್ ಅಥವಾ ಪಾತ್ರೆಗಳನ್ನು ಸ್ಟವ್ ಮೇಲೆ ದೀರ್ಘಕಾಲ ಬಿಡುವುದರಿಂದ ಆರೋಗ್ಯಕ್ಕೆ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಬಹುದು. ಇಂಥಾ ಪಾತ್ರಗಳನ್ನು ಅತಿಯಾಗಿ ಬಿಸಿ ಮಾಡುವುದನ್ನು ತಪ್ಪಿಸಿ ಎಂದು ಐಸಿಎಂಆರ್ ತಿಳಿಸಿದೆ.
ಅಡುಗೆಗೆ ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಸುಲಭವಾಗಿ ತೊಳೆಯಬಹುದು ಎಂಬ ಉದ್ದೇಶದಿಂದ ಬಹುತೇಕರು ನಾನ್ ಸ್ಟಿಕ್ ತವಾಗಳನ್ನು ಹೆಚ್ಚು ಬಳಸುತ್ತಾರೆ. ಇಂಥಾ ಪಾತ್ರಗಳ ಬಳಕೆಯ ವಿಚಾರವಾಗಿ ಐಸಿಎಂಆರ್ ಇತ್ತೀಚೆಗೆ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಾನ್‌ಸ್ಟಿಕ್ ಪಾತ್ರೆಗಳನ್ನು ಹೆಚ್ಚು ಹೊತ್ತು ಬಿಸಿ ಮಾಡುವುದರಿಂದ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಿದೆ. ಇದು ವಿಷಕಾರಿ ಅಂಶಗಳನ್ನು ಹೊರಸೂಸುವುದರಿಂದಾಗಿ, ನಾನ್ ಸ್ಟಿಕ್ ಪಾತ್ರಗಳನ್ನು ಬಿಸಿ ಮಾಡುವ ಹಾಗೂ ಶುಚಿಗೊಳಿಸುವ ಸಂಬಂಧ ಕೆಲವೊಂದು ಸೂಚನೆಗಳನ್ನು ಅನುಸರಿಸುವಂತೆ ಜನರನ್ನು ಒತ್ತಾಯಿಸಿವೆ.
ನಾನ್ ಸ್ಟಿಕ್ ತವಾ ಅಥವಾ ಪ್ಯಾನ್‌ಗಳಲ್ಲಿ ಟೆಫ್ಲಾನ್ ಲೇಪನವಿರುತ್ತದೆ. ಸಾಮಾನ್ಯವಾಗಿ ಕಾರ್ಬನ್ ಮತ್ತು ಫ್ಲೋರಿನ್ ಪರಮಾಣುಗಳಿಂದ ಮಾಡಿದ ಸಂಶ್ಲೇಷಿತ ರಾಸಾಯನಿಕವಾದ ಟೆಫ್ಲಾನ್ ಲೇಪನವು, ಅಪಾಯಕಾರಿ ಎಂಬುದು ಸದ್ಯದ ವಿಷಯ. ಸಾಮಾನ್ಯ ತಾಪಮಾನದಲ್ಲಿ ಇಂಥಾ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಸಮಸ್ಯೆಗಳೇನಿಲ್ಲ. ಆದರೆ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ ಈ ಟೆಫ್ಲಾನ್ ಲೇಪನವು ಜೀವಾಣುಗಳು ಅಥವಾ ವಿಷಕಾರಿ ಹೊಗೆಯನ್ನು ಹೊರಸೂಸುತ್ತವೆ. ಇದು ಪಿಎಫ್ಎಎಸ್, ಸೂಕ್ಷ್ಮ ಮತ್ತು ನ್ಯಾನೊ ಪ್ಲಾಸ್ಟಿಕ್‌ಗಳಿಂದ ನಿಮ್ಮ ಆಹಾರವನ್ನು ಕಲುಷಿತಗೊಳಿಸಬಹುದು. ಆ ಮೂಲಕ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ.
ಐಸಿಎಂಆರ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ವಿವಿಧ ವಯೋಮಾನದ ಭಾರತೀಯರಿಗೆ ಉತ್ತಮ ಆಹಾರ ಆಯ್ಕೆಗಳನ್ನು ಮಾಡಲು ಸಹಾಯ ಮಾಡುವ ಸಲುವಾಗಿ 17 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಎಲ್ಲಾ ರೀತಿಯ ಅಪೌಷ್ಟಿಕತೆಯನ್ನು ತಡೆಗಟ್ಟಲು ಭಾರತೀಯರಿಗೆ ಸೂಕ್ತ ಆಹಾರ ಆಯ್ಕೆಗಳನ್ನು ಮಾಡಲು ಸಹಾಯ ಮಾಡಲು ಪ್ರಯತ್ನಿಸಿದೆ. ಈ ಮಾರ್ಗಸೂಚಿಗಳು ದೈಹಿಕ ಚಟುವಟಿಕೆ, ಜಲಸಂಚಯನ, ಆರೋಗ್ಯಕರ ತೂಕ ನಿರ್ವಹಣೆ, ಆಹಾರ ಸುರಕ್ಷತೆ ಕುರಿತು ಮಾಹಿತಿ ಒದಗಿಸುತ್ತವೆ.
170 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಅಪಾಯಕಾರಿ
ಒಟ್ಟಾರೆ ಆರೋಗ್ಯಕ್ಕಾಗಿ ಆರೋಗ್ಯಕರ ಅಡುಗೆ ಅಭ್ಯಾಸವನ್ನು ಅನುಸರಿಸುವ ಮಹತ್ವವನ್ನು ಮಾರ್ಗಸೂಚಿಗಳು ಒತ್ತಿಹೇಳಿವೆ. “ಟೆಫ್ಲಾನ್ ಲೇಪಿತ ನಾನ್-ಸ್ಟಿಕ್ ಪ್ಯಾನ್‌ಗಳನ್ನು 170 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದರೆ ಆರೋಗ್ಯಕ್ಕೆ ಅಪಾಯವಿದೆ. ಖಾಲಿ ಪ್ಯಾನ್ ಅನ್ನು ಗ್ಯಾಸ್ ಸ್ಟವ್‌ನಲ್ಲಿಟ್ಟು ದೀರ್ಘಕಾಲ ಬಿಟ್ಟರೆ ಅಪಾಯ ಸಂಭವಿಸಬಹುದು. ಈ ಸಂದರ್ಭದಲ್ಲಿ, ಲೇಪನಗಳು ವಿಷಕಾರಿ ಹೊಗೆಯನ್ನು ಬಿಡಬಹುದು. ನಾನ್-ಸ್ಟಿಕ್ ಪಾತ್ರೆಗಳ ಬಳಕೆ ಮತ್ತು ಶುಚಿಗೊಳಿಸುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಒಂದು ವೇಳೆ ಲೇಪನವು ಹಾಳಾದರೆ ಅಂಥಾ ಪಾತ್ರಗಳನ್ನು ಬಳಸಬಾರದು” ಎಂದು ಐಸಿಎಂಆರ್ ಮಾರ್ಗಸೂಚಿಗಳು ಉಲ್ಲೇಖಿಸಿವೆ.
ನಾನ್-ಸ್ಟಿಕ್ ಕುಕ್ ವೇರ್ ಅನ್ನು ಸುರಕ್ಷಿತವಾಗಿ ಹೇಗೆ ಬಳಸುವುದು
- ಅಡುಗೆ ಆರಂಭಕ್ಕೂ ಮುನ್ನ ಖಾಲಿ ಪ್ಯಾನ್ ಬಿಸಿ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಅದು ತುಂಬಾ ಬೇಗನೆ ಬಿಸಿಯಾಗುತ್ತದೆ. ಆ ಮೂಲಕ ವಿಷಕಾರಿ ಹೊಗೆ ಬಿಡುಗಡೆ ಮಾಡುತ್ತದೆ.
- ಕಡಿಮೆ ಮತ್ತು ಮಧ್ಯಮ ಉರಿಯಲ್ಲಿ ಅಡುಗೆ ಮಾಡುವುದು ಸೂಕ್ತ.
- ನಾನ್-ಸ್ಟಿಕ್ ಪ್ಯಾನ್‌ಗಳಲ್ಲಿ ಅಡುಗೆ ಮಾಡುವಾಗ ಚಿಮಣಿ ಅಥವಾ ಎಕ್ಸಾಸ್ಟ್ ಫ್ಯಾನ್ ಬಳಸುವುದು ಉತ್ತಮ.
- ಇಂಥಾ ಪಾತ್ರೆಗಳನ್ನು ತೊಳೆಯುವಾಗ ನಾನ್-ಸ್ಟಿಕ್ ಲೇಪನ ಹಾಳಾಗದಂತೆ ಎಚ್ಚರವಹಿಸಬೇಕು. ಲೇಪನವನ್ನು ಗೀಚುವುದನ್ನು ತಪ್ಪಿಸಿ. ಮೃದುವಾದ ಸ್ಪಾಂಜ್ ಮತ್ತು ಸಾಬೂನು, ಬೆಚ್ಚಗಿನ ನೀರಿನಿಂದ ನಿಧಾನವಾಗಿ ತೊಳೆಯಿರಿ.
- ನಾನ್‌ಸ್ಟಿಕ್ ಲೇಪನವು ಹಾಳಾದಾಗ ಪಾತ್ರೆ ಬಳಸುವುದನ್ನು ನಿಲ್ಲಿಸಿ.
- ಸ್ಟೇನ್‌ಲೆಸ್ ಸ್ಟೀಲ್, ಮಣ್ಣಿನ ಪಾತ್ರೆ ಸೆರಾಮಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಉತ್ತಮ.
ಆರೋಗ್ಯ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಮಧುಮೇಹಿಗಳು ಆಹಾರದ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬಾರದು; ಆಯುರ್ವೇದ ಹೇಳಿದ ಕಹಿ ಸತ್ಯವಿದು