Zika Virus: ಕರ್ನಾಟಕದಲ್ಲಿ 6 ಝೀಕಾ ಪ್ರಕರಣ ಪತ್ತೆ, ಈ ವೈರಸ್‌ನ ರೋಗಲಕ್ಷಣಗಳು, ಸೋಂಕು ಹರಡುವುದನ್ನು ತಡೆಯವುದು ಹೇಗೆ ಎಂಬ ಮಾಹಿತಿ ಇಲ್ಲಿದೆ
ಕಳೆದ ವರ್ಷ ಸದ್ದು ಮಾಡಿ ತಣ್ಣಗಾಗಿದ್ದ ಝೀಕಾ ವೈರಸ್ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಈಗಾಗಲೇ 6 ಝೀಕಾ ಪ್ರಕರಣಗಳು ಪತ್ತೆಯಾಗಿವೆ. ಝೀಕಾ ವೈರಸ್ ಹರಡುವ ಬಗೆ ಹೇಗೆ, ಇದರ ರೋಗಲಕ್ಷಣಗಳು ಏನಿರುತ್ತೆ, ಇದನ್ನು ತಡೆಗಟ್ಟುವ ಬಗೆ ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಮಳೆಗಾಲ ಎಂದರೆ ಡೆಂಗ್ಯೂ, ಮಲೇರಿಯಾದಂತಹ ಸೊಳ್ಳೆಗಳಿಂದ ಹರಡುವ ರೋಗಗಳು ಸಾಮಾನ್ಯ ಎಂಬಂತಾಗಿದೆ. ಈ ವರ್ಷ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ ಇದೀಗ ಡೆಂಗ್ಯೂ ಜೊತೆಗೆ ಝೀಕಾ ಪ್ರಕರಣಗಳು ಕೂಡ ಪತ್ತೆಯಾಗಿವೆ. ಕಳೆದ ವರ್ಷ ದೇಶದ ವಿವಿಧೆಡೆ ಕಾಣಿಸಿದ್ದ ಝೀಕಾ ಪ್ರಕರಣಗಳು ಈ ವರ್ಷ ಕರ್ನಾಟಕದಲ್ಲೂ ಕಾಣಿಸಿದೆ. ಹಾಗಾದರೆ ಝೀಕಾ ವೈರಸ್ ಎಂದರೇನು, ಇದು ಹರಡುವ ಬಗೆ ಹೇಗೆ, ಇದನ್ನು ತಡೆಗಟ್ಟಲು ಇರುವ ಮಾರ್ಗಗಳೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಏನಿದು ಝೀಕಾ ವೈರಸ್?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಝೀಕಾ ವೈರಸ್ ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ವೇಳೆ ಹೆಚ್ಚು ಕಚ್ಚುತ್ತದೆ. ಇದರ ರೋಗಲಕ್ಷಣಗಳು ಸೌಮ್ಯವಾಗಿರುತ್ತದೆ. ಸಾಮಾನ್ಯವಾಗಿ ದದ್ದು, ಜ್ವರ, ಮದ್ರಾಸ್ ಐ ಹಾಗೂ ತಲೆನೋವಿನಂತಹ ಲಕ್ಷಣಗಳನ್ನು ಹೊಂದಿರುತ್ತದೆ. 2 ರಿಂದ 7 ದಿನಗಳವರೆಗೆ ಇದರ ರೋಗಲಕ್ಷಣಗಳು ಇರುತ್ತವೆ. ಇದು ಲೈಂಗಿಕ ಸಂಪರ್ಕ, ಸೋಂಕಿತ ತಾಯಿಯಿಂದ ಮಗುವಿಗೆ ಅಥವಾ ಸೋಂಕಿತರ ರಕ್ತ ಪಡೆಯುವುದರಿಂದಲೂ ಹರಡುವ ಸಾಧ್ಯತೆ ಇದೆ.
ಝೀಕಾ ವೈರಸ್‌ನ ರೋಗಲಕ್ಷಣಗಳು
ಝೀಕಾ ಸೋಂಕಿಗೆ ಒಳಗಾದ ಪ್ರತಿಯೊಬ್ಬರಲ್ಲೂ ರೋಗಲಕ್ಷಣಗಳು ಕಾಣಿಸುವುದಿಲ್ಲ. ಈಡಿಸ್ ಸೊಳ್ಳೆ ಕಚ್ಚಿದ ಎರಡು ವಾರಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಿವು.
* ಜ್ವರ
* ಚರ್ಮದಲ್ಲಿ ದದ್ದು
* ಕೀಲುನೋವು
* ಸ್ನಾಯು ಸೆಳೆತ
* ತಲೆನೋವು
* ಮದ್ರಾಸ್ ಐ
* ಆಯಾಸ
* ವಾಂತಿ ಮತ್ತು ವಾಕರಿಕೆಯ ಅನುಭವ
ಸಾಮಾನ್ಯವಾಗಿ ಝೀಕಾ ಸೋಂಕಿನ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ. 5 ಮಂದಿ ಸೋಂಕಿತರಲ್ಲಿ ಒಬ್ಬರು ಮಾತ್ರ ರೋಗಲಕ್ಷಣಗಳನ್ನು ಅನುಭವಿಸಬಹುದು. ಗರ್ಭಿಣಿಯರಲ್ಲಿ ಝೀಕಾ ವೈರಸ್ ಸೋಂಕು ತಗುಲಿದರೆ ಶಿಶುಗಳು ಜನ್ಮಜಾತ ವಿರೂಪಕ್ಕೆ ಕಾರಣವಾಗಬಹುದು, ಅವಧಿಪೂರ್ವ ಜನನ ಅಥವಾ ಗರ್ಭಪಾತದಂತಹ ಸಮಸ್ಯೆಗಳು ಉಂಟಾಗಬಹುದು.
ರೋಗನಿರ್ಣಯ
ಕಳೆದ 12 ವಾರಗಳಲ್ಲಿ ಝಿಕಾ ಪೀಡಿತ ಪ್ರದೇಶಕ್ಕೆ ಪ್ರಯಾಣಿಸಿದ ಯಾರಾದರೂ ರೋಗದ ಲಕ್ಷಣಗಳನ್ನು ಹೊಂದಿದ್ದರೆ ಸಾಧ್ಯವಾದಷ್ಟು ಬೇಗ ಪರೀಕ್ಷಿಸಬೇಕು. ಈ ಪ್ರದೇಶಗಳಿಗೆ ಪ್ರಯಾಣಿಸಿದ ಗರ್ಭಿಣಿಯರು ಅಥವಾ ಝಿಕಾ ಹೊಂದಿರುವ ಪುರುಷನೊಂದಿಗೆ ಅಸುರಕ್ಷಿತ ಲೈಂಗಿಕತೆಯನ್ನು ಹೊಂದಿದ್ದರು, ಅವರು ರೋಗದ ಲಕ್ಷಣಗಳನ್ನು ಹೊಂದಿರಲಿ ಅಥವಾ ಇಲ್ಲದಿರಲಿ, ಪರೀಕ್ಷೆಯ ಕುರಿತು ವೈದ್ಯರನ್ನು ಸಂಪರ್ಕಿಸಬೇಕು. ಜಿಕಾ ಪರೀಕ್ಷೆಯು ಸರಳ ರಕ್ತ ಪರೀಕ್ಷೆಯಾಗಿದೆ.
ಝೀಕಾ ವೈರಸ್ ಸೋಂಕು ತಡೆಗಟ್ಟುವ ಮಾರ್ಗಗಳು
ಝೀಕಾ ವೈರಸ್ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ಸೋಂಕು ಹರಡುವುದನ್ನ ತಡೆಯಬಹುದು. ಈ ಮೇಲಿನ ರೋಗ ಲಕ್ಷಣಗಳು ಕಾಣಿಸಿದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ತಡ ಮಾಡಿದರೆ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಸೋಂಕು ಕಾಣಿಸಿದರೆ ಯಾವುದೇ ಸ್ವಯಂ ಚಿಕಿತ್ಸೆ ಮಾಡದೇ ವೈದ್ಯರ ಬಳಿ ತೋರಿಸುವುದು ಉತ್ತಮ.
ಮಾಡಬೇಕಾದ ಹಾಗೂ ಮಾಡಬಾರದ ವಿಚಾರಗಳು
ವೈರಸ್ ಸೋಂಕಿಗೆ ಒಳಗಾದ ಜನರು ಮನೆಯೊಳಗೆ ಇರಬೇಕು, ಸಾಧ್ಯವಾದಷ್ಟು ವಿಶ್ರಾಂತಿ ಮತ್ತು ಸಾಕಷ್ಟು ದ್ರವಾಹಾರ ಸೇವಿಸಬೇಕು. ಗರ್ಭಿಣಿಯರು ವಿಶೇಷವಾಗಿ ಸೋಂಕಿತ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು.
ಸೊಳ್ಳೆಯಿಂದ ಕಚ್ಚುವ ಅಪಾಯವನ್ನು ಕಡಿಮೆ ಮಾಡುವುದು ಝೀಕಾ ವೈರಸ್‌ನಿಂದ ಸೋಂಕನ್ನು ತಡೆಗಟ್ಟುವ ಏಕೈಕ ಮಾರ್ಗವಾಗಿದೆ. ಸೊಳ್ಳೆಯು ಮುಖ್ಯವಾಗಿ ಹಗಲಿನ ವೇಳೆಯಲ್ಲಿ ಕಚ್ಚುವುದರಿಂದ, ಯಾವಾಗಲೂ ನಿಮ್ಮ ಮನೆ ಹಾಗೂ ಸುತ್ತಲಿನ ವಾತಾವರಣ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಇನ್ನಿತರ ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ:
ಸೊಳ್ಳೆ ಕಚ್ಚುವುದನ್ನು ತಡೆಯಲು ಮನೆಯಿಂದ ಹೊರಗಡೆ ಹೋಗುವಾಗ ಹಾಗೂ ಹೊರಗಡೆ ಆಟವಾಡಲು ಹೋಗುವ ಮಕ್ಕಳಿಗೆ ಕೈಕಾಲು ಸೇರಿ ಸಂಪೂರ್ಣ ದೇಹ ಮುಚ್ಚುವಂತೆ ಬಟ್ಟೆ ತೊಡಿಸಿ.
* ಸೊಳ್ಳೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ
* ಸೊಳ್ಳೆ/ಕೀಟ ನಿವಾರಕಗಳನ್ನು ಬಳಸಿ
* ಕುದಿಸಿದ ಅಥವಾ ಫಿಲ್ಟರ್ ಮಾಡಿದ ನೀರನ್ನು ಮಾತ್ರ ಕುಡಿಯಿರಿ
* ಮನೆಯಲ್ಲಿ ತಯಾರಿಸಿದ ತಾಜಾ ಆಹಾರವನ್ನು ಸೇವಿಸಿ ಮತ್ತು ಹೊರಗಿನ ಆಹಾರವನ್ನು ತಪ್ಪಿಸಿ
* ಜ್ವರಕ್ಕೆ ಚಿಕಿತ್ಸೆ ನೀಡಲು ಆಸ್ಪಿರಿನ್ ಬಳಸುವುದನ್ನು ತಪ್ಪಿಸಿ ಮತ್ತು ರೋಗಲಕ್ಷಣಗಳು 2 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿ
* ಮನೆ ಹಾಗೂ ಒಳಾಂಗಣ ಪರಿಸರದಲ್ಲಿ ಉತ್ತಮವಾಗಿ ಗಾಳಿಯಾಡುವುದು ಮುಖ್ಯವಾಗುತ್ತದೆ. ಅದನ್ನೂ ಪರಿಗಣಿಸಿ.
* ನಿಮ್ಮ ಕೈಯಿಂದ ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಅದರಲ್ಲೂ ವಿಶೇಷವಾಗಿ ಹೊರಗಿನಿಂದ ಬಂದ ನಂತರ ಮೂಗು, ಬಾಯಿ ಮುಟ್ಟದಿರಿ
* ಯಾವಾಗಲೂ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಿ ಮತ್ತು ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುತ್ತಿರಿ.
* ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ವಿಶೇಷವಾಗಿ ನೀವು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ ಅದು ವೈರಲ್ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಭಾಗ