70 Hours Work: ವಾರದಲ್ಲಿ 70 ಗಂಟೆ ಕೆಲಸ ಮಾಡೋಕೆ ರೆಡಿನಾ; ಹಾಗಾದ್ರೆ ಇದ್ರಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ ನೋಡಿ
ಭಾರತದ ಖ್ಯಾತ ಐಟಿ ಕಂಪೆನಿಗಳಲ್ಲಿ ಒಂದಾದ ಇನ್ಫೋಸಿಸ್‌ನ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ದೇಶದ ಆರ್ಥಿಕ ಬೆಳವಣಿಗೆಗೆ ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಆದರೆ ಈ ಮಾತು ಪ್ರಾಯೋಗಿಕವಾಗಿ ಅನುಷ್ಠಾನ ಸಾಧ್ಯವೇ? ಇದರಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಈ ಕುರಿತ ವಿವರ ಇಲ್ಲಿದೆ.

ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು, ಆ ಮೂಲಕ ದೇಶ ಉತ್ಪಾದಕತೆ ಹೆಚ್ಚಲು ನೆರವಾಗಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದರು. ಅವರು ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಅಕ್ಷೇಪ ವ್ಯಕ್ತವಾಗಿದೆ. ಅಲ್ಲದೆ, ಹಲವು ತಜ್ಞರು 70 ಗಂಟೆಗಳ ಕಾಲ ಕೆಲಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ, ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡಿದರೆ ನಮ್ಮ ಕೈಯಾರೆ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಂತೆ ಎನ್ನುವುದು ತಜ್ಞರ ಅಭಿಪ್ರಾಯ.
ದೇಶದ ಪ್ರಗತಿಗೆ ವಾರದಲ್ಲಿ 70 ಗಂಟೆ ದುಡಿಯಬೇಕು ಎಂಬುದು ನಾರಾಯಣಮೂರ್ತಿ ಅವರ ಸಲಹೆ. ತಂತ್ರಜ್ಞಾನ ಮಾತ್ರವಲ್ಲ, ನಾಗರಿಕರು ಕೂಡ ದೇಶದ ಸಂಪತ್ತು ಎಂದು ಹೇಳಲಾಗುತ್ತದೆ. ಆದರೆ ಮನುಷ್ಯ ಆರೋಗ್ಯವಾಗಿದ್ದರಷ್ಟೇ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಲು ಸಾಧ್ಯ, ಆಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದೆ. ವಾರದಲ್ಲಿ 70 ಗಂಟೆ ಕೆಲಸ ಮಾಡುವುದು ಹೃದಯದ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಒಂದು ಸರಳ ಉದಾಹರಣೆಯೆಂದರೆ..
- ಒಂದು ದಿನದಲ್ಲಿ 24 ಗಂಟೆಗಳು
- ವಾರದಲ್ಲಿ 6 ದಿನಗಳ ಕಾಲ ಪ್ರತಿದಿನ 12 ಗಂಟೆಗಳ ಕೆಲಸ
- ಆಗ 12 ಗಂಟೆ ಉಳಿಯುತ್ತದೆ.
- ಅದರಲ್ಲಿ 8 ಗಂಟೆಗಳ ನಿದ್ದೆಗೆ ಮೀಸಲು
- ಪ್ರಮುಖ ನಗರಗಳಲ್ಲಿದ್ದರೆ 2 ಗಂಟೆ ಟ್ರಾಫಿಕ್‌ನಲ್ಲೇ ಕಳೆದುಹೋಗುತ್ತದೆ
- ಇನ್ನು ಸ್ನಾನ, ತಿಂಡಿ, ದಿನಚರಿ ಹೀಗೆ ಕಚೇರಿಗೆ ಸಿದ್ಧವಾಗಲು 2 ಗಂಟೆಗಳು
ಈ ಲೆಕ್ಕಾಚಾರದ ಪ್ರಕಾರ, ಒಬ್ಬ ಮನುಷ್ಯ ಹೆಚ್ಚಿನ ಸಮಯ ಆಫೀಸ್‌ನಲ್ಲೇ ಕಳೆಯುತ್ತಾನೆ. ಇದರಿಂದ ಅವನಿಗೆ ಸಾಮಾಜಿಕ ಬೆರೆಯಲು ಸಾಧ್ಯವಾಗುವುದಿಲ್ಲ. ಸ್ನೇಹಿತರು, ಆತ್ಮೀಯರೊಂದಿಗೆ ಮಾತನಾಡಲು ಅವಕಾಶ ಸಿಗುವುದಿಲ್ಲ. ಇದರಿಂದ ಸಾಕಷ್ಟು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆತ್ಮೀಯರ ಒಡನಾಟವೇ ಇಲ್ಲದ ಬದುಕು
ನೀವು ದಿನದ ಬಹುತೇಕ ಹೊತ್ತು ಕೆಲಸ ಮಾಡಿದರೆ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಿಲ್ಲ, ವ್ಯಾಯಾಮ ಮಾಡಲು ಸಮಯವಿಲ್ಲ, ಇನ್ನು ಯಾವುದೇ ರೀತಿ ಮನರಂಜನೆಯನ್ನು ನಿರೀಕ್ಷೆ ಮಾಡಲೂ ಸಾಧ್ಯವಿಲ್ಲ. ಇದರೊಂದಿಗೆ ಕೆಲಸ ಮುಗಿದ ತಕ್ಷಣ, ಮುಗಿಯಿತಪ್ಪಾ, ಇನ್ನು ಮುಂದೆ ಆರಾಮ ಅಂದುಕೊಳ್ಳುವ ಹಾಗೆಯೂ ಇಲ್ಲ. ಏಕೆಂದರೆ ಕಂಪನಿಗಳ ಮೇಲ್‌ಗಳು, ಕರೆಗಳಿಗೆ ನೀವು ಉತ್ತರಿಸಲೇಬೇಕು. ಇದರಿಂದ ಬಹುತೇಕ ಅಂದ್ರೆ ದಿನ ಶೇ 75 ರಷ್ಟು ಭಾಗ ಕಚೇರಿಯೇ ನಿಮ್ಮ ಜೀವನದ ಭಾಗವಾಗಿರುತ್ತದೆ.
ನಾರಾಯಣ ಮೂರ್ತಿ ಅವರ ಹೇಳಿಕೆಗೆ ಇತರ ಹಲವು ಸಿಇಒಗಳು ಬೆಂಬಲ ನೀಡಿದರೆ, ವಿಜ್ಞಾನ ಹಾಗೂ ವೈದ್ಯರು ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ವಾರದಲ್ಲಿ 50 ಗಂಟೆಗಳ ಕಾಲ ಕೆಲಸ ಮಾಡುವುದರಿಂದಲೇ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವುದು ಮನುಷ್ಯನಿಗೆ ಅಸಾಧ್ಯವೇನಲ್ಲ, ಇದು ಖಂಡಿತ ಸಾಧ್ಯ. ಆದರೆ ಇದು ವ್ಯಕ್ತಿಯ ಆರೋಗ್ಯ, ಯೋಗಕ್ಷೇಮ ಮತ್ತು ವೃತ್ತಿ ಜೀವನದ ಸಮತೋಲನದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ.
ದೀರ್ಘಾವಧಿ ಕೆಲಸ ಮಾಡುವುದರಿಂದ ದಣಿವು, ಕೆಲಸದ ಮೇಲೆ ಅಸಮಾಧಾನ ಮೂಡುವುದು ಮತ್ತು ವೃತ್ತಿ ಹಾಗೂ ವೈಯಕ್ತಿಕ ಜೀವನದ ನಡುವಿನ ಅಸಮತೋಲನ ಉಂಟಾಗುವುದು ಇಂತಹ ಸಮಸ್ಯೆಗಳು ಕಾಣಿಸಬಹುದು ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ಇದು ದೈಹಿಕ ಮತ್ತು ಮಾನಸಿಕ ಬಳಲಿಕೆಗೂ ಕಾರಣವಾವಾಗುತ್ತದೆ. ಕುಟುಂಬದವರಿಗೆ ಸಮಯ ನೀಡುವುದು ಕಡಿಮೆಯಾಗುತ್ತದೆ. ಇದು ದೇಹದ ನೈಸರ್ಗಿಕ ಚೇತರಿಕೆಯ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ.
70 ಗಂಟೆಗಳ ಕಾಲ ಕೆಲಸ ಮಾಡುವುದರಿಂದಾಗುವ ಇತರ ಸಮಸ್ಯೆಗಳು
- ಹೃದಯರಕ್ತನಾಳದ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ
- ಇತ್ತೀಚೆಗೆ ಜನರು ಫಾಸ್ಟ್‌ಫುಡ್‌ಗೆ ದಾಸರಾಗಿದ್ದಾರೆ. ಅಲ್ಲದೇ ಸರಿಯಾಗಿ ಊಟ ತಿಂಡಿ ಮಾಡಲು ಸಮಯವಿಲ್ಲದೇ ಅರ್ಧಂಬರ್ಧ ತಿನ್ನುವುದು ರೂಢಿಯಾಗಿದೆ. ಇದರಿಂದ ಬೊಜ್ಜು ಉಂಟಾಗುತ್ತಿದೆ. ಬೊಜ್ಜಿನಿಂದ ಹಲವು ರೀತಿಯ ದೈಹಿಕ ಸಮಸ್ಯೆಗಳು ಎದುರಾಗುತ್ತಿದೆ.
- ಹೆಚ್ಚು ಹೊತ್ತು ಕುಳಿತೇ ಇರುವುದು, ದೈಹಿಕ ಚಟುವಟಿಕೆಯ ಕೊರತೆಯ ಕಾರಣದಿಂದ ಸ್ನಾಯು ಸಮಸ್ಯೆಗಳು ಎದುರಾಗುತ್ತವೆ.
- ಹೆಚ್ಚಿದ ಒತ್ತಡದ ಮಟ್ಟ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
- ಭಾವನಾತ್ಮಕ ಬಳಲಿಕೆ, ಬೇರ್ಪಡುವಿಕೆ, ನಿದ್ರಾಹೀನತೆ ಕಾಡಬಹುದು.
ಹೀಗೆ 70 ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಕೇವಲ ದೈಹಿಕ ಮಾತ್ರವಲ್ಲ ಹಲವು ರೀತಿಯ ಮಾನಸಿಕ ಸಮಸ್ಯೆಗಳೂ ಎದುರಾಗುವುದು ಖಂಡಿತ.
ನಾವೆಲ್ಲರೂ ನಮ್ಮ ಸಂತೋಷಕ್ಕಾಗಿ, ಜೀವನಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ ವೃತ್ತಿ ಜೀವನವು ಹಲವು ಸಮಸ್ಯೆಗಳನ್ನು ಹೊಂದಿರುತ್ತದೆ ಎಂಬುದು ಸುಳ್ಳಲ್ಲ. ಮನುಷ್ಯ ಬದುಕಲು ತಿನ್ನಬೇಕೇ ಹೊರತು, ತಿನ್ನುವ ಸಲುವಾಗಿಯೇ ಬದುಕಬಾರದು. ಅಲ್ಲದೆ, ಕೆಲಸವು ಜೀವನದ ಭಾಗವಾಗಬೇಕು, ಕೆಲಸವೇ ಜೀವನವಾಗಬಾರದು.

ವಿಭಾಗ