Cervical Cancer: ಪೂನಂ ಪಾಂಡೆ ಸಾವಿಗೆ ಕಾರಣವಾದ ಗರ್ಭಕಂಠದ ಕ್ಯಾನ್ಸರ್ ಉಂಟಾಗಲು ಕಾರಣವೇನು, ಇದರ ಲಕ್ಷಣಗಳೇನು? ಇಲ್ಲಿದೆ ವಿವರ
ಬಾಲಿವುಡ್‌ನ ಮಾದಕ ನಟಿ ಪೂನಂ ಪಾಂಡೆ ತಮ್ಮ 32 ವಯಸ್ಸಿಗೆ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 2020ರ ವರದಿ ಪ್ರಕಾರ ಪ್ರಪಂಚದಾದ್ಯಂತ ಪ್ರತಿವರ್ಷ 6 ಲಕ್ಷಕ್ಕೂ ಅಧಿಕ ಮಂದಿ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ, ಅಲ್ಲದೆ ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ.
ಬಾಲಿವುಡ್‌ನ ಮಾದಕ ನಟಿ, ವಿವಾದಗಳಿಂದಲೇ ಹೆಸರುವಾಸಿಯಾಗಿದ್ದ ಪೂನಂ ಪಾಂಡೆ ಇಂದು ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ ಪ್ರತಿವರ್ಷ 6 ಲಕ್ಷಕ್ಕೂ ಅಧಿಕ ಮಂದಿ ಈ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ಮಹಿಳೆಯರನ್ನು ಅತಿ ಹೆಚ್ಚು ಕಾಡುತ್ತಿರುವ ಕ್ಯಾನ್ಸರ್‌ಗಳಲ್ಲಿ 4ನೇ ಸ್ಥಾನ ಇದಕ್ಕಿದೆ. ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆ ನೀಡಿರುವ ವರದಿಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆಯ ಜೀವವನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಗರ್ಭಕಂಠದಲ್ಲಿನ ಕೋಶಗಳ ಅಸಹಜ ಬೆಳವಣಿಗೆಯು ಈ ಕ್ಯಾನ್ಸರ್‌ಗೆ ಪ್ರಮುಖ ಕಾರಣ. ಇದು ಗರ್ಭಕೋಶದಿಂದ ಯೋನಿವರೆಗೆ ಹರಡುತ್ತದೆ.
2020ರ ವರದಿಯೊಂದರ ಪ್ರಕಾರ ಪ್ರಪಂಚದಾದ್ಯಂತ ಸುಮಾರು 6 ಲಕ್ಷದಷ್ಟು ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸುಮಾರು 3ಲಕ್ಷಕ್ಕೂ ಅಧಿಕ ಮಂದಿ ಇದರಿಂದ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯವಾಗಿ, ಗರ್ಭಕಂಠದ ಕ್ಯಾನ್ಸರ್ ಇತರೆಲ್ಲಾ ಕ್ಯಾನ್ಸರ್‌ನಂತೆ ಆರಂಭಿಕ ಹಂತದಲ್ಲೇ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡಿ ಗುಣ ಪಡಿಸಬಹುದಾಗಿದೆ. ಮೊದಲ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆದು ನಂತರದ ಹಂತದಲ್ಲಿ ಚಿಕಿತ್ಸೆಯನ್ನು ಮುಂದುವರಿಸಿದರೆ ಈ ರೋಗವನ್ನು ಗುಣಪಡಿಸಬಹುದಾಗಿದೆ.
ನಿನ್ನೆ (ಫೆ.1) 2024ರ ಮಧ್ಯಂತರ ಬಜೆಟ್ ಮಂಡಿಸುವಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗರ್ಭಕಂಠ ಕ್ಯಾನ್ಸರ್ ತಡೆಗೆ 9 ರಿಂದ 14 ವರ್ಷ ವಯಸ್ಸಿನ ಹುಡುಗಿಯರಿಗೆ ಲಸಿಕೆಯನ್ನು ನೀಡುವ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದರು.
ಗರ್ಭಕಂಠದ ಕ್ಯಾನ್ಸರ್ ಉಂಟಾಗಲು ಕಾರಣ?
ಹ್ಯೂಮನ್ ಪ್ಯಾಪಿಲೋಮವೈರಸ್ ಅಥವಾ ಎಚ್‌ಪಿವಿ ಶೇ 99ರಷ್ಟು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿದೆ. ಇದು ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ಸೋಂಕು. ಇದು ಗಂಟಲು, ಜನನಾಂಗ ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕವಾಗಿ ಸಕ್ರಿಯವಾಗಿರುವವರು ಸಾಮಾನ್ಯವಾಗಿ ಕೆಲವು ಬಾರಿ ಸೋಂಕಿಗೆ ಒಳಗಾಗುತ್ತಾರೆ. ಆದರೆ ಇದರ ರೋಗಲಕ್ಷಣಗಳು ಮೇಲ್ನೋಟಕ್ಕೆ ಅರಿವಿಗೆ ಬರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.
ಹೆಚ್ಚಿನ ಸಂದರ್ಭಗಳಲ್ಲಿ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಉತ್ತಮವಾಗಿದ್ದರೆ, ಇದು ಸೋಂಕನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಆದರೆ ನಿರಂತರ ಸೋಂಕು ಅಸಹಜ ಕೋಶಗಳ ಬೆಳವಣಿಗೆಗೆ ಕಾರಣವಾಗಬಹುದು. ಅಲ್ಲದೆ ಅದು ನಂತರದ ದಿನಗಳಲ್ಲಿ ಕ್ಯಾನ್ಸರ್ ಆಗಿ ಬದಲಾಗಬಹುದು. ಅಸಹಜ ಜೀವಕೋಶಗಳು ಕ್ಯಾನ್ಸರ್ ಆಗಿ ಬದಲಾಗಲು 15 ರಿಂದ 20 ವರ್ಷಗಳು ಬೇಕಾಗಬಹುದು. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿರುವ ಮಹಿಳೆಯರಲ್ಲಿ ಇದು ಕೇವಲ 5 ರಿಂದ 10 ವರ್ಷದಲ್ಲಿ ಕ್ಯಾನ್ಸರ್ ಉಂಟಾಗುವಂತೆ ಮಾಡಬಹುದು.
ಇತ್ತೀಚಿಗೆ ತಾಯಿಯಾದವರು, ಗರ್ಭನಿರೋಧಕ ಔಷಧಿಗಳನ್ನು ತಿನ್ನುವವರು, ಧೂಮಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡಬಹುದು. ಲೈಂಗಿಕವಾಗಿ ಹರಡುವ ಸೋಂಕುಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ರೋಗಲಕ್ಷಣಗಳು ಹಾಗೂ ಚಿಕಿತ್ಸೆ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗರ್ಭಕಂಠದ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು ಹೀಗಿವೆ.
ಮುಟ್ಟಿನ ದಿನಗಳು, ಋತುಬಂಧದ ನಂತರ ಹಾಗೂ ಲೈಂಗಿಕ ಕ್ರಿಯೆ ನಡೆಸುವ ಸಂದರ್ಭ ಅತಿಯಾದ ರಕ್ತಸ್ರಾವ ಉಂಟಾಗುವುದು.
* ಯೋನಿಯಿಂದ ಅಸಹಜ ವಾಸನೆಯ ದ್ರವ ಸುರಿಯುವುದು
* ಬೆನ್ನು, ಕಾಲುಗಳು ಅಥವಾ ಸೊಂಟದಲ್ಲಿ ನಿರಂತರ ನೋವು ಉಂಟಾಗಬಹುದು.
* ತೂಕ ನಷ್ಟ, ಆಯಾಸ ಹಾಗೂ ಹಸಿವು ಇಲ್ಲದಿರುವಿಕೆ
* ಯೋನಿಯ ಅಸ್ವಸ್ಥತೆ
* ಕಾಲುಗಳಲ್ಲಿ ಊತ
ಚಿಕಿತ್ಸೆ
ನಿಮ್ಮಲ್ಲಿ ಈ ರೀತಿಯ ಯಾವುದೇ ಲಕ್ಷಣಗಳು ಕಂಡ ಬಂದರೂ ನಿರ್ಲಕ್ಷ್ಯ ಮಾಡಿದಿರಿ. ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿ. ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಮೂಲಕ ಈ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಬಹುದು.