ಕನ್ನಡ ಸುದ್ದಿ  /  Lifestyle  /  Health News Amazing Health Benefits Of Consuming Kokum Juice Everyday Kokum Juice Health Benefits Bgy

Kokum Juice: ಬೇಸಿಗೆಯಲ್ಲಿ ಪ್ರತಿನಿತ್ಯ ಕೋಕಂ ಶರಬತ್ತು ಕುಡಿದು ನೋಡಿ; ಆರೋಗ್ಯ ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯಲಾರವು

ಔಷಧೀಯ ಹಣ್ಣು ಎಂದೇ ಕರೆಸಿಕೊಳ್ಳುವ ಕೋಕಂನಲ್ಲಿ ವಿಟಮಿನ್ ಎ, ವಿಟಮಿನ್ ಬಿ3 ಮತ್ತು ವಿಟಮಿನ್ ಸಿ ಮುಂತಾದ ಖನಿಜಾಂಶಗಳು ಹೇರಳವಾಗಿವೆ. ಪ್ರತಿನಿತ್ಯ ಕೋಕಂ ಶರಬತ್ತನ್ನು ಸೇವಿಸುವುದರಿಂದ ಜೀರ್ಣಕ್ರಿಯೆ, ಪಿತ್ತ, ಹೊಟ್ಟೆ ನೋವು ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ದೂರವಿರಬಹುದು. ಈ ಹಣ್ಣಿನ ಉಪಯೋಗಗಳ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗಬಹುದು.

ಪ್ರತಿನಿತ್ಯ ಕೋಕಂ ಶರಬತ್ತು ಕುಡಿದು ನೋಡಿ; ಆರೋಗ್ಯ ಸಮಸ್ಯೆಗಳು ನಿಮ್ಮ ಹತ್ತಿರವೂ ಬರಲಾರವು
ಪ್ರತಿನಿತ್ಯ ಕೋಕಂ ಶರಬತ್ತು ಕುಡಿದು ನೋಡಿ; ಆರೋಗ್ಯ ಸಮಸ್ಯೆಗಳು ನಿಮ್ಮ ಹತ್ತಿರವೂ ಬರಲಾರವು

ಸುಡು ಬಿಸಿಲಿನಲ್ಲಿ ದಣಿದು ಬಂದಾಗ ಬಾಯಾರಿಕೆಯನ್ನು ತಣಿಸಲು ಸಿಹಿ ಮತ್ತು ಹುಳಿ ಮಿಶ್ರಿತ ರುಚಿಯ ಕೋಕಂ (ಮುರುಗಲ, ಮುರಿಯಾ, ಪುನರ್ಪುಳಿ) ಜ್ಯೂಸ್‌ ಕುಡಿದರೆ ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ನೆಮ್ಮದಿ ಎನ್ನಿಸುತ್ತದೆ. ಬೇಸಿಗೆಯ ಪಾನೀಯವೆಂದೇ ಕರೆಸಿಕೊಳ್ಳುವ ಕೋಕಂ ಜ್ಯೂಸ್‌, ನಿರ್ಜಲೀಕರಣವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಭಾರತದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಬೆಳೆಯುವ ಈ ಕೋಕಂ ಹಣ್ಣುಗಳನ್ನು ಪುನರ್ಪುಳಿ ಎಂದೂ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಗಾರ್ಸಿನಿಯಾ ಇಂಡಿಕಾ. ಗೋವಾ, ಮಲೆನಾಡು ಹಾಗೂ ದಕ್ಷಿಣ ಕನ್ನಡ ಭಾಗ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಷ್ಟೇ ಅಲ್ಲದೆ ನಿತ್ಯವೂ ಈ ಹಣ್ಣಿನ ಬಳಕೆ ಮಾಡುತ್ತಾರೆ. ಅದರಲ್ಲೂ ಅಡುಗೆಯಲ್ಲಿ, ಮಸಾಲೆ ಪದಾರ್ಥವಾಗಿ ಮಾತ್ರವಲ್ಲದೇ ಆಯುರ್ವೇದ ಔಷಧದಲ್ಲಿಯೂ ಈ ಹಣ್ಣನ್ನು ಉಪಯೋಗಿಸುತ್ತಾರೆ.

ಪೌಷ್ಟಿಕತಜ್ಞರು ಲೊವ್ನೀತ್ ಬಾತ್ರಾ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವಂತೆ, ಗಾರ್ಸಿನಿಯಾ ಇಂಡಿಕಾ ಎಂದೂ ಕರೆಯಲ್ಪಡುವ ಕೋಕಂ ಉಷ್ಣವಲಯದ ಬೇಸಿಗೆಯ ಹಣ್ಣು. ಇದು ಮನಸ್ಸಿಗೆ ಹಿತವೆನ್ನಿಸುವ ಸುವಾಸನೆಯನ್ನು ಹೊಂದಿರುವುದರ ಜೊತೆಗೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಈ ಹಣ್ಣು ಹೊಂದಿದೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಕೋಕಂ ರಸದ ಸೇವನೆಯ 5 ಪ್ರಯೋಜನಗಳು

ದೇಹದ ತೂಕ ಕಡಿಮೆ ಮಾಡಲು ಉತ್ತಮ ಆಯ್ಕೆ: ತೂಕ ಇಳಿಸಬೇಕು ಎಂದು ಸಾಕಷ್ಟು ಕಸರತ್ತುಗಳನ್ನೇ ಮಾಡುವ ಮಂದಿ ಗಮನಿಸಬೇಕಿರುವ ವಿಚಾರವೆಂದರೆ, ಕೋಕಂ ಶರಬತ್ತು ಸೇವನೆಯು ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ ಎಂಬುದು. ಈ ಹಣ್ಣಿನಲ್ಲಿ ಹೈಡ್ರಾಕ್ಸಿಸಿಟ್ರಿಕ್ ಆಮ್ಲವಿದ್ದು, ಇದು ದೇಹದಲ್ಲಿ ಕೊಬ್ಬಿನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಂಗ್ರಹವಾಗಿರುವ ಕೊಬ್ಬನ್ನು ಅತಿ ವೇಗವಾಗಿ ಕರಗಿಸುವಲ್ಲಿ ನೆರವಾಗುತ್ತದೆ.

ನೋವು ಮತ್ತು ಊತವನ್ನು ನಿವಾರಿಸಬಲ್ಲದು: ದೇಹಕ್ಕೆ ಉಂಟಾಗುವ ನಿರಂತರ ಉರಿಯೂತದಿಂದ ದೇಹದ ಮೇಲೆ ಅನೇಕ ರೀತಿಯ ಕೆಟ್ಟ ಪರಿಣಾಮಗಳು ಬೀರಬಹುದು. ಕೋಕಂ ಅದರ ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ನಿತ್ಯವೂ ಅದರ ಜ್ಯೂಸ್‌ ಸೇವನೆ ಮಾಡುವುದರಿಂದ ಸಂಧಿವಾತ ಅಥವಾ ಇತರ ಉರಿಯೂತದಿಂದ ಉಂಟಾಗುವ ನೋವು ಮತ್ತು ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೇಹವನ್ನು ಸ್ವಸ್ತ್ಯವಾಗಿಡಲು ನೆರವಾಗುತ್ತದೆ.

ಜೀರ್ಣಕ್ರಿಯೆ ಸರಾಗವಾಗಲು ಸಹಾಯಕ: ಕೋಕಂ ಹಣ್ಣಿನಲ್ಲಿ ಕ್ಯಾಲ್ಸಿಯಂ, ಐರನ್, ಮ್ಯಾಂಗನೀಸ್, ಪೊಟ್ಯಾಶಿಯಮ್, ಜಿಂಕ್ ಮಾತ್ರವಲ್ಲದೆ ವಿಟಮಿನ್ ಎ, ವಿಟಮಿನ್ ಬಿ3 ಮತ್ತು ವಿಟಮಿನ್ ಸಿ ಮುಂತಾದ ಖನಿಜಾಂಶಗಳು ಹೇರಳವಾಗಿವೆ. ಕೋಕಂ ಇಲ್ಲವೇ ಪುನರ್ಪುಳಿ ಹಣ್ಣಿನ ರಸವನ್ನು ಸೇವನೆ ಮಾಡುವುದರಿಂದ ಮತ್ತೊಂದು ಪ್ರಯೋಜನವೆಂದರೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಸಾಮರ್ಥ್ಯ. ಕೋಕಮ್ ಹೊಟ್ಟೆಯ ಒಳಪದರದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹುಣ್ಣುಗಳ ರಚನೆಯನ್ನು ತಡೆಯುತ್ತದೆ.

ಚರ್ಮದ ಆರೋಗ್ಯಕ್ಕಿದು ಔಷಧವೇ ಸರಿ: ವರ್ಷ 40 ದಾಟಿದರೂ ಚರ್ಮ ಸುಕ್ಕುಗಟ್ಟದೆ ಹದಿಹರೆಯದಂತಿರಬೇಕು ಅಂದುಕೊಳ್ಳುವವರು ತಪ್ಪದೇ ಕೋಕಂ ಜ್ಯೂಸ್ ಸೇವಿಸಬೇಕು. ಯಾಕೆಂದರೆ ಇದು ಚರ್ಮದ ಆರೋಗ್ಯನವನ್ನು ಕಾಪಾಡುತ್ತದೆ. ಕೋಕಂಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳಿದ್ದು ಚರ್ಮಕ್ಕೆ ನಾನಾ ರೀತಿಯಲ್ಲಿ ಸಹಕಾರಿಯಾಗುತ್ತದೆ. ಚರ್ಮದ ಮೇಲೆ ಉಂಟಾಗುವ ಅಲರ್ಜಿಯ ಕಲೆಗಳನ್ನು ತೆಗೆಯುವಲ್ಲಿಯೂ ಬಹಳ ಸಹಕಾರಿ. ಅಲ್ಲದೆ ಚರ್ಮ ಸಂಬಂಧಿ ಅನೇಕ ಸಮಸ್ಯೆಗಳಿಗೆ ಪುನರ್ಪುಳಿಯ ಔಷಧೀಯ ಗುಣ ಪರಿಹಾರ ನೀಡುತ್ತದೆ.

ಆಂಟಿ ಆಕ್ಸಿಡೆಂಟ್ ಗುಣವುಳ್ಳ ಪುನರ್ಪುಳಿ: ಹೊಟ್ಟೆಯ ತಳಮಳವನ್ನು ಕಡಿಮೆ ಮಾಡಲು ಕೋಕಂ ಹಣ್ಣು ಬಹಳ ಉಪಯುಕ್ತ. ಇದರಲ್ಲಿ ಗಾರ್ಸಿನೋಲ್ ಎನ್ನುವ ಅಂಶವಿದ್ದು, ಇದು ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಕೋಕಂನಲ್ಲಿ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದ್ದು, ಪಿತ್ತಜನಕಾಂಗದ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ.

ಒಟ್ಟಿನಲ್ಲಿ ಕೋಕಂ ಅಥವಾ ಪುನರ್ಪುಳಿ ಹಣ್ಣನ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಸುಧಾರಿಸಲು, ಉರಿಯೂತವನ್ನು ತಡೆಯಲು ಮಾತ್ರವಲ್ಲದೆ, ತೂಕ ನಷ್ಟಕ್ಕೆ ನೆರವಾಗುತ್ತದೆ. ಆ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಕೋಕಂ ಹಣ್ಣುಗಳನ್ನು ಮಾರುಕಟ್ಟೆಗಳಲ್ಲಿ ಕೊಂಡುಕೊಳ್ಳುವುದು ಸ್ವಲ್ಪ ಕಷ್ಟವೆನಿಸಿದರೂ, ಆನ್‌ ಲೈನ್‌ ಮೂಲಕ ಅಥವಾ ಆಯುರ್ವೇದಿಕ್‌ ಶಾಪ್‌ ಗಳಲ್ಲಿ ಬಹುಉಪಯೋಗಿ ಪುನರ್ಪುಳಿ ಜ್ಯೂಸ್‌, ಸ್ಕ್ವ್ಯಾಶ್‌, ಒಣಗಿಸಿಟ್ಟ ಕೋಕಂ ಹಣ್ಣಿನ ಸಿಪ್ಪೆಗಳು ಲಭ್ಯವಿದ್ದು, ಅದರ ಬಳಕೆ ಮಾಡಿಕೊಳ್ಳಬಹುದು.

ವಿಭಾಗ