Ice Cold Water: ಬೇಸಿಗೆ ಬಿಸಿಗೆ ತಂಪಾಗ್ಲಿ ಅಂತ ಫ್ರಿಜ್ ನೀರು ಕುಡಿದರೆ ಆರೋಗ್ಯ ಹಾಳಾಗುತ್ತೆ; ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ
ಬೇಸಿಗೆಗೆ ವಿಪರೀತ ದಾಹ ಆಗುತ್ತಿದೆ ಎಂದು ಫ್ರಿಜ್‌ನಲ್ಲಿಟ್ಟ ನೀರು ಕುಡಿಯುವ ಮುನ್ನ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ತಣ್ಣನೆಯ ನೀರನ್ನು ಬೇಕಾಬಿಟ್ಟಿ ಕುಡಿದರೆ ನಿಮ್ಮ ದೇಹದ ಮೇಲೆ ಗಂಭೀರ ಪರಿಣಾಮಗಳು ಉಂಟಾಗಬಹುದು. ಯಾಕೆಂದರೆ ತಣ್ಣನೆಯ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮವಲ್ಲ. ಈ ಬಗ್ಗೆ ಇಲ್ಲಿದೆ ಮಾಹಿತಿ.

Summer Health: ಇದೀಗ ಬೇಸಿಗೆ ಕಾಲ. ಈ ಋತುವಿನಲ್ಲಿ ಆಯಾಸ, ಬಾಯಾರಿಕೆ ಆಗುವುದು ಸಾಮಾನ್ಯ. ಬಿಸಿಲಿನ ಪ್ರಖರತೆ ತೀವ್ರವಾಗಿದ್ದು, ಬೆಳಗ್ಗೆ 10 ಗಂಟೆಯ ನಂತರ ಸಂಜೆ 5ರೊಳಗೆ ಹೊರಗಡೆ ಹೋಗಲು ಯೋಚಿಸಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಬಹುತೇಕ ಮಂದಿ ಹೊಟ್ಟೆ ತಣ್ಣಗಾಗಿಸಲು ತಂಪು ಆಹಾರ, ಪಾನೀಯಗಳನ್ನು ಸೇವಿಸುತ್ತಿದ್ದಾರೆ. ಐಸ್ ಕ್ರೀಂ, ಕೂಲ್ ಡ್ರಿಂಕ್ಸ್, ಕೋಲ್ಡ್ ಜ್ಯೂಸ್ ಮುಂತಾದವುಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಬಿಸಿಲಿನ ತಾಪದಿಂದ ತಲೆಬಿಸಿ ಮಾಡಿಕೊಂಡ ಜನ ಫ್ರಿಜ್‌ನಲ್ಲಿಟ್ಟ ನೀರು ಕುಡಿಯಲು ಮುಂದಾಗುತ್ತಾರೆ. ಆದರೆ, ಈ ರೀತಿ ಫ್ರಿಜ್‌ನಲ್ಲಿಟ್ಟ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರ.
ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುವುದು ಸಾಮಾನ್ಯ. ಹೀಗಾಗಿ ದೇಹ ಮರಜಲಪೂರಣಗೊಳ್ಳಲು (ಹೈಡ್ರೇಟೆಡ್) ಆಗಿರಲು ಸಾಕಷ್ಟು ನೀರು ಕುಡಿಯಬೇಕು. ಆದರೆ, ಕೆಲವರು ರೆಫ್ರಿಜರೇಟರ್‌ನಲ್ಲಿ ನೀರು ಸಂಗ್ರಹಿಸಿ, ತಂಪಾದ ನೀರನ್ನು ಕುಡಿಯುತ್ತಾರೆ. ಬೇಸಿಗೆಯ ತಿಂಗಳುಗಳಲ್ಲಿ ಫ್ರಿಜ್‌ನಲ್ಲಿಟ್ಟ ನೀರು ಕುಡಿಯುವುದರಿಂದ ಏನೆಲ್ಲಾ ಅಡ್ಡ ಪರಿಣಾಮಗಳು ಸಂಭವಿಸುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ..
1) ಜೀರ್ಣಾಂಗವ್ಯೂಹದ ಮೇಲೆ ಬೀರಬಹುದು ಪರಿಣಾಮ
ಅತಿಯಾಗಿ ಫ್ರಿಡ್ಜ್ ನಲ್ಲಿಟ್ಟ ನೀರು ಕುಡಿಯುವುದರಿಂದ ದೇಹಕ್ಕೆ ಗಮನಾರ್ಹ ಆಘಾತವನ್ನು ಉಂಟುಮಾಡಬಹುದು ಎಂದು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ. ಕೋಲ್ಡ್ ನೀರನ್ನು ಅತಿಯಾಗಿ ಕುಡಿಯುವುದರಿಂದ ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ ಬೀರಬಹುದು. ತಣ್ಣೀರು ಹೊಟ್ಟೆಯನ್ನು ಸಂಕುಚಿತಗೊಳಿಸುತ್ತದೆ. ಏನಾದರೂ ಆಹಾರ ಸೇವಿಸಿದ್ದರೆ ಇದು ಜೀರ್ಣಕ್ರಿಯೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ. ತಣ್ಣೀರು ಜೀರ್ಣಾಂಗ ವ್ಯವಸ್ಥೆಯ ಮೇಲೆ ತ್ವರಿತವಾಗಿ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಆರೋಗ್ಯಕ್ಕೆ ಎಳನೀರು ಬೆಸ್ಟ್
2) ಗಂಟಲಿನ ಸೋಂಕು
ತಣ್ಣನೆಯ ನೀರನ್ನು ಕುಡಿಯುವುದರಿಂದ ಗಂಟಲು ನೋವು, ಶೀತ-ಕೆಮ್ಮು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಕಫ ಹೆಚ್ಚಾಗಿ ಮೂಗು ಕಟ್ಟಿದಂತಾಗುತ್ತದೆ. ಇದರಿಂದ ತಲೆನೋವು ಕೂಡ ಬರಬಹುದು. ಈ ಬೇಸಿಗೆಯಲ್ಲಿ ಹಲವಾರು ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಣ್ಣನೆಯ ನೀರನ್ನು ಕುಡಿಯುವುದು ವಿವಿಧ ಉರಿಯೂತದ ಸೋಂಕುಗಳಿಗೆ ಕಾರಣವಾಗುತ್ತದೆ. ಹೀಗಾಗಿ ತಣ್ಣೀರು ಕುಡಿಯುವುದನ್ನು ಆದಷ್ಟು ತಪ್ಪಿಸಿ.
3) ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ
ತಣ್ಣನೆಯ ನೀರು ಕುಡಿಯುವುದರಿಂದ ಹೃದಯ ಬಡಿತ ನಿಧಾನಗೊಳ್ಳುತ್ತದೆ ಎಂದು ತಜ್ಞರು ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ. ಇದು 10 ನೇ ಕಾರ್ನಿಯಲ್ ನರಗಳ ಸಕ್ರಿಯಗೊಳಿಸುವಿಕೆಗೆ ಕಾರಣವಾಗಿದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುವ ದೇಹದ ಸ್ವನಿಯಂತ್ರಿತ ನರಮಂಡಲದ ಪ್ರಮುಖ ಅಂಶವಾಗಿದೆ. ತಣ್ಣನೆಯ ನೀರು ಕುಡಿದಾಗ ಉಷ್ಣತೆಯಲ್ಲಿ ಏರಿಳಿತ ಉಂಟಾಗುವುದರಿಂದ ನರಮಂಡಲ ಕಾರ್ಯವೈಖರಿಯಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದಾಗಿ ಹೃದಯ ಬಡಿತವು ನಿಧಾನವಾಗುತ್ತದೆ.
4) ತೂಕ ಇಳಿಸಲು ಕಷ್ಟ
ರೆಫ್ರಿಜರೇಟರ್‌ನಲ್ಲಿ ಶೇಖರಿಸಲ್ಪಟ್ಟ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಕಷ್ಟವಾಗುತ್ತದೆ. ಇದರಿಂದ ತೂಕ ಇಳಿಕೆಯಾಗುವುದಿಲ್ಲ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕೋಲ್ಡ್ ವಾಟರ್‌ನಿಂದ ದೂರವಿರುವುದು ಉತ್ತಮ.
ಇದನ್ನೂ ಓದಿ: ಬೇಸಿಗೆಯಲ್ಲಿ ಶರೀರದ ಉಷ್ಣ ಕಡಿಮೆ ಮಾಡುವ 4 ಆಹಾರಗಳು
5) ಹಲ್ಲಿನ ಸೂಕ್ಷ್ಮತೆ
ಅತಿತಣ್ಣನೆಯ ನೀರನ್ನು ಕುಡಿಯುವುದರಿಂದ ಹಲ್ಲಿನ ಸಮಸ್ಯೆಗಳು ಉಂಟಾಗಬಹುದು. ಇದರಿಂದ ಆಹಾರ ಅಗಿಯಲು ಅಥವಾ ಬಿಸಿ ಕಾಫಿ, ಚಹಾ ಕುಡಿಯಲು ಕಷ್ಟವಾಗುತ್ತದೆ. ಕೋಲ್ಡ್ ನೀರು ಹಲ್ಲುಗಳ ದಂತಕವಚ ಸವೆದು, ಅವುಗಳನ್ನು ಹೆಚ್ಚು ಸೂಕ್ಷ್ಮವಾಗಿಸುತ್ತದೆ. ಇದರಿಂದ ಈ ಸಮಸ್ಯೆ ಕಾಡುತ್ತದೆ.
ಬೇಸಿಗೆ ಕಾಲದಲ್ಲಿ ದಾಹ ಜಾಸ್ತಿಯಿರುವುದರಿಂದ ಹೊಟ್ಟೆ ತಣ್ಣಗಿರಲೆಂದು ಫ್ರಿಜ್‌ನಲ್ಲಿ ಶೇಖರಿಸಲ್ಪಟ್ಟ ನೀರಿಗೆ ಮೊರೆ ಹೋಗುವುದು ಸಾಮಾನ್ಯ. ಇದನ್ನು ಕುಡಿಯುವುದರಿಂದ ಮೇಲೆ ತಿಳಿಸಿದ ತೊಂದರೆಗಳಿಂದ ನೀವು ಬಳಲುವ ಸಾಧ್ಯತೆ ಹೆಚ್ಚು. ಹೀಗಾಗಿ ಆದಷ್ಟು ಕೋಲ್ಡ್ ನೀರಿನಿಂದ ದೂರವಿರುವುದು ಒಳಿತು. ಫ್ರಿಜ್‌ನಲ್ಲಿರುವ ನೀರನ್ನು ಕುಡಿಯುವುದು ಸಾಧ್ಯವಾದಮಟ್ಟಿಗೂ ತಪ್ಪಿಸಿ. ಒಂದು ವೇಳೆ ಕುಡಿಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದರೆ ಹೊರಗೆ ತೆಗೆದ ತಕ್ಷಣ ಕುಡಿಯುವ ಬದಲು ಸ್ವಲ್ಪ ಹೊತ್ತು ಹಾಗೆಯೇ ಇಟ್ಟಿರಿ. ಕನಿಷ್ಠ ಅರ್ಧ ಗಂಟೆಯ ನಂತರ ಕುಡಿಯಿರಿ.
(ಬರಹ: ಪ್ರಿಯಾಂಕಾ)
ಇದನ್ನೂ ಓದಿ: ಬೇಸಿಗೆ ದಾಹ ತಣಿಸುವ 7 ಸ್ಪೆಷಲ್ ಲಸ್ಸಿಗಳು
