ಡೆಂಗ್ಯೂ ಜ್ವರ ನಿರ್ವಹಣೆಗೆ ಆಯುರ್ವೇದದ ಆಸರೆ; ಡೆಂಗ್ಯೂ ರೋಗಿಗಳಿಗೆ ಆಯುರ್ವೇದದ 5 ಸಾಮಾನ್ಯ ಸಲಹೆ ಅಥವಾ ಮಾರ್ಗಸೂಚಿಗಳು ಹೀಗಿವೆ
Ayurveda tips for Dengue Patients: ಡೆಂಗ್ಯೂ ಜ್ವರ ನಿರ್ವಹಣೆಗೆ ಆಯುರ್ವೇದದ ಆಸರೆಯಾಗಬಲ್ಲದು. ಡೆಂಗ್ಯೂ ಜ್ವರ ಆರಂಭಿಕ ಹಂತದಲ್ಲಿ ಪತ್ತೆಯಾಗುವುದು ಕಷ್ಟ. ಸಾಮಾನ್ಯ ಜ್ವರದ ರೋಗಲಕ್ಷಣಗಳಿರುವ ಕಾರಣ, ಡೆಂಗ್ಯೂ ರೋಗಿಗಳಿಗೆ ಆಯುರ್ವೇದದ 5 ಸಾಮಾನ್ಯ ಸಲಹೆ ಅಥವಾ ಮಾರ್ಗಸೂಚಿಗಳು ಹೀಗಿವೆ.

Ayurveda tips for Dengue Patients: ಡೆಂಗ್ಯೂ ಅಂದರೆ ಭಯ ಬೀಳಬೇಡಿ. ಸಾವಧಾನವಾಗಿ ಡೆಂಗ್ಯೂ ಜ್ವರಕ್ಕೆ ಅಗತ್ಯ ಔಷಧೋಪಚಾರ ಮಾಡಿಕೊಂಡರೆ ಅದು ನಿವಾರಣೆಯಾಗಬಲ್ಲದು. ನೀವು ಅಥವಾ ಕುಟುಂಬದ ಸದಸ್ಯರು ಯಾರಾದರೂ ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರೆ, ಮುಂದಿನ ಕೆಲವು ದಿನಗಳವರೆಗೆ ನಿಮ್ಮನ್ನು ಅಥವಾ ಸಂಬಂಧಿಕರು ಆರೋಗ್ಯ ಕಾಳಜಿ ವಹಿಸಬೇಕಾದ್ದು ಅಗತ್ಯ. ಏಕೆಂದರೆ ಈ ರೋಗವು ಯಾವಾಗ ಬೇಕಾದರೂ ತೀವ್ರ ಸ್ವರೂಪ ಪಡೆದುಕೊಳ್ಳಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸಿದರೆ ವೈದ್ಯಕೀಯ ತುರ್ತುಸ್ಥಿತಿಗೆ ಕಾರಣವಾಗಬಹುದು.
ಡೆಂಗ್ಯೂ ಜ್ವರ / ಡೆಂಗ್ಯೂ ಹೆಮರಾಜಿಕ್ ಜ್ವರಕ್ಕೆ ಸಂಬಂಧಿಸಿದ ತೊಡಕುಗಳು ಸಾಮಾನ್ಯವಾಗಿ ಅನಾರೋಗ್ಯದ ಮೂರನೇ ಮತ್ತು ಐದನೇ ದಿನದ ನಡುವೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಜ್ವರ ಕಣ್ಮರೆಯಾದ ನಂತರವೂ ನೀವು ರೋಗಿಯನ್ನು ಎರಡು ದಿನಗಳವರೆಗೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಅಪೋಲೊ ಆಯುರ್‌ವೈದ್‌ನ ಡಾ. ಪ್ರಿಯಾಂಕಾ ಹೇಳಿದ್ಧಾರೆ. ಅಪೊಲೋ ಆಯುರ್‌ವೈದ್‌ನ ವೆಬ್‌ಸೈಟ್‌ನ ಬ್ಲಾಗ್‌ನಲ್ಲಿ ಡೆಂಗ್ಯೂ ಜ್ವರ ನಿರ್ವಹಣೆ ಮತ್ತು ತುರ್ತುಪರಿಸ್ಥಿತಿ ನಿಭಾಯಿಸುವ ವಿಚಾರವನ್ನು ಅವರು ತಮ್ಮ ಬ್ಲಾಗ್ ಬರಹದಲ್ಲಿ ತಿಳಿಸಿದ್ದಾರೆ. ಅದು ಹೀಗಿದೆ.
ಡೆಂಗ್ಯೂ ಜ್ವರ ನಿರ್ವಹಣೆ ಮತ್ತು ತುರ್ತು ಪರಿಸ್ಥಿತಿ
ಡೆಂಗ್ಯೂ ಜ್ವರದ ನಿರ್ವಹಣೆಯಲ್ಲಿ ಪ್ರಮುಖವಾದುದು ಬೆಡ್ ರೆಸ್ಟ್, ಜ್ವರ ನಿವಾರಕ ಮತ್ತು ನೋವು ನಿವಾರಕಗಳನ್ನು ಸೇವಿಸಬೇಕು. ಅತಿಯಾದ ಬೆವರುವಿಕೆ, ವಾಕರಿಕೆ, ವಾಂತಿ ಅಥವಾ ಅತಿಸಾರದಿಂದ ಬಳಲುತ್ತಿರುವ ರೋಗಿಗಳಿಗೆ ನಿರ್ಜಲೀಕರಣವನ್ನು ತಪ್ಪಿಸಲು ಮನೆಯಲ್ಲೇ ಲಭ್ಯವಿರುವ ಗಂಜಿ ತಿಳಿ (ಅನ್ನ ಬೇಯಿಸಿದಾಗ ಉಳಿಯುವ ನೀರು) ಜ್ಯೂಸ್, ಹಣ್ಣಿನ ರಸ, ನೀರು, ಒಆರ್‌ಎಸ್ ಜ್ಯೂಸ್ ಮುಂತಾದವನ್ನು ಸೇವಿಸಬಹುದು.
ಹೆಮಟೋಕ್ರಿಟ್ ಮಟ್ಟದಲ್ಲಿನ ಏರಿಕೆ ಗಮನಿಸಬೇಕು. ಸಾಧ್ಯವಾದಾಗಲೆಲ್ಲಾ ಸರಣಿ ಹೆಮಟೋಕ್ರಿಟ್ ಮಟ್ಟಗಳಿಂದ ಆಗಾಗ್ಗೆ ಮೌಲ್ಯಮಾಪನವನ್ನು ಮಾಡಬೇಕಾಗುತ್ತದೆ. ಹೆಮಟೋಕ್ರಿಟ್‌ನ ಅಂದಾಜು ಸೌಲಭ್ಯಗಳು ಇಲ್ಲದ ಪ್ರದೇಶಗಳಲ್ಲಿ, ಮೂತ್ರ ವಿಸರ್ಜನೆ ಕಡೆಗೆ ಗಮನಹರಿಸಬೇಕು. ಅನಾರೋಗ್ಯದ 3 ನೇ ದಿನದಂದು ರೋಗಿಯು ಚೇತರಿಕೊಂಡಾಗ, ಜ್ವರದ ಪರಿಣಾಮಗಳನ್ನು ಗಮನಿಸಬೇಕು. ಆಘಾತ, ಕಡಿಮೆ ಮೂತ್ರ ವಿಸರ್ಜನೆ, ಅಥವಾ ತುಟಿಗಳು ಅಥವಾ ಬಾಯಿ ನೀಲಿ ಬಣ್ಣಕ್ಕೆ ತಿರುಗುವುದು ಮುಂತಾದ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯವಿದೆ.
ಚೇತರಿಕೆಯ ಗುಣಲಕ್ಷಣಗಳಿವು- ಸ್ಥಿರವಾದ ನಾಡಿಬಡಿತ, ರಕ್ತದೊತ್ತಡ ಮತ್ತು ಉಸಿರಾಟದ ದರ ಸಹಜ ಸ್ಥಿತಿಬಂದಿರುವುದು, ಸಾಧಾರಣ ಸಹಜ ಶರೀರ ತಾಪಮಾನ, ಬಾಹ್ಯ ಅಥವಾ ಆಂತರಿಕ ರಕ್ತಸ್ರಾವ ನಿಂತಿರುವುದು, ಹಸಿವಾಗುತ್ತಿರುವುದು, ವಾಂತಿ ಇಲ್ಲ, ಮೂತ್ರ ವಿಸರ್ಜನೆ ಸರಿಯಾಗಿರುವುದು,ಸ್ಥಿರ ಹೆಮಟೋಕ್ರಿಟ್ ಅಥವಾ ಆರ್ಬಿಸಿ ಎಣಿಕೆ ಸುಧಾರಣೆಗಳು.
ಡೆಂಗ್ಯೂ ರೋಗಿಗಳಿಗೆ ಆಯುರ್ವೇದದ ಸಾಮಾನ್ಯ ಸಲಹೆ ಅಥವಾ ಮಾರ್ಗಸೂಚಿಗಳು
1) ತೀವ್ರವಾದ ಜ್ವರದ ಸಂದರ್ಭಗಳಲ್ಲಿ, ಸ್ನಾನ ಮಾಡಬಾರದು. ರೋಗಿಗಳು ದೈಹಿಕ ಕೆಲಸ, ಶ್ರಮ ಮತ್ತು ಪ್ರಯಾಣ ಮಾಡಬಾರದು.
2) ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಲು ಬೇವಿನ ಎಲೆಗಳನ್ನು ಬಳಸಿ ಮನೆಗೆ ಗಿಡಮೂಲಿಕೆಗಳ ಹೊಗೆ ಹಾಕಬೇಕು.
3) ಯಾವಾಗಲೂ ಬೇಯಿಸಿದ ನೀರನ್ನು ಸೇವಿಸಿ. ಕೋಣೆಯ ಉಷ್ಣಾಂಶದಲ್ಲಿ ನೀರನ್ನು ನೈಸರ್ಗಿಕವಾಗಿ ತಂಪಾಗಿಸಬೇಕು.
4) ಒಣ ಶುಂಠಿ, ತುಳಸಿ, ಕೊತ್ತಂಬರಿ, ಗುಡುಚಿ ಮುಂತಾದ ಗಿಡಮೂಲಿಕೆಗಳನ್ನು ಔಷಧೀಯ ನೀರು ಅಥವಾ ಗಿಡಮೂಲಿಕೆ ಚಹಾಗಳನ್ನು ತಯಾರಿಸಲು ಬಳಸುವುದು ಪ್ರಯೋಜನಕಾರಿಯಾಗಿದೆ.
5) ಪಥ್ಯ - ಅಕ್ಕಿ ಗಂಜಿ, ತುಪ್ಪದೊಂದಿಗೆ ಹೆಸರುಬೇಳೆ ಖಿಚಡಿ, ಔಷಧೀಯ ನೀರು ಅಥವಾ ಶುಂಠಿ, ಜೀರಿಗೆ ಮತ್ತು ಲವಂಗ ಸೇರಿಸಿ ಕುದಿಸಿ ಆರಿಸಿದ ನೀರು ಸೇವಿಸಬೇಕು. ಬೇಕರಿ ಉತ್ಪನ್ನಗಳಂತಹ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಆಹಾರ ಸೇವಿಸಬಾರದು. ತುಪ್ಪ ಬಳಸಬಹುದು. ಬಟಾಣಿ ಸೂಪ್ ಉತ್ತಮ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್‌ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಲೈಫ್‌ಸ್ಟೈಲ್ ವಿಭಾಗ ನೋಡಿ.
