ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಎಲ್ಲಾ ಕಾಲಕ್ಕೂ ಮನೆಯೂಟವೇ ಬೆಸ್ಟ್. ನಿಜ, ಹಾಗಂತ ಕೊಂಚ ಎಚ್ಚರ ತಪ್ಪಿದ್ರೆ ಮನೆಯೂಟವೂ ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು. ಬಾಯಿ ರುಚಿ ಹೆಚ್ಚಿಸಲು ವಿಭಿನ್ನ ಆಹಾರಗಳ ಸಂಯೋಜನೆ ಮಾಡುವುದು ಸಾಮಾನ್ಯ. ಆದರೆ, ಇದು ಜೀರ್ಣಕ್ರಿಯೆ, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗೆ ಕಾರಣವಾಗಬಹುದು. ಹಾಗಾದರೆ ಯಾವೆಲ್ಲಾ ಆಹಾರಗಳನ್ನು ಒಟ್ಟು ಸೇರಿಸಬಾರದು ನೋಡಿ.

ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ
ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ನಿಮಗೆ ಪದೇ ಪದೇ ಜೀರ್ಣಕ್ರಿಯೆ ಸಮಸ್ಯೆ ಅಥವಾ ಚರ್ಮದ ಅಲರ್ಜಿ ಉಂಟಾಗುತ್ತಾ? ಆಯುರ್ವೇದದ ಪ್ರಕಾರ, ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಯಾವುದಾದರೂ ಆಹಾರವನ್ನು ನಾವು ಬಹಳ ಇಷ್ಟಪಟ್ಟು ತಿನ್ನಬಹುದು. ಆದರೆ ಅದು ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಎಷ್ಟೋ ಜನ ಹೋಟೆಲ್‌ಗಳಲ್ಲಿ ಊಟ ಮಾಡಿ ಬಂದ ನಂತರ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುವವರಿದ್ದಾರೆ. ಹೋಟೆಲ್ ಊಟ ಮಾತ್ರವಲ್ಲ ಮನೆಯಲ್ಲೂ ಏನಾದರೂ ಅಡುಗೆ ಮಾಡಿ ತಿಂದ ನಂತರ ಸರಿಯಾಗಿ ಜೀರ್ಣಕ್ರಿಯೆ ಆಗದೆ ಇರುವುದು ಮುಂತಾದ ಸಮಸ್ಯೆ ಉಂಟಾಗಬಹುದು. ಕೆಲವೊಂದು ಆಹಾರವನ್ನು ಒಟ್ಟಿಗೆ ಸೇವಿಸುವುದರಿಂದಲೂ ಇಂಥ ಸಮಸ್ಯೆ ಉದ್ಭವಿಸುತ್ತದೆ.

ಆಯುರ್ವೇದದ ಪ್ರಕಾರ, ಹಣ್ಣು ಮತ್ತು ಹಾಲನ್ನು ಒಟ್ಟಿಗೆ ಸೇವಿಸಬಾರದು. ಒಂದು ವೇಳೆ ಸೇವಿಸಿದರೆ ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣವಾಗಬಹುದು. ಚಪಾತಿ ಜೊತೆ ಗ್ರೇವಿಯಾಗಿ ಸವಿಯಲು ಬಹುತೇಕರು ಪಾಲಕ್ ಪನೀರ್ ಅನ್ನು ಆಯ್ಕೆ ಮಾಡುತ್ತಾರೆ. ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಪಾಲಕ್ ಪನೀರ್ ನಿಮ್ಮ ಆಹಾರದ ಒಟ್ಟಾರೆ ಪೌಷ್ಟಿಕಾಂಶದ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ. ಇನ್ನು ಕೆವಲರು ಚಹಾಗೆ ನಿಂಬೆ, ಜೇನುತುಪ್ಪ ಸೇರಿಸುತ್ತಾರೆ. ಆದರೆ, ಬಿಸಿ ನೀರಿನಲ್ಲಿ ಜೇನುತುಪ್ಪವು ಆಮ್ಲೀಯತೆ ಉತ್ಪಾದನೆಗೆ ಕಾರಣವಾಗಬಹುದು. ಇತ್ತೀಚೆಗೆ, ಬಹುತೇಕ ಕಾರ್ಯಕ್ರಮದಲ್ಲಿ ಐಸ್‌ಕ್ರೀಂ ಜೊತೆ ಗುಲಾಬ್ ಜಾಮೂನ್ ಅನ್ನು ಸೇರಿಸುತ್ತಾರೆ. ಇದು ಹೊಟ್ಟೆ ಉಬ್ಬರ ಸಮಸ್ಯೆಗೆ ಕಾರಣವಾಗಬಹುದು.

ಆರೋಗ್ಯವನ್ನು ಹಾಳು ಮಾಡುವ ತಪ್ಪು ಆಹಾರಕ್ರಮಗಳಿವು

1. ಹಣ್ಣು ಮತ್ತು ಹಾಲು: ಆಯುರ್ವೇದದ ಪ್ರಕಾರ, ಹಣ್ಣು ಮತ್ತು ಹಾಲನ್ನು ಒಟ್ಟಿಗೆ ಸೇವಿಸಬಾರದು. ಏಕೆಂದರೆ ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಕೆಲವರಿಗೆ ಹೊಟ್ಟೆ ಉಬ್ಬುವುದು ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ. ಹಾಲಿನೊಂದಿಗೆ ಮಾವಿನಹಣ್ಣನ್ನು ಸೇವಿಸುವುದನ್ನು ಮಾತ್ರ ಅನುಮತಿಸಲಾಗಿದೆ. ಅದೂ ಕೂಡ ಸಿಹಿಯಾಗಿದ್ದರೆ ಮಾತ್ರ.

2. ಪಾಲಾಕ್ ಮತ್ತು ಪನೀರ್: ಪಾಲಕ್ ಮತ್ತು ಪನೀರ್ ಎರಡೂ ಪೌಷ್ಟಿಕ ಆಹಾರಗಳಾಗಿವೆ. ಹಾಗಂತ ಅವುಗಳನ್ನು ಸಂಯೋಜಿಸುವುದು ಸೂಕ್ತವಲ್ಲ. ಪನೀರ್‌ನಲ್ಲಿರುವ ಕ್ಯಾಲ್ಸಿಯಂ, ಪಾಲಕ್‌ನಿಂದ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದನ್ನು ಅಡ್ಡಿಪಡಿಸುತ್ತದೆ. ಇದು ಆಹಾರದ ಒಟ್ಟಾರೆ ಪೌಷ್ಟಿಕಾಂಶದ ಪ್ರಯೋಜನಗಳನ್ನು ಕಡಿಮೆ ಮಾಡುತ್ತದೆ.

3. ಜೇನುತುಪ್ಪ ಮತ್ತು ಬಿಸಿನೀರು: ಜೇನುತುಪ್ಪವನ್ನು ಬಿಸಿ ಮಾಡುವುದರಿಂದ ಅದರ ಕಿಣ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನಾಶಪಡಿಸಬಹುದು. ಆಯುರ್ವೇದದ ಪ್ರಕಾರ, ಬಿಸಿ ಬಿಸಿ ನೀರಿನೊಂದಿಗೆ ಜೇನುತುಪ್ಪವನ್ನು ಬೆರೆಸುವುದು ಹಾನಿಕಾರಕವಾಗಿದೆ. ಕೋಣೆಯ ಉಷ್ಣಾಂಶ ಎಷ್ಟಿದೆಯೋ ಅಷ್ಟೇ ಉಷ್ಣಾಂಶ ಇರುವ ನೀರಿನಲ್ಲಿ ಮಾತ್ರ ಜೇನುತುಪ್ಪವನ್ನು ಸೇವಿಸಲು ಶಿಫಾರಸು ಮಾಡಲಾಗುತ್ತದೆ.

4. ಖರ್ಜೂರ ಮತ್ತು ಹಾಲು: ಹಾಲು ಮತ್ತು ಖರ್ಜೂರದಂತಹ ಕಬ್ಬಿಣದ ಅಂಶ ಅಧಿಕವಿರುವ ಆಹಾರಗಳೊಂದಿಗೆ ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಬೆರೆಸಬಾರದು. ಹಾಲಿನಲ್ಲಿರುವ ಕ್ಯಾಲ್ಸಿಯಂ ಖರ್ಜೂರದಿಂದ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಇದು ಆಹಾರದಿಂದ ಒಟ್ಟಾರೆ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಂತೂ ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸುವುದು ಉತ್ತಮವಲ್ಲ.

5. ಐಸ್‌ಕ್ರೀಮ್ ಮತ್ತು ಗುಲಾಬ್ ಜಾಮೂನ್: ಬಿಸಿ ಮತ್ತು ತಣ್ಣನೆಯ ಆಹಾರವನ್ನು ಒಟ್ಟಿಗೆ ಸೇವಿಸುವುದು ಚೆನ್ನಾಗಿರುವುದಿಲ್ಲ. ನೀವು ಬಿಸಿ ಆಹಾರವನ್ನು ಸೇವಿಸಿದಾಗ, ನಿಮ್ಮ ದೇಹವು ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಶಾಖವನ್ನು ಹೊರಹಾಕಲು ಹೊಟ್ಟೆಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಅದರ ಜೊತೆಗೆ ಕೋಲ್ಡ್ (ತಣ್ಣನೆಯ) ಆಹಾರವನ್ನು ಸೇವಿಸಿದರೆ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಬಹುದು. ಅಲ್ಲದೆ, ಹೊಟ್ಟೆಯಲ್ಲಿ ರಕ್ತನಾಳಗಳ ಸಂಕೋಚನವನ್ನು ಉಂಟುಮಾಡಬಹುದು. ಇದು ಹೊಟ್ಟೆ ಉಬ್ಬುವುದು, ಅನಿಲ ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು.

6. ಊಟದ ಜೊತೆ ಚಹಾ: ಚಹಾದಲ್ಲಿ ಟ್ಯಾನಿನ್ ಮತ್ತು ಕೆಫೀನ್‌ನಂತಹ ಆಂಟಿನ್ಯೂಟ್ರಿಯೆಂಟ್‌ಗಳಿವೆ. ಇದು ದೇಹದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವುದನ್ನು ತಡೆಯುತ್ತದೆ. ಆದ್ದರಿಂದ, ಉಪಹಾರ ಅಥವಾ ತಿಂಡಿಗಳೊಂದಿಗೆ ಚಹಾವನ್ನು ತೆಗೆದುಕೊಳ್ಳಬೇಡಿ.

7. ಹಾಲು ಮತ್ತು ಮೀನು: ಆಯುರ್ವೇದದ ಪ್ರಕಾರ, ಹಾಲು ಮತ್ತು ಮೀನುಗಳು ಸಂಪೂರ್ಣ ವಿರುದ್ಧವಾಗಿರುವ ಆಹಾರವಾಗಿದೆ. ಮೀನು ಸೇವಿಸಿ ಹಾಲು ಕುಡಿದರೆ, ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದೆ ತೊಂದರೆ ಅನುಭವಿಸುವಿರಿ. ಅಲ್ಲದೆ, ಇದು ದೇಹದಲ್ಲಿ ಹಾನಿಕಾರಕ ಜೀವಾಣುಗಳ ರಚನೆಗೆ ಕಾರಣವಾಗುತ್ತದೆ.

ಹೋಟೆಲ್ ಊಟ ಒಳ್ಳೆಯದಲ್ಲ ಮನೆ ಊಟವೇ ಬೆಸ್ಟ್ ಅನ್ನೋದು ಬಹುತೇಕರ ಮಾತು. ಹಾಗಂತ ನೀವು ಸೇವಿಸುವ ಆಹಾರ ಪದ್ಧತಿ ತಪ್ಪಾಗಿದ್ದಲ್ಲಿ ಮನೆಯಲ್ಲಿ ಮಾಡಿದ ಆಹಾರವನ್ನು ಸೇವಿಸಿದರೂ ಹೊಟ್ಟೆ ಸಮಸ್ಯೆ ಉಂಟು ಮಾಡಬಲ್ಲದು. ಹೀಗಾಗಿ ನೀವೇನಾದರೂ ಮೇಲೆ ತಿಳಿಸಿರುವಂತೆ ತಪ್ಪಾದ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರೆ ಇಂದೇ ಬಿಟ್ಟು ಬಿಡಿ.

Whats_app_banner