ಅಡುಗೆಯ ರುಚಿ ಹೆಚ್ಚಿಸುವ ಅರಿಸಿನ ತೂಕ ಇಳಿಸಿ ಸೌಂದರ್ಯವನ್ನೂ ವೃದ್ಧಿಸುತ್ತೆ; ಅಂದ-ಆರೋಗ್ಯಕ್ಕಾಗಿ ಇದನ್ನು ಹೀಗೂ ಬಳಸಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆಯ ರುಚಿ ಹೆಚ್ಚಿಸುವ ಅರಿಸಿನ ತೂಕ ಇಳಿಸಿ ಸೌಂದರ್ಯವನ್ನೂ ವೃದ್ಧಿಸುತ್ತೆ; ಅಂದ-ಆರೋಗ್ಯಕ್ಕಾಗಿ ಇದನ್ನು ಹೀಗೂ ಬಳಸಬಹುದು

ಅಡುಗೆಯ ರುಚಿ ಹೆಚ್ಚಿಸುವ ಅರಿಸಿನ ತೂಕ ಇಳಿಸಿ ಸೌಂದರ್ಯವನ್ನೂ ವೃದ್ಧಿಸುತ್ತೆ; ಅಂದ-ಆರೋಗ್ಯಕ್ಕಾಗಿ ಇದನ್ನು ಹೀಗೂ ಬಳಸಬಹುದು

ಮಸಾಲೆಗಳ ರಾಣಿ ಎಂದು ಕರೆಯಲ್ಪಡುವ ಅರಶಿನದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್, ಆಂಟಿವೈರಲ್, ಆಂಟಿಕಾರ್ಸಿನೋಜೆನಿಕ್ ಮತ್ತು ಉರಿಯೂತದವರೆಗೆ ಇದರ ಪ್ರಯೋಜನ ಅಗಾಧವಾದದ್ದು. ಬನ್ನಿ, ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ತೂಕ ಇಳಿಸಿ ಸೌಂದರ್ಯವನ್ನೂ ಹೆಚ್ಚಿಸುತ್ತೆ; ಅಂದ- ಆರೋಗ್ಯಕ್ಕಾಗಿ ಅರಸಿನವನ್ನು ಹೀಗೆ ಬಳಸಿ
ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ತೂಕ ಇಳಿಸಿ ಸೌಂದರ್ಯವನ್ನೂ ಹೆಚ್ಚಿಸುತ್ತೆ; ಅಂದ- ಆರೋಗ್ಯಕ್ಕಾಗಿ ಅರಸಿನವನ್ನು ಹೀಗೆ ಬಳಸಿ

ಅರಿಶಿನವು ದೇಹ ಮತ್ತು ಮೆದುಳಿಗೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ ಎಂದು ಸಂಶೋಧಕರು ನಡೆಸಿರುವ ಅಧ್ಯಯನಗಳಿಂದ ತಿಳಿದುಬಂದಿದೆ. ಸಾಂಬಾರ ಬೆಳೆಗಳಲ್ಲಿ ಒಂದಾದ ಅರಶಿನವು ಝೆಂಜಿಬರೇಸಿ ಕುಟುಂಬಕ್ಕೆ ಸೇರಿದ ಸಸ್ಯ. ಇದರ ವೈಜ್ಞಾನಿಕ ಹೆಸರು ಕರ್ಕ್ಯೂಮ ಲಾಂಗ.

ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಅರಿಶಿನವನ್ನು ಸಾಮಾನ್ಯವಾಗಿ ಅತ್ಯುತ್ತಮ ಪೌಷ್ಟಿಕಾಂಶದ ಪೂರಕಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್, ಆಂಟಿವೈರಲ್, ಆಂಟಿಕಾರ್ಸಿನೋಜೆನಿಕ್ ಮತ್ತು ಉರಿಯೂತಕ್ಕೂ ರಾಮಬಾಣವಾಗಿದೆ. ಇದು ವಿಟಮಿನ್ ಸಿ, ಇ ಮತ್ತು ಕೆ ಜೊತೆಗೆ ಫೈಬರ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಹೇರಳವಾದ ಪೋಷಕಾಂಶಗಳನ್ನು ಹೊಂದಿದೆ.

ಸಸ್ಯಾಹಾರ ಮಾತ್ರವಲ್ಲದೆ ಮಾಂಸದಡುಗೆಗೆ ಅರಶಿನವಿಲ್ಲದಿದ್ದರೆ ಅಪೂರ್ಣ. ಮೀನಿನ ಅಡುಗೆಗಂತೂ ಅರಶಿನ ಬಹಳ ಮುಖ್ಯ. ಮೀನನ್ನು ಶುಚಿಗೊಳಿಸಿದ ಬಳಿಕ ಅರಶಿನ ಹಾಕಿ ಇಡಲಾಗುತ್ತದೆ. ಸೂಕ್ಷ್ಮ ರೋಗಾಣುಗಳನ್ನು ಹೋಗಲಾಡಿಸಬಹುದಾಗಿರುವುದರಿಂದ ಮೀನಿಗೆ ಅರಶಿನವನ್ನು ಮಿಶ್ರಣ ಮಾಡಲಾಗುತ್ತದೆ.

ಅರಿಶಿನವು ತೀಕ್ಷ್ಣವಾದ ಸುವಾಸನೆಯನ್ನು ಹೊಂದಿದ್ದು, ಇದು ರುಚಿಗೆ ಸ್ವಲ್ಪ ಕಟುವಾಗಿರುತ್ತದೆ. ಅರಿಶಿನದಿಂದ ಹಲವು ಆರೋಗ್ಯ ಪ್ರಯೋಜನಗಳಿದ್ದು, ತೂಕ ಇಳಿಕೆಗೂ ಸಹಕಾರಿಯಾಗಿದೆ. ಅರಶಿನವನ್ನು ಉಪಯೋಗಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ, ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ...

ಅರಶಿನ ಹಾಲು

ಹಲವಾರು ವರ್ಷಗಳ ಹಿಂದಿನಿಂದಲೂ ಭಾರತೀಯರು ಅರಶಿನದ ಹಾಲನ್ನು ಸೇವಿಸುತ್ತಿದ್ದಾರೆ. ಮುಖ್ಯವಾಗಿ ಶೀತ, ಕಫ, ಜ್ವರ ಇದ್ದಾಗ ಹಾಲಿಗೆ ಅರಶಿನ ಬೆರೆಸಿ ಕುಡಿಯಲಾಗುತ್ತದೆ. ವಿಶೇಷವಾಗಿ ಮಕ್ಕಳಿಗೆ ಹಾಲಿಗೆ ಚಿಟಿಕೆ ಅರಶಿನ ಬೆರೆಸಿ ಕುಡಿಯಲು ಕೊಡಲಾಗುತ್ತದೆ. ವಯಸ್ಕರೂ ಸಹ ಹಾಲನ್ನು ಚೆನ್ನಾಗಿ ಬಿಸಿ ಮಾಡಿ ಅದಕ್ಕೆ ಅರ್ಧ ಟೀ ಚಮಚ ಅರಶಿನವನ್ನು ಮಿಕ್ಸ್ ಮಾಡಿ ಕುಡಿಯಬಹುದು.

ಮೊಡವೆಗೂ ಮದ್ದು

ಅರಿಶಿನವು ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ಇದು ತ್ವಚೆಯಲ್ಲಿರುವ ಮೊಡವೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಕಾಲು ಚಮಚದಷ್ಟು ಅರಶಿನವನ್ನು ತೆಗೆದುಕೊಂಡು, ಅಷ್ಟೇ ಜೇನುತುಪ್ಪವನ್ನು ಸೇರಿಸಬೇಕು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ, ಮೊಡವೆಗಳಿರುವ ಜಾಗಕ್ಕೆ ಹಚ್ಚಬೇಕು. ನಂತರ ಸಂಪೂರ್ಣ ಒಣಗುವವರೆಗೆ ಹಾಗೆಯೇ ಬಿಡಬೇಕು. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದು, ಬೆಟ್ಟಗಿನ ಕಾಟನ್ ಬಟ್ಟೆಯಿಂದ ಮುಖ ಒರೆಸಿಕೊಳ್ಳಬೇಕು. ವಾರದಲ್ಲಿ ಎರಡರಿಂದ ಮೂರು ದಿನ ಈ ರೀತಿ ಮಾಡಿದಲ್ಲಿ ಮೊಡವೆಗಳು ಮಾಯವಾಗುತ್ತದೆ.

ಡಿಟಾಕ್ಸ್ ಪಾನೀಯ

ಅರಿಶಿನವು ಅದರ ನಿರ್ವಿಶೀಕರಣ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದನ್ನು ನೀವು ಪ್ರತಿದಿನ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಉತ್ತಮ. 1/3 ಚಮಚ ಅರಿಶಿನ, ಜೇನುತುಪ್ಪ (ರುಚಿಗೆ ಬೇಕಿದ್ದರೆ) ಮತ್ತು 1 ಚಮಚ ನಿಂಬೆ ರಸವನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ, ದೈನಂದಿನ ಡಿಟಾಕ್ಸ್ ಅರಿಶಿನ ಪಾಕವಿಧಾನವನ್ನು ತಯಾರಿಸಬಹುದು. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಫೇಸ್‌ಮಾಸ್ಕ್

ನಿಮ್ಮ ತ್ವಚೆಯನ್ನು ನಯವಾಗಿ ಮತ್ತು ಕಾಂತಿಯುತವಾಗಿಸುವ ಫೇಸ್ ಮಾಸ್ಕ್ ತಯಾರಿಸಲು ಅರಿಶಿನವನ್ನು ಬಳಸಬಹುದು. ಇದಕ್ಕಾಗಿ ನೀವು 1 ಚಮಚ ಮೊಸರು, 1/3 ಚಮಚ ಅರಿಶಿನ ಮತ್ತು 1/2 ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ತ್ವಚೆಗೆ ಹಚ್ಚಿ. ಇದು ಒಣಗುವವರೆಗೆ ಹಾಗೆಯೇ ಬಿಡಿ. ಬಳಿಕ ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.

ಅರಶಿನ ಜೆಲ್

ಚರ್ಮದ ತುರಿಕೆ, ಕಡಿತ ಮುಂತಾದ ಸಮಸ್ಯೆಗೆ ನೀವು ಅರಿಶಿನವನ್ನು ಬಳಸಬಹುದು. ತೋಟಗಳಲ್ಲಿ ತುರಿಕೆ ಸಸ್ಯಗಳಿರುತ್ತವೆ. ಅದನ್ನು ತಪ್ಪಿ ತುಳಿಯುವುದರಿಂದ ಅಥವಾ ತಾಗಿದರೆ ಸಾಕು ತುರಿಕೆಯುಂಟಾಗುತ್ತಾದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.. 1/3 ಅಲೋವೆರಾ ಜೆಲ್‌ಗೆ ಸಮಾನ ಪ್ರಮಾಣದ ಅರಿಶಿನವನ್ನು ಸೇರಿಸಿ (ಅನುಪಾತವನ್ನು ಒಂದೇ ರೀತಿ ಇರಿಸುವ ಮೂಲಕ ನೀವು ಪ್ರಮಾಣವನ್ನು ಹೆಚ್ಚಿಸಬಹುದು) ಚೆನ್ನಾಗಿ ಮಿಕ್ಸ್ ಮಾಡಿ. ತುರಿಕೆಯುಂಟಾದ ಜಾಗಕ್ಕೆ ಹಚ್ಚಿ, ಒಣಗುವವರೆಗೆ ಬಿಡಿ. ನಂತರ ನೀರಿನಿಂದ ತೊಳೆಯಿರಿ.

ಬಾಯಿಹುಣ್ಣು ಸಮಸ್ಯೆಗೆ ಜೆಲ್

ಬಾಯಿ ಹುಣ್ಣು ಇದ್ದರೆ ಅದಕ್ಕೆ ಅರಶಿನದಿಂದ ಮಾಡಿರುವ ಪೇಸ್ಟ್ ಅನ್ನು ಹಚ್ಚುವುದರಿಂದ ಪರಿಹಾರ ಸಿಗುತ್ತದೆ. 1 ಚಮಚ ನೀರಿನಲ್ಲಿ ಚಿಟಿಕೆ ಅರಿಶಿನ ಮತ್ತು 1/2 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಬಾಯಿ ಹುಣ್ಣುಗಳ ಮೇಲೆ ಅನ್ವಯಿಸಿ.

ತೂಕ ನಷ್ಟಕ್ಕೆ ಅರಶಿನ ಪಾನೀಯ

ಅರಿಶಿನವು ತೂಕವನ್ನು ಕಳೆದುಕೊಳ್ಳುವಲ್ಲಿಯೂ ನಿಜವಾಗಿಯೂ ಪರಿಣಾಮಕಾರಿಯಾಗಿದೆ. ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ. ಅದಕ್ಕೆ ಅರ್ಧ ಚಮಚ ಅರಿಶಿನ ಮತ್ತು ಅರ್ಧ ಚಮಚ ಶುಂಠಿ ರಸವನ್ನು ಸೇರಿಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಆರೋಗ್ಯಯುತವಾಗಿ ತೂಕ ಇಳಿಕೆಗೆ ಸಹಾಯ ಮಾಡಬಲ್ಲದು.

Whats_app_banner