ಪ್ರತಿದಿನ ಮೀನು ತಿನ್ನುವ ಅಭ್ಯಾಸ ನಿಮಗಿದ್ಯಾ, ಮೀನು ಪ್ರಿಯರು ತಿಳಿದಿರಲೇಬೇಕಾದ ಮಹತ್ವದ ವಿಚಾರಗಳಿವು
ಮಾಂಸಾಹಾರಿಗಳಿಗೆ ಮೀನು ಫೇವರಿಟ್. ಪ್ರತಿದಿನ ತಪ್ಪದೇ ಮೀನು ತಿನ್ನುವವರಿದ್ದಾರೆ. ಮೀನು ತಿಂದ್ರೆ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ, ಇದರಿಂದ ಉಂಟಾಗುವ ತೊಂದರೆಗಳೇನು? ಪ್ರತಿದಿನ ಮೀನು ತಿನ್ನುವವರು ತಪ್ಪದೇ ತಿಳಿದಿರಬೇಕಾದ ಮಹತ್ವದ ವಿಚಾರಗಳಿವು.

ಮೀನು ಸಾರು, ಮೀನು ಫ್ರೈ, ಮೀನು ಪುಳಿಮುಂಚಿ, ಮೀನಿನ ಬಿರಿಯಾನಿ ಈ ಖಾದ್ಯಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ಜಗತ್ತಿನಾದ್ಯಂತ ಮಾಂಸಾಹಾರಿಗಳಿಗೆ ಮೀನು ಫೇವರಿಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಮೀನು ರುಚಿ ಮಾತ್ರವಲ್ಲ, ಇದು ಆರೋಗ್ಯಕ್ಕೂ ಉತ್ತಮ. ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೀನು ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೀನು ಪ್ರಮುಖ ಆಹಾರವಾಗಿದ್ದು, ಇದನ್ನು ಪ್ರತಿದಿನ ತಿನ್ನುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಹಾಗಾದರೆ ಪ್ರತಿದಿನ ಮೀನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದೇ, ದಿನಾ ಮೀನು ತಿನ್ನುವುದರಿಂದ ಏನಾಗುತ್ತೆ, ಇದರಿಂದ ದೇಹದ ಮೇಲೆ ಯಾವೆಲ್ಲಾ ರೀತಿಯ ಪರಿಣಾಮಗಳು ಬೀರುತ್ತವೆ ಎಂಬಿತ್ಯಾದಿ ವಿಷಯಗಳು ಇಲ್ಲಿವೆ.
ಪ್ರತಿದಿನ ಮೀನು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳು
ಹೃದಯದ ಆರೋಗ್ಯಕ್ಕೆ ಮೀನು ದಿ ಬೆಸ್ಟ್ ಅಂತಲೇ ಹೇಳಬಹುದು. ಅದರಲ್ಲೂ ಸಾಲ್ಮನ್, ಟ್ಯೂನ್ ಮತ್ತು ಮ್ಯಾಕೆರೆಲ್‌ನಂತಹ ಕೊಬ್ಬಿನಾಮ್ಲಗಳಿರುವ ಮೀನುಗಳಲ್ಲಿ ಒಮೆಗಾ 3 ಅಂಶವಿರುತ್ತದೆ. ಇವು ಇಪಿಎ ಹಾಗೂ ಡಿಎಚ್‌ಎಗಳಲ್ಲಿ ಸಮೃದ್ಧವಾಗಿದೆ. ಈ ಕೊಬ್ಬಿನಾಂಶವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಅಂಶವನ್ನು ಕಡಿಮೆ ಮಾಡುವ ಮೂಲಕ ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತದೆ. ಮಾತ್ರವಲ್ಲ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎನ್ನುತ್ತಾರೆ ಪೌಷ್ಟಿಕತಜ್ಞೆ ಸೋನಿಯಾ ಬಕ್ಷಿ. ಅವರ ಪ್ರಕಾರ ಪ್ರತಿನಿತ್ಯ ಮೀನು ತಿನ್ನುವುದರಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಆರಿಥ್ಮಿಯಾದಂತಹ ಅಪಾಯಗಳು ಕಡಿಮೆಯಾಗುತ್ತದೆ.
ಮೆದುಳಿನ ಶಕ್ತಿ ಹೆಚ್ಚುತ್ತದೆ: ಅರಿವಿನ ಕಾರ್ಯ ಸುಧಾರಣೆಯಲ್ಲಿ ಒಮೆಗಾ 3 ಪ್ರಮುಖ ಪಾತ್ರ ವಹಿಸುತ್ತದೆ. ಇದು ನೆನಪಿನ ಶಕ್ತಿ, ಕಲಿಕೆ, ಗಮನಶಕ್ತಿ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ. ಇದರೊಂದಿಗೆ ಆಲ್ಝೈಮರ್‌ನಂತಹ ನೆನಪಿನ ಶಕ್ತಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಇದು ಸ್ವಲ್ಪ ಮಟ್ಟಿಗೆ ತಡೆಯುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ಬಕ್ಷಿ.
ಮೂಳೆಗಳ ಬಲವರ್ಧನೆ , ದೃಷ್ಟಿ ಸುಧಾರಣೆ: ಮೀನುಗಳು ವಿಟಮಿನ್ ಡಿಯ ನೈಸರ್ಗಿಕ ಮೂಲವಾಗಿದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಮತ್ತು ಮೂಳೆಯ ಆರೋಗ್ಯಕ್ಕೆ ಅವಶ್ಯವಾಗಿದೆ. ಇದು ವಿಟಮಿನ್ ಎ ಅನ್ನು ಕೂಡ ಹೊಂದಿದ್ದು, ಇದು ದೃಷ್ಟಿ ಸುಧಾರಿಸಲು ಉತ್ತಮ. ಇದು ಕಾರ್ನಿಯಾದ ಆರೋಗ್ಯವನ್ನು ನಿರ್ವಹಿಸುತ್ತವೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ: ಮೀನು ಲೀನ್ ಪ್ರೊಟೀನ್‌ಗಳ ಉತ್ತಮ ಮೂಲವಾಗಿದೆ. ಇದು ಅಂಗಾಂಗಗಳನ್ನು ಬಲಪಡಿಸುತ್ತದೆ. ಬಿ ಜೀವಸತ್ವಗಳನ್ನು ಸಹ ಒದಗಿಸುತ್ತದೆ. ಶಕ್ತಿಯ ಚಯಾಪಚಯ ಮತ್ತು ನರಮಂಡಲದ ಕಾರ್ಯವನ್ನು ಬೆಂಬಲಿಸುತ್ತದೆ. ಮೀನಿನಲ್ಲಿ ಸೆಲೇನಿಯಂ ಅಂಶ ಸಮೃದ್ಧವಾಗಿದ್ದು, ಇದು ದೇಹದ ಪ್ರತಿರಕ್ಷಣಾ ಕಾರ್ಯಕ್ಕೆ ಪ್ರಮುಖವಾಗಿದೆ.
ಮೀನು ಸೇವನೆ ಅತಿಯಾದ್ರೂ ಒಳಿತಲ್ಲ ನೆನಪಿರಲಿ
ಪಾದರಸ ಅಂಶದಿಂದ ತೊಂದರೆ ಉಂಟಾಗಬಹುದು: ಪ್ರತಿನಿತ್ಯ ಮೀನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಇರುವುದು ನಿಜವಾದ್ರೂ ಇದರಿಂದ ಅಪಾಯವೂ ಇದೆ. ಕಿಂಗ್ ಮ್ಯಾಕೆರೆಲ್, ಕತ್ತಿಮೀನು ಮತ್ತು ಟೈಲ್ಫಿಶ್‌ನಂತಹ ಮೀನುಗಳಲ್ಲಿ ಪಾದರಸದ ಅಂಶ ಹೆಚ್ಚಿರುತ್ತದೆ. ಪಾದರಸಕ್ಕೆ ಒಡ್ಡಿಕೊಳ್ಳುವುದರಿಂದ ನರಮಂಡಲದ ಸಮಸ್ಯೆಗಳು, ಮಕ್ಕಳಲ್ಲಿ ಬೆಳವಣಿಗೆಯ ಸಮಸ್ಯೆಗಳು ಮತ್ತು ಅರಿವಿನ ಕುಸಿತಕ್ಕೆ ಕಾರಣವಾಗಬಹುದು. ಸಣ್ಣ ಮೀನುಗಳನ್ನು ಆರಿಸುವುದು ಮತ್ತು ನಿಮ್ಮ ಆಯ್ಕೆಗಳನ್ನು ಬದಲಾಯಿಸುವುದು ಪಾದರಸದ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಮತೋಲನ ಮುಖ್ಯ: ಮೀನಿನಲ್ಲಿ ಕ್ಯಾಲೊರಿ, ಕೊಬ್ಬಿನಾಂಶ ಕಡಿಮೆ ಇದ್ದರೂ ಸಾಲ್ಮನ್‌ನಂತಹ ಕೆಲವು ಪ್ರಭೇದಗಳಲ್ಲಿ ಕೊಬ್ಬಿನಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಅತಿಯಾದ ಕ್ಯಾಲೊರಿ ಸೇವನೆಗೂ ಕಾರಣವಾಗಬಹುದು. ಹಾಗಾಗಿ ನಾವು ಯಾವ ಬಗೆಯ ಮೀನನ್ನು ಹೆಚ್ಚು ಸೇವಿಸಬಹುದು ಎಂಬ ಬಗ್ಗೆಯೂ ನಿಮಗೆ ಅರಿವಿರಬೇಕು.
ಅಲರ್ಜಿ ಪ್ರತಿಕ್ರಿಯೆ: ಮೀನಿನ ಅಲರ್ಜಿಯು ಚಿಪ್ಪುಮೀನು ಹಾಗೂ ಕಡಲೆಕಾಯಿ ಅಲರ್ಜಿಗಿಂತ ಕಡಿಮೆ. ಆದರೆ ಕೆಲವೊಮ್ಮೆ ಇದು ಗಂಭೀರ ಅಲರ್ಜಿಗೆ ಕಾರಣವಾಗಬಹುದು. ಇದರ ರೋಗಲಕ್ಷಣಗಳು ಸೌಮ್ಯವಾದ ಚರ್ಮದ ಕಿರಿಕಿರಿಯಿಂದ ಮಾರಣಾಂತಿಕ ಅನಾಫಿಲ್ಯಾಕ್ಸಿಸ್‌ವರೆಗೆ ಇರಬಹುದು. ನಿಮಗೆ ಮೀನು ಅಲರ್ಜಿ ಎನ್ನಿಸಿದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಸಂಭಾವ್ಯ ಪಾದರಸದ ಕಾರಣದಿಂದ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ತಮ್ಮ ಮೀನಿನ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು. ಗರ್ಭಿಣಿ ಮಹಿಳೆಯರಿಗೆ ವಾರಕ್ಕೆ ಸರಾಸರಿ 4.2 ಔನ್ಸ್ ಮತ್ತು ಹಾಲುಣಿಸುವ ಮಹಿಳೆಯರಿಗೆ ವಾರಕ್ಕೆ 7 ಔನ್ಸ್ ಸೇವಿಸಬೇಕು ಎಂದು ಡಾ. ಭಕ್ಷಿ ಶಿಪಾರಸು ಮಾಡುತ್ತಾರೆ.
ಪ್ರತಿದಿನ ಮೀನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದರೂ ಕೂಡ ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು ಹೆಚ್ಚು ಮೀನು ತಿನ್ನುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಡಾ. ಬಕ್ಷಿ ಹೇಳುತ್ತಾರೆ.
ಮೀನು ತಿಂದ ನಂತರ ಯಾವುದೇ ರೀತಿಯ ಅಲರ್ಜಿ, ಆರೋಗ್ಯ ಸಮಸ್ಯೆಗಳು ಕಾಣಿಸಿದರೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.
