ನೆನೆಸಿಟ್ಟ ಅಕ್ಕಿಯಿಂದ ಅನ್ನ ಮಾಡುವುದರಿಂದ ಮಧುಮೇಹ ನಿಯಂತ್ರಿಸಬಹುದೇ? ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ
ಯಾವ ಆಹಾರದಲ್ಲಿ ಗ್ಲೈಸಮಿಕ್ ಇಂಡೆಕ್ಸ್ ಕಡಿಮೆ ಪ್ರಮಾಣದಲ್ಲಿ ಇರುತ್ತದೋ ಅಂತಹ ಆಹಾರ ನಿಧಾನವಾಗಿ ಜೀರ್ಣವಾಗುತ್ತದೆ. ಇವು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಅನ್ನದಲ್ಲಿರುವ ಗ್ಲೈಸಮಿಕ್ ಇಂಡೆಕ್ಸ್ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆಯೇ? ಅನ್ನ ತಿನ್ನುವುದರಿಂದ ಮಧುಮೇಹ ಹೆಚ್ಚುತ್ತೆ ಅನ್ನೋರು ತಿಳಿಯಲೇಬೇಕಾದ ಮಾಹಿತಿಯಿದು.
ಮಧ್ಯಾಹ್ನದ ಊಟ ಮುಗಿಸಿದ ಬಳಿಕ ನಿದ್ರೆಯ ಮಂಪರಿನಿಂದ ಪಾರಾಗಲು ಕಷ್ಟಪಡುತ್ತಿದ್ದೀರಾ? ಮಧ್ಯಾಹ್ನದ ಗಾಢ ನಿದ್ರೆಯು ನಿಮ್ಮ ತೂಕವನ್ನು ಹೆಚ್ಚಿಸುತ್ತಿದೆ ಎಂದು ಭಾಸವಾಗುತ್ತಿದೆಯೇ? ಅನ್ನ ತಯಾರಿಸುವ ಕೆಲವೇ ಗಂಟೆಗಳ ಮೊದಲು ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕಿಟ್ಟರೆ ಇಂತಹ ಸಮಸ್ಯೆಗಳಿಂದ ಪಾರಾಗಬಹುದೇ..? ನೆನೆಸಿದ ಅಕ್ಕಿಯು ಗ್ಲೈಸಮಿಕ್ ಇಂಡೆಕ್ಸ್‌ನ ಮೇಲೆ ಪರಿಣಾಮ ಬೀರುತ್ತದೆಯೇ..? ನೆನೆಸಿದ ಅಕ್ಕಿಯಿಂದ ತಯಾರಿಸಿದ ಅನ್ನವು ಮನುಷ್ಯನ ಒಟ್ಟಾರೆ ಆರೋಗ್ಯದ ಮೇಲೆ ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ..?
ಅಕ್ಕಿಯನ್ನು ನೆನೆಸಿ ತಯಾರಿಸಿದ ಅನ್ನವು ಗ್ಲೈಸಮಿಕ್ ಇಂಡೆಕ್ಸ್‌ನ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೇ ಇನ್ನೂ ಹೆಚ್ಚು ಪೋಷಕಾಂಶಯುಕ್ತ ಲಾಭವನ್ನು ಹೊಂದಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದರ ಬಗ್ಗೆ ತಿಳಿಯುವ ಮುನ್ನ ಗ್ಲೈಸಮಿಕ್ ಇಂಡೆಕ್ಸ್ ಎಂದರೆ ಏನು ಎಂಬುದನ್ನು ಮೊದಲು ಅರಿತುಕೊಳ್ಳಬೇಕಿದೆ.
ಏನಿದು ಗ್ಲೈಸಮಿಕ್ ಇಂಡೆಕ್ಸ್?
ಗ್ಲೈಸಮಿಕ್ ಇಂಡೆಕ್ಸ್ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಎಷ್ಟು ವೇಗದಲ್ಲಿ ಹೆಚ್ಚಿಸುತ್ತದೆ ಎಂಬುದನ್ನು ತಿಳಿಸುವ ಒಂದು ಅಳತೆಯ ಪ್ರಮಾಣವಾಗಿದೆ. ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳು ನಿಧಾನವಾಗಿ ಜೀರ್ಣವಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಕ್ರಮೇಣ ಹೆಚ್ಚಳವನ್ನುಂಟು ಮಾಡುತ್ತದೆ ಹಾಗೂ ನಿರಂತರವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತಿರುತ್ತದೆ.
ಅನ್ನ ತಯಾರಿಸುವ ಮುನ್ನ ಕೆಲಕಾಲ ಅಕ್ಕಿಯನ್ನು ನೆನೆಸುವುದರಿಂದ ಅಕ್ಕಿಯು ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಹೊಂದಲು ಸಾಧ್ಯವಾಗುತ್ತದೆ. ಇಂತಹ ಅನ್ನವನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಅಂಶದ ಹೆಚ್ಚಳದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ನೆನೆಸಿದ ಅಕ್ಕಿಯಿಂದ ತಯಾರಿಸಿದ ಅನ್ನದ ಪ್ರಯೋಜನ
ಆಹಾರ ತಜ್ಞರ ದೃಷ್ಟಿಕೋನದ ಪ್ರಕಾರ ಈ ಪ್ರಶ್ನೆಗೆ ಉತ್ತರ ನೀಡುವುದಾದರೆ, ಎಂಜೈಮಿಕ್ ಅಂಶಗಳ ಸ್ಥಗಿತದಿಂದಾಗಿ ಫೈಟಿಕ್ ಆಸಿಡ್ ಮತ್ತು ಟ್ಯಾನಿನ್‌ಗಳಂತಹ ಆಂಟಿನ್ಯೂಟ್ರಿಯೆಂಟ್‌ಗಳನ್ನು ಒಡೆಯುವ ಮೂಲಕ ವಿಟಮಿನ್ ಹಾಗೂ ಪೋಷಕಾಂಶಗಳು ದೇಹಕ್ಕೆ ಸಿಗುವ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ. ಈ ಸಂಯುಕ್ತಗಳು ದೇಹಕ್ಕೆ ಸಿಗಬೇಕಿದ್ದ ಪೋಷಕಾಂಶ ಹಾಗೂ ಜೀವಸತ್ವಗಳ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದವು. ಆದರೆ ಅಕ್ಕಿಯನ್ನು ನೆನೆಸಿದ ಪರಿಣಾಮದಿಂದಾಗಿ ಅಕ್ಕಿಯ ಒಟ್ಟಾರೆ ಪೋಷಕಾಂಶ ಹೀರುವಿಕೆ ಪ್ರಮಾಣ ಹೆಚ್ಚಾಗುತ್ತದೆ ಎನ್ನಲಾಗಿದೆ.
ನೆನೆಸಿದ ಅಕ್ಕಿಯ ಅನ್ನದ ಅಡ್ಡಪರಿಣಾಮಗಳು
ಮಿತವಾಗಿ ಈ ಅಭ್ಯಾಸವನ್ನು ರೂಢಿಸಿಕೊಂಡಲ್ಲಿ ಅಂತಹ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಕೆಲವು ಜೀವಸತ್ವಗಳು ಹಾಗೂ ಖನಿಜಗಳು ನೀರಿನಲ್ಲಿ ಕರಗುವ ಗುಣವನ್ನು ಹೊಂದಿರುವ ಕಾರಣ ನೀರಿನಲ್ಲಿ ಅಕ್ಕಿಯನ್ನು ನಾಲ್ಕು ಗಂಟೆಗಳಿಗಿಂತ ಅಧಿಕ ಕಾಲ ನೆನೆಸುವುದು ಒಳ್ಳೆಯದಲ್ಲ. ನಾಲ್ಕು ಗಂಟೆಗೂ ಅಧಿಕ ಕಾಲ ಅಕ್ಕಿಯನ್ನು ನೆನೆಸುವುದರಿಂದ ಪೌಷ್ಟಿಕಾಂಶಗಳ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ.
ಅಲ್ಲದೇ ಅಕ್ಕಿಯನ್ನು ನೆನೆಸುವ ಮುನ್ನ ಅದನ್ನು ಚೆನ್ನಾಗಿ ತೊಳೆಯುವುದು ಕೂಡ ಮುಖ್ಯವಾಗಿದೆ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಇದು ಅಕ್ಕಿಯಿಂದ ಹೆಚ್ಚುವರಿ ಪಿಷ್ಟವನ್ನು ತೊಡೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಇನ್ನಷ್ಟು ಮೃದುವಾದ ಅನ್ನವನ್ನು ಸೇವನೆ ಮಾಡಲು ಸಾಧ್ಯವಿದೆ. ಆದರೆ ತಮ್ಮ ಆಹಾರಕ್ರಮದಲ್ಲಿ ಇಂಥಹ ಬದಲಾವಣೆ ಮಾಡುವ ಸಂದರ್ಭದಲ್ಲಿ ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಮೊದಲು ವೈದ್ಯರ ಬಳಿ ಚರ್ಚೆ ನಡೆಸುವುದು ಒಳ್ಳೆಯದು ಎಂದು ಸ್ವತಃ ಆಹಾರ ತಜ್ಞರು ಸಲಹೆ ನೀಡಿದ್ದಾರೆ.