Heart Health: ನಿದ್ರೆಗೂ ಹೃದಯದ ಆರೋಗ್ಯಕ್ಕೂ ಉಂಟು ನಂಟು; ಸಂಶೋಧಕರ ಪ್ರಕಾರ ಪ್ರತಿದಿನ ನಿಮ್ಮ ನಿದ್ದೆ ಹೀಗಿರಲಿ
Benifits of good sleep: ಹೃದಯದ ಆರೋಗ್ಯ ಎನ್ನುವುದು ಸರಿಯಾಗಿದ್ದರೆ ದೇಹದ ಮಿಕ್ಕೆಲ್ಲ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಉತ್ತಮ ಆಹಾರ ಶೈಲಿ ಹೃದಯದ ಆರೋಗ್ಯ ಕಾಪಾಡುತ್ತದೆ ಎಂದು ಅನೇಕರು ಹೇಳಿದ್ದನ್ನು ಕೇಳಿರುತ್ತೀರಿ. ಆದರೆ ಇದರ ಜೊತೆಯಲ್ಲಿ ಹೃದಯದ ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ನಿದ್ರೆ ಕೂಡ ಎಷ್ಟು ಮುಖ್ಯ ಎನ್ನುವುದನ್ನು ಅರಿಯಬೇಕಿದೆ.
Benifits of good sleep: ಉತ್ತಮ ಆರೋಗ್ಯ ನಿಮ್ಮದಾಗಬೇಕು ಎಂದರೆ ಕೇವಲ ನಿಮ್ಮ ಆಹಾರ ಕ್ರಮ ಆರೋಗ್ಯಕರವಾಗಿ ಇದ್ದರೆ ಸಾಲದು ನಿಮ್ಮ ನಿದ್ರೆಯ ಗುಣಮಟ್ಟ ಕೂಡ ಚೆನ್ನಾಗಿ ಇರಬೇಕು. ನಿಮಗೆ ರಾತ್ರಿ ನಿದ್ರೆ ಸರಿಯಾಗಿ ಆಗಿಲ್ಲವೆಂದರೆ ದಿನವಿಡೀ ಆಲಸ್ಯ , ದಣಿವು ಹಾಗೂ ಕಿರಿಕಿರಿ ಭಾವನೆ ಇರುತ್ತದೆ. ಕೇವಲ ಇದು ಮಾತ್ರವಲ್ಲ ಕಡಿಮೆ ನಿದ್ರೆಯು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ಸಾಕಷ್ಟು ಅಧ್ಯಯನಗಳು ಮಾಹಿತಿ ನೀಡಿವೆ. ಅಲ್ಲದೇ ಕಳಪೆ ನಿದ್ರೆಯು ಹೃದಯದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಇತ್ತೀಚಿಗೆ ನಡೆದ ಅಧ್ಯಯನವೊಂದು ಮಾಹಿತಿ ನೀಡಿದೆ.
ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡಬೇಕು?
ನಿದ್ರೆ ಹಾಗೂ ಹೃದಯದ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ತಿಳಿಯಲು ಅಧ್ಯಯನ ನಡೆಸುತ್ತಿದ್ದ ನ್ಯೂಯಾರ್ಕ್‌ನ ಹೃದಯ ರಕ್ತನಾಳ ಸಂಶೋಧನಾ ಸಂಸ್ಥೆ ನಿರ್ದೇಶಕರು ಸಾಕಷ್ಟು ಆರೋಗ್ಯವಂತ ಜನರ ಮೇಲೆ ಸಮೀಕ್ಷೆ ನಡೆಸಿದ್ದರು. ಇವರೆಲ್ಲ ಆರು ವಾರಗಳ ಕಾಲ ಪ್ರತಿದಿನ ಒಂದೂವರೆ ಗಂಟೆಗಳಿಂತ ಕಡಿಮೆ ಸಮಯದವರೆಗೆ ನಿದ್ರೆ ಮಾಡಿದ್ದರು. ನಿರಂತರವಾಗಿ ನಿದ್ರೆ ಕಡಿಮೆ ಮಾಡಿದವರ ಸ್ಟೆಮ್ಸೆಲ್ಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಸಂಶೋಧನೆಯನ್ನು ಆಧರಿಸಿ ಹೃದ್ರೋಗ ತಜ್ಞರು ಉತ್ತಮ ಹೃದಯದ ಆರೋಗ್ಯಕ್ಕಾಗಿ ಏಳರಿಂದ ಎಂಟು ಗಂಟೆಗಳ ನಿದ್ರೆ ಮುಖ್ಯ ಎಂದು ತಿಳಿಸಿದ್ದಾರೆ.
35 ವರ್ಷ ಮೇಲ್ಪಟ್ಟವರ ಮೇಲೂ ನಡೆದಿತ್ತು ಅಧ್ಯಯನ
ಈ ಅಧ್ಯಯನದ ಸಂದರ್ಭದಲ್ಲಿ 35 ವರ್ಷ ಮೇಲ್ಪಟ್ಟವರನ್ನು ಬಳಸಿಕೊಳ್ಳಲಾಗಿತ್ತು. ಮೊದಲ ಆರು ವಾರಗಳ ಕಾಲ ಇವರಿಗೆ ಪ್ರತಿದಿನ 8 ಗಂಟೆಗಳ ಕಾಲ ನಿದ್ರಿಸಲು ಅನುವು ಮಾಡಿಕೊಡಲಾಗಿತ್ತು. ಆರು ವಾರಗಳು ಕಳೆದ ಬಳಿಕ ಎಲ್ಲರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಇನ್ನೂ ಆರು ದಿನಗಳ ಕಾಲ ಇವರ ನಿದ್ರೆಯನ್ನು ಕೇವಲ 90 ನಿಮಿಷಗಳಿಗೆ ಸೀಮಿತಗೊಳಿಸಲಾಯ್ತು. ಮತ್ತೊಮ್ಮೆ ಇವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯ್ತು. 8 ಗಂಟೆಗಳ ಕಾಲ ನಿದ್ರಿಸಿದಾಗ ಸಂಗ್ರಹಿಸಿದ ರಕ್ತದ ಮಾದರಿಗೂ ಈಗಿನ ರಕ್ತದ ಮಾದರಿಗೂ ಹೋಲಿಕೆ ಮಾಡಿ ನೋಡಿದಾಗ ಆರೋಗ್ಯವಂತ ಜೀವಕೋಶಗಳು ಕಡಿಮೆಯಾಗಿದ್ದು ಬೆಳಕಿಗೆ ಬಂದಿತ್ತು.
ಕಡಿಮೆ ನಿದ್ರೆಯು ಹೃದಯದ ಆರೋಗ್ಯಕ್ಕೆ ಏಕೆ ಅಪಾಯಕಾರಿ..?
ಕಡಿಮೆ ನಿದ್ರೆ ಮಾಡುವವರಲ್ಲಿ ಪ್ರತಿರಕ್ಷಣಾ ಕೋಶಗಳು ಅತಿಯಾಗಿತ್ತು ಎಂದು ಅಧ್ಯಯನ ತಿಳಿಸಿದೆ. ದೇಹದಲ್ಲಿ ಯಾವುದೇ ರೀತಿಯ ಕಾಯಿಲೆ ಬಂದಾಗ ಅಥವಾ ಗಾಯಗಳಾದಾಗ ಪ್ರತಿರಕ್ಷಣಾ ಕೋಶಗಳು ಸಾಕಷ್ಟು ಅಗತ್ಯ ಎನಿಸುತ್ತವೆ. ಆದರೆ ಇವುಗಳು ಅತಿಯಾದ ಇರುವಿಕೆ ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಇದು ಮುಂದುವರಿದರೆ ಹೃದ್ರೋಗದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ದೇಹದಲ್ಲಿ ಉತ್ತಮ ಜೀವಕೋಶಗಳನ್ನು ಅಭಿವೃದ್ಧಿಪಡಿಸಲು ಉತ್ತಮ ನಿದ್ರೆ ಖಂಡಿತವಾಗಿಯೂ ಮನುಷ್ಯನಿಗೆ ಅವಶ್ಯಕವಾಗಿದೆ ಎಂದು ಈ ಅಧ್ಯಯನವು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.
ಲೇಖನ: ರಶ್ಮಿ