ಕನ್ನಡ ಸುದ್ದಿ  /  ಜೀವನಶೈಲಿ  /  Binge Eating Disorder: ಅತಿಯಾಗಿ ತಿನ್ನುವುದು ಹೃದಯಕ್ಕೆ ಒಳಿತಲ್ಲ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು ಎಚ್ಚರ

Binge Eating Disorder: ಅತಿಯಾಗಿ ತಿನ್ನುವುದು ಹೃದಯಕ್ಕೆ ಒಳಿತಲ್ಲ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು ಎಚ್ಚರ

ಅತಿಯಾಗಿ ತಿನ್ನುವ ಅಭ್ಯಾಸ ಇರುವವರಿಗೆ ಹೃದಯದ ಸಮಸ್ಯೆಗಳು ಹೆಚ್ಚು ಕಾಡಬಹುದು ಎನ್ನುತ್ತಾರೆ ತಜ್ಞರು. ಅತಿಯಾಗಿ ತಿನ್ನುವುದು ಅಥವಾ ಬಿಂಗ್‌ ಈಟಿಂಗ್‌ ಡಿಸಾರ್ಡರ್‌ ನೇರವಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಹಾಗಾದರೆ ಈ ಬಿಂಗ್‌ ಈಟಿಂಗ್‌ ಡಿಸಾರ್ಡರ್‌ನಿಂದ ತಪ್ಪಿಸಿಕೊಳ್ಳಲು ಪರಿಹಾರ ಏನು? ಇಲ್ಲಿದೆ ವಿವರ.

 ಅತಿಯಾಗಿ ತಿನ್ನುವುದು ಹೃದಯಕ್ಕೆ ಒಳಿತಲ್ಲ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು ಎಚ್ಚರ
ಅತಿಯಾಗಿ ತಿನ್ನುವುದು ಹೃದಯಕ್ಕೆ ಒಳಿತಲ್ಲ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು ಎಚ್ಚರ

ಬಿಇಡಿ ಅಥವಾ ಬಿಂಗ್‌ ಇಟಿಂಗ್‌ ಡಿಸಾರ್ಡರ್‌ (ಅತಿಯಾಗಿ ತಿನ್ನುವುದು) ಇದೊಂದು ಮಾನಸಿಕ ವ್ಯಾಧಿ. ಈ ಸಮಸ್ಯೆ ಇರುವವರು ನಿರಂತರವಾಗಿ ತಿನ್ನುತ್ತಲೇ ಇರುತ್ತಾರೆ. ಅಲ್ಲದೆ ತಮಗೆ ಬೇಡವೆಂದರೂ, ಹಸಿವು ಇಲ್ಲದೇ ಇದ್ದರೂ ಅತಿಯಾಗಿ, ಒತ್ತಾಯಪೂರ್ವಕವಾಗಿ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಅಪರೂಪಕ್ಕೆ ಅತಿಯಾಗಿ ತಿನ್ನುವುದು ಬಿಇಡಿಯ ಲಕ್ಷಣವಲ್ಲ, ಬಿಇಡಿಯಂತಹ ತಿನ್ನುವ ಅಸ್ವಸ್ಥತೆಯು ದೈನಂದಿನ ಜೀವನದ ಹೋರಾಟದಂತಿರುತ್ತದೆ. ಇದು ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಯೋಗಕ್ಷೇಮದ ಮೇಲೆ ಪ್ರಭಾವ ಬೀರುವ ಅಂಶವಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಜಿಂದಾಲ್‌ ನೇಚರ್‌ಕೇರ್‌ ಇನ್‌ಸ್ಟಿಟ್ಯೂಟ್‌ನ ಡಯಟಿಷಿಯನ್‌ ಸುಷ್ಮಾ ಪಿಎಸ್‌ ಅವರ ಪ್ರಕಾರ ʼಕಡಿಮೆ ಸಮಯದಲ್ಲಿ ಸಾಕಷ್ಟು ಆಹಾರಗಳನ್ನು ಸೇವಿಸುವುದನ್ನು ಬಿಇಡಿ ಎಂದು ಕರೆಯುತ್ತಾರೆ, ಈ ಸಮಸ್ಯೆ ಇರುವವರಿಗೆ ಆಗಾಗ್ಗೆ ತಿನ್ನುತ್ತಲೇ ಇರಬೇಕು. ಇವರಿಂದ ತಿನ್ನುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬಿಂಗ್‌ ಈಟಿಂಗ್‌ ಡಿಸಾರ್ಡರ್‌ ಎನ್ನುವುದು ಹದಿಹರೆಯದ ಕೊನೆಯದ ದಿನಗಳಲ್ಲಿ ಅಥವಾ ಪ್ರೌಢಾವಸ್ಥೆಯಲ್ಲಿ ಆರಂಭವಾಗುತ್ತದೆ. ಬಿಂಗ್‌ ಡಿಸಾರ್ಡರ್‌ ಹೊಂದಿದ್ದರೆ ನಿಮಗೆ ಹಸಿವಾಗದೇ ಇದ್ದರೂ ನೀವು ತಿನ್ನುತ್ತಲೇ ಇರುತ್ತೀರಿ. ಹೊಟ್ಟೆ ತುಂಬಿದೆ ಅನ್ನಿಸಿದ ಮೇಲೂ ತಿನ್ನಬೇಕು ಎನ್ನಿಸಬಹುದು. ಕೆಲವೊಮ್ಮೆ ನೀವು ತಿಂದ ಆಹಾರ ಏನು, ಅದರ ರುಚಿ ಹೇಗಿತ್ತು ಎಂಬುದು ಕೂಡ ತಿಳಿಯದಂತೆ ತಿನ್ನುತ್ತೀರಿʼ ಎಂದು ಅವರು ಹೇಳುತ್ತಾರೆ.

ʼಬುಲಿಮಿಯಾ (ತಿನ್ನುವುದಕ್ಕೆ ಸಂಬಂಧಿಸಿದ ಮಾನಸಿಕ ವ್ಯಾಧಿ) ದಂತೆ ವಾಂತಿ, ಉಪವಾಸ ಮತ್ತು ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದು ಇಂತಹ ವಿಧಾನಗಳ ಮೂಲಕ ಬಿಂಗ್‌ ಅನ್ನು ಸರಿಪಡಿಸಲು ಸಾಧ್ಯವಿಲ್ಲ. ಭಾರತದ ಶಾಲಾ ಮಕ್ಕಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಈ ಮಾನಸಿಕ ನಡವಳಿಕೆಗಳು ಸರಿಸುಮಾರು ಶೇ 25 ರಿಂದ 40 ರಷು ಹದಿಹರೆಯದ ಹುಡುಗಿಯರಲ್ಲಿ ಹಾಗೂ ಸುಮಾರು 20 ಪ್ರತಿಶತದಷ್ಟು ಹದಿಹರೆಯದ ಹುಡುಗರ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶ ಬಹಿರಂಗವಾಗಿದೆʼ ಎನ್ನುತ್ತಾರೆ ಸುಷ್ಮಾ ಪಿಎಸ್‌.

ಹೃದಯದ ಆರೋಗ್ಯದ ಮೇಲೆ ಅತಿಯಾಗಿ ತಿನ್ನುವುದರ ಪರಿಣಾಮ

ಸುಷ್ಮಾ ಅವರು ಹೇಳುವ ಪ್ರಕಾರ ʼಅತಿಯಾಗಿ ತಿನ್ನುವುದು ಹೃದಯದ ಆರೋಗ್ಯದ ಮೇಲೆ ಎರಡು ಪಟ್ಟು ಅಪಾಯವನ್ನು ಉಂಟುಮಾಡುತ್ತದೆ. ಮೊದಲನೆಯದಾಗಿ ಇದು ಗಮನಾರ್ಹ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅತಿಯಾದ ತೂಕದಿಂದ ಹೃದ್ರೋಗದ ಅಪಾಯ ಹೆಚ್ಚುತ್ತದೆ. ಅಧಿಕ ತೂಕ ಹೊಂದಿರುವ ವ್ಯಕ್ತಿಗಳು ಅಧಿಕ ರಕ್ತದೊತ್ತಡ, ಅತಿಯಾದ ಕೊಲೆಸ್ಟ್ರಾಲ್‌ ಮತ್ತು ಹೆಚ್ಚಿದ ಟ್ರೈಗ್ಲಿಸರೈಡ್‌ ಮಟ್ಟಗಳಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಎಲ್ಲಾ ಸಮಸ್ಯೆಗಳಿಂದ ಹೃದಯಾಘಾತವು ಹೆಚ್ಚುವ ಸಾಧ್ಯತೆ ಇದೆ.

ಬಿಂಗ್‌ಗೆ ಸಂಬಂಧಿಸಿದ ಎರಡನೇ ಅಂಶ ಎಂದರೆ ಅತಿಯಾಗಿ ತಿನ್ನುವುದು ಅನಾರೋಗ್ಯಕರ ಜಂಕ್‌ ಫುಡ್‌ಗಳ ಸೇವನೆಯನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಚಿಪ್ಸ್‌, ಕರಿದ ಪದಾರ್ಥಗಳು, ಕ್ಯಾಂಡಿ, ಸಿಹಿತಿನಿಸು ಇಂತಹ ಪದಾರ್ಥಗಳನ್ನೇ ಹೆಚ್ಚು ತಿನ್ನುತ್ತಾರೆ. ಇದು ಟ್ರಾನ್ಸ್‌ ಕೊಬ್ಬು, ಹೆಚ್ಚಿನ ಸಕ್ಕರೆ ಅಂಶ ಹಾಗೂ ಸೋಡಿಯಂ ಅಂಶ ಅತಿಯಾಗಿ ಇರುವುದರಿಂದ ಹೃದಯ ಆರೋಗ್ಯಕ್ಕೆ ಇನ್ನಷ್ಟು ಹಾನಿಯಾಗುವಂತೆ ಮಾಡುತ್ತದೆ. ಇವು ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಬಿಂಗ್‌ ಈಟಿಂಗ್‌ ಡಿಸಾರ್ಡರ್‌ನಿಂದ ತಪ್ಪಿಸಿಕೊಳ್ಳಲು ತಂತ್ರಗಳು

ಫಾಸ್ಟ್‌ಫುಡ್‌, ಜಂಕ್‌ಫುಡ್‌ ತ್ಯಜಿಸಿ

ಬಾಯಿಗೆ ರುಚಿಸುವ ಆಹಾರಗಳು ದೇಹಕ್ಕೆ ಹಾನಿಯುಂಟು ಮಾಡಬಹುದು. ಇದು ಬಿಂಗ್‌ ಡಿಸಾರ್ಡರ್‌ ಉಲ್ಬಣಕ್ಕೂ ಕಾರಣವಾಗಬಹುದು ಎಂದು ಸಂಶೋಧನೆಗಳು ತಿಳಿಸುತ್ತವೆ. ಹಾಗಾಗಿ ಜಂಕ್‌, ಫಾಸ್ಟ್‌ಫುಡ್‌ ಸೇವನೆ, ಸಿಹಿ ಅಂಶ ಅತಿಯಾಗಿ ಇರುವ ಆಹಾರಗಳ ಸೇವನೆಗೆ ಕಡಿವಾಣ ಹಾಕಿ. ಈ ಸಮಸ್ಯೆ ಇರುವವರು ಅನಾರೋಗ್ಯಕರ ಆಹಾರ ಸೇವನೆಯ ಬದಲು ಆರೋಗ್ಯಕರ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡಬಹುದು. ಹಣ್ಣು, ತರಕಾರಿಗಳು, ಧಾನ್ಯಗಳು, ಒಣಹಣ್ಣು ಇಂತಹವುಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೂ ಉತ್ತಮ.

ಮನಃಸ್ಫೂರ್ತಿಯಾಗಿ ತಿನ್ನುವುದು

ಮೈಂಡ್‌ಫುಲ್‌ನೆಸ್‌ ಎನ್ನುವುದು ಮನಸ್ಸು ಹಾಗೂ ದೇಹ ಎರಡಕ್ಕೂ ಅವಶ್ಯ. ಈ ತಂತ್ರವು ಅತಿಯಾಗಿ ತಿನ್ನುವುದನ್ನು ತಡೆಗಟ್ಟುವಲ್ಲಿ ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವರು ಇನ್ನು ಮುಂದೆ ನಿಜವಾದ ಹಸಿವಿನಿಂದ ಬಳಲುತ್ತಿಲ್ಲ ಎಂಬುದನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಅಧ್ಯಯನಗಳ ಪ್ರಕಾರ ಧ್ಯಾನದ ಮೂಲಕ ಬಿಂಗ್‌ ಡಿಸಾರ್ಡರ್‌ ಅನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ನಿಧಾನವಾಗಿ ಹಾಗೂ ಆರೋಗ್ಯಕರ ಆಹಾರ ಸೇವನೆಗೆ ಒತ್ತು ನೀಡಬೇಕು.

ಊಟ ಬಿಡಬೇಡಿ

ಬಿಂಗ್‌ ಡಿಸಾರ್ಡರ್‌ನಿಂದ ತಪ್ಪಿಸಿಕೊಳ್ಳಲು ಇರುವ ಒಂದು ಉತ್ತಮ ವಿಧಾನವೆಂದರೆ ಸ್ಥಿರವಾದ ತಿನ್ನುವ ದಿನಚರಿಯನ್ನು ರೂಢಿಸಿಕೊಳ್ಳುವುದು ಮತ್ತು ಅದಕ್ಕೆ ಬದ್ಧರಾಗಿ ಇರುವುದು. ಇದು ಅತಿಯಾಗಿ ತಿನ್ನುವುದನ್ನು ನಿಲ್ಲಿಸಲು ಇರುವ ಒಂದು ಉತ್ತಮ ವಿಧಾನ. ಊಟ ಬಿಡುವುದರಿಂದ ಆಹಾರದ ಕಡುಬಯಕೆಗಳು ಹೆಚ್ಚಬಹುದು. ಅಲ್ಲದೆ ಇದು ಅನಾರೋಗ್ಯಕರ ಆಹಾರವನ್ನು ಹೆಚ್ಚು ತಿನ್ನುವಂತೆ ಮಾಡಬಹುದು. ಆ ಕಾರಣಕ್ಕೆ ನಾವು ಮೂರು ಊಟವನ್ನು 6 ಊಟಗಳಾಗಿ ವಿಭಾಗಿಸಿ, ಸ್ವಲ್ಪ ಸ್ವಲ್ಪ ತಿನ್ನುವುದರಿಂದ ಬೇಡದ ಆಹಾರಗಳ ಸೇವನೆಗೆ ಕಡಿವಾಣ ಹಾಕಬಹುದು. ಸ್ಥಿರವಾದ ವೇಳಾಪಟ್ಟಿಯನ್ನು ಅನುಸರಿಸುವುದರಿಂದ ಹಸಿವಿನ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಯೋಗಾಭ್ಯಾಸ

ಯೋಗದಿಂದ ಜೀವನದಲ್ಲಿ ಒಂದು ರೀತಿ ಶಿಸ್ತು ರೂಢಿಯಾಗುತ್ತದೆ. ವಿಶೇಷವಾದ ಉಸಿರಾಟದ ತಂತ್ರಗಳು, ಭಂಗಿಗಳು ಹಾಗೂ ಧಾನ್ಯದ ಸಂಯೋಜನೆಯ ಮೂಲಕ ದೇಹ ಮತ್ತು ಮನಸ್ಸು ಎರಡನ್ನು ಸಮತೋಲನದಲ್ಲಿ ಇರಿಸಬಹುದು. ಯೋಗಾಭ್ಯಾಸದಿಂದ ಆಹಾರ ಪದ್ಧತಿಯಲ್ಲೂ ಶಿಸ್ತು ಕಾಪಾಡಿಕೊಳ್ಳಬಹುದು. ಯೋಗದಿಂದ ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳ ಮಟ್ಟವನ್ನು ಕಡಿಮೆ ಮಾಡಬಹುದು. ಇದು ಒತ್ತಡವನ್ನು ನಿರ್ವಹಿಸಿ, ಅತಿಯಾಗಿ ತಿನ್ನುವ ಪ್ರವೃತ್ತಿಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪರಿಣತರ ಬಳಿ ತರಬೇತಿ ಪಡೆಯುವುದು ಉತ್ತಮ.

ನಾರಿನಾಂಶವುಳ್ಳ ಆಹಾರಗಳ ಸೇವನೆಗೆ ಒತ್ತು ನೀಡಿ

ನಾರಿನಾಂಶವುಳ್ಳ ಆಹಾರಗಳು ಜೀರ್ಣಾಂಗ ವ್ಯವಸ್ಥೆಗೆ ಬಹಳ ಅವಶ್ಯ. ಇದು ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಇರುವಂತೆ ನೋಡಿಕೊಳ್ಳುತ್ತದೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ ನಾರಿನಾಂಶವುಳ್ಳ ಆಹಾರಗಳ ಸೇವನೆಯು ಕಡುಬಯಕೆಯನ್ನು ಕಡಿಮೆಯಾಗಿಸುತ್ತವೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಹೀಗೆ ಒಟ್ಟಾರೆ ಕಡಿಮೆ ಆಹಾರ ಸೇವಿಸಲು ನೆರವಾಗುತ್ತದೆ.

ಉತ್ತಮ ನಿದ್ದೆಯೂ ಅವಶ್ಯ

ನಿದ್ದೆಯ ಗುಣಮಟ್ಟವು ಹಸಿವು ಹಾಗೂ ಹಸಿವಿನ ಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಸಾಕಷ್ಟು ನಿದ್ದೆಯ ಕೊರತೆಯು ಅತಿಯಾಗಿ ತಿನ್ನುವ ಅಂಶದೊಂದಿಗೆ ಸಂಬಂಧ ಹೊಂದಿರಬಹುದು. 146 ವ್ಯಕ್ತಿಗಳನ್ನು ಒಳಗೊಂಡ ಅಧ್ಯಯನವೊಂದರ ಪ್ರಕಾರ ನಿದ್ರಾಹೀನತೆ ಯ ಸಮಸ್ಯೆ ಇರುವವರಲ್ಲಿಯೇ ಬಿಂಗ್‌ ಡಿಸಾರ್ಡರ್‌ ಹೆಚ್ಚು ಕಾಣಿಸಿದೆ. ಪ್ರತಿದಿನ ದೇಹಕ್ಕೆ 8 ಗಂಟೆಗಳ ಕಾಲ ನಿದ್ದೆ ಅವಶ್ಯ

ಒಟ್ಟಾರೆಯಾಗಿ ಅತಿಯಾಗಿ ತಿನ್ನುವ ಅಭ್ಯಾಸ ಅಥವಾ ಬಿಂಗ್‌ ಡಿಸಾರ್ಡರ್‌ನಿಂದ ತಪ್ಪಿಸಿಕೊಳ್ಳಬೇಕು ಎಂದರೆ ಮನಸ್ಸು ಉತ್ಸಾಹದಿಂದ ಇರುವುದು, ಮಾನಸಿಕ ಯೋಗಕ್ಷೇಮ, ಯೋಗ ಮಾಡುವುದು, ಆರೋಗ್ಯಕರ ಆಹಾರ ಸೇವನೆ, ನಾರಿನಾಂಶ ಅಧಿಕವಾಗಿರುವ ಆಹಾರ ಸೇವನೆ, ಉತ್ತಮ ನಿದ್ದೆ ಈ ಎಲ್ಲವೂ ಬಹಳ ಮುಖ್ಯ ಎನ್ನುತ್ತಾರೆ ಸುಷ್ಮಾ.

ವಿಭಾಗ